ಉಪ್ಪಿನಂಗಡಿ: ಮತ್ತೆ 23 ವಿದ್ಯಾರ್ಥಿನಿಯರಿಗೆ ಒಂದು ವಾರ ತರಗತಿಗೆ ನಿರ್ಬಂಧಕ್ಕೆ ನಿರ್ಣಯ

0

  • ಹಿಜಾಬ್ ವಿವಾದ

ಉಪ್ಪಿನಂಗಡಿ: ಕಳೆದ ಕೆಲ ದಿನಗಳಿಂದ ಹಿಜಾಬ್ ವಿಚಾರವಾಗಿ ನಾನಾ ಘಟನಾವಳಿಗೆ ಕಾರಣವಾಗುತ್ತಿದ್ದ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರವೂ ಹಿಜಾಬ್ ವಿವಾದ ಮುಂದುವರಿದಿದ್ದು, ಹಿಜಾಬ್ ಧರಿಸಲು ಪಟ್ಟು ಹಿಡಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಲ್ಪಟ್ಟು ಸತತ ವಿನಂತಿಯನ್ನೂ ದಿಕ್ಕರಿಸಿದ ಕಾರಣಕ್ಕಾಗಿ 24 ಮಂದಿ ವಿದ್ಯಾರ್ಥಿನಿಯರಿಗೆ ಒಂದು ವಾರ ಕಾಲ ತರಗತಿಗೆ ನಿರ್ಬಂಧ ವಿಧಿಸಲಾಗಿದೆ.

 

ಕಾಲೇಜಿನಲ್ಲಿ ನಡೆಯುತ್ತಿರುವ ಅಹಿತಕರ ಘಟನಾವಳಿಯ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ನಿರ್ದೇಶಕಿ ಸೋಮವಾರದಂದು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಅಹವಾಲನ್ನು ಆಲಿಸಿದರು ಹಾಗೂ ತರಗತಿಗೆ ಹಾಜರಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಭಾಗಿಯಾಗಲು ವಿನಂತಿಸಿದರು. ಆದರೆ ಅದ್ಯಾವುದಕ್ಕೂ ಮಾನ್ಯತೆ ನೀಡದ ವಿದ್ಯಾರ್ಥಿನಿಯರು ಹಿಜಾಬ್‌ನೊಂದಿಗೆ ಕಾಲೇಜು ಪ್ರವೇಶಿಸಲು ಹಠ ಹಿಡಿದ ಹಿನ್ನೆಲೆಯಲ್ಲಿ ಸೋಮವಾರದಂದು ಡ್ರೆಸ್ಸಿಂಗ್ ರೂಮಿನಲ್ಲೂ ಠಿಕಾಣಿ ಹೂಡಲು ಅವಕಾಶ ನಿರಾಕರಿಸಲಾಗಿತ್ತು. ದಿನವಿಡೀ ನಡೆದ ಪ್ರಹಸನದ ಬಳಿಕ ಸಾಯಂಕಾಲದ ವೇಳೆ ಕಾಲೇಜಿನ ಉಪನ್ಯಾಸಕರ ಸಭೆ ಕರೆದ ಕಾಲೇಜು ಪ್ರಾಂಶುಪಾಲ ಶೇಖರ್ ಎಂ.ಬಿ., ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪು, ಸರಕಾರದ ಸುತ್ತೋಲೆ, ಕಾಲೇಜು ಅಭಿವೃದ್ಧಿ ಸಮಿತಿ ಕೈಗೊಂಡ ನಿರ್ಣಯದ ಆಧಾರದಲ್ಲಿ ಸಮವಸ್ತ್ರ ನಿಯಮಾವಳಿಯನ್ನು ಉಲ್ಲಂಸುತ್ತಾ ಕಾಲೇಜಿನ ಕಲಿಕಾ ವಾತಾವರಣವನ್ನು ಹಾನಿಗೊಳಿಸುತ್ತಿರುವ ೨೪ ವಿದ್ಯಾರ್ಥಿನಿಯರಿಗೆ ಮುಂದಿನ ಒಂದು ವಾರದ ಕಾಲ ತರಗತಿ ನಿರ್ಬಂಧ ವಿಧಿಸಿ ನಿರ್ಣಯ ಕೈಗೊಂಡರು. ಇದೇ ವಿವಾದಕ್ಕೆ ಸಂಬಂಧಿಸಿ ಈ ಹಿಂದೆಯೇ ೭ ಮಂದಿ ವಿದ್ಯಾರ್ಥಿಯರಿಗೆ ತರಗತಿ ನಿರ್ಬಂಧ ವಿಧಿಸಲಾಗಿತ್ತು.

LEAVE A REPLY

Please enter your comment!
Please enter your name here