ವಿದ್ಯಾ ಮಾತಾ ಅಕಾಡೆಮಿ ತರಬೇತಿ ಕೇಂದ್ರದಲ್ಲಿ ಪಿಯುಸಿ ಮುಂದೇನು ಕಾರ್ಯಾಗಾರ

0

  • ಸಮಾಜದಲ್ಲಿರುವ ಅವಕಾಶ ಬಳಸಿಕೊಳ್ಳಿ – ನವೀನ್ ಭಂಡಾರಿ ಹೆಚ್
  • ಧನಾತ್ಮಕ ಚಿಂತನೆ ಮಾಡಿ – ಭಾಗ್ಯೇಶ್ ರೈ

 

ಪುತ್ತೂರು: ಸರಕಾರಿ ಕೆಲಸದಲ್ಲೂ ಸಮಾಜ ಸೇವೆ ಮಾಡಬಹುದು. ಇದನ್ನು ಅರ್ಥ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ. ನಿಮ್ಮ ಕನಸನ್ನು ಇಂದೇ ಕಂಡು ಗುರಿ ತಲುಪಿ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ’ವಿದ್ಯಾಮಾತಾ ಅಕಾಡೆಮಿ’ ಪುತ್ತೂರು ಇದರ ವತಿಯಿಂದ ಜೂ.೫ ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ನಾನು ಕೂಡಾ ಸ್ಪರ್ಧಾತ್ಮಕ ಪರೀಕ್ಷೆ ಬರೆದವನು. ನಾನು ಬರೆಯದ ಪರೀಕ್ಷೆ ಇಲ್ಲ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ್ದೆ. ಕೊನೆಗೆ ಗುರಿ ತಲುಪಿದೆ. ಅದೇ ರೀತಿ ನಮ್ಮ ಗುರಿ ಸಣ್ಣದಾಗಿರಬಾರದು. ದೊಡ್ಡ ಗುರಿಯನ್ನು ಇಟ್ಟು ಕೊಳ್ಳಿ. ನಮ್ಮ ಕನಸು ದೊಡ್ಡದು ಬೇಕು. ಆ ಕನಸು ನಮ್ಮನ್ನು ನಿದ್ದೆ ಮಾಡಲು ಬಿಡಬಾರದು. ನಮ್ಮ ಊರಿನಿಂದ ದೊಡ್ಡ ದೊಡ್ಡ ಅಧಿಕಾರಿ ಹುದ್ದೆ ಪಡೆಯಿರಿ ಎಂದ ಅವರು ಇವತ್ತು ಸರಕಾರಿ ವ್ಯವಸ್ಥೆಯಲ್ಲಿ ಜನರ ತೆರಿಗೆಯ ಮೂಲಕ ಅಭಿವೃದ್ಧಿ ಕಾಣುವ ಸಂದರ್ಭದಲ್ಲಿ ಖಾಸಗಿಯಾಗಿ ಮುಂದೆ ಬಂದು ಒಂದು ಶಾಲೆಯನ್ನು ದತ್ತು ತೆಗೆದು ಕೊಂಡು ಅಭಿವೃದ್ಧಿ ಮಾಡಿರುವ ಬಾಗೇಶ್ ರೈ ಅವರಿಗೆ ಅಭಿನಂದನೆ ಸಲ್ಲಿಸಿದರು.

 

ಧನಾತ್ಮಕ ಚಿಂತನೆ ಮಾಡಿ:
ವಿದ್ಯಾಮಾತ ಅಕಾಡೆಮಿಯ ಅಧ್ಯಕ್ಷ ಬಾಗೇಶ್ ರೈ ಅವರು ಮಾತನಾಡಿ ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಮಾಡಿ, ಋಣಾತ್ಮಕ ಕಡೆ ಹೋಗಬೇಡಿ ಎಂದ ಅವರು ಹುದ್ದೆ ಒಂದೆ ಆಗಿರಲಿ ಅಥವಾ ಅದಕ್ಕಿಂತ ಮೇಲ್ಪಟ್ಟು ಇರಲಿ ಆದರೆ ಅರ್ಜಿ ಸಲ್ಲಿಸಿ ಭಾಗವಹಿಸುವುದು ಮುಖ್ಯ. ಈ ರೀತಿಯ ಚಿಂತನೆ ಮಾಡಬೇಕೆಂದರು. ಖಾಸಗಿ ಉದ್ಯೋಗದಲ್ಲಿ ಕೌಶಲ್ಯ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಇವತ್ತು ಪಿಯುಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ಪಿಯುಸಿ ವಿದ್ಯಾರ್ಥಿಗಳ ಜೀವನದ ದೃಢ ನಿರ್ಧಾರದ ಸಮಯ. ಮುಂದಿನ ಮೂರು ವರ್ಷ ಪದವಿ ಅಥವಾ ಇನ್ನಾವುದೇ ಶಿಕ್ಷಣ ಪಡೆಯುವ ಸಂದರ್ಭದ ಜೊತೆಗೆ ಏನು ಮಾಡುತ್ತೀರಿ ಅನ್ನುವುದು ಮುಖ್ಯ. ಮೂರು ವರ್ಷದ ನಂತರ ಚಿಂತನೆ ಮಾಡುವ ಬದಲಿಗೆ ವಿದ್ಯಾರ್ಥಿ ಜೀವನದಲ್ಲಿ ಮುಂದಿನ ಭವಿಷ್ಯದ ಕುರಿತು ಚಿಂತನೆ ಮಾಡಬೇಕು. ಹಾಗಾಗಿ ಈಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಬೇಕು. ಇಂತಹ ಸರಿಯಾದ ದಾರಿ ತೋರಿಸಲು ನಾವು ಹಲವು ತರಬೇತಿ ಕಾರ್ಯ ನೀಡುತ್ತಿದ್ದೇವೆ ಎಂದರು. ಇವತ್ತು ನಮ್ಮ ಸಂಸ್ಥೆಯಿಂದ ನೀಟ್‌ನಲ್ಲಿ ಸರಕಾರಿ ಹುದ್ದೆಗೆ ೧೨ ಮಕ್ಕಳನ್ನು ಸೇರಿಸುವ ಪ್ರಯತ್ನ ಮಾಡಿದ್ದೇವೆ ಎಂದರು. ತಾಲೂಕು ಯುವಜನ ಸಬಲೀಕರಣ ಕ್ರೀಡಾ ಇಲಾಖೆಯ ಮೇಲ್ಚಿಚಾರಕ ಶ್ರೀಕಾಂತ್ ಬಿರಾವ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಶರಣ್ ಕುಮಾರ್ ಶೆಟ್ಟಿ ಮತ್ತು ಸತೀಶ್ ಭಟ್ ರವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸನ್ಮಾನ:
ವಿದ್ಯಾಮಾತ ಅಕಾಡೆಮಿಯ ತರಬೇತಿ ಕಾರ್ಯದ ಮೂಲಕ ಅರಣ್ಯ ಇಲಾಖೆಯಲ್ಲಿ ಹುದ್ದೆಗೆ ಆಯ್ಕೆಯಾದ ತಿಂಗಳಾಡಿಯ ಸನತ್ ರೈ, ಟಿಇಟಿಯಲ್ಲಿ ಸೇರ್ಪಡೆಗೊಂಡ ಶ್ವೇತಾ ಮತ್ತು ಚಂದನಾ ಅವರನ್ನು ಸಂಸ್ಥೆಯ ವತಿಯಿಂದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅಭಿನಂದಿಸಿದರು. ಸಂಸ್ಥೆಯ ಭಾಗ್ಯೇಶ್ ರೈ ಸ್ವಾಗತಿಸಿ, ವಂದಿಸಿದರು. ಸುಮಾರು ೨೫ ಮಂದಿ ವಿದ್ಯಾರ್ಥಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here