ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ದೇಶದಲ್ಲಿ ಎಲ್ಲಿಯೂ ಸಾಧ್ಯವಾಗದ ಅದ್ಭುತ ಸಾಧನೆ

0

  • ಸುದ್ದಿ ಆಂದೋಲನಕ್ಕೆ ವಿರಾಮ.
  • ಜನರ ಆಂದೋಲನ, ಮಾಹಿತಿ ಟ್ರಸ್ಟ್‌ನ ಸೇವೆ ಮುಂದುವರಿಕೆ

ಮೇ 31ರ ಒಳಗೆ ಸುಳ್ಯ, ಪುತ್ತೂರು, ಬೆಳ್ತಂಗಡಿ ಲಂಚ, ಭ್ರಷ್ಟಾಚಾರ ಮುಕ್ತ ತಾಲೂಕು ಆಗಲಿದೆ. ಅಧಿಕಾರಿಗಳು ಲಂಚವಾಗಿ ಹಣ ಕೊಟ್ಟರೂ ಹಣ ಸ್ವೀಕರಿಸುವುದಿಲ್ಲ ಎಂದು ಮೂರು ತಿಂಗಳ ಹಿಂದೆಯೇ ಹೇಳಿದ್ದೆ. ಅದನ್ನು ನೂರಕ್ಕೆ ನೂರು ಜನವೂ ನಂಬಲಿಲ್ಲ. ಎಲ್ಲರೂ ಪ್ರಯತ್ನ ಉತ್ತಮ ಎಂದು ಹಾರೈಸಿದವರೇ. ಕಡಿಮೆಯಾಗುವುದು ಬಿಡಿ, ಜಾಸ್ತಿ ಆಗುವುದು ಖಂಡಿತ ಎಂದು ಹೇಳಿದವರೇ ಎಲ್ಲರು. ಇದೀಗ ಪ್ರತೀ ವಾರ ಲಂಚ ರಹಿತ ಅಧಿಕಾರಿಗಳ ಫೋಟೋ ಪ್ರಥಮ ಪುಟದಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿಯ ಸುದ್ದಿ ಪತ್ರಿಕೆಯಲ್ಲಿ ಬರುತ್ತಿದೆ. ಈಗಾಗಲೇ ೫೪ ಅಧಿಕಾರಿಗಳ ಪಟ್ಟಿಯನ್ನು ಜನರು ನೀಡಿದ್ದಾರೆ. ಅವರು ಲಂಚ ರಹಿತ ಸೇವೆ ನೀಡುವ, ಲಂಚ ಕೊಟ್ಟರೂ ತೆಗೆದುಕೊಳ್ಳದ ಅಧಿಕಾರಿಗಳೆಂದು ಜನರೇ ಸರ್ಟಿಫಿಕೇಟ್ ನೀಡಿದ್ದಾರೆ. ಈ ಅದ್ಭುತ, ವಿಶಿಷ್ಟ ಕಾರ್ಯ ದೇಶದ, ರಾಜ್ಯದ ಯಾವುದೇ ತಾಲೂಕಿನಲ್ಲಿ ನಡೆದಿದೆಯೇ?. ಅಲ್ಲಿ ಲಂಚ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಹೇಳುವ ಅಧಿಕಾರಿಗಳು ಇದ್ದಾರೆಯೇ!? ವಿಚಾರಿಸಿ ನೋಡಿ.

ಲಂಚಪ್ರಿಯ ಅಧಿಕಾರಿಗಳಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿದ್ದರೆ ಹಣ ಸಿಗುವುದಿಲ್ಲ. ಲಂಚ ಕೇಳಿದರೆ ಜನರು ವಂತಿಗೆ ಡಬ್ಬಿ ಇರಿಸಿ ಪ್ರಚಾರ ಮಾಡುತ್ತಾರೆ ಎಂದು ಅಧಿಕಾರಿಗಳಿಗೆ ತಿಳಿದಿದೆ. ಆದುದರಿಂದ ಇಲ್ಲಿ ಉತ್ತಮ ಸೇವೆ ಮಾಡಬೇಕು. ಇಲ್ಲದಿದ್ದರೆ ವರ್ಗಾವಣೆ ಪಡೆದು ಜಾಗ ಖಾಲಿ ಮಾಡಬೇಕು ಎಂಬ ಅಭಿಪ್ರಾಯ ಜನರಲ್ಲಿದೆ. ಗ್ರಾಮ ಗ್ರಾಮದ ಜನರು ಲಂಚ ಕೇಳುವ ಅಧಿಕಾರಿಗಳ ಕಛೇರಿಯ ಎದುರು ಲಂಚದ ಡಬ್ಬಿ ಇರಿಸಲು ನಿರ್ಧರಿಸಿರುವುದರಿಂದ ಲಂಚಪ್ರಿಯರನ್ನು ಗುರುತಿಸಿ ಬಹಿಷ್ಕರಿಸುವುದರಿಂದ, ಉತ್ತಮ ಸೇವೆ ನೀಡುವವರಿಗೆ ಸನ್ಮಾನ, ಗೌರವ ಕೊಡುವುದರಿಂದ ಇದು ಜನಾಂದೋಲನವಾಗಿ ಪರಿವರ್ತನೆಗೊಂಡು ತಾಲೂಕನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡಲಿದೆ. ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆ ಪುರಸ್ಕಾರ ಎಂಬ ಘೋಷಣೆಯನ್ನು ಪ್ರತೀ ಶಾಲೆಯ ಮಕ್ಕಳು ಮಾಡುವುದರಿಂದ ಅದು ಮನೆ ಮನೆಗೆ ತಲುಪಿ ಜನರನ್ನು ಸದಾ ಜಾಗೃತಿಯಲ್ಲಿ ಇಡಲಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಂಚ, ಭ್ರಷ್ಟಾಚಾರ ಮುಕ್ತ ಮಾಡಲು ಸುದ್ದಿಯ ಆಂದೋಲನಕ್ಕೆ ವ್ಯಾಪಕ ಬೆಂಬಲ ಸಿಕ್ಕಿರುವುದಲ್ಲದೆ, ದ.ಕ, ಉಡುಪಿ ಜಿಲ್ಲೆಯ ಅಭಿವೃದ್ಧಿ ಮಾಡುವ ಯೋಜನೆಯನ್ನು ದೆಹಲಿ ಮಿತ್ರ ಮತ್ತು ಸುದ್ದಿ ಮಾಹಿತಿ ಟ್ರಸ್ಟ್ ಕರೆದ ’ನಮ್ಮೂರು ನಮ್ಮ ಹೆಮ್ಮೆ’ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ವಾಸಿಸುತ್ತಿರುವ ದ.ಕ., ಉಡುಪಿ ಜಿಲ್ಲೆಯವರು ಮಂಡಿಸಿದ್ದಾರೆ. ಜೂನ್ ೨೫ರಂದು ಪುತ್ತೂರಿನಲ್ಲಿ ನಡೆಯಲಿರುವ ಲಂಚ, ಭ್ರಷ್ಟಾಚಾರದ ವಿರುದ್ಧದ ಜನರ ಗೆಲುವಿನ ಜಾಥ ಮತ್ತು ಸಭಾಕಾರ್ಯಕ್ರಮದಲ್ಲಿ ಸುದ್ದಿ ಜನಾಂದೋಲನಕ್ಕೆ ವಿರಾಮ ಘೋಷಿಸಲಿದ್ದು, ಅದು ಸುಳ್ಯ, ಪುತ್ತೂರು, ಬೆಳ್ತಂಗಡಿ ಮೂರು ತಾಲೂಕಿನಲ್ಲಿಯೂ ಜನರ ಆಂದೋಲನವಾಗಿ ಮುಂದುವರಿಯಲಿದೆ. ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ದೆಹಲಿ ಮಿತ್ರ ಸಂಘಟನೆಗಳು ಆ ಯೋಜನೆಗೆ ಸಹಕಾರ ನೀಡಲಿವೆ.
– ಡಾ| ಯು.ಪಿ. ಶಿವಾನಂದ

LEAVE A REPLY

Please enter your comment!
Please enter your name here