`ಆರೋಗ್ಯ, ಅಭಿವೃದ್ಧಿಯೇ ಜೀವನದ ಸಂಪತ್ತು’-ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಓಂಕಾರಪ್ಪ

0

ಪುತ್ತೂರು:ವಿದ್ಯಾರ್ಥಿ ಜೀವನದಲ್ಲೇ ಆರೋಗ್ಯದ ಮತ್ತು ಅಭಿವೃದ್ಧಿಯ ಕಡೆ ಗಮನ ಹರಿಸಬೇಕು.ಯಾಕೆಂದರೆ ಇವೆರಡು ಜೀವನದ ಸಂಪತ್ತು.ಈ ಗುರಿಯನ್ನು ಇಟ್ಟುಕೊಂಡಾಗ ದುಶ್ಚಟಗಳು ದೂರವಾಗುತ್ತವೆ ಎಂದು ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಓಂಕಾರಪ್ಪ ಅವರು ಹೇಳಿದರು.


ವಿಶ್ವ ತಂಬಾಕು ನಿಷೇಧ ದಿನಾಚರಣೆಯ ಅಂಗವಾಗಿ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಶಿವಸದನದಲ್ಲಿ ಜೂ.೩ರಂದು ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇದರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ, ಅವರ ಸಹಾಯಕರಾಗಿ ಅವರ ನಿರೀಕ್ಷೆಗಳನ್ನು ಈಡೇರಿಸುವ ಪ್ರತಿಭೆಗಳಾಗಿ ಹೊರಹೊಮ್ಮಬೇಕು.ನಿಮ್ಮ ಸ್ವಂತ ಆರೋಗ್ಯವನ್ನು ನೀವೇ ಕಾಪಾಡುವ ದೊಡ್ಡ ಮಟ್ಟದ ಜವಾಬ್ದಾರಿ ನಿಮ್ಮ ಮೇಲಿದೆ.ತಂಬಾಕು ಸೇರಿದಂತೆ ಹಲವಾರು ನಶೆಯ ಪದಾರ್ಥ ಸೇವನೆಯಿಂದಾಗುವ ದುಷ್ಪರಿಣಾಮವನ್ನು ಅರಿತು ಉತ್ತಮ ಜೀವನದೊಂದಿಗೆ ಆರೋಗ್ಯ ಕಾಪಾಡಿಕೊಂಡು ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ.ನೀವು ದೇಶದ ಸಂಪತ್ತು.ಆರೋಗ್ಯ ಮತ್ತು ಅಭಿವೃದ್ಧಿಯ ಬಗ್ಗೆ ಮಾತ್ರ ಗಮನವಿಡಿ ಎಂದು ನ್ಯಾಯಾಧೀಶ ಓಂಕಾರಪ್ಪ ಕರೆ ನೀಡಿದರು.

ತಂಬಾಕು ಉತ್ಪನ್ನಗಳಿಂದ ದೂರವಿರಿ: ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಗೌಡ ಆರ್.ಪಿ ಅವರು ಮಾತನಾಡಿ 1987ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದ ಅಡಿಯಲ್ಲಿ ತಂಬಾಕು ನಿಷೇಧ ತೀರ್ಮಾನ ಕೈಗೊಂಡು ಮೇ ೩೧ರಂದು ತಂಬಾಕು ವಿರೋಧಿ ದಿನ ಆಚರಣೆ ಮಾಡುತ್ತಿದ್ದೆ ವೆ.ಆದರೂ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ತಂಬಾಕು ಸೇವನೆ ದುಶ್ಚಟಕ್ಕೆ ಬಲಿಯಾಗಿ ವರ್ಷಕ್ಕೆ ೭೦ ಲಕ್ಷದಷ್ಟು ಜನ ಮೃತಪಡುತ್ತಿದ್ದಾರೆ.ಈ ನಿಟ್ಟಿನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಹಳ್ಳಿ, ತಾಲೂಕು ಕೇಂದ್ರಗಳಲ್ಲಿ ತಂಬಾಕು ವಿರೋಧ ದಿನಾಚರಣೆಯ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.ವಿದ್ಯಾರ್ಥಿ ದಿಸೆಯಲ್ಲಿ ತಂಬಾಕಿನಿಂದಾಗುವ ದುಷ್ಪರಿಣಾಮಗಳನ್ನು ಅರಿಯಬೇಕು,ತಂಬಾಕಿನ ದಾಸರಾಗದೆ ಅದರಿಂದ ದೂರವಿರಿ ಎಂದರು.

ಎಲ್ಲರೂ ಶ್ರಮಿಸಿದರೆ ತಂಬಾಕು ಮುಕ್ತ ಅಸಾಧ್ಯವೇನಲ್ಲ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ, ಯಾವುದೇ ದುಶ್ಚಟಗಳನ್ನು ಪ್ರಾರಂಭಿಸುವುದು ಸುಲಭ, ಅದರಿಂದ ಹೊರ ಬರುವುದು ಕಷ್ಟ.ಈ ನಿಟ್ಟಿನಲ್ಲಿ ದುಶ್ಚಟಗಳ ಸಹವಾಸವನ್ನು ಮಾಡದಿದ್ದರೆ ನಿಮ್ಮ ಆರೋಗ್ಯ ಉತ್ತಮವಾಗುವುದಲ್ಲದೆ ಸಮಾಜವೂ ಉತ್ತಮ, ಆರೋಗ್ಯದಾಯಕವಾಗುತ್ತದೆ ಎಂದರು.ತಂಬಾಕು ನಿಯಂತ್ರಣ ಕಾಯ್ದೆ ಹಾಗೂ ಅನೇಕ ಯೋಜನೆಗಳು ಜಾರಿಯಲ್ಲಿದ್ದರೂ ತಂಬಾಕು ಸೇವನೆಯ ಪ್ರಮಾಣ ಕಡಿಮೆಯಾಗುತ್ತಿಲ್ಲ ಎಂಬುದು ಆತಂಕದ ವಿಚಾರ.ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳು, ಮನೋವ್ಯೆದ್ಯರು, ಶಿಕ್ಷಣ ಸಂಸ್ಥೆಗಳು, ಆಪ್ತ ಸಮಾಲೋಚಕರು ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ತಂಬಾಕು ಮುಕ್ತ ಗ್ರಾಮ, ನಗರ ಹಾಗೂ ಕುಟುಂಬ ನಿರ್ಮಾಣ ಅಸಾಧ್ಯವೇನಲ್ಲ ಎಂದವರು ಹೇಳಿದರು.

ತಂಬಾಕು ಸೇವನೆ ಮಾಡಿದಾಗ ಖಂಡಿಸುವುದನ್ನು ಕಲಿಯಿರಿ: ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ಹೀರಾ ಉದಯ್ ಅವರು ಮಾತನಾಡಿ ಮನೆ, ಸಮಾಜದಲ್ಲಿ ಹಿರಿಯರೆನಿಸಿಕೊಂಡ ಪೋಷಕರು, ಸ್ನೇಹಿತರು, ಶಿಕ್ಷಕರು ಧೂಮಪಾನ ಚಟಕ್ಕೆ ಒಳಗಾದರೆ, ಅವರನ್ನು ಅನುಸರಿಸುವ ಮಕ್ಕಳು ಆ ಚಟ ಅಂಟಿಸಿಕೊಳ್ಳುತ್ತಾರೆ ಎಂಬುದು ಸತ್ಯ.ಧೂಮಪಾನಿಗಳ ಸಹವಾಸ, ನಟ, ನಟಿಯರ ಅನುಕರಣೆ, ಧೂಮಪಾನ ಮಾಡುವ ಪೋಷಕರ ಪ್ರಭಾವ, ತಪ್ಪು ಮಾಹಿತಿ ನೀಡುವ ಜಾಹೀರಾತುಗಳು ಹೀಗೆ ಹತ್ತು ಹಲವು ಕಾರಣಗಳಿಂದ ಧೂಮಪಾನದ ಚಟ ಅಂಟಿಸಿಕೊಂಡು ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಮಕ್ಕಳು ಬಲಿಯಾಗುತ್ತಾರೆ.ಹಾಗಾಗಿ ಮಕ್ಕಳಲ್ಲಿ ತಂಬಾಕುವಿನಿಂದಾಗುವ ದುಷ್ಪರಿಣಾಮಗಳ ಅರಿವು ಮೂಡಿಸಬೇಕು ಮತ್ತು ತಮ್ಮ ಎದುರು ಯಾರಾದರೂ ತಂಬಾಕು ಸೇವನೆ ಮಾಡುತ್ತಿದ್ದರೆ ಅದನ್ನು ಖಂಡಿಸುವುದನ್ನು ಕಲಿಯಬೇಕು ಎಂದರು.ನ್ಯಾಯವಾದಿಗಳಾದ ರಾಜೇಶ್ವರಿ, ಅಶ್ವಿನಿ, ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಮಣಿ, ಜಾನ್ ಬಾಯಿ, ಜಾನೆಟ್ ಪಾಯಸ್, ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ, ಶಿಕ್ಷಕಿ ಕುಸುಮಾ, ಸಿಂಧೂ ಬಿ.ಕೆ, ಅರ್ಚನಾ ಅತಿಥಿಗಳನ್ನು ಗೌರವಿಸಿದರು.ವೇದಿಕೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಜೊತೆಕಾರ್ಯದರ್ಶಿ ಸೀಮಾ ನಾಗರಾಜ್, ಖಜಾಂಚಿ ಶ್ಯಾಮಪ್ರಸಾದ್ ಕೈಲಾರ್ ಉಪಸ್ಥಿತರಿದ್ದರು.ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ವಸಂತ ಮೂಲ್ಯ ಸ್ವಾಗತಿಸಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ವಂದಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾನೂನು ಸಲಹೆಗಾರರಾಗಿರುವ ನ್ಯಾಯವಾದಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here