`ದಲಿತರ ಬಾಹುಗಳಲ್ಲಿ ಇರುವುದು ಪೌಷ್ಟಿಕವಾದ ದನದ ಮಾಂಸ ತಿಂದ ಆಹಾರ’ ಹೇಳಿಕೆಗೆ ದಲಿತ್ ಸೇವಾ ಸಮಿತಿ ಖಂಡನೆ

0

ಪುತ್ತೂರು: ಇತ್ತೀಚೆಗೆ ಮಂಗಳೂರು ಸಮೀಪದ ಕಣ್ಣೂರಿನಲ್ಲಿ ನಡೆದ ಎಸ್‌ಡಿಪಿಐನ ಜನಾಧಿಕಾರ ಸಭೆಯಲ್ಲಿ ಎಸ್‌ಡಿಪಿಐ ಮುಖಂಡರೊಬ್ಬರು ತಮ್ಮ ಭಾಷಣದಲ್ಲಿ ಹೇಳಿದ `ದಲಿತರ ಬಾಹುಗಳಲ್ಲಿ ಇರುವುದು ಪೌಷ್ಟಿಕವಾದ ದನದ ಮಾಂಸ ತಿಂದ ಆಹಾರ’ ಎಂಬ ಹೇಳಿಕೆಯನ್ನು ದಲಿತ್ ಸೇವಾ ಸಮಿತಿ ಖಂಡಿಸುತ್ತೇವೆ ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಹೇಳಿದ್ದಾರೆ.

 


ಜೂನ್ ೪ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂತಹ ಹೇಳಿಕೆಗಳನ್ನು ದನದ ಮಾಂಸ ತಿನ್ನದ ದಲಿತರು ಒಪ್ಪಲು ಸಾಧ್ಯವೇ ಇಲ್ಲ. ಧಾರ್ಮಿಕ ವಿಚಾರದಲ್ಲಿ ದಲಿತ ವರ್ಗದವರು ಹೆಚ್ಚು ಆರಾಧನೆ ಮಾಡುವುದರಿಂದ ದನದ ಮಾಂಸ ತಿನ್ನಲು ಹಿಂದೇಟು ಹಾಕುವ ಸಂದರ್ಭದಲ್ಲಿ ಈ ವ್ಯಕ್ತಿ ನೀಡಿರುವ ಹೇಳಿಕೆಯಿಂದ ನಮಗೆ ತುಂಬಾ ನೋವಾಗಿದೆ. ಆದ್ದರಿಂದ ಅವರು ಈ ಬಗ್ಗೆ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಎಸ್‌ಡಿಪಿಐ ಪಕ್ಷ ದಲಿತರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಅಂತಹ ಕೆಲಸಗಳನ್ನು ಕೂಡ ಮಾಡಿದ್ದಾರೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಡಿಪಿಐ ಬೀದಿಗಿಳಿದು ಹೋರಾಟ ಮಾಡಿತು. ಇತ್ತೀಚೆಗೆ ಕನ್ಯಾನದ ಕಣಿಯೂರಿನಲ್ಲಿ ನಡೆದ ಅಪ್ರಾಪ್ತೆ ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆಯ ಬಗ್ಗೆ ಮಾತನಾಡದೇ ಇರುವುದು ನೋಡಿ ನಮಗೆ ತುಂಬಾ ನೋವಾಗಿದೆ. ಆದ್ದರಿಂದ ಎಸ್‌ಡಿಪಿಐ ಮುಖಂಡರು ನೀಡಿದ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಬಿ.ಕೆ. ಅಣ್ಣಪ್ಪ ಮಾತನಾಡಿ, ದಲಿತರು ಯಾರ ಗುಲಾಮರೂ ಅಲ್ಲ. ಹೀಗಾಗಿ ಇನ್ನು ಮುಂದೆ ನಡೆಯುವ ಯಾವುದೇ ಸಭೆ ಸಮಾರಂಭಗಳಲ್ಲಿ ಈ ರೀತಿಯ ಅವಹೇಳನಕಾರಿ, ನಿಂದನೆಗಳನ್ನು ಯಾರೂ ಮಾಡಬಾರದು. ದಲಿತರಿಗೆ ಮತದಾನದ ಹಕ್ಕನ್ನು ನೀಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಕಣ್ಣೂರಿನಲ್ಲಿ ಎಸ್‌ಡಿಪಿಐ ಮುಖಂಡರು ನೀಡಿದ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.

ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಶೇಖರ ವಿಟ್ಲ ಮಾತನಾಡಿ, ದಲಿತ ವರ್ಗದವರು ಯಾವ ಪಕ್ಷದ ಗುಲಾಮರೂ ಅಲ್ಲ. ಇಂತಹ ಹೇಳಿಕೆಗಳು ಯಾವ ಪಕ್ಷದವರಿಂದಲೂ ಬರಬಾರದು. ಇಂತಹ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಉಪಾಧ್ಯಕ್ಷ ಮನೋಹರ್ ಕೋಡಿಜಾಲು ಜೊತೆಗಿದ್ದರು.

LEAVE A REPLY

Please enter your comment!
Please enter your name here