ಚರಣ್ ರಾಜ್ ರೈ ಬರ್ಬರ ಕೊಲೆ ಪ್ರಕರಣ

0

  • ಪುತ್ತೂರು ಕೋರ್ಟ್ ಆವರಣದಿಂದ ಪೆರ್ಲಂಪಾಡಿಗೆ ರಿಕ್ಷಾದಲ್ಲಿ ತಲವಾರು, ರಾಡ್ ಸಾಗಿಸಿದ್ದ ಕಿಶೋರ್ ಪೂಜಾರಿ, ನರ್ಮೇಶ್ ರೈ
  • ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ಚರಣ್ ರಾಜ್ ರೈಯನ್ನು ಹಿಂದಿನಿಂದ ಹಿಡಿದುಕೊಂಡದ್ದು ರೇಮಂತ್ ಗೌಡ, ತಲವಾರಿನಿಂದ ಕಡಿದು ಬಲಿ ಪಡೆದದ್ದು ರಾಕೇಶ್ ಪಂಚೋಡಿ

ಪುತ್ತೂರು: ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ಸುವರ್ಣ ಮೇರ್ಲ(27ವ)ರವರ ಕೊಲೆ ಪ್ರಕರಣದ ಆರೋಪಿ ಚರಣ್‌ರಾಜ್ ರೈ(29ವ)ಯವರನ್ನು ಹತ್ಯೆ ಮಾಡಲು ಕಿಶೋರ್ ಪೂಜಾರಿ ಕಲ್ಲಡ್ಕ ಮತ್ತು ಕೆಯ್ಯೂರಿನ ನರ್ಮೇಶ್ ರೈಯವರು ಪುತ್ತೂರು ನ್ಯಾಯಾಲಯದ ಆವರಣದಿಂದ ರಿಕ್ಷಾದಲ್ಲಿ ಪೆರ್ಲಂಪಾಡಿಗೆ ತೆರಳಿದ್ದರು. ಅಲ್ಲದೆ, ಇದೇ ರಿಕ್ಷಾದಲ್ಲಿ ತಲವಾರು ಮತ್ತು ರಾಡ್ ಸಾಗಿಸಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಚರಣ್ ರಾಜ್ ರೈಯವರನ್ನು ಜೂನ್ 4ರಂದು ಸಂಜೆ 4.15ರ ವೇಳೆಗೆ ಪೆರ್ಲಂಪಾಡಿಯ ರಸ್ತೆ ಬದಿಯಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣದ ಪ್ರಮುಖ ಆರೋಪಿತರಾಗಿರುವ ಕಿಶೋರ್ ಪೂಜಾರಿ(೩೪ವ)ಕಲ್ಲಡ್ಕ, ಈಶ್ವರಮಂಗಲ ಪಂಚೋಡಿಯ ರಾಕೇಶ್ ಮಡಿವಾಳ(೨೭ವ)ಹಾಗೂ ಬಲ್ನಾಡಿನ ರೇಮಂತ್ ಗೌಡ(೨೯ವ)ಎಂಬವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಕೃತ್ಯದ ಒಳಗುಟ್ಟು ರಟ್ಟಾಗಿದೆ.

 

 

ಪ್ಲ್ಯಾನ್ ಮಾಡಿದ್ದು ಕಿಶೋರ್ ಪೂಜಾರಿ, ಚರಣ್ ರಾಜ್ ರೈಯವರನ್ನು ಹಿಡಿದುಕೊಂಡದ್ದು ರೇಮಂತ್ ಗೌಡ, ತಲವಾರಿನಿಂದ ಕಡಿದದ್ದು ರಾಕೇಶ್ ಪಂಚೋಡಿ

೨೦೧೯ರ ಸೆಪ್ಟೆಂಬರ್ ೩ರಂದು ರಾತ್ರಿ ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವೇಳೆ ಯಕ್ಷಗಾನ ವೀಕ್ಷಿಸುತ್ತಿದ್ದಾಗ ಪೆಂಡಾಲ್ ಒಳಗಡೆ ನಡೆದಿದ್ದ ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿಯಾಗಿದ್ದ ಸಂಪ್ಯ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣರವರ ಕೊಲೆ ಪ್ರಕರಣದ ಆರೋಪಿಯಾಗಿರುವ ಸಂಪ್ಯ ನಿವಾಸಿ ಚರಣ್‌ರಾಜ್ ರೈಯವರನ್ನು ಕೊಳ್ತಿಗೆ ಸಮೀಪದ ಪೆರ್ಲಂಪಾಡಿಯ ರಸ್ತೆ ಬದಿಯಲ್ಲಿ ಜೂನ್ ೪ರಂದು ಸಂಜೆ ಕೊಚ್ಚಿ ಕೊಲೆ ಮಾಡಲಾಗಿರುವುದು ರೌಡಿಶೀಟರ್ ಕಿಶೋರ್ ಪೂಜಾರಿಯ ಯೋಜನೆಯಂತೆ ಎಂಬುದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿದೆ.

ಚರಣ್‌ರಾಜ್ ರೈ ಹಂತಕರನ್ನು ಬಂಧಿಸಲು ರಚಿಸಲಾಗಿರುವ ವಿಶೇಷ ತನಿಖಾ ತಂಡದಲ್ಲಿರುವ ಪುತ್ತೂರು ಗ್ರಾಮಾಂತರ, ಸುಳ್ಯ ಮತ್ತು ಬೆಳ್ಳಾರೆ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಕೊಲೆ ಪ್ರಕರಣದ ಎಲ್ಲಾ ಆರು ಆರೋಪಿಗಳನ್ನು ಬಲೆಗೆ ಕೆಡಹುವಲ್ಲಿ ಯಶಸ್ವಿಯಾಗಿ ತೀವ್ರ ವಿಚಾರಣೆಗೊಳಪಡಿಸಿದಾಗ ಕೊಲೆ ಕೃತ್ಯದ ಪ್ಲ್ಯಾನ್ ಬಹಿರಂಗವಾಗಿದೆ.

ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಕೆಯ್ಯೂರು ನೂಜಿ ಮುತ್ತಪ್ಪ ರೈಯವರ ಪುತ್ರ ನರ್ಮೇಶ್ ರೈ(೨೯ವ), ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಯತೀಶ ಶೆಟ್ಟಿ ಎಂಬವರ ಪುತ್ರ ನಿತಿಲ್ ಶೆಟ್ಟಿ (೨೩ವ) ಹಾಗೂ ಕಡಬ ತಾಲೂಕಿನ ಬೆಳಂದೂರು ಮರಕಲ ನಿವಾಸಿ ರಾಮ ಎಂಬವರ ಪುತ್ರ ವಿಜೇಶ್ (೨೨ವ) ಎಂಬವರನ್ನು ಪೊಲೀಸರು ಕೆಯ್ಯೂರು ಗ್ರಾಮದ ಪಲ್ಲತ್ತಡ್ಕದಲ್ಲಿರುವ ಗೇರು ಬೀಜದ ಕಾಡಿನಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧನಕ್ಕೊಳಪಡಿಸಿದ್ದರು. ಅವರು ವಿಚಾರಣೆ ವೇಳೆ ನೀಡಿದ್ದ ಮಾಹಿತಿಯ ಆಧಾರದಲ್ಲಿ ಬಂಟ್ವಾಳ ತಾಲೂಕಿನ ನರಹರಿ ಪರ್ವತ ಬಳಿಯ ನಿವಾಸಿ ನಾರಾಯಣ ಅವರ ಪುತ್ರ ರೌಡಿಶೀಟರ್ ಕಿಶೋರ್ ಪೂಜಾರಿ ಕಲ್ಲಡ್ಕ(೩೪ವ), ಈಶ್ವರಮಂಗಲ ಪಂಚೋಡಿಯ ಚಂದ್ರಶೇಖರ್ ಅವರ ಪುತ್ರ ರಾಕೇಶ್ ಪಂಚೋಡಿ(೨೭ವ) ಮತ್ತು ಬಲ್ನಾಡು ಕರ್ಕುಂಜ ಸಿಂಗಾಣಿ ನಿವಾಸಿ ಗಿರಿಧರ್ ಅವರ ಪುತ್ರ ರೇಮಂತ್ ಗೌಡ(೨೬ವ)ರವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕೊಲೆ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವನೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ ಮತ್ತು ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ಅವರ ನೇತೃತ್ವದಲ್ಲಿ ಸುಳ್ಯ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ.ರುಕ್ಮ ನಾಯ್ಕ್, ಸಂಪ್ಯ ಠಾಣೆಯ ಎಸ್.ಐ ಉದಯರವಿ ಅವರ ತಂಡ ಯಶಸ್ವಿಯಾಗಿದೆ.

ಸೋಮವಾರ ಪೇಟೆಯಲ್ಲಿ ಬಂಧನವಾಗಿತ್ತು:
ಚರಣ್‌ರಾಜ್ ರೈ ಕೊಲೆ ಮಾಡಿದ ಆರೋಪಿಗಳ ಪೈಕಿ ನರ್ಮೇಶ್ ರೈ, ನಿತಿಲ್ ಶೆಟ್ಟಿ ಮತ್ತು ವಿಜೇಶ್‌ರವರು ಕೆಯ್ಯೂರು ಕಡೆ ಬೈಕ್‌ನಲ್ಲಿ ಹೋಗಿದ್ದರು. ಕಿಶೋರ್ ಪೂಜಾರಿ, ರಾಕೇಶ್ ಮಡಿವಾಳ ಮತ್ತು ರೇಮಂತ್ ಗೌಡ ಬೈಕ್‌ನಲ್ಲಿ ನಿಂತಿಕಲ್‌ಗೆ ಹೋಗಿ ಅಲ್ಲಿ ಬೈಕ್ ಬಿಟ್ಟು ಬಾಡಿಗೆ ರಿಕ್ಷಾವೊಂದನ್ನು ಗೊತ್ತು ಮಾಡಿಕೊಂಡು ಸುಬ್ರಹ್ಮಣ್ಯಕ್ಕೆ ಹೋಗಿ ಸುಬ್ರಹ್ಮಣ್ಯದಿಂದ ಬಾಡಿಗೆ ಕಾರು ಗೊತ್ತು ಮಾಡಿಕೊಂಡು ಬಿಸಿಲೆ ಮಾರ್ಗವಾಗಿ ಸಕಲೇಶಪುರ ತಾಲೂಕಿನ ಹೆತ್ತೂರು ಎಂಬಲ್ಲಿಗೆ ಹೋಗಿದ್ದರು. ಎರಡು ದಿನ ಕಳೆದ ನಂತರ ಜೂನ್ ೬ರಂದು ಬಾಡಿಗೆ ಕಾರಿನಲ್ಲಿ ಸೋಮವಾರಪೇಟೆ ಕಡೆ ತೆರಳುತ್ತಿದ್ದ ವೇಳೆ ಸುಳ್ಯ ಪೊಲೀಸ್ ಠಾಣೆಯ ಎಸ್.ಐ ದಿಲೀಪ್ ಅವರ ತಂಡ ಆರೋಪಿಗಳನ್ನು ಸೋಮವಾರಪೇಟೆಯಲ್ಲಿ ವಶಕ್ಕೆ ಪಡೆದುಕೊಂಡು ಬಂಧಿಸಿದ್ದರು. ಬಂಧಿತರು ತಾವು ಕಾರ್ತಿಕ್ ಸುವರ್ಣರವರ ಕೊಲೆಗೆ ಸೇಡು ತೀರಿಸುವುದಕ್ಕಾಗಿ ಚರಣ್ ರಾಜ್ ರೈಯವರನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.

ಪುತ್ತೂರು ಕೋರ್ಟ್ ಆವರಣದಿಂದ ರಿಕ್ಷಾದಲ್ಲಿ ತೆರಳಿದರು
ಕಿಶೋರ್ ಕುಮಾರ್ ಕಲ್ಲಡ್ಕರವರು ತನ್ನ ಆಪ್ತ ಒಡನಾಡಿ, ಸಂಬಂಧಿಕನೂ ಆಗಿದ್ದ ಮೇರ್ಲ ಕುಟುಂಬದ ಕಾರ್ತಿಕ್ ಸುವರ್ಣರ ಕೊಲೆಗೆ ಪ್ರತೀಕಾರವಾಗಿ ದ್ವೇಷದಿಂದ ಚರಣ್‌ರಾಜ್ ರೈಯವರನ್ನು ಕೊಲೆ ಮಾಡಲು ಮೊದಲೇ ಯೋಜನೆ ರೂಪಿಸಿ ಇತರರನ್ನು ಕೊಲೆ ಕೃತ್ಯಕ್ಕೆ ತಯಾರು ಮಾಡಿದ್ದ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಕಿಶೋರ್ ಪೂಜಾರಿ ಮೂಲತಃ ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿಯಾಗಿದ್ದು ಬೆಂಗಳೂರು ಮತ್ತು ದರ್ಬೆಯಲ್ಲಿ ಬಟ್ಟೆ ಶಾಪ್ ಹೊಂದಿದ್ದಾರೆ. ಮೂಲತಃ ಕಲ್ಲಡ್ಕದವನಾದರೂ ಸಂಪ್ಯ ಮೇರ್ಲದಲ್ಲಿ ವಾಸವಿದ್ದ ಕಿಶೋರ್ ಪೂಜಾರಿ ಪುತ್ತೂರಿನಲ್ಲಿ ಸಕ್ರಿಯವಾಗಿದ್ದ. ಕೊಲೆ ಘಟನೆ ನಡೆದ ದಿನ ಬೆಳಿಗ್ಗೆ ಕಿಶೋರ್ ಪೂಜಾರಿ, ರಾಕೇಶ್ ಪಂಚೋಡಿ ಮತ್ತಿತರರು ಈ ಹಿಂದಿನ ಹಲ್ಲೆ ಪ್ರಕರಣವೊಂದರ ವಿಚಾರಣೆಗಾಗಿ ಪುತ್ತೂರು ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಸಂಪ್ಯ ಮೇರ್ಲದಿಂದ ತಮ್ಮ ಪರಿಚಯದವರಾಗಿರುವ ಸಂಪ್ಯ ನಿವಾಸಿಯ ರಿಕ್ಷಾದಲ್ಲಿ ಪುತ್ತೂರು ಕೋರ್ಟಿಗೆ ಬಂದಿದ್ದ ಕಿಶೋರ್ ಪೂಜಾರಿ ಮತ್ತು ನರ್ಮೇಶ್ ರೈಯವರು ರಿಕ್ಷಾದಲ್ಲಿ ರಾಡ್ ಮತ್ತು ತಲವಾರನ್ನು ಗೋಣಿ ಚೀಲದಲ್ಲಿ ಹಾಕಿ ತಂದಿದ್ದರು.

ನ್ಯಾಯಾಲಯದಲ್ಲಿ ಬೆಳಿಗ್ಗೆ ಹಿಂದಿನ ಹಲ್ಲೆ ಕೃತ್ಯದ ವಿಚಾರಣೆಗೆ ಕಿಶೋರ್ ಮತ್ತು ರಾಕೇಶ್ ಪಂಚೋಡಿ ಹಾಜರಾಗಿದ್ದರು.‌ ಮಧ್ಯಾಹ್ನದ ಬಳಿಕ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದಾಗ ಹೊರ ಬಂದ ಕಿಶೋರ್ ಪೂಜಾರಿ ಅದೇ ರಿಕ್ಷಾದ ಬಳಿ ಬಂದು ನರ್ಮೇಶ್ ರೈ ಜತೆ ಅಲ್ಲಿಂದ ತೆರಳಿದ್ದ. ಚರಣ್ ರಾಜ್ ರೈ ಪೆರ್ಲಂಪಾಡಿಯಲ್ಲಿ ಇರುವ ಕುರಿತು ಖಚಿತ ಮಾಹಿತಿ ಹೊಂದಿದ್ದ ಕಿಶೋರ್ ಪೂಜಾರಿ ಮತ್ತು ನರ್ಮೇಶ್ ರೈ ರಿಕ್ಷಾದಲ್ಲಿ‌ ಪೆರ್ಲಂಪಾಡಿಗೆ ತೆರಳಿದ್ದರು.
ರಾಕೇಶ್ ಪಂಚೋಡಿ ಮತ್ತು ರೇಮಂತ್ ಗೌಡ ಬೈಕಿನಲ್ಲಿ ತೆರಳಿದ್ದರು. ವಿಜೇಶ್ ಮತ್ತು ನಿತಿಲ್ ಶೆಟ್ಟಿ ಬೈಕಿನಲ್ಲಿ ಪೆರ್ಲಂಪಾಡಿಗೆ ಬಂದಿದ್ದರು.

ಚರಣ್ ರಾಜ್ ರೈಯವರು ಪೆರ್ಲಂಪಾಡಿಯಲ್ಲಿ ಮೆಡಿಕಲ್ ಬಳಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿರುವುದನ್ನು ಕಂಡ ಕಿಶೋರ್ ಪೂಜಾರಿ ರಾಡ್ ಮತ್ತು ತಲವಾರನ್ನು ಕಿಶೋರ್ ಪಂಚೋಡಿಗೆ ಹಸ್ತಾಂತರಿಸಿದ್ದ.‌ ರಸ್ತೆಗೆ ಬೆನ್ನು ಹಾಕಿ ನಿಂತು ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ಚರಣ್ ರಾಜ್ ರೈಯವರನ್ನು ಹಿಂದಿನಿಂದ ಹಿಡಿದುಕೊಂಡ ರೇಮಂತ್ ಗೌಡ ಚರಣ್ ರಾಜ್ ಅವರ ಕಾಲು ಹಿಡಿದು ಕೆಡವಿ ಹಾಕುತ್ತಿದ್ದಂತೆಯೇ ರಾಕೇಶ್ ಪಂಚೋಡಿ ಬಲವಾಗಿ ರಾಡ್ ಬೀಸಿ, ತಲವಾರಿನಿಂದ ಕಡಿದು ಚರಣ್ ರಾಜ್ ರೈಯವರನ್ನು‌ ಬಲಿ ಪಡೆದಿದ್ದಾನೆ. ಈ ವೇಳೆ ಕೊಲೆಯ ಮಾಸ್ಟರ್ ಮೈಂಡ್ ಕಿಶೋರ್ ಪೂಜಾರಿ, ಕಿಶೋರ್ ಜತೆಗಿದ್ದ ನರ್ಮೇಶ್ ರೈ, ಅಲ್ಲಿಗೆ ಬೈಕಿನಲ್ಲಿ ಬಂದಿದ್ದ ವಿಜೇಶ್ ಮತ್ತು ನಿತಿಲ್ ಶೆಟ್ಟಿ ಘಟನಾ ಸ್ಥಳದಲ್ಲಿ ನಿಂತಿದ್ದರು. ಬಳಿಕ ಆರು ಮಂದಿಯೂ ಅಲ್ಲಿಂದ ಪರಾರಿಯಾಗಿದ್ದಾರೆ. ಕೊಲೆ ಮಾಡುವ ಯೋಜನೆಯ ಬಗ್ಗೆಯಾಗಲೀ, ತನ್ನ ರಿಕ್ಷಾದಲ್ಲಿ ತಲವಾರು ಮತ್ತು ರಾಡ್ ಇರುವುದಾಗಲೀ ಗೊತ್ತಿಲ್ಲದ ರಿಕ್ಷಾ ಚಾಲಕನು ಚರಣ್ ರಾಜ್ ರೈ ಕೊಲೆ ನಡೆದ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಕೊಲೆ ಕೃತ್ಯದಲ್ಲಿ ರಿಕ್ಷಾ ಚಾಲಕನೂ ಭಾಗಿದಾರನೇ ಎಂಬ ಸಂಶಯದಲ್ಲಿ ವಿಚಾರಣೆ ನಡೆಸಿದ ಪೊಲೀಸರಿಗೆ ಆತ ಅಮಾಯಕ ಎಂಬುದು ಖಚಿತವಾಗಿದ್ದು ಆತನನ್ನು ಪ್ರಕರಣದ ಓರ್ವ ಸಾಕ್ಷಿದಾರನನ್ನಾಗಿಸಿದ್ದಾರೆ.

ಜೈಲಿನಲ್ಲಿ ಮುಹೂರ್ತ ಫಿಕ್ಸ್ ಆಗಿರಲಿಲ್ಲ:
ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣರವರ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಸಂಪ್ಯ ನಿವಾಸಿಗಳಾದ ಕಿರಣ್‌ರಾಜ್ ರೈ ಮತ್ತು ಚರಣ್ ರಾಜ್ ರೈ ಸಹೋದರರು ಕೆಲ ಸಮಯದ ಹಿಂದೆ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಇನ್ನೂ ಜೈಲಿನಲ್ಲೇ ಇರುವ ಪ್ರಮುಖ ಆರೋಪಿ ಮಂಗಳೂರಿನ ಪ್ರೀತೇಶ್ ಶೆಟ್ಟಿ ಪರ ಕಾರ್ತಿಕ್ ಕುಟುಂಬಸ್ಥರು ಸಾಕ್ಷಿ ಹೇಳಬೇಕು ಎಂದು ತಾರಿಗುಡ್ಡೆಯ ರಾಧಾಕೃಷ್ಣ ಪೂಜಾರಿ ಎಂಬಾತ ಬೀರಮಲೆ ಗುಡ್ಡೆಯಲ್ಲಿ ಡೀಲ್ ಕುದುರಿಸಲು ಮುಂದಾಗಿದ್ದಾಗ ಕಿಶೋರ್ ಪೂಜಾರಿ ಮತ್ತು ರಾಧಾಕೃಷ್ಣ ಪೂಜಾರಿಯವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ದ್ವೇಷದಲ್ಲಿ ದರ್ಬೆ ಪೆಟ್ರೋಲ್ ಬಂಕ್ ಬಳಿ ರಾಧಾಕೃಷ್ಣ ಪೂಜಾರಿಯವರ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಕಿಶೋರ್ ಪೂಜಾರಿ ಕಲ್ಲಡ್ಕ, ರಾಕೇಶ್ ಪಂಚೋಡಿ, ರೇಮಂತ್ ಗೌಡ ಮತ್ತಿತರರು ಜೈಲು ಸೇರಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಇವರು ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದರು. ಜೈಲಿನಲ್ಲಿ ಇದ್ದಾಗಲೇ ಇವರು ಕಾರ್ತಿಕ್ ಸುವರ್ಣ ಕೊಲೆಗೆ ಪ್ರತೀಕಾರ ತೀರಿಸಲು ಸಂಚು ರೂಪಿಸಿದ್ದರೇ ಎಂದು ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಈ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ದೊರೆತಿಲ್ಲ. ಕಾರ್ತಿಕ್ ಸುವರ್ಣ ಕೊಲೆಯ ಬಳಿಕ ಚರಣ್ ರಾಜ್ ರೈ ವಿರುದ್ಧ ಕತ್ತಿ ಮಸೆಯುತ್ತಿದ್ದ ಕಿಶೋರ್ ಪೂಜಾರಿ ಈ ಬಗ್ಗೆ ತನ್ನ ಸ್ನೇಹಿತರ ಜತೆ ಹೇಳುತ್ತಿದ್ದ. ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ರೈ ಮೆಡಿಕಲ್ ಪ್ರಾರಂಭಿಸುವುದು ಗೊತ್ತಾಗುತ್ತಿದ್ದಂತೆಯೇ ರಾಡ್ ಮತ್ತು ತಲವಾರನ್ನು ಮೇರ್ಲದ ತನ್ನ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ. ಅದನ್ನು ಜೂನ್ 4ರಂದು ರಿಕ್ಷಾದಲ್ಲಿ ಪುತ್ತೂರಿಗೆ ತಂದು ನ್ಯಾಯಾಲಯದ ವಿಚಾರಣೆಗೆ ಹಾಜರಾದ ಬಳಿಕ ಅದೇ ರಿಕ್ಷಾದಲ್ಲಿ ಪೆರ್ಲಂಪಾಡಿಗೆ ನರ್ಮೇಶ್ ರೈ ಜತೆ ಕಿಶೋರ್ ತೆರಳಿದ್ದ. ಇತರ ನಾಲ್ವರನ್ನು ಪೆರ್ಲಂಪಾಡಿಗೆ ಬರುವಂತೆ ವ್ಯವಸ್ಥೆ ಮಾಡಿ ಚರಣ್ ರಾಜ್ ರೈಯನ್ನು ಕಿಶೋರ್ ಪೂಜಾರಿ ಕೊಲೆ ಮಾಡಿಸಿದ್ದಾನೆ ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಲೆ ಘಟನೆಯ ಪ್ರತ್ಯಕ್ಷದರ್ಶಿ ತಾರಿಗುಡ್ಡೆಯ ನವಿನ್ ಕುಮಾರ್ ನೀಡಿದ ದೂರಿನಂತೆ ಐಪಿಸಿ 302 ಮತ್ತು 34 ಅನ್ವತ ಕೇಸು ದಾಖಲಿಸಿರುವ ಬೆಳ್ಳಾರೆ ಠಾಣಾ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿ ತಲವಾರು, ರಾಡ್ ವಶ ಪಡಿಸಿಕೊಂಡಿದ್ದಾರೆ. ಕೊಲೆ ಕೃತ್ಯಕ್ಕೆ ಬೇರೆ ಯಾರೂ ಯಾವುದೇ ರೀತಿಯ ಸಹಕಾರ ನೀಡಿಲ್ಲ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಆದರೆ, ಕೊಲೆ ನಡೆದ ದಿನದಂದು ಕಿಶೋರ್ ಪೂಜಾರಿಗೆ ದೂರವಾಣಿ ಕರೆ ಮಾಡಿ ಚರಣ್ ರಾಜ್ ರೈಯವರು ಪೆರ್ಲಂಪಾಡಿಯಲ್ಲಿ ಇರುವ ಬಗ್ಗೆ ಮಾಹಿತಿ ನೀಡಿದ ವ್ಯಕ್ತಿ ಯಾರು ಎಂಬ ಶೋಧದಲ್ಲಿದ್ದಾರೆ.

LEAVE A REPLY

Please enter your comment!
Please enter your name here