ಜೂ.9: ಸವಣೂರು ವಿದ್ಯಾಗಂಗೋತ್ರಿಯಲ್ಲಿ ‘ಸಹಕಾರಿ ರತ್ನ’ ಸವಣೂರು ಕೆ.ಸೀತಾರಾಮ ರೈಯವರ 75ನೇ ಹುಟ್ಟು ಹಬ್ಬ ಸಮಾರಂಭ

0

ಲೇಖನ: ಉಮಾಪ್ರಸಾದ್‌ ರೈ ನಡುಬೈಲು

ಪುತ್ತೂರು: ಶಿಕ್ಷಣ, ಸಹಕಾರ, ಧಾರ್ಮಿಕ, ಸಾಮಾಜಿಕ ಮತ್ತು ಕೃಷಿ ಕ್ಷೇತ್ರಗಳಲ್ಲಿ ಉತ್ತುಂಗದ ಸಾಧನೆಗೈದ ‘ಸಹಕಾರಿ ರತ್ನ’ ಸವಣೂರು ಕೆ. ಸೀತಾರಾಮ ರೈರವರ 75 ನೇ ಹುಟ್ಟು ಹಬ್ಬ ಸಮಾರಂಭ ಜೂ. 9 ರಂದು ಸವಣೂರು ವಿದ್ಯಾಗಂಗೋತ್ರಿಯಲ್ಲಿ ಅಪರಾಹ್ನ 2 ರಿಂದ ನಡೆಯಲಿದೆ.

ಸೀತಾರಾಮ ರೈಯವರ ಪರಿಚಯ:

ನಾರಾಯಣ ರೈ ಶೀಂಟೂರು ಮತ್ತು ಯಮುನಾ ದಂಪತಿಯ  ಏಳು ಜನ ಮಕ್ಕಳಲ್ಲಿ ಮೂರನೆಯವರಾದ ಸೀತಾರಾಮ ರೈಯವರು ಜನಿಸಿದ್ದು 1948ರ ಜೂ. 9ರಂದು.

ಶಿಕ್ಷಣ:

ಸೇನಾನಿ, ಸಹಕಾರಿ ಮತ್ತು ಕೃಷಿಕರಾಗಿದ್ದು ರಾಷ್ಟ್ರಪ್ರಶಸ್ತಿ ವಿಜೇತರಾಗಿದ್ದ ತನ್ನ ತಂದೆ ದಿ. ಶೀಂಟೂರು ನಾರಾಯಣ ರೈಯವರ ಸ್ಮರಣಾರ್ಥ 2001ರಲ್ಲಿ ಸವಣೂರಿನಲ್ಲಿ ಸ್ಥಾಪಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಇಂದು ಅಂತರ್ ರಾಜ್ಯ ಮಟ್ಟದ ಪ್ರಸಿದ್ಧಿ ಇದೆ. ಇಲ್ಲಿ ವ್ಯಾಸಂಗ ಮಾಡಿದ ನೂರಾರು ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ಹೆಸರು ಪಡೆದಿದ್ದಾರೆ. ಪ್ರಸ್ತುತ ಸುಮಾರು ಒಂದು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಸುಮಾರು ೭೫ ಮಂದಿಗೆ ಉದ್ಯೋಗವನ್ನು ನೀಡಿರುವ ಇವರು ಸವಣೂರನ್ನು ಶಿಕ್ಷಣ ಕಾಶಿಯನ್ನಾಗಿಸಿದ್ದಾರೆ.

ಸಹಕಾರ:

ನಿಯಮಿತ ಶಿಕ್ಷಣದ ಬಳಿಕ ಮಡಿಕೇರಿಯಲ್ಲಿ ಸಹಕಾರ ಕ್ಷೇತ್ರದ ವಿಶೇಷ ತರಬೇತಿಯನ್ನು ಪಡೆದುಕೊಂಡು 1969ರಲ್ಲಿ ದ.ಕ. ಜಿಲ್ಲೆಯ ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಸೂಪರ್‌ವೈಸರ್ ಆಗಿ ಸಹಕಾರ ಕ್ಷೇತ್ರಕ್ಕೆ ಧುಮುಕಿದ ಇವರು ಸವಣೂರಿನ ಸಿ.ಎ. ಬ್ಯಾಂಕ್, ರಬ್ಬರ್ ಸೊಸೈಟಿ, ಹಾಲು ಉತ್ಪಾದಕರ ಸಹಕಾರ ಸಂಘ, ರಾಮಕೃಷ್ಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಗಳನ್ನು ಕಟ್ಟಿ ಬೆಳೆಸುವುದರೊಂದಿಗೆ ತನ್ನದೇ ಸ್ವಂತ ಸಹಕಾರಿ ಸಂಸ್ಥೆಯಾದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವನ್ನು ಸ್ಥಾಪಿಸಿದರು. ಅದರಡಿಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಮಂದಿಗೆ ಬದುಕಿನ ದಾರಿ ತೋರಿದ್ದಾರೆ. ಮಂಗಳೂರಿನ ಮಾಸ್ ಸಂಸ್ಥೆ, ಪುತ್ತೂರಿನ ಟಿ.ಎ.ಪಿ.ಸಿ.ಎಂ.ಎಸ್., ಭೂ ಅಭಿವೃದ್ಧಿ ಬ್ಯಾಂಕ್‌ಗಳಿಗೂ ಕಾಯಕಲ್ಪ ನೀಡಿದ್ದಾರೆ. ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ನಿರಂತರ 15 ವರ್ಷಗಳ ಕಾಲ ನಿರ್ದೇಶಕರಾಗಿ ಸೆವೆ ಸಲ್ಲಿಸಿದ್ದಾರೆ. ಅತ್ಯುತ್ತಮ ಸಹಕಾರಿ’ ಎಂಬ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆದಿದ್ದಾರೆ. 

ಧಾರ್ಮಿಕ:

ರೈಯವರು ತನ್ನ ಹುಟ್ಟೂರಾದ ಕಲ್ಕಾರಿನ ದೈವಸ್ಥಾನದಿಂದ ತೊಡಗಿ, ಶಾಂತಿಮೊಗರು, ನಾವೂರು, ಸವಣೂರು, ಮೊಗರು ಹಾಗೂ ದೇವರಕಾನದ ದೇವಳಗಳ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಮಾಜಿಕ: ಸೀತಾರಾಮ ರೈಯವರು ತನ್ನ ಸ್ವಂತ ಸಹಕಾರಿ ಸಂಘವಾದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ವರುಷವೂ 150 ಸರಕಾರಿ ಶಾಲಾ ಮಕ್ಕಳಿಗೆ ತಲಾ ರೂ. 2,೦೦೦/-ದಂತೆ ಒಟ್ಟು ರೂ. 3,೦೦,೦೦೦/-ಗಳ ಬೃಹತ್ ಮೊತ್ತದ ಶಿಷ್ಯವೇತನವನ್ನು ವಿತರಿಸುತ್ತಿದ್ದಾರೆ. ತನ್ನ ತಂದೆ ಶೀಂಟೂರು ನಾರಾಯಣ ರೈಯವರ ಸ್ಮರಣಾರ್ಥ ನಡೆಸುತ್ತಿರುವ ಶೀಂಟೂರು ಶಿಕ್ಷಣ ಪ್ರತಿಷ್ಠಾನದ ಮುಖೇನವಾಗಿ ವರುಷವೂ ಸುಮಾರು 4೦,೦೦೦/- ರೂಪಾಯಿಗಳ ಶಿಷ್ಯ ವೇತನವನ್ನು ಹಂಚುತ್ತಿದ್ದಾರೆ. ಸವಣೂರಿನ ಅಂಬೇಡ್ಕರ್ ಭವನ, ಯುವಜನ ಸಭಾಭವನ, ಹಾಲು ಉತ್ಪಾದಕರ ಸಹಕಾರಿ ಸಂಘ, ಡಿ.ಸಿ.ಸಿ. ಬ್ಯಾಂಕ್, ಸಿ.ಎ. ಬ್ಯಾಂಕ್‌ಗಳಿಗೆ ಸ್ವಂತ ನಿವೇಶನ ಮತ್ತು ಸುಭದ್ರ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಟ್ಟವರು ಇವರು. ಅದಲ್ಲದೆ ಸವಣೂರಿನ ಬೆನಸ ರಬ್ಬರ್ ಸೊಸೈಟಿ ಮುಂತಾದ ಸಂಸ್ಥೆಗಳಿಗೆ ಸ್ವಂತ ನಿವೇಶನ ಮತ್ತು ಕಟ್ಟಡಗಳು ಇವರ ಹೆಜ್ಜೆ ಗುರುತುಗಳು. ಸವಣೂರಿನ ಮುಖ್ಯ ರಸ್ತೆಯ ಅಗಲೀಕರಣ, ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ಸ್ಥಾಪಕಾಧ್ಯಕ್ಷನಾಗಿ ಅದಕ್ಕೆ ಸ್ವಂತ ನಿವೇಶನ ಮತ್ತು ಕಟ್ಟಡದ ವ್ಯವಸ್ಥೆ ಇವರ ಸಾಧನೆಯ ಕೆಲವು ಝಲಕ್‌ಗಳು.  ರೋಟರಿ ಮತ್ತು ಲಯನ್ಸ್ ಸಂಸ್ಥೆಗಳಿಗೂ ಪೋಷಕರಾಗಿ ಸೇವೆ ನೀಡುತ್ತಿರುವುದು ಇವರ ಹೆಚ್ಚುಗಾರಿಕೆ. ಕ್ರೀಡಾ ಪೋಷಕರಾಗಿ ಇವರು ’ಶಿನಾರೆ ರಶ್ಮಿ’ ಎಂಬ ರಾಜ್ಯ ಮಟ್ಟದ ಲಗೋರಿ ಕ್ರೀಡಾಕೂಟವನ್ನೂ ನಡೆಸುತ್ತಿದ್ದಾರೆ. ತನ್ನ ಶಾಲಾ ಆವರಣದಲ್ಲಿ ರಾಜ್ಯ ಮಟ್ಟದ ತುಳು ಸಮ್ಮೇಳನ, ಕನ್ನಡ ಸಾಹಿತ್ಯ ಸಮ್ಮೇಳನ, ಕೃಷಿ ಮೇಳ, ಜಾನಪದ ಕಲಾ ಮೇಳಗಳೇ ಮುಂತಾದ ಹತ್ತು ಹಲವು ಬೃಹತ್ ಕಾರ್ಯಕ್ರಮಗಳನ್ನು ಅರ್ಪಿಸಿದ್ದಾರೆ.

ಪುತ್ತೂರಿನ ಡಾ| ಕೋಟ ಶಿವರಾಮ ಕಾರಂತ ಬಾಲವನದ ಅಭಿವೃದ್ಧಿಯಲ್ಲಿ ಕೈ ಜೋಡಿಸಿ ಅಲ್ಲಿಗೊಂದು ಸುಂದರವಾದ ಈಜುಕೊಳದ ನಿರ್ಮಾಣದಲ್ಲಿ ಇವರ ಕೊಡುಗೆ ಅಪಾರ ಎಂದರೂ ತಪ್ಪಾಗಲಾರದು. ಸವಣೂರಿನಲ್ಲಿ ಇಂಧನ ಪೂರೈಕೆಗಾಗಿ ಪದ್ಮಾಂಬಾ ಸರ್ವಿಸ್ ಸ್ಟೇಶನ್‌ನ್ನು ನಡೆಸುವುದರೊಂದಿಗೆ ಪುತ್ತೂರಿನ ದರ್ಬೆಯಲ್ಲಿ ವ್ಯವಸ್ಥಿತವಾದ ಪ್ರಶಾಂತ್ ಮಹಲ್‌ನ್ನು ನಡೆಸುತ್ತಿದ್ದಾರೆ. ಸವಣೂರಿನಲ್ಲಿ ಪದ್ಮಾಂಬ ಸಂಕೀರ್ಣ ಮತ್ತು ಸಿಂಧೂರ ಸಂಕೀರ್ಣಗಳನ್ನು ಸಮಾಜಕ್ಕಾಗಿ ನೀಡಿದ್ದಾರೆ. 

ಸವಣೂರಿಗೆ ವಿಶೇಷ ಕೊಡುಗೆ:

ಸೀತಾರಾಮ ರೈಯವರು ತಮ್ಮ 75ನೇ ಹುಟ್ಟುಹಬ್ಬದ ಸವಿ ನೆನಪಿಗಾಗಿ ಸುಮಾರು 9 ಲಕ್ಷ ವೆಚ್ಚದಲ್ಲಿ  ಸುಸಜ್ಜಿತ ಶೌಚಾಲಯ ಮತ್ತು ಸ್ನಾನಗೃಹವನ್ನು ಸವಣೂರಿನ ನಾಗರಿಕರಿಗಾಗಿ ನಿರ್ಮಿಸಿಕೊಟ್ಟಿದ್ದು, ಇದರ ಉದ್ಘಾಟನೆ ಜೂ.9ರಂದು ನಡೆಯಲಿದೆ.

ಸೀತಾರಾಮ ರೈ ಕುಟುಂಬ:

ಪತ್ನಿ ಶ್ರೀಮತಿ ಕಸ್ತೂರಿಕಲಾ ರೈ ಮತ್ತು ಮೂರು ಮಕ್ಕಳೊಂದಿಗಿನ ಸಂತೃಪ್ತ ಕುಟುಂಬ ಸೀತಾರಾಮ ರೈಯವರದು. ಹಿರಿಯ ಮಗ ಇಂಜಿನಿಯರ್ ಮಹೇಶ್ ರೈ ಅವರು ಪತ್ನಿ ಪಲ್ಲವಿ ಮತ್ತು ಮಗ ಇಶಾನ್‌ರೊಂದಿಗೆ ಅಮೇರಿಕಾದಲ್ಲಿ ವಾಸವಾಗಿದ್ದಾರೆ. ಕಿರಿಯ ಮಗ ವೈದ್ಯ, ಡಾ. ರಾಜೇಶ್ ರೈ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ  ಪ್ರೊ-ಸರ್ ಮತ್ತು ವೈದ್ಯರಾಗಿ ಸೇವೆ ಸಲ್ಲಿಸುತ್ತಾ ಪತ್ನಿ ಅಶ್ವಿತಾ ಅವರೊಂದಿಗೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಮಗಳು ರಶ್ಮಿ ಅವರು ತಮ್ಮ ಪತಿ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ ಮತ್ತು ಮಕ್ಕಳಾದ ಅಥರ್ವ ಹಾಗೂ ಅವಿ ಅವರೊಂದಿಗೆ ವಾಸವಾಗಿದ್ದಾರೆ. ಅಶ್ವಿನ್ ಎಲ್. ಶೆಟ್ಟಿ ಅವರು  ಪ್ರಸ್ತುತ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಽಕಾರಿಯಾಗಿ ಸೇವಾ ನಿರತರಾಗಿದ್ದಾರೆ.

ನಾಳೆ ಹುಟ್ಟು ಹಬ್ಬ ಸಮಾರಂಭ

ಜೂ. 9 ರಂದು ಸೀತಾರಾಮ ರೈಯವರ 75 ನೇ ಹುಟ್ಟು ಹಬ್ಬ ಸಮಾರಂಭವು ಅಪರಾಹ್ನ 2 ರಿಂದ ಸವಣೂರು ವಿದ್ಯಾಗಂಗೋತ್ರಿಯಲ್ಲಿ ನಡೆಯಲಿದೆ. ಅಪರಾಹ್ನ 2 ರಿಂದ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಮತ್ತು ಬಳಗದವರಿಂದ ಗಾನ ಲಹರಿ, ೨.೩೦ ರಿಂದ ಸತೀಶ್ ಶೆಟ್ಟಿ ಪಟ್ಲ  ಮತ್ತು ಬಳಗದವರಿಂದ ಯಕ್ಷ ನೃತ್ಯ ರೂಪಕ ನಡೆಯಲಿದೆ. ಸಂಜೆ ಅಮೃತ ರಶ್ಮಿ ಸಭಾ ಕಾರ‍್ಯಕ್ರಮದಲ್ಲಿ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಲಿದೆ. ಸಚಿವ ಎಸ್. ಅಂಗಾರರವರು ಅಭಿನಂದನ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡರವರು ಅಮೃತ ಸನ್ಮಾನವನ್ನು ನಡೆಸಿಕೋಡಲಿದ್ದಾರೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ರವರು ಸುಸಜ್ಜಿತ ಶೌಚಾಲಯ ಮತ್ತು ಸ್ನಾನಗೃಹದ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ಮಂಗಳೂರು ಲಕ್ಷ್ಮೀ ಮೆಮೋರಿಯಲ್ ಟ್ರಸ್ಟ್‌ನ ಸಂಸ್ಥಾಪಕ ಡಾ| ಎ.ಜೆ.ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರಕುಮಾರ್‌ರವರುಗಳು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವರವರು ವಹಿಸಲಿದ್ದಾರೆ. ಸುಳ್ಯ ಎಂ. ಬಿ.-ಂಡೇಶನ್ ಸಂಸ್ಥಾಪಕ ಎಂ. ಬಿ.ಸದಾಶಿವರವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಂಜೆ ಲಘು ಉಪಹಾರ ಮತ್ತು ರಾತ್ರಿ ಸಹ ಭೋಜನ ನಡೆಯಲಿದೆ. ಸಂಜೆ. ೬.೧೫ ರಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಕಲಾ ತಂಡದಿಂದ ಆಳ್ವಾಸ್ ಕಲಾ ವಿರಾಸತ್ ನಡೆಯಲಿದೆ ಎಂದು ಅಮೃತ ರಶ್ಮಿ ಕಾರ‍್ಯಕ್ರಮದ ಗೌರವಾಧ್ಯಕ್ಷ ಡಾ.ಮೋಹನ್ ಆಳ್ವ, ಅಧ್ಯಕ್ಷ ಕೆ.ಆರ್.ಗಂಗಾಧರ್,  ಕಾರ‍್ಯಾಧ್ಯಕ್ಷ ಸವಣೂರು ಸುಂದರ ರೈ, ಕೋಶಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ಕಾರ‍್ಯದರ್ಶಿ ಸೀತಾರಾಮ ಕೇವಳ ಹಾಗೂ ಜೊತೆ ಕಾರ‍್ಯದರ್ಶಿ ಕುಸುಮಾ ಪಿ.ಶೆಟ್ಟಿ ಕೆರೆಕೋಡಿರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here