ಪೆರ್ಲಂಪಾಡಿಯಲ್ಲಿ ಚರಣ್‌ರಾಜ್ ರೈ ಹತ್ಯೆ ಪ್ರಕರಣ : ಆರೋಪಿಗಳಿಗೆ ಮಾಹಿತಿ ನೀಡಿದ್ದ ಸಂಶಯ-ಓರ್ವನ ವಿಚಾರಣೆ

0

ಪುತ್ತೂರು:ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಸಂಪ್ಯದ ಚರಣ್‌ರಾಜ್ ರೈಯವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳು ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದರೂ, ಚರಣ್‌ರಾಜ್ ರೈ ಇರುವಿಕೆ ಬಗ್ಗೆ ದೂರವಾಣಿ ಕರೆ ಮಾಡಿ ಆರೋಪಿಗಳಿಗೆ ಮಾಹಿತಿ ನೀಡಿದ್ದರೆನ್ನುವ ಗುಮಾನಿ ಮೇರೆಗೆ ಪೊಲೀಸರು ಓರ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.

2019ರ ಸೆಪ್ಟೆಂಬರ್ 3ರಂದು ರಾತ್ರಿ ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಯಕ್ಷಗಾನ ವೀಕ್ಷಿಸುತ್ತಿದ್ದಾಗ ನಡೆದಿದ್ದ ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ, ಸಂಪ್ಯ ಮೇರ್ಲ ನಿವಾಸಿಯಾಗಿದ್ದ ಕಾರ್ತಿಕ್ ಸುವರ್ಣ(27ವ)ರವರ ಕೊಲೆ ಪ್ರಕರಣದ ಓರ್ವ ಆರೋಪಿಯಾಗಿರುವ ಸಂಪ್ಯ ನಿವಾಸಿ ಚರಣ್‌ರಾಜ್ ರೈ(29ವ)ಯವರನ್ನು ಪೆರ್ಲಂಪಾಡಿಯಲ್ಲಿ ಜೂ.4ರಂದು ಸಂಜೆ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ನರಹರಿಪರ್ವತ ಬಳಿಯ ನಿವಾಸಿ ನಾರಾಯಣ ಅವರ ಪುತ್ರ ಕಿಶೋರ್ ಪೂಜಾರಿ ಕಲ್ಲಡ್ಕ(34ವ), ಈಶ್ವರಮಂಗಲ ಪಂಚೋಡಿಯ ಚಂದ್ರಶೇಖರ್ ಮಡಿವಾಳ ಅವರ ಪುತ್ರ ರಾಕೇಶ್ ಪಂಚೋಡಿ(27ವ),ಬಲ್ನಾಡು ಕರ್ಕುಂಜ ಸಿಂಗಾಣಿ ನಿವಾಸಿ ಗಿರಿಧರ್ ಅವರ ಪುತ್ರ ರೇಮಂತ್ ಗೌಡ(26ವ),ಕೆಯ್ಯೂರು ನೂಜಿ ಮುತ್ತಪ್ಪ ರೈಯವರ ಪುತ್ರ ನರ್ಮೇಶ್ ರೈ(29ವ), ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಯತೀಶ ಶೆಟ್ಟಿ ಎಂಬವರ ಪುತ್ರ ನಿತಿಲ್ ಶೆಟ್ಟಿ (23ವ.),ಕಡಬ ತಾಲೂಕಿನ ಬೆಳಂದೂರು ಮರಕಲ ನಿವಾಸಿ ರಾಮ ಎಂಬವರ ಪುತ್ರ ವಿಜೇಶ್ (22ವ.)ರವರನ್ನು ಪೊಲೀಸ್ ಬಂಽಸಿದ್ದರು.ಎಲ್ಲ ಆರೋಪಿಗಳೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

 ಕರೆ ಮಾಡಿದ್ದು ಯಾರು?:

ಚರಣ್‌ರಾಜ್ ರೈ ಅವರು ಪೆರ್ಲಂಪಾಡಿಯಲ್ಲಿ ಇದ್ದ ಕುರಿತು ಆರೋಪಿಗಳಿಗೆ ಯಾರೋ ಫೋನ್ ಕರೆ ಮಾಡಿ ತಿಳಿಸಿದ್ದರೆನ್ನುವ ವಿಚಾರದಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ಕರೆ ಮಾಡಿದ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದು ಇದೀಗ ಪೆರ್ಲಂಪಾಡಿಯ ಓರ್ವರನ್ನು ಈ ನಿಟ್ಟಿನಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.ಆರೋಪಿಗಳಿಗೆ, ಚರಣ್‌ರಾಜ್ ರೈ ಇರುವಿಕೆ ಕುರಿತು ಪೆರ್ಲಂಪಾಡಿಯಿಂದಲೇ ದೂರವಾಣಿ ಕರೆ ಹೋಗಿರುವುದನ್ನು ಪೊಲೀಸರು ಆರೋಪಿಗಳ ವಿಚಾರಣೆ ಸಂದರ್ಭ ಖಚಿತಪಡಿಸಿಕೊಂಡಿದ್ದು ಶಂಕಿತ ಓರ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟಿದ್ದಾರೆ.ಮುಂದೆ ಅಗತ್ಯವಿದ್ದಲ್ಲಿ ಠಾಣೆಗೆ ಬರುವಂತೆ ಸೂಚಿಸಿ ಪೊಲೀಸರು ಆತನನ್ನು  ಬಿಡುಗಡೆಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here