ಪುತ್ತೂರು ರೆಡ್‌ಕ್ರಾಸ್ ಘಟಕದಿಂದ ತಂಬಾಕು ನಿಷೇಧ ದಿನ- ಉಪನ್ಯಾಸ ತಂಬಾಕು ಸೇವನೆ ಅಂದರೆ ಹಣ ಕೊಟ್ಟು ಹುಚ್ಚು ಹಿಡಿಸಿಕೊಂಡಂತೆ-ಡಾ. ಮುರಳೀಕೃಷ್ಣ ರೈ

0

ಬೆಟ್ಟಂಪಾಡಿ: ಆರೋಗ್ಯಕ್ಕೆ ಕುತ್ತು ತರುವ ನಿಕೋಟಿನ್ ನಂತಹಾ ಕೆಲವು ಅಪಾಯಕಾರಿ ರಾಸಾಯನಿಕಗಳು ತುಂಬಿರುವ ತಂಬಾಕನ್ನು ಸೇವಿಸುವುದು ಎಂದರೆ ರೋಗ ಬರಿಸಿಕೊಳ್ಳುವುದು ಎಂದೇ ಅರ್ಥ, ಆದುದರಿಂದ ತಂಬಾಕು ಸೇವಿಸುವುದು ಹಣ ಕೊಟ್ಟು ಹುಚ್ಚು ಹಿಡಿಸಿಕೊಂಡಂತೆ ಎಂದು ಕುಂಬ್ರ ಚಿರಾಯು ಕ್ಲಿನಿಕ್ ನ ಕುಟುಂಬ ವೈದ್ಯ ಡಾ. ಮುರಳೀಕೃಷ್ಣ ರೈ ಅಭಿಪ್ರಾಯಪಟ್ಟರು. ರೆಡ್ ಕ್ರಾಸ್ ಪುತ್ತೂರು ತಾಲೂಕು ಘಟಕವು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಜರಗಿದ ತಂಬಾಕು ನಿಷೇಧ ದಿನದ ಪ್ರಯುಕ್ತ ಉಪನ್ಯಾಸ ನೀಡುತ್ತಿದ್ದರು.

ತಂಬಾಕು ಸೇವನೆಯಿಂದ ದೇಹದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಸಿದ ಅವರು ಬೀಡಿ, ಸಿಗರೇಟ್ ಸೇವನೆಯಿಂದ ಪಕ್ಕದಲ್ಲಿರುವ ಇತರರ ಅರೋಗ್ಯಕ್ಕೂ ಕುತ್ತು ತರುತ್ತದೆಯಲ್ಲದೆ ಬೀಡಾ ಗುಟ್ಕಾಗಳನ್ನು ಜಗಿದು ಅಲ್ಲಲ್ಲಿ ಉಗುಳುವುದರಿಂದ ಸಾಂಕ್ರಾಮಿಕ ರೋಗ ಹರಡಲೂ ಕಾರಣವಾಗುತ್ತದೆ ಎಂದು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿಯವರು, ಒಂದು ಉತ್ತಮ ಕಾರ್ಯಕ್ರಮ ಏರ್ಪಡಿಸಿದ ರೆಡ್ ಕ್ರಾಸ್ ಸಂಸ್ಥೆಯನ್ನು ಅಭಿನಂದಿಸಿದರು. ರೆಡ್ ಕ್ರಾಸ್ ನಿರ್ದೇಶಕರಾಗಿರುವ ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರು ತಂಬಾಕು ಚಟದಿಂದ ವಿಮುಖರಾಗುವ ಅವಶ್ಯಕತೆಯನ್ನು ಪ್ರತಿಪಾದಿಸಿದರು. ಇನ್ನೋರ್ವ ರೆಡ್ ಕ್ರಾಸ್ ನಿರ್ದೇಶಕ ಜಯಪ್ರಕಾಶ್ ಎ.ಎಲ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಸಭಾಪತಿ ಸಂತೋಷ್ ಶೆಟ್ಟಿ ಎಸ್. ಅವರು ಮಾತನಾಡಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದು ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.

ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಯೋಜನಾಧಿಕಾರಿ ಡಾ. ದೇವರಾಜ್ ಆರ್. ಸ್ವಾಗತಿಸಿದರು. ರೆಡ್ ಕ್ರಾಸ್’ನ ಕಾರ್ಯಕ್ರಮ ಸಂಯೋಜನಾ ಉಪಸಮಿತಿಯ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಪ್ರಾಸ್ತಾವಿಕವಾಗಿ ಮಾತನಾಡಿ ಜಾಗತಿಕ ತಂಬಾಕು ದಿನಾಚರಣೆಯ ಇತಿಹಾಸದ ಬಗ್ಗೆ ತಿಳಿಸಿದರಲ್ಲದೆ ಕಾರ್ಯಕ್ರಮ ಏರ್ಪಡಿಸಲು ಸಹಕಾರ ನೀಡಿದ ಪ್ರಾಂಶುಪಾಲರನ್ನು ಹಾಗೂ ಯುವ ರೆಡ್ ಕ್ರಾಸ್ ಸಂಯೋಜನಾಧಿಕಾರಿಯವರಿಗೆ ಕೃತಜ್ಞತೆ ಸಲ್ಲಿಸಿದರು. ಯುವ ರೆಡ್ ಕ್ರಾಸ್ ಕಾರ್ಯಕರ್ತೆ ದೀಕ್ಷಾ ಕೆ. ಅವರು ಸಭೆಗೆ ಅತಿಥಿಯವರ ಪರಿಚಯ ಮಾಡಿದರು. ಯುವ ರೆಡ್ ಕ್ರಾಸ್ ನಾಯಕಿ ದಿವ್ಯಾ ಎಂ. ಕಾರ್ಯಕ್ರಮ ನಿರ್ವಹಿಸಿ ದುರ್ಗಾಶ್ರೀ ವಂದಿಸಿದರು.

LEAVE A REPLY

Please enter your comment!
Please enter your name here