ನೆಲ್ಯಾಡಿ ಪೇಟೆ ಚರಂಡಿಗೆ ಕೊಳಚೆ ನೀರು; ದೂರು-ಗ್ರಾ.ಪಂ. ಆಡಳಿತ ಮಂಡಳಿ ಭೇಟಿ, ಪರಿಶೀಲನೆ- ಕೊಳಚೆ ನೀರು ಚರಂಡಿಗೆ ಬಿಡದಂತೆ ಸೂಚನೆ

0

ನೆಲ್ಯಾಡಿ: ನೆಲ್ಯಾಡಿ ಪೇಟೆಯಲ್ಲಿನ ಚರಂಡಿಗಳಿಗೆ ಕೊಳಚೆ ನೀರು ಬಿಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಜೂ.7ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೊಳಚೆ ನೀರು ಚರಂಡಿಗೆ ಬಿಡದಂತೆ ಸಂಬಂಧಿಸಿದವರಿಗೆ ಎಚ್ಚರಿಕೆ ನೀಡಲಾಗಿದೆ.

ನೆಲ್ಯಾಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಪೇಟೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಚರಂಡಿಯ ಎರಡೂ ಬದಿಯೂ ಕಾಂಕ್ರಿಟ್ ತಡೆಗೋಡೆ ಮಾಡಿ ಮೇಲ್ಭಾಗವನ್ನು ಕಾಂಕ್ರಿಟ್‌ನಿಂದ ಮುಚ್ಚಲಾಗುತ್ತಿದೆ. ಈ ಕಾಮಗಾರಿ ಅಪೂರ್ಣ ಹಂತದಲ್ಲಿದೆ. ಹೋಟೆಲ್, ಮನೆಗಳ ಕೊಳಚೆ ನೀರು ಚರಂಡಿಗೆ ಬಿಡಲಾಗುತ್ತಿದ್ದು ಈ ನೀರು ಅಲ್ಲಲ್ಲಿ ಶೇಖರಣೆಗೊಂಡು ದುರ್ವಾಸನೆ ಬರುತ್ತಿದೆ. ಈ ಬಗ್ಗೆ ರಿಕ್ಷಾ ಚಾಲಕರು, ಸಾರ್ವಜನಿಕರು ನೆಲ್ಯಾಡಿ ಗ್ರಾಮ ಪಂಚಾಯತ್‌ಗೆ ದೂರು ನೀಡಿ ಕೊಳಚೆ ನೀರು ಚರಂಡಿಗೆ ಬಿಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಜೂ.7ರಂದು ನಡೆದ ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆಸಲಾಯಿತು.

ಸ್ಥಳಕ್ಕೆ ಭೇಟಿ:

ಮಧ್ಯಾಹ್ನ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನೆಲ್ಯಾಡಿ ಪೇಟೆಗೆ ತೆರಳಿ ಚರಂಡಿ ಪರಿಶೀಲನೆ ನಡೆಸಿತು. ಈ ವೇಳೆ ಕೊಳಚೆ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಕೊಳಚೆ ನೀರು ಚರಂಡಿಗೆ ಬಿಡದಂತೆ ಹಾಗೂ ಇಂಗುಗುಂಡಿ ಮಾಡಿ ಕೊಳಚೆ ನೀರು ಇಂಗುವಂತೆ ಮಾಡುವ ಸಂಬಂಧ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಚೇತನಾ, ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಪಿಡಿಒ ಮಂಜುಳ ಎನ್., ಸದಸ್ಯರುಗಳಾದ ರವಿಪ್ರಸಾದ್ ಶೆಟ್ಟಿ, ಜಯಾನಂದ ಬಂಟ್ರಿಯಾಲ್, ಪ್ರಕಾಶ್ ಪೂಜಾರಿ, ಯಾಕುಬು ಯಾನೆ ಸಲಾಂ, ಜಯಲಕ್ಷ್ಮಿ ಪ್ರಸಾದ್, ಪುಷ್ಪಾ ಪಡುಬೆಟ್ಟು, ಜಯಂತಿ ಮಾದೇರಿ, ಉಷಾ ಜೋಯಿ, ಸಿಬ್ಬಂದಿಗಳಾದ ಶಿವಪ್ರಸಾದ್, ಅಬ್ದುಲ್ ರಹಿಮಾನ್‌ರವರು ಉಪಸ್ಥಿತರಿದ್ದರು.?

LEAVE A REPLY

Please enter your comment!
Please enter your name here