ಕುಂಬ್ರ ಪೇಟೆಗೆ ಮತ್ತೊಂದು ಗರಿ- ಅರ್ಚನಾ ಸಂಕೀರ್ಣ ಉದ್ಘಾಟನೆ

0

ಎಲ್ಲಾ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡ ಇದಾಗಿದೆ: ಜಯಂತ ನಡುಬೈಲ್

ಪುತ್ತೂರು: ವಿಶಾಲ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಅರ್ಚನಾ ಸಂಕೀರ್ಣ ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಮತ್ತೊಂದು ಗರಿಯಾಗಿದೆ. ಬಾಬು ಪೂಜಾರಿ ಬಡಕ್ಕೋಡಿಯವರ ಸತತ ಪರಿಶ್ರಮದ ಫಲ ಹಾಗೂ ಅವರ ಸತ್ಯ, ಪ್ರಾಮಾಣಿಕತೆಗೆ ದೇವರ ನೀಡಿದ ಕೊಡುಗೆಯಾಗಿದೆ ಎಂದು ಅಕ್ಷಯ ಗ್ರೂಪ್ಸ್ ಮಾಲಕ, ಉದ್ಯಮಿ ಜಯಂತ ನಡುಬೈಲ್ ಹೇಳಿದರು.

ಅವರು ಜೂ.06 ರಂದು ಕುಂಬ್ರ ಬೆಳ್ಳಾರೆ ರಸ್ತೆಯಲ್ಲಿ ಕುಂಬ್ರ ಪೇಟೆಯಿಂದ 200 ಮೀಟರ್ ದೂರದಲ್ಲಿ ನಿರ್ಮಾಣಗೊಂಡ ಬಾಬು ಪೂಜಾರಿ ಬಡಕ್ಕೋಡಿ ಮಾಲಕತ್ವದ ಅರ್ಚನಾ ಸಂಕೀರ್ಣವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ದಿನದಿಂದ ದಿನಕ್ಕೆ ಕುಂಬ್ರ ಪೇಟೆ ಬೆಳೆಯುತ್ತಿದೆ. ಕುಂಬ್ರ ಬೆಳ್ಳಾರೆ ರಸ್ತೆಯಲ್ಲೂ ಇಂತಹ ಸಂಕೀರ್ಣಗಳು ನಿರ್ಮಾಣಗೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದ ನಡುಬೈಲ್‌ರವರು, ಮುಂದಿನ ದಿನಗಳಲ್ಲಿ ಸಂಕೀರ್ಣದಿಂದ ಬಾಬು ಪೂಜಾರಿಯವರಿಗೆ ಹಾಗೂ ಈ ಸಂಕೀರ್ಣದಲ್ಲಿ ವ್ಯಾಪಾರ ನಡೆಸುವ ಎಲ್ಲರಿಗೂ ದೇವರು ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು-ರಾಮಭಕ್ತನ ಹೃದಯಶ್ರೀಮಂತಿಕೆಗೆ ದೇವರ ಕೊಟ್ಟ ವರ: ಕಡಮಜಲು ಸುಭಾಷ್ ರೈ

ರಿಬ್ಬನ್ ತುಂಡರಿಸುವ ಮೂಲಕ ಕಟ್ಟಡವನ್ನು ಉದ್ಘಾಟಿಸಿದ ದೇಶಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನ ಕೆದಂಬಾಡಿ ಇದರ ಅಧ್ಯಕ್ಷ ಕಡಮಜಲು ಸುಭಾಷ್ ರೈಯವರು ಮಾತನಾಡಿ, ಬಾಬು ಪೂಜಾರಿಯವರು ಓರ್ವ ರಾಮನ ಭಕ್ತರಾಗಿದ್ದಾರೆ. ಯಾರಲ್ಲಿ ಧಾರ್ಮಿಕ ಭಾವನೆ ಇರುತ್ತದೋ ಅವರ ಬದುಕು ಸಮೃದ್ಧಿಯಾಗುತ್ತದೆ ಎಂಬುದಕ್ಕೆ ಬಾಬು ಪೂಜಾರಿಯವರು ಉದಾಹರಣೆಯಾಗಿದ್ದಾರೆ ಓರ್ವ ರಾಮಭಕ್ತನ ಹೃದಯ ಶ್ರೀಮಂತಿಕೆಗೆ ಸಾಕ್ಷಾತ್ ರಾಮ ದೇವರೇ ಕೊಟ್ಟ ವರ ಈ ಅರ್ಚನಾ ಸಂಕೀರ್ಣವಾಗಿದೆ. ಮುಂದಿನ ದಿನಗಳಲ್ಲಿ ಸಂಕೀರ್ಣದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಪ್ರೀತಿ, ಸೌಹಾರ್ದತೆಯ ಪ್ರಾಮಾಣಿಕ ವ್ಯಕ್ತಿ : ಕೆ.ಆರ್.ಹುಸೇನ್ ದಾರಿಮಿ ರೆಂಜಲಾಡಿ

ಮುಖ್ಯ ಅತಿಥಿಯಾಗಿದ್ದ ಧಾರ್ಮಿಕ ಮುಖಂಡ ಕೆ.ಆರ್.ಹುಸೇನ್ ದಾರಿಮಿ ರೆಂಜಲಾಡಿ ಮಾತನಾಡಿ, ಬಾಬು ಪೂಜಾರಿಯವರು ಓರ್ವ ಪ್ರಾಮಾಣಿಕ ವ್ಯಕ್ತಿ, ತಾನು ಮಾಡುವ ವ್ಯವಹಾರದಲ್ಲಿ ಯಾರು ಪ್ರಾಮಾಣಿಕರಾಗಿರುತ್ತಾರೋ ಅವರಿಗೆ ದೇವರ ಅನುಗ್ರಹ ಸದಾ ಇರುತ್ತದೆ. ಅದರ ಫಲವೇ ಈ ಅರ್ಚನಾ ಸಂಕೀರ್ಣವಾಗಿದೆ. ಜಾತಿ,ಮತ,ಧರ್ಮ ನೋಡದೇ ಎಲ್ಲರಲ್ಲೂ ಪ್ರೀತಿ, ಸೌಹಾರ್ದತೆಯನ್ನು ಕಾಣುವ ಬಾಬು ಪೂಜಾರಿಯವರು ತನ್ನ ಹೃದಯಶ್ರೀಮಂತಿಕೆಯಿಂದಲೇ ಎಲ್ಲರ ಮೆಚ್ಚಿನ ‘ಜ್ಯೂಸ್ ಬಾಬಣ್ಣ’ ಎಂದೇ ಚಿರಪರಿಚಿತರಾಗಿದ್ದರು. ಮುಂದಿನ ದಿನಗಳಲ್ಲಿ ದೇವರು ಒಳ್ಳೆಯದನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.

ಜೀವನದಲ್ಲಿ ಕಾಲೆಳೆಯುವವರು ಬೇಕಾಗುತ್ತಾರೆ : ಕುಂಬ್ರ ದುರ್ಗಾಪ್ರಸಾದ್ ರೈ

ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಶುಭಾಸಂಶನೆ ಮಾಡುತ್ತಾ, ಕಳೆದ ಹಲವು ವರ್ಷಗಳಿಂದ ಸೋಡಾ ಶರಬತ್ತು ಇತ್ಯಾದಿ ಜ್ಯೂಸ್ ಹಾಗೂ ಗೂಡಂಗಡಿ ವ್ಯಾಪಾರ ಮಾಡಿಕೊಂಡು ಬಂದಿದ್ದ ಬಾಬು ಪೂಜಾರಿಯವರು ತನ್ನ ಪ್ರಾಮಾಣಿಕತೆ, ಸತ್ಯ,ಧರ್ಮದಿಂದಲೇ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಜೀವನದಲ್ಲಿ ಬಹಳಷ್ಟು ಕಷ್ಟಪಟ್ಟವರು, ಒಬ್ಬ ವ್ಯಕ್ತಿ ಜೀವನದಲ್ಲಿ ಮೇಲೆ ಬರಬೇಕಾದರೆ ಕೇವಲ ಹೊಗಳುವವರು ಮಾತ್ರ ಇದ್ದರೆ ಸಾಲದು ಕಾಲೆಳೆಯುವವರು ಕೂಡ ಬೇಕಾಗುತ್ತಾರೆ ಆಗಲೇ ನಾವು ಸಾಧನೆಯ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ಬಾಬು ಪೂಜಾರಿಯವರ ಮುಂದಿನ ಬದುಕು ಸುಖ, ಸಮೃದ್ಧಿಯಿಂದ ಕೂಡಿರಲಿ ಎಂದು ಹೇಳಿ ಶುಭ ಹಾರೈಸಿದರು.

ಕುಂಬ್ರದ ಅಭಿವೃದ್ಧಿಗೆ ಪೂರಕವಾಗಿದೆ: ತ್ರಿವೇಣಿ ಪಲ್ಲತ್ತಾರು

ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಿರುವ ಅರ್ಚನಾ ಸಂಕೀರ್ಣ ಬೆಳೆಯುತ್ತಿರುವ ಕುಂಬ್ರ ಪೇಟೆಯ ಅಭಿವೃದ್ಧಿಗೆ ಮತ್ತೊಂದು ಗರಿಯಾಗಿದೆ. ಸಂಕೀರ್ಣದ ಮಾಲಕ ಬಾಬು ಪೂಜಾರಿ ಮತ್ತು ಅವರ ಕುಟುಂಬಸ್ಥರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಹೇಳಿ ಶುಭ ಹಾರೈಸಿದರು. ಕಟ್ಟಡದ ಗುತ್ತಿಗೆದಾರ ಪ್ರಕಾಶ್ ನಾಯಕ್‌ರವರಿಗೆ ಶಾಲು ಹಾಕಿ ಗೌರವಿಸಲಾಯಿತು.

ವೇದಿಕೆಯಲ್ಲಿ ಬಾಬು ಪೂಜಾರಿಯವರ ಪತ್ನಿ ಸೀತಮ್ಮ ಉಪಸ್ಥಿತರಿದ್ದರು. ನಟ,ನಿರ್ದೇಶಕ ಸುಂದರ ರೈ ಮಂದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಚನಾ ಸಂಕೀರ್ಣದ ಮಾಲಕ ಬಾಬು ಪೂಜಾರಿ ಬಡಕ್ಕೋಡಿಯವರು ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಬಾಬು ಪೂಜಾರಿಯವರ ಪುತ್ರ ಅಶೋಕ್ ಕುಮಾರ್ ಬಡಕ್ಕೋಡಿ ಪ್ರಾರ್ಥಿಸಿ, ವಂದಿಸಿದರು. ಮೋಹನ್ ಆಳ್ವ ಮುಂಡಾಳಗುತ್ತು ಕಾರ್ಯಕ್ರಮ ನಿರೂಪಿಸಿದರು.

ಅನಿಲ್ ಕುಮಾರ್, ಶಶಿ, ಆದ್ಯಾ, ಅದಿತ್, ಅಶೋಕ್ ಕುಮಾರ್, ಸವಿತಾ ಎಸ್, ತೃಷಾ, ತುಷಾರ್, ಅರ್ಚನಾ, ಉಮೇಶ್, ಚರಿತ್, ಸಾನ್ವಿ, ನಿತಿನ್ ಸೂರತ್, ಅಶ್ವತ್ ಬಡಕ್ಕೋಡಿ ಸಹಕರಿಸಿದ್ದರು.

ನೂರಾರು ಗಣ್ಯರಿಂದ ಶುಭ ಹಾರೈಕೆ
ಅರ್ಚಕ ಪ್ರಕಾಶ್ ನಕ್ಷತ್ರಿತ್ತಾಯರವರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ನೂರಾರು ಗಣ್ಯರು ಆಗಮಿಸಿ ಅರ್ಚನಾ ಸಂಕೀರ್ಣದ ಯಶಸ್ವಿಗೆ ಶುಭ ಹಾರೈಕೆ ಸಲ್ಲಿಸಿದರು.

ಅರ್ಚನಾ ಸಂಕೀರ್ಣದ ವಿಶೇಷತೆಗಳು

ಅರ್ಚನಾ ಸಂಕೀರ್ಣವು ಕುಂಬ್ರ- ಬೆಳ್ಳಾರೆ ರಾಜ್ಯ ರಸ್ತೆಯಲ್ಲಿ ಕುಂಬ್ರ ಜಂಕ್ಷನ್‌ನಿಂದ ಸುಮಾರು 200 ಮೀಟರ್ ದೂರದಲ್ಲಿದೆ. ರಸ್ತೆ ಮಾರ್ಜಿನ್‌ನಿಂದ ಬಹಳಷ್ಟು ದೂರದಲ್ಲಿದ್ದು ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ. ಎರಡು ಅಂತಸ್ತಿನ ವಾಣಿಜ್ಯ ಸಂಕೀರ್ಣವಾಗಿದ್ದು ವ್ಯಪಾರಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಕೊಠಡಿಗಳನ್ನು ಮಾಡಲಾಗಿದೆ. ನೀರು, ಶೌಚಾಲಯ ವ್ಯವಸ್ಥೆಯೊಂದಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.

LEAVE A REPLY

Please enter your comment!
Please enter your name here