ಅಕ್ಷಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ `ಮಾಸ್ 2022′: ಶಿಕ್ಷಣದೊಂದಿಗೆ ಮಾನಸಿಕ, ದೈಹಿಕ ದೃಢತೆಯಿದ್ದಲ್ಲಿ ಯಶ ಸಾಧ್ಯ-ಜೀವಂಧರ್ ಜೈನ್

0

ಪುತ್ತೂರು: ಸರಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ಕ್ರೀಡೆಗೆ ಹಲವು ವಿಧಗಳಲ್ಲಿ ಸಹಕಾರ ನೀಡುತ್ತಲೇ ಬಂದಿದೆ. ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ವಿಚಾರದಲ್ಲಿ ಮಾತ್ರ ಮುಂದೆ ಇದ್ದರೆ ಸಾಲದು. ಶಿಕ್ಷಣದ ಜೊತೆಗೆ ಮಾನಸಿಕ ಹಾಗೂ ದೈಹಿಕ ದೃಢತೆಯಿದ್ದಲ್ಲಿ ಯಶ ಖಂಡಿತಾ ಸಾಧ್ಯ ಹಾಗೂ ಸಮಾಜದಲ್ಲಿ ಉನ್ನತಿ ಸ್ಥಾನಕ್ಕೆ ಕೊಂಡೊಯ್ಯಲು ಕ್ರೀಡೆಯು ಸಹಕಾರಿ ಎನಿಸುತ್ತದೆ ಎಂದು ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್‌ರವರು ಹೇಳಿದರು.

ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಮೇ ೩೧ ರಂದು ಜರಗಿದ ಅಕ್ಷಯ ಎಜ್ಯುಕೇಶನಲ್ ಆಂಡ್ ಚ್ಯಾರಿಟೇಬಲ್ ಟ್ರಸ್ಟ್‌ನಡಿ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ವಾರ್ಷಿಕ ಕ್ರೀಡಾಕೂಟ `ಮಾಸ್ ೨೦೨೨’ ಅನ್ನು ಅವರು ದೀಪ ಬೆಳಗಿಸಿ, ಧ್ವಜಾರೋಹಣ ನೆರವೇರಿಸುವ ಮೂಲಕ ಮಾತನಾಡಿದರು. ಆಡು ಮುಟ್ಟದ ಸೊಪ್ಪಿಲ್ಲ, ಜಯಂತ್‌ರವರು ಮುಟ್ಟದ ಕ್ಷೇತ್ರವಿಲ್ಲ ಎಂಬಂತೆ ಈ ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಆಗಿರುವ ಜಯಂತ್ ನಡುಬೈಲುರವರು ಎಲ್ಲಾ ಕ್ಷೇತ್ರಗಳಲ್ಲೂ ವಿಶಿಷ್ಟ ಸಾಧನೆಯನ್ನು ಮಾಡಿರುತ್ತಾರೆ. ಇದೀಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿರುವ ಜಯಂತ್ ನಡುಬೈಲುರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಈ ಕ್ರೀಡಾಕೂಟದ ಶಿಸ್ತುಬದ್ಧ ತಯಾರಿಯು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಸುದಾನ ವಸತಿಯುತ ಶಾಲೆಯ ಸಂಚಾಲಕರಾದ ವಂ|ವಿಜಯ್ ಹಾರ್ವಿನ್‌ರವರು ಮಾತನಾಡಿ, ಸಮಾಜದ ಏಳಿಗೆಗಾಗಿ ತನ್ನಿಂದ ಯಾವ ರೀತಿಯ ಕೊಡುಗೆ ಬೇಕಾಗುತ್ತದೆ ಎನ್ನುವ ತುಡಿತ ಹಾಗೂ ಚಿಂತನೆಯೊಂದಿಗೆ ಜಯಂತ್ ನಡುಬೈಲುರವರು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತಾರೆ ಮಾತ್ರವಲ್ಲದೆ ವಿದ್ಯಾರ್ಥಿಯು ತಾನು ಕಲಿತ ಪದವಿಗೆ ಉದ್ಯೋಗ ದೊರಕಬೇಕು ಎನ್ನುವ ನಿಟ್ಟಿನಲ್ಲಿ ವೃತ್ತಿಪರ ಶಿಕ್ಷಣವನ್ನು ಅವರು ಆರಂಭಿಸಿರುವುದು ಶ್ಲಾಘನೀಯವಾಗಿದೆ. ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಿಲ್ಲದೆ ವಿದ್ಯಾರ್ಥಿಗಳು ಇಲ್ಲಿ ಶಿಸ್ತುಬದ್ಧವಾಗಿ, ಕ್ರಮಬದ್ಧವಾಗಿ ಕ್ರೀಡಾಕೂಟವನ್ನು ಆಯೋಜಿಸಿರುವುದು ಮತ್ತೂ ಶ್ಲಾಘನೀಯ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾನವೀಯತೆಯ ಗುಣವನ್ನು ಅಳವಡಿಸಿಕೊಂಡು , ಒಬ್ಬರಿಗೊಬ್ಬರು ಅರಿತುಕೊಂಡು, ಪ್ರೀತಿಯಿಂದ ಬದುಕನ್ನು ಕಂಡುಕೊಳ್ಳುವವರಾಗಬೇಕು ಎಂದು ಹೇಳಿ ಶುಭ ಹಾರೈಸಿದರು.


ಅಧ್ಯಕ್ಷತೆ ವಹಿಸಿದ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಉನ್ನತಿ ಗಳಿಸುವತ್ತ ಹೆಜ್ಜೆಯನ್ನಿಡಬೇಕಾಗಿದೆ. ಜೀವನದಲ್ಲಿ ಛಲ ಹಾಗೂ ಗುರಿಯನ್ನು ಹೊಂದಿದಾಗ ಜೀವನ ಸಾರ್ಥಕೈ ಪಡೆಯುತ್ತದೆ. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಾಧಕರಾಗಿ ಗುರುತಿಸಿಕೊಳ್ಳಿ ಎಂದು ಹೇಳಿ ಇಂದಿಲ್ಲಿ ವಿದ್ಯಾರ್ಥಿಗಳು ನಡೆಸಿದ ಆಕರ್ಷಕ ಪಥಸಂಚಲನಕ್ಕೆ ಹ್ಯಾಟ್ಸಫ್ ಎಂದರು.
ತಾಲೂಕು ಕ್ರೀಡಾಂಗಣದ ಯುವ ಸಬಲೀಕರಣ ಹಾಗೂ ಕ್ರೀಡೆ ಇದರ ಮಾಜಿ ಅಧಿಕಾರಿ ಮಾಮಚ್ಚನ್ ಎಂ. ಮಾತನಾಡಿ, ತಾನು ದೈಹಿಕ ಶಿಕ್ಷಣ ಶಿಕ್ಷಕನಾಗಿ ಸುಮಾರು ೨೨ ವರ್ಷ ಕಳೆದಿದ್ದೇನೆ. ಈ ಅವಧಿಯಲ್ಲಿ ಅಕ್ಷಯ ಕಾಲೇಜಿನ ಜಯಂತ್ ನಡುಬೈಲುರವರು ತನಗೆ ಸಂಪೂರ್ಣ ಸಹಕಾರ ನೀಡಿರುವುದನ್ನು ಅಲ್ಲಗಳೆಯಬಾರದು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಈ ಕ್ರೀಡಾಕೂಟವು ಯಶಸ್ವಿಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ತಾಲೂಕು ಕ್ರೀಡಾಂಗಣದ ಯುವ ಸಬಲೀಕರಣ ಹಾಗೂ ಕ್ರೀಡೆ ಇದರ ಸೂಪರ್‌ವೈಸರ್ ಶ್ರೀಕಾಂತ್ ಪೂಜಾರಿ ಬಿರಾವುರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆರೋಗ್ಯ, ಮಾನಸಿಕ ಸ್ಥಿತಿಗತಿ ಸರಿಯಿಲ್ಲ ಎಂದಾದರೆ ಅಲ್ಲಿ ಶಿಕ್ಷಣವು ಅರ್ಥಪೂರ್ಣ ಎನಿಸದು. ವೃತ್ತಿಪರ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಇತರ ಜಿಲ್ಲೆಗಳನ್ನು ಅರಸಿಕೊಂಡು ಹೋಗಬೇಕಾಗುತ್ತದೆ. ಆದರೆ ಜಯಂತ್ ನಡುಬೈಲುರವರು ವೃತ್ತಿಪರ ಶಿಕ್ಷಣವನ್ನು ಪುತ್ತೂರಿನಲ್ಲಿಯೇ ಸಿಗುವಂತೆ ಕಾಳಜಿ ವಹಿಸಿದ್ದಾರೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಬದಲಾಗಿ ಭಾಗವಹಿಸುವಿಕೆ ಅತ್ಯಂತ ಪ್ರಾಮುಖ್ಯ ವಹಿಸುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಕಾಲೇಜಿನ ವ್ಯವಸ್ಥಾಪಕಾ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸ್ವರ್ಣ ಜ್ಯೋತ್ಸ್ನಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷರಾದ ಸವಣೂರು ವಿದ್ಯಾರಶ್ಮಿ ಶಾಲೆಯ ಪೂರ್ಣಿಮಾ, ವಿವೇಕಾನಂದ ಕಾಲೇಜಿನ ಯತೀಶ್ ಕುಮಾರ್, ವಿವೇಕಾನಂದ ಪ್ರೌಢಶಾಲೆಯ ದಾಮೋದರ್, ಅಂಬಿಕಾ ಪದವಿ ಕಾಲೇಜಿನ ನವೀನ್, ಮಂಗಳೂರು ಎಂಪಿಎಡ್ ಸ್ಕಾಲರ್ ಮನೋಹರ್ ಮೆದುರವರು ಸಹಕರಿಸಿದರು. ಕಾಲೇಜಿನ ವಿದ್ಯಾರ್ಥಿ ವೃಂದ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಕಿಶೋರ್ ಕುಮಾರ್ ರೈ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಕು|ರಕ್ಷಾ ವಂದಿಸಿದರು. ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಂಯೋಜಕಿ ಚೈತ್ರಾ ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವೃಂದ ಸಹಕರಿಸಿದರು.
ಬಾಕ್ಸ್
ಆಕರ್ಷಕ ಪಥಸಂಚಲನ…
ಆಕರ್ಷಕ ಪಥಸಂಚಲನದಲ್ಲಿ ಶಾರ್ಪ್ ಹಂಟರ್‍ಸ್, ಸ್ಕೋರ್ ಟ್ವಿಸ್ಟರ್‍ಸ್, ತ್ರಿಬಲ್ ಎ ಹಾಗೂ ಮಾಜಿಸ್ಮತಿ ಹೀಗೆ ನಾಲ್ಕು ತಂಡಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿವಿಧ ಕಲರ್‍ಸ್‌ಗಳೊಂದಿಗೆ ಭಾಗವಹಿಸಿದ್ದರು. ಈ ಪಥಸಂಚಲನದಲ್ಲಿ ಸ್ಕೋರ್ ಟ್ವಿಸ್ಟರ್‍ಸ್ ತಂಡ(೯೭ ಅಂಕ)ವು ಪ್ರಥಮ ಸ್ಥಾನವನ್ನು ಪಡೆದಿದ್ದು, ದ್ವಿತೀಯ ಸ್ಥಾನವನ್ನು ಶಾರ್ಪ್ ಹಂಟರ್‍ಸ್ ತಂಡ(೯೨ ಅಂಕ) ಹಾಗೂ ತೃತೀಯ ಸ್ಥಾನವನ್ನು ಮಾಹಿಸ್ಮತಿ ತಂಡ(೮೬ ಅಂಕ)ವು ಪಡೆದುಕೊಂಡಿತು. ಶ್ರೀ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳ ರೋವರ್‍ಸ್ ಮತ್ತು ರೇಂಜರ್‍ಸ್ ಹಾಗೂ ಬ್ಯಾಂಡ್ ವಾದ್ಯ ತಂಡವು ಪಥಸಂಚಲನಕ್ಕೆ ವಿಶೇಷ ಮೆರುಗು ನೀಡಿತ್ತು. ಪಟ್ಟೆ ಎಜ್ಯುಕೇಶನಲ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಮೋನಪ್ಪ ಎಂ.ರವರು ವಿಜೇತರ ಪಟ್ಟಿ ವಾಚಿಸಿದರು. ಕ್ರೀಡಾ ಸಂಯೋಜಕ ರಕ್ಷಣ್ ಟಿ.ಆರ್ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಕ್ರೀಡಾಜ್ಯೋತಿ ಮೆರವಣಿಗೆ….
ಆಕರ್ಷಕ ಪಥಸಂಚಲನದ ಬಳಿಕ ರಾಷ್ಟ್ರೀಯ ಸೇವಾ ಯೋಜನೆಯ ನಾಯಕ ಹಾಗೂ ವಾಲಿಬಾಲ್ ಪಟು ಗಗನ್, ಯೋಗ ಪ್ರವೀಣೆ ಪ್ರಣಮ್ಯ ಸಿ.ಅಗಳಿರವರಲ್ಲದೆ ಕ್ರೀಡಾಪಟುಗಳಾದ ಪ್ರತೀಕ್ಷಾ, ಜಶ್ಮಿತಾ, ರಕ್ಷಾ, ಶ್ರಾವ್ಯರವರು ಉರಿಸಿದ ಕ್ರೀಡಾಜ್ಯೋತಿಯೊಂದಿಗೆ ಕ್ರೀಡಾಂಗಣಕ್ಕೆ ಪ್ರವೇಶಿಸಿ ಬಳಿಕ ಕ್ರೀಡಾಜ್ಯೋತಿಯನ್ನು ಮುಖ್ಯ ಅತಿಥಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್‌ರವರಿಗೆ ಹಸ್ತಾಂತರಿಸಿದರು. ಜೀವಂಧರ್ ಜೈನ್‌ರವರು ಕ್ರೀಡಾಜ್ಯೋತಿಯನ್ನು ಮೇಲಕ್ಕೆತ್ತಿ ಕ್ರೀಡೋತ್ಸವಕ್ಕೆ ಚಾಲನೆಯಿತ್ತರು. ಬಳಿಕ ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣದ ಮತ್ತೊಂದು ತುದಿಯಲ್ಲಿರಿಸಿದ ಪೀಠದಲ್ಲಿ ಇರಿಸಿ ಉರಿಸಲಾಯಿತು.

LEAVE A REPLY

Please enter your comment!
Please enter your name here