ಪೆರಾಬೆ ಗ್ರಾ.ಪಂ.; ಆರೋಗ್ಯ ತಪಾಸಣೆಗೆ ಬಾರದ ವೈದ್ಯರ ತಂಡ – ಕಾದು ಸುಸ್ತಾದ ಗ್ರಾಮಸ್ಥರು ; ಶಿಬಿರದ ಆಯೋಜಕರ ವಿರುದ್ಧ ಆಕ್ರೋಶ

0

ಪೆರಾಬೆ: ಉಚಿತ ಆರೋಗ್ಯ ತಪಾಸಣೆಗೆಂದು ಗ್ರಾಮ ಪಂಚಾಯತ್‌ಗೆ ಬಂದಿದ್ದ ಗ್ರಾಮಸ್ಥರು ವೈದ್ಯರಿಗಾಗಿ ಕಾದು ಕಾದು ಸುಸ್ತಾಗಿ ಶಿಬಿರದ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಾಪಸ್ ಮನೆಗೆ ತೆರಳಿದ ಘಟನೆ ಜೂ.2ರಂದು ಪೆರಾಬೆಯಲ್ಲಿ ನಡೆದಿದೆ.


ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಜೂ.2ರಂದು ಪೆರಾಬೆ ಗ್ರಾಮ ಪಂಚಾಯತ್‌ನಲ್ಲಿ ಆಯೋಜಿಸುವುದಾಗಿ ತಿಳಿಸಲಾಗಿತ್ತು. ಅದರಂತೆ ಗ್ರಾಮ ಪಂಚಾಯತ್ ವತಿಯಿಂದ ಮೈಕ್‌ನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜೂ.2ರಂದು ಗ್ರಾಮದ ವಿವಿಧ ಕಡೆಗಳಿಂದ ವೃದ್ಧರು, ಮಹಿಳೆಯರು ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಬಂದಿದ್ದರು. ಮಧ್ಯಾಹ್ನ 1 ಗಂಟೆಯ ತನಕ ಕಾದರೂ ವೈದ್ಯರ ತಂಡ ಬಾರದೇ ಇದ್ದ ಹಿನ್ನೆಲೆಯಲ್ಲಿ ಕಾದು ಕಾದು ಸುಸ್ತಾದ ಗ್ರಾಮಸ್ಥರು ಶಿಬಿರದ ಆಯೋಜಕರಿಗೆ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿಕೊಂಡು ಮನೆಗೆ ಹಿಂತಿರುಗಿದ್ದಾರೆ. ಹಲವು ಮಂದಿ ಕೂಲಿ ಕಾರ್ಮಿಕರು ಕೆಲಸಕ್ಕೆ ರಜೆ ಹಾಕಿ ಆರೋಗ್ಯ ತಪಾಸಣೆಗೆ ಬಂದಿದ್ದು ಮಧ್ಯಾಹ್ನವಾದರೂ ವೈದ್ಯರ ತಂಡ ಬಾರದೇ ಇರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಫೋನ್ ಕರೆಗೂ ಸ್ಪಂದನೆ ಇಲ್ಲ:

ಜೂ.1ರಂದು ಸಂಜೆ ಶಿಬಿರದ ಸಂಯೋಜಕರಿಗೆ ದೂರವಾಣಿ ಕರೆ ಮಾಡಿ ಜೂ.2ರಂದು ಪಂಚಾಯತ್‌ನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸುವ ಬಗ್ಗೆ ಪಿಡಿಒರವರು ಖಾತ್ರಿ ಪಡಿಸಿಕೊಂಡಿದ್ದರು. ಆದರೆ ಜೂ.2ರಂದು ಮಧ್ಯಾಹ್ನವಾದರೂ ವೈದ್ಯರ ತಂಡ ಬಾರದೇ ಇದ್ದ ಹಿನ್ನೆಲೆಯಲ್ಲಿ ಪಿಡಿಒ, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಶಿಬಿರದ ಸಂಯೋಜಕರಿಗೆ ಫೋನ್ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಲು ದೂರವಾಣಿ ಕರೆ ಮಾಡಿದಾಗಲೂ ಅವರು ಕರೆ ಸ್ವೀಕರಿಸಿಲ್ಲ ಎಂದು ಹೇಳಲಾಗಿದೆ. ಕಾರ್ಮಿಕ ಇಲಾಖೆ ಹಾಗೂ ಶಿಬಿರದ ಸಂಯೋಜಕರ ಬೇಜವಾಬ್ದಾರಿ ತನಕ್ಕೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯರು ಇರಲಿಲ್ಲ:

ಜಿಲ್ಲೆಯಾದ್ಯಂತ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದ್ದು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಆರು ಮಂದಿ ವೈದ್ಯರು ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸುತ್ತಾರೆ. ಜೂ.2ರಂದು ಬಂಟ್ವಾಳ ತಾಲೂಕಿನ 2 ಹಾಗೂ ಬೆಳ್ತಂಗಡಿ ತಾಲೂಕಿನ 2 ಗ್ರಾಮ ಪಂಚಾಯತ್‌ಗಳಲ್ಲಿ ಶಿಬಿರ ಇದ್ದು ತಲಾ ಇಬ್ಬರಂತೆ ನಾಲ್ವರು ವೈದ್ಯರು ಅಲ್ಲಿಗೆ ಹೋಗಿದ್ದರು. ಇನ್ನೊಬ್ಬರು ಈ ಹಿಂದೆ ಶಿಬಿರ ನಡೆದ ಗ್ರಾಮ ಪಂಚಾಯತ್‌ಗಳಿಗೆ ವರದಿ ನೀಡಲು ಹೋಗಿದ್ದು ಮತ್ತೊಬ್ಬರು ರಜೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯರ ಕೊರತೆ ಆಗಿ ಪೆರಾಬೆ ಪಂಚಾಯತ್‌ನಲ್ಲಿ ಶಿಬಿರ ನಡೆಸಲು ಆಗಿಲ್ಲ. ಸುಳ್ಯ ಕೆವಿಜಿಯ ವೈದ್ಯರ ತಂಡವನ್ನೂ ಸಂಪರ್ಕಿಸಿದ್ದು ಅವರೂ ಸಿಕ್ಕಿರಲಿಲ್ಲ. ನನ್ನ ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ನಾನೂ ರಜೆಯಲ್ಲಿದ್ದು ನ್ ಕರೆ ಸಹ ರಿಸೀವ್ ಮಾಡಲು ಆಗಿಲ್ಲ. ಶೀಘ್ರದಲ್ಲಿ ಪೆರಾಬೆ ಪಂಚಾಯತ್‌ನಲ್ಲಿ ಶಿಬಿರ ನಡೆಸುತ್ತೇವೆ.
-ಪ್ರಸಾದ್ ಕಾವೂರು, ಶಿಬಿರದ ಸಂಯೋಜಕರು

LEAVE A REPLY

Please enter your comment!
Please enter your name here