ಗ್ರಾಮ ಸಹಾಯಕರು ಇಲ್ಲದೆ ಆಲಂತಾಯ ಗ್ರಾಮದವರಿಗೆ ತೊಂದರೆ : 10ಕ್ಕಿಂತಲೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದರೂ ಇನ್ನೂ ಆಗದ ನೇಮಕ

0

ಕಡಬ: ಕಡಬ ತಾಲೂಕಿನ ಆಲಂತಾಯ ಗ್ರಾಮಕ್ಕೆ ಗ್ರಾಮ ಸಹಾಯಕರು ಇಲ್ಲದೆ ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರಿಂದ ದೂರುಗಳು ಕೇಳಿ ಬಂದಿದೆ. ಅರ್ಜಿ ಆಹ್ವಾನಿಸಿ ಮೂರು ತಿಂಗಳಾಗುತ್ತಾ ಬಂದರೂ ಸಿಬ್ಬಂದಿ ನೇಮಕ ಮಾಡಲು ಮೀನಾಮೇಷ ಎಣಿಸುವಂತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಗ್ರಾಮ ಸಹಾಯಕ ಹುದ್ದೆ ಪಡೆಯಲು ಆಲಂತಾಯ ಗ್ರಾಮದವರು ಹೊರತು ಪಡಿಸಿ ಹೊರ ಗ್ರಾಮದವರು ಕಂದಾಯ ಇಲಾಖೆಯ ಮೂಲಕ ತೆರೆಮರೆಯಲ್ಲಿ ಭಾರೀ ಲಾಬಿ ನಡೆಸುತ್ತಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ.

ಇದೀಗ ಆಲಂತಾಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಲಂತಾಯ ಗ್ರಾಮದವರನ್ನು ಹೊರತುಪಡಿಸಿ ಬೇರೆ ಗ್ರಾಮದವರನ್ನು ಗ್ರಾಮ ಸಹಾಯಕ ಹುದ್ದೆಗೆ ನೇಮಕ ಮಾಡಬಾರದು ಎಂದು ಮನವಿ ಸಲ್ಲಿಸಿದ್ದಾರೆ.

ಆಲಂತಾಯ, ಕೊಣಾಲು , ಗೋಳಿತೊಟ್ಟು ಗ್ರಾಮಗಳಿಗೆ ಒಬ್ಬರು ಮಾತ್ರ ಗ್ರಾಮ ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬರೇ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ತೊಂದರೆ ಆಗುತ್ತಿದೆ. ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿ ಒಂದು ತಿಂಗಳು ಕಳೆದರೂ ನೇಮಕ ಮಾಡಿಲ್ಲ. ಆದುದರಿಂದ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಇನ್ನೊಂದೆಡೆ ಆಲಂತಾಯ ಗ್ರಾಮದ ಅರ್ಜಿದಾರರಿಗೆ ಹುದ್ದೆಯನ್ನು ನೀಡಬೇಕೆಂದು ಭೀಮ್ ಆರ್ಮಿ ಕಡಬ ಘಟಕ ತಹಶೀಲ್ದಾರ್ ಗೆ ಮನವಿ ನೀಡಿದೆ. ಆಲಂತಾಯ ಗ್ರಾಮವೊಂದರಿಂದಲೇ ಸುಮಾರು ಹತ್ತಕ್ಕಿಂತಲೂ ಅಧಿಕ ಮಂದಿ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

‘ಗ್ರಾಮ ಸಹಾಯಕ   ಹುದ್ದೆಯನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಇಲಾಖಾ ಹಂತದಲ್ಲಿ ಪರಿಶೀಲನೆಯಲ್ಲಿದೆ’

– ಅನಂತ ಶಂಕರ , ಕಡಬ ತಹಶೀಲ್ದಾರ್


‘ಈಗಾಗಲೇ ತಹಶೀಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಹೀಗಾಗಿ ಸಹಾಯಕ ಆಯುಕ್ತರು,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.ಸಚಿವರ ಗಮನಕ್ಕೂ ತಂದಿದ್ದೇವೆ’

-ಜನಾರ್ದನ ಗೌಡ ಅಧ್ಯಕ್ಷರು ಗೋಳಿತ್ತೊಟ್ಟು  ಗ್ರಾ.ಪಂ.


‘ಕಾನೂನು ರೀತಿಯಲ್ಲಿ ಆಯಾ ಗ್ರಾಮದ ಆಕಾಂಕ್ಷಿಗಳಿಗೆ ನೀಡಬೇಕೆಂಬ ನಿಯಮವಿದೆ. ಹತ್ತು ದಿನದ ಒಳಗೆ ಕಂದಾಯ ಇಲಾಖೆ  ಸಿಬ್ಬಂದಿಯನ್ನು ನೇಮಕ ಮಾಡದಿದಲ್ಲಿ ಗೋಳಿತ್ತೊಟ್ಟು ,ಆಲಂತಾಯ ಗ್ರಾಮಸ್ಥರ ಸಹಕರದೊಂದಿಗೆ ಭೀಮ್ ಆರ್ಮಿ ಸಂಘಟನೆ ತಹಶೀಲ್ದಾರ್ ಕಚೇರಿ ಎದುರು ಪತಿಭಟನೆ ಮಾಡಲಿದೆ’

-ರಾಘವ ಕಳಾರ, ಭೀಮ್ ಆರ್ಮಿ ಕಡಬ ಘಟಕದ ಅಧ್ಯಕ್ಷರು

LEAVE A REPLY

Please enter your comment!
Please enter your name here