ಮತಾಂತರ ಆರೋಪ: ಸಮಗ್ರ ತನಿಖೆಗೆ ಹಿಜಾವೇ ಆಗ್ರಹ

0

ಉಪ್ಪಿನಂಗಡಿ: ಮತಾಂತರ ಆರೋಪ ಕೇಳಿ ಬಂದಿರುವ ಕೊಣಾಲಿನ ಆರ್ಲ ಎಂಬಲ್ಲಿರುವ ಮೋರಿಯ ಧ್ಯಾನ್ಯ ಕೇಂದ್ರವನ್ನು ಸಮಗ್ರ ತನಿಖೆಗೊಳಪಡಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆಯ ಮುಖಂಡರು ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರನ್ನು ಒತ್ತಾಯಿಸಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಉಮೇಶ್‌ ಉಪ್ಪಳಿಕೆರವರನ್ನು ಭೇಟಿ ಮಾಡಿದ ಮುಖಂಡರು,  ಧ್ಯಾನ ಮಾಡುವುದರಿಂದ ಆರೋಗ್ಯ ಸುಧಾರಿಸುವುದೆಂದು ಯೂ ಟ್ಯೂಬ್‌ನಲ್ಲಿ ಪ್ರಚಾರ ಮಾಡಿ ಜನರನ್ನು ಆಕರ್ಷಿಸಲಾಗುತ್ತಿದೆ. ಇಲ್ಲಿ ಅನ್ಯ ಧರ್ಮೀಯರನ್ನು ತಮ್ಮ ಧರ್ಮಕ್ಕೆ ಮತಾಂತರ ಮಾಡುವ ಸಾಧ್ಯತೆಯೂ ಇದೆ. ಆದ್ದರಿಂದ ಈ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಮೋರಿಯ ಧ್ಯಾನ ಕೇಂದ್ರದಲ್ಲಿ ಶಿವಮೊಗ್ಗ ಮೂಲದ 27 ಜನರನ್ನು ಮತಾಂತರಗೊಳಿಸಲು ಕರೆಯಿಸಿ ಇಡಲಾಗಿದೆ ಎಂಬ ದೂರಿನನ್ವಯ ಪೊಲೀಸರು ಶನಿವಾರ ತಡರಾತ್ರಿ ಅಲ್ಲಿಗೆ ದಾಳಿ ನಡೆಸಿ, ವಿಚಾರಣೆ ನಡೆಸಿದ್ದರು. ಆದರೆ ಆಗ ಅಲ್ಲಿಗೆ ಬಂದವರು ನಾವು ಯಾರೂ ಮತಾಂತರಕ್ಕೆ ಬಂದವರಲ್ಲ. ನಮ್ಮ ಕಷ್ಟಗಳ ಪರಿಹಾರಕ್ಕಾಗಿ ನಂಬಿಕೆಯಿಂದ ನಮ್ಮ ಸ್ವಂತ ಖರ್ಚಿನಿಂದ ಹಾಗೂ ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದ್ದರು. ಬಳಿಕ ಅವರನ್ನು ಪೊಲೀಸರು ವಾಪಸ್ ಅವರವರ ಊರಿಗೆ ಕಳುಹಿಸಿದ್ದರು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ಹಿಂದೂ ಯುವವಾಹಿನಿಯ ಪ್ರಶಾಂತ್ ಕೆಂಪುಗುಡ್ಡೆ, ಪ್ರಮುಖರಾದ ನರಸಿಂಹ ಮಾಣಿ, ರತ್ನಾಕರ ಶೆಟ್ಟಿ ಕಲ್ಲಡ್ಕ, ಮಲ್ಲೇಶ್ ಆಲಂಕಾರು, ಚಿದಾನಂದ ಪಂಚೇರು, ಅನೀಲ್ ಹಿರೇಬಂಡಾಡಿ, ಸುಜೀತ್ ಬೊಳ್ಳಾವು, ವಿಜೇತ್ ನೇಜಿಕಾರು, ರಾಜೇಶ್ ಕೊಡಂಗೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here