ಎನ್ಎಸ್ಎಸ್ ವಿದ್ಯಾರ್ಥಿಗಳ ಪರಿಸರ ಜಾಗೃತಿ ಮತ್ತು ಕಾಳಜಿ ಮೂಡಿಸುವ ಕಾರ್ಯಗಳು ಶ್ಲಾಘನೀಯ: ರಾಜೇಶ್ ನೆಲ್ಲಿತ್ತಡ್ಕ

0

ಪುತ್ತೂರು: ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಂಡು ಪರಿಸರ ಜಾಗೃತಿ ಬಗ್ಗೆ ಅರಿವು ಮೂಡಿಸಿ ಪರಿಸರಪರ ಮನಸ್ಸುಗಳನ್ನು ಬೆಳೆಸುತ್ತಿರುವುದು ಶ್ಲಾಘನೀಯ ವಿಷಯ ಎಂದು ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಮುಖ್ಯಗುರುಗಳಾಗಿರುವ ಶ್ರೀ ರಾಜೇಶ್ ನೆಲ್ಲಿತ್ತಡ್ಕ ಹೇಳಿದರು. ಬೆಟ್ಟಂಪಾಡಿ ಕಾಲೇಜಿನ ಎನ್ಎಸ್ಎಸ್ ಘಟಕಗಳು ಅತ್ಯಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಮೂಲಕ ಮಾದರಿ ಘಟಕಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇವರು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕಗಳು ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯ ಸರಣಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಪ್ರಾಸ್ತಾವಿಕ ಮಾತುಗಳನ್ನಾಡಿದ ಎನ್ಎಸ್ಎಸ್ ಅಧಿಕಾರಿ ಶ್ರೀ ಹರಿಪ್ರಸಾದ್ ಎಸ್, ಎರಡು ವರ್ಷಗಳ ಹಿಂದೆ ಚಾಲನೆ ಪಡೆದ ವನಪರ್ವ ಅಭಿಯಾನ ಯಶಸ್ವಿಯಾಗಿ ಮುಂದುವರಿಯುತ್ತಿದ್ದು ವಿದ್ಯಾರ್ಥಿಗಳು ಅತ್ಯಂತ ಹುಮ್ಮಸ್ಸಿನಿಂದ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಎರಡು ವರ್ಷ ಮತ್ತು ಒಂದು ವರ್ಷಗಳನ್ನು ಪೂರೈಸಿ ಬೆಳೆಯುತ್ತಿರುವ 60ಕ್ಕೂ ಅಧಿಕ ಗಿಡಗಳು ಈ ಅಭಿಯಾನದ ಯಶೋಗಾಥೆಯನ್ನು ತೋರಿಸುತ್ತಿದ್ದು, ಈ ವರ್ಷ ಹೊಸದಾಗಿ ನೂರು ಸಸಿಗಳನ್ನು ನೆಡುವ ಯೋಜನೆಯನ್ನು ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ವರದರಾಜ ಚಂದ್ರಗಿರಿ ಇವರು ಮಾತನಾಡಿ ಕಾಲೇಜಿನ ಘಟಕಗಳು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ  ಬಸ್ಸು ತಂಗುದಾಣ ಶುಚಿತ್ವ ಮತ್ತು ನಿರ್ವಹಣೆ ಅಭಿಯಾನ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದು ಪರಿಸರ ಪೂರಕವಾದಂತಹ ಇಂತಹ ಕಾರ್ಯಕ್ರಮಗಳಿಂದಾಗಿ ಎನ್ಎಸ್ಎಸ್ ವಿದ್ಯಾರ್ಥಿಗಳ ಬಗೆಗಿನ ನಿರೀಕ್ಷೆಗಳು ಹೆಚ್ಚಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಾಲೇಜು ಮಟ್ಟದಲ್ಲಿ ಆಯೋಜಿಸಿದ್ದ ಪರಿಸರ ಗೀತೆ ಗಾಯನ, ಕವನ ರಚನೆ, ಘೋಷ ವಾಕ್ಯ ರಚನೆ, ಚಿತ್ರಕಲೆ, ಭಾಷಣ ಹಾಗೂ ಔಷಧೀಯ ಗಿಡಗಳ ಪರಿಚಯ ಮತ್ತು ಉಪಯೋಗಗಳ ಬಗೆಗಿನ ಶಾರ್ಟ್ ವಿಡಿಯೋ ತಯಾರಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮವನ್ನು ಸ್ವಯಂಸೇವಕಿಯಾದ ಕುಮಾರಿ ಅನುಪಮ ಕೆ ನೆರವೇರಿಸಿದರು.

 ಕಾರ್ಯಕ್ರಮದಲ್ಲಿ ಇನ್ನೋರ್ವ ಯೋಜನಾಧಿಕಾರಿಗಳಾದ ಶ್ರೀ ಶಶಿಕುಮಾರ, ಕಾಲೇಜಿನ ಉಪನ್ಯಾಸಕ ವೃಂದದವರಾದ ಶ್ರೀ ಉದಯರಾಜ ಎಸ್, ಶ್ರೀರಾಮ ಕೆ, ಡಾ. ಪೊಡಿಯ ಹಾಗೂ ಹಿರಿಯ ವಿದ್ಯಾರ್ಥಿಗಳಾದ ಶ್ರೀವಿಷ್ಣು ಕುಮಾರ್, ಶ್ರೀ ವಿಶ್ವನಾಥ ಬಳ್ಳಮೂಳೆ, ಡಾ. ಚಂದ್ರಶೇಖರ, ಎನ್ನೆಸ್ಸೆಸ್ ಘಟಕ ನಾಯಕರುಗಳು, ಅಲ್ಲದೆ ಎನ್ಎಸ್ಎಸ್ ಘಟಕಗಳ 120ಕ್ಕೂ ಅಧಿಕ ಸ್ವಯಂಸೇವಕರುಗಳು ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾದ ಕಿರಣ್ ಕೆ ಸ್ವಾಗತಿಸಿದರು, ವಿದ್ಯಾಶ್ರೀ ವಂದನೆ ಸಲ್ಲಿಸಿದರು, ಅನನ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here