ಬೆಟ್ಟಂಪಾಡಿ: ಹಾಡಹಗಲೇ ಬೈಕಿನಲ್ಲಿ ಬಂದು ಮಹಿಳೆಯ ಕತ್ತಿನಿಂದ ಕರಿಮಣಿ ಎಳೆದೊಯ್ದ ಕಳ್ಳರು

0

  • ಮರುಕಳಿಸಿದ ವರ್ಷಗಳ ಹಿಂದಿನ ಘಟನೆ

ಬೆಟ್ಟಂಪಾಡಿ: ಇಲ್ಲಿನ ರೆಂಜ – ಕೋನಡ್ಕ ರಸ್ತೆಯಲ್ಲಿ ಬುಲೆಟ್ ಬೈಕ್ ನಲ್ಲಿ ಬಂದ ಅಪರಿಚಿತರೀರ್ವರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಿಂದ ಹಾಡಹಗಲೇ ಕರಿಮಣಿ ಸರ ಎಳೆದೊಯ್ದು ಪರಾರಿಯಾದ ಘಟನೆ ಜೂ. 7 ರಂದು ಮಧ್ಯಾಹ್ನ ನಡೆದಿದೆ.

ಕೇರಳ ಕಡೆಯಿಂದ ಬಂದಿದ್ದ ಕೆಂಪು ಬಣ್ಣದ ಬುಲೆಟ್ ಬೈಕ್ ಒಂದರಲ್ಲಿ ಈರ್ವರು ವ್ಯಕ್ತಿಗಳು ಬಂದಿದ್ದು, ಬೆಟ್ಟಂಪಾಡಿ ಬ್ಯಾಂಕ್ ಆಫ್ ಬರೋಡ ಶಾಖಾ ಬಳಿ ಇರುವ ಕ್ಯಾಂಟೀನ್ ಒಂದರಲ್ಲಿ ಚಹಾ ಕುಡಿಯಲು ನಿಲ್ಲಿಸಿದ್ದರು. ಆ ಬಳಿಕ ಅಲ್ಲಿಂದ ತೆರಳಿದ್ದ ಅವರು ಬೆಟ್ಟಂಪಾಡಿ ಶಾಲಾ ರಸ್ತೆಯಲ್ಲಿ ಸಾಗಿ ಹಿಂತಿರುಗಿ ಬಂದಿದ್ದರು. ಬಳಿಕ ರೆಂಜ- ಕಜೆ- ಕೋನಡ್ಕ ರಸ್ತೆಯಲ್ಲಿ ಸಾಗಿ ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಚಿನ್ನದ ಕರಿಮಣಿ ಸರ ಎಳೆದು ಪರಾರಿಯಾಗಿದ್ದಾರೆ. ಈ ಬಗ್ಗೆ ಚೂರಿಪದವು ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿರುವ ಠಾಣಾ ಉಪನಿರೀಕ್ಷಕ ಉದಯರವಿ ಎಂ. ವೈ ರವರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಘಟನೆಯ ವಿವರ: ‌

ಜೂ. 7 ರಂದು ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಬೆಟ್ಟಂಪಾಡಿಯ ಸ್ಟಾರ್ ಕ್ಯಾಂಟೀನ್ ಮುಂಭಾಗದಲ್ಲಿ ಇರುವ ಸಣ್ಣ ಕಾಲುದಾರಿಯಲ್ಲಿ ಕೆಂಪು ಬಣ್ಣದ ಬುಲೆಟ್ ಬೈಕ್ ಹತ್ತಿ ಬಂದು ಕ್ಯಾಂಟೀನ್ ಮುಂಭಾಗ ನಿಂತಿದೆ. ಅದರಲ್ಲಿದ್ದ ಈರ್ವರು ಕ್ಯಾಂಟೀನ್ ನಲ್ಲಿ ಚಹಾ ಕುಡಿಯಲು ಬಂದಿದ್ದಾರೆ.

ನಂಬರ್ ಪ್ಲೇಟ್ ರಹಿತ ಬೈಕ್:

ಬೈಕ್ ನಲ್ಲಿ ನಂಬರ್ ಪ್ಲೇಟ್ ಇಲ್ಲದೇ ಇರುವುದನ್ನು ಗಮನಿಸಿದ್ದ ಕ್ಯಾಂಟೀನ್ ಪಕ್ಕದ ದಿನಸಿ ಅಂಗಡಿಯ ಅಬ್ಬಾಸ್‌ರವರು ಪಕ್ಕದಲ್ಲಿದ್ದ ಟೈಲರ್ ಶೇಷನ್‌ರವರ ಗಮನಕ್ಕೆ ತಂದರು. ಈರ್ವರೂ ಅನುಮಾನಾಸ್ಪದ ರೀತಿಯ ಬೈಕ್ ಬಗ್ಗೆ ಸಂಶಯ ಹೊಂದಿದ್ದರು. ಮುಂಭಾಗದ ನಂಬರ್ ಪ್ಲೇಟ್ ಇರಲಿಲ್ಲ. ಹಿಂಬದಿ ನಂಬರ್ ಪ್ಲೇಟ್ ಜಾಗದಲ್ಲಿ ಬ್ಯಾಗ್ ಒಂದನ್ನು ನೇತಾಡಿಸಲಾಗಿತ್ತು. ಆದರೆ ಬ್ಯಾಗ್ ನ ಎಡೆಯಲ್ಲಿ 1126 ನಂಬರ್ ಮಾತ್ರ ಗೋಚರಿಸುತ್ತಿತ್ತು. ನಂಬರ್ ಪ್ಲೇಟ್ ಇಲ್ಲದೇ ಇರುವ ಬೈಕ್ ಆಗಿರುವುದರಿಂದ ಕಳವುಗೈದ ಬೈಕ್ ಆಗಿರುವ ಸಾಧ್ಯತೆ ಇದೆ ಎಂದು ಸಂಶಯಕ್ಕೀಡಾದ ಅವರು ಬೈಕ್ ನ -ಟೋ ಕೂಡಾ ತೆಗೆದಿದ್ದರು. ಅಲ್ಲದೇ ಅಲ್ಲಿಂದಲೇ ಬೀಟ್ ಪೊಲೀಸ್ ಹರ್ಷಿತ್‌ರವರಿಗೆ -ನ್ ಮಾಡಿ ಅಪರಿಚಿತರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟರಲ್ಲಾಗಲೇ ಚಹಾ ಕುಡಿದು ಮುಗಿಸಿದ್ದ ಅಪರಿಚಿತರೀರ್ವರೂ ಮುಖಗವಸು ಹಾಕಿ ಹೆಲ್ಮೆಟ್ ಧರಿಸಿ ಅಲ್ಲಿಂದ ಹೋಗಿ ಬೆಟ್ಟಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆಯಲ್ಲಿ ಹೋಗಿದ್ದರು. 200 ಮೀಟರ್‌ನಷ್ಟು ಮುಂದೆ ಸಾಗಿ ವಾಪಸಾದ ಅವರು ಮತ್ತೆ ಪುತ್ತೂರು ಕಡೆ ತೆರಳಿದ್ದರು. ಇವರ ಚಲನವಲನ ಗಮನಿಸುತ್ತಿದ್ದ ಸ್ಥಳೀಯರಿಗೆ ಇದು ಕಳ್ಳರೇ ಎಂಬುದು ಖಾತ್ರಿಯಾಗಿತ್ತು. ತುಸು ದೂರ ಸಾಗಿರುವ ಕಳ್ಳರು ರೆಂಜ ಶ್ರೀರಾಮನಗರದ ಬಳಿಯಿಂದ ಕಜೆ – ಕೋನಡ್ಕ ಸಂಪರ್ಕಿಸುವ ರಸ್ತೆಯಲ್ಲಿ ಹೋಗಿದ್ದಾರೆ. ಆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರ ಕತ್ತಿನಿಂದ ಕರಿಮಣಿ ಸರ ಎಳೆದು ವಾಪಾಸ್ ಪಾಣಾಜೆ -ಪೆರ್ಲ ರಸ್ತೆಯಲ್ಲಿ ಶರವೇಗದಲ್ಲಿ ಬೈಕ್ ಓಡಿಸಿದ್ದರು. ಚಹಾ ಕುಡಿದ ಸ್ಥಳದಿಂದ ಹೋದ ಅರ್ಧ ಗಂಟೆಯೊಳಗಾಗಿ ಬೈಕ್ ವಾಪಾಸ್ ಹೋಗಿದೆ.  ಮೊದಲೇ ಅನುಮಾನಪಟ್ಟಿದ್ದ ಸ್ಥಳೀಯರು ಯಾವುದೋ ಸುಳಿವು ದೊರೆತ ಹಿನ್ನೆಲೆಯಲ್ಲಿ ಹೋಗಿರಬಹುದೆಂದು ಭಾವಿಸಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಮಹಿಳೆಯ ಕತ್ತಿನಿಂದ ಸರ ಎಳೆದೊಯ್ದ ಸುದ್ದಿ ಎಲ್ಲೆಡೆ ಪಸರಿಸಿದಾಗ ಇದೇ ಕಳ್ಳರ ಕೃತ್ಯ ಎಂದು ಗೊತ್ತಾಗಿ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಅಕ್ಕಾ’ ಎಂದು ಕೂಗಿ ಸರ ಎಳೆದರು:

ಸಂತ್ರಸ್ತ ಮಹಿಳೆ ರೆಂಜದಿಂದ ತನ್ನ ಮನೆ ಚೂರಿಪದವುಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೋನಡ್ಕ ಎಂಬಲ್ಲಿ ರಸ್ತೆಯಲ್ಲಿ ಕೆಂಪು ಬಣ್ಣದ ಬೈಕ್ ನಿಂತಿತ್ತು. ಇವರು  ಬೈಕ್ ಬಳಿ ಸಮೀಪಿಸುತ್ತಿದ್ದಂತೆ ಬೈಕ್ ನಿಂದ ಇಳಿದ ಓರ್ವ ವ್ಯಕ್ತಿ ‘ಅಕ್ಕಾ’ ಎಂದು ಕೂಗಿ ಕುತ್ತಿಗೆಗೆ ಕೈ ಹಾಕಿ ಕರಿಮಣಿ ಸರ ಎಳೆದಿದ್ದಾನೆ. ಈ ವೇಳೆ ತಾಳಿ ಮತ್ತು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡರೂ ಅರ್ಧದಷ್ಟು ಸರ ತುಂಡಾಗಿ ಕಳ್ಳರ ಕೈಗೆ ಹೋಗಿದೆ. ಗಾಬರಿಗೊಂಡ ಅವರು ಬೊಬ್ಬೆ ಹಾಕಿದಾಗ ಸ್ಥಳೀಯ ಮನೆಯವರು ಓಡಿ ಬಂದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಾಳಿ ಕೈಯಲ್ಲಿ:

ಸರ ಎಳೆದ ರಭಸಕ್ಕೆ ಕರಿಮಣಿಯ ತಾಳಿ ಮತ್ತು ತುಂಡು ಸರ ಮಹಿಳೆಯ ಕೈಯಲ್ಲೇ ಬಾಕಿ ಆಗಿದೆ. ಸುಮಾರು 50 ಸಾವಿರ ರೂ. ಮೌಲ್ಯದ ಚಿನ್ನ ಕಳ್ಳರ ಪಾಲಾಗಿದೆ ಎಂದು ಮಹಿಳೆ ತಿಳಿಸಿದ್ದಾರೆ.     

ಜನನಿಭಿಡ ಪ್ರದೇಶ:

ಘಟನೆ ನಡೆದ ಪ್ರದೇಶ ಜನನಿಬಿಡವಾಗಿದ್ದು, ಸುತ್ತಮುತ್ತ ಮನೆಯೂ ಇಲ್ಲ. ತೋಟದ ಮಧ್ಯದಲ್ಲಿ ಹಾದು ಹೋಗುವ ರಸ್ತೆಯನ್ನೇ ಕಳ್ಳರು ತಮ್ಮ ಕೃತ್ಯಕ್ಕೆ ಬಳಸಿಕೊಂಡಿದ್ದರು.

ಪರಿಚಯ ಕೇಳಿದ್ದ ಕ್ಯಾಂಟೀನ್‌ನವರು:

ಬೆಟ್ಟಂಪಾಡಿ ಬ್ಯಾಂಕ್ ಆಫ್ ಬರೋಡ ಶಾಖೆಯ ಬಳಿಯಿರುವ ಸ್ಟಾರ್ ಕ್ಯಾಂಟೀನ್ ನಲ್ಲಿ ಚಹಾ ಕುಡಿಯುತ್ತಿದ್ದ ವೇಳೆ ಸಂಶಯಗೊಂಡಿದ್ದ ಕ್ಯಾಂಟೀನ್ ಮ್ಹಾಲಕ ಹಮೀದ್‌ರವರು ನೀವು ಕಾಸರಗೋಡಿನವರಾ ? ದೂರ ಹೋಗುವವರು ? ಎಂದು ಅಪರಿಚಿತರ ಪರಿಚಯ ಕೇಳಿದ್ದರು. ಆಗ ಅವರು ‘ನಾವು ಪೆರ್ಲದವರು. ಪುತ್ತೂರಿಗೆ ಹೋಗಬೇಕಾಗಿತ್ತು’ ಎಂದಿದ್ದರು.

ಜಾಕೆಟ್ ಧರಿಸಿದ್ದರು:

ಅಪರಿಚಿತರೀರ್ವರ ಪೈಕಿ ಓರ್ವ ಚಡ್ಡಿ, ಕಪ್ಪು ಜಾಕೇಟ್ ಧರಿಸಿದ್ದು ತಲೆ ಜುಟ್ಟು ಕಟ್ಟಿದ್ದ. ಸಾಧಾರಣ ಎತ್ತರವದನಾಗಿದ್ದು ಈತ ಬೈಕ್ ಓಡಿಸುತ್ತಿದ್ದ. ಇನ್ನೋರ್ವ ಪ್ಯಾಂಟ್  ಮತ್ತು ಕಪ್ಪು ಜಾಕೆಟ್ ಧರಿಸಿ ಸಾಮಾನ್ಯ ಎತ್ತರದ ವ್ಯಕ್ತಿಯಾಗಿದ್ದ ಎಂದು ಸ್ಥಳೀಯರು ಗುರುತು ನೆನಪಿಸಿದ್ದಾರೆ.

ಕೇರಳದವರೆಂಬ ಶಂಕೆ:

ಕಳ್ಳರು ಕೇರಳದವರೆಂದು ಶಂಕಿಸಲಾಗಿದೆ. ಗಡಿ ಭಾಗದ ಪ್ರದೇಶಗಳಲ್ಲಿ ಕೇರಳದಿಂದ ಬಂದು ಕರ್ನಾಟಕದಲ್ಲಿ ಕಳ್ಳತನ ನಡೆಸುವ ಕೃತ್ಯ ಹಿಂದಿನಿಂದಲೇ ನಡೆಯುತ್ತಿದೆ.  ಅಂತರ್‌ರಾಜ್ಯದ ಮಧ್ಯೆ ನಡೆಯುವ ಇಂತಹ ಕೃತ್ಯಗಳು ಪೊಲೀಸ್ ತನಿಖೆಗೂ ತೊಡಕಾಗುತ್ತಿವೆ. ಹೀಗಾಗಿ ಕಳ್ಳರು ಸುಲಭವಾಗಿ ಬಂದು ಕಳ್ಳತನ ಮಾಡಿ ಕೇರಳದ ಯಾವುದೋ ಮೂಲೆಯಲ್ಲಿ ಅವಿತಿರುತ್ತಾರೆ.

ಸಿಸಿಟಿವಿ -ಟೇಜ್ ಆಧಾರಿತ ತನಿಖೆ:

ಚಿನ್ನದ ಕರಿಮಣಿ ಕಳೆದುಕೊಂಡಿರುವ ಚೂರಿಪದವು ನಿವಾಸಿ ರತ್ನಾರವರು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೆತ್ತಿಕೊಂಡಿರುವ ಗ್ರಾಮಾಂತರ ಪೊಲೀಸ್ ಠಾಣಾ ಎಸ್‌ಐ ಉದಯರವಿ ಮತ್ತು ತಂಡದವರು ರೆಂಜ ಜಂಕ್ಷನ್ ನಲ್ಲಿ ಹಾಕಲಾಗಿರುವ ಸಿಸಿಟಿವಿ -ಟೇಜ್ ಮತ್ತು ಸ್ಥಳೀಯ ಅಂಗಡಿ ಮುಂಗಟ್ಟುಗಳ ಸಿಸಿಟಿವಿ -ಟೇಜ್ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಬೀಡಿ ಕಟ್ಟಿದ ಹಣದ ಕರಿಮಣಿ ಸರ

ಕರಿಮಣಿ ಕಳೆದುಕೊಂಡ ಸಂತ್ರಸ್ತ ಮಹಿಳೆ ಬಡವರಾಗಿದ್ದು, ದುಡಿದು ತಿನ್ನುವ ಕುಟುಂಬವಾಗಿದೆ. ಬೀಡಿ ಕಟ್ಟಿದ ಹಣದಲ್ಲಿ ಒಂದೂವರೆ ವರ್ಷದ ಹಿಂದೆ ೪ ಪವನ್ ನಷ್ಟು ಚಿನ್ನವಿರುವ ಹೊಸ ಕರಿಮಣಿ ಸರ ಖರೀದಿಸಿದ್ದರು. ಇದೀಗ ಕೂಡಿಟ್ಟ ಹಣದಿಂದ ಖರೀದಿಸಿದ ಕರಿಮಣಿ ಸರ ಕಳೆದುಕೊಂಡ ಕುಟುಂಬ ದುಃಖತಪ್ತವಾಗಿದೆ.

ಮರುಕಳಿಸಿದ ನಾಲ್ಕು ವರ್ಷಗಳ ಹಿಂದಿನ ಘಟನೆ

ಸುಮಾರು ನಾಲ್ಕು ವರ್ಷಗಳ ಹಿಂದೆ ಇದೇ ಬೆಟ್ಟಂಪಾಡಿ ಪರಿಸರದಲ್ಲಿ ಇಂತಹುದೇ ಕೃತ್ಯ ನಡೆದಿದೆ. ಮಹಿಳೆಯೋರ್ವರು ನಡೆದು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದವರು ಸರ ಎಳೆದೊಯ್ದಿದ್ದರು. ಇದುವರೆಗೆ ಆ ಕಳ್ಳರ ಪತ್ತೆಯಾಗಿಲ್ಲ. ಮತ್ತೆ ಅಂತಹುದೇ ಘಟನೆ ಮರುಕಳಿಸಿರುವುದರಿಂದ ಸ್ಥಳೀಯರಲ್ಲಿ ಆಂತಕದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಇದೊಂದು ಗ್ಯಾಂಗ್ ಕಳ್ಳತನ ಎನ್ನಲಾಗಿದ್ದು ಅತ್ಯಂತ ಚಾಕಚಕ್ಯತೆಯುಳ್ಳ ಕಳ್ಳತನ ವೃತ್ತಿ ನಡೆಸುತ್ತಿರುವವರ ಕೃತ್ಯ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ. ಈ ಪರಿಸರದಲ್ಲಿ ಕೇರಳದ ಅಪರಿಚಿತ ವ್ಯಕ್ತಿಗಳು ಬೈಕ್, ಕಾರುಗಳಲ್ಲಿ ತಿರುಗಾಡುತ್ತಿರುತ್ತಾರೆ. ಸ್ಥಳಗಳ ಮಾಹಿತಿ ಪಡೆಯುವ ಕಳ್ಳರು ಪೂರ್ವಯೋಜಿತವಾಗಿ ಇಂತಹ ಕೃತ್ಯ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಮಹಿಳೆಯರೇ ಎಚ್ಚರ.. ಎಚ್ಚರ.. ಎಚ್ಚರ..!

ಹಾಡಹಗಲೇ ಕತ್ತಿನಿಂದ ಸರ ಎಳೆದೊಯ್ಯುವ ಘಟನೆಗಳು ಪದೇ ಪದೇ ನಡೆಯುತ್ತಿವೆ. ಕೆಲವೊಮ್ಮೆ ಪ್ರತಿರೋಽಸುವ ಮಹಿಳೆಯರಿಗೆ ಜೀವ ಅಪಾಯದ ಸಾಧ್ಯತೆಯೂ ಇರುತ್ತದೆ. ಸಾಮಾನ್ಯ ಕೆಲಸ ಕಾರ್ಯಗಳಿಗೆ ನಡೆದುಕೊಂಡು ಹೋಗುವ ಮಹಿಳೆಯರು ಚಿನ್ನಾಭರಣಗಳನ್ನು ಧರಿಸದೇ ಇರುವುದು ಉತ್ತಮವಾಗಿದ್ದು, ಈ ಬಗ್ಗೆ ಮಹಿಳೆಯರು ಎಚ್ಚರ ವಹಿಸುವುದೇ ಇಲ್ಲಿ ಕಂಡುಕೊಳ್ಳಬಹುದಾದ ಪರಿಹಾರವಾಗಿದೆ.

LEAVE A REPLY

Please enter your comment!
Please enter your name here