ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೂವರ ಸಹಿತ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಸಾಧಕ 18 ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಅಭಿನಂದನೆ

0

  • ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಭಯ್ ಶರ್ಮಾ, ಆತ್ಮೀಯ ಎಂ.ಕಶ್ಯಪ್, ಅಭಿಜ್ಞಾ ಆರ್ ಸಹಿತ ಜಿಲ್ಲೆಯ 18 ಮಂದಿ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತದಿಂದ ಗೌರವ

 

 

ಮಂಗಳೂರು:2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲಿ ಟಾಪರ್‌ಗಳಾಗಿ ಸಾಧನೆ ಮಾಡಿರುವ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮದ ಮೂವರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 18ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದಿಂದ ಗೌರವಿಸಲಾಯಿತು.

 


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಜಿಲ್ಲಾಡಳಿತದ ಪರವಾಗಿ ಗೌರವಿಸಿದರು.ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಭಯ್ ಶರ್ಮಾ ಕೆ., ಆತ್ಮೀಯ ಎಂ.ಕಶ್ಯಪ್, ಅಭಿಜ್ಞಾ ಆರ್., ಬೆಳ್ತಂಗಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರೋಶನ್, ಸುಳ್ಯ ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಸಾತ್ವಿಕ್ ಎಚ್.ಎಸ್., ಬಂಟ್ವಾಳ ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಹೈಸ್ಕೂಲ್‌ನ ಸುಜಯ್ ಬಿ.,ಬಂಟ್ವಾಳದ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಹೈಸ್ಕೂಲ್ ಧನ್ಯಶ್ರೀ, ಮೂಡಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಹೈಸ್ಕೂಲ್‌ನ ಇಂದಿರಾ ಅರುಣ್ ನ್ಯಾಮಗೌಡ, ಈರಯ್ಯ ಶ್ರೀಶೈಲ, ಕಲೇಶ್ವರ್ ಪುಂಡಲೀಕ ನಾಯ್ಕ, ಶ್ರೇಯಾ ಆರ್ ಶೆಟ್ಟಿ, ಸುದೇಶ್ ದತ್ತಾತ್ರೇಯ ಕಿಲ್ಲೆದಾರ್, ಬೆಳ್ತಂಗಡಿ ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ಮಧುಶ್ರೀ, ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ಶ್ರೀಜಾ ಹೆಬ್ಬಾರ್, ಸ್ವಸ್ತಿ, ಮುಲ್ಕಿ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ವೀಕ್ಷಾ ವಿ. ಶೆಟ್ಟಿ ಹಾಗೂ ವಿ.ಅಕ್ಷತಾ ಕಾಮತ್ ಹಾಗೂ ಮರು ಎಣಿಕೆಯ ಬಳಿಕ ೬೨೫ಕ್ಕೆ ೬೨೫ ಅಂಕ ಪಡೆದ ಕಾಟಿಪಳ್ಳ ಇನ್ಫ್ಯಾಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಅಬಿದ್ ಅಲಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ಹೂಗುಚ್ಛ ನೀಡಿ ಪ್ರಮಾಣಪತ್ರ ವಿತರಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಸನ್ಮಾನಿಸಿ ಗೌರವಿಸಿದರು.

ದ.ಕ.ಜಿಲ್ಲೆಯ ಹೆಗ್ಗಳಿಕೆಗೆ ಸಾಕ್ಷಿ-ಡಾ.ರಾಜೇಂದ್ರ ಕೆ.ವಿ.:

 

ಬಳಿಕ ಸಾಧಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು, ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವೆಂದು ಪರಿಗಣಿಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ 18 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿ ಉತ್ತಮ ಸಾಧನೆ ಮಾಡಿರುವುದು ಸಾಕ್ಷರತೆ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದರು.

ಬದುಕಿನ ಅತ್ಯಂತ ಮಹತ್ವದ ಘಟ್ಟವಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಛಲ, ನಿರ್ದಿಷ್ಟ ಗುರಿ, ಗುರು ಹಾಗೂ ಪೋಷಕರ ಸಹಕಾರ ಅತಿ ಅಗತ್ಯ, ಶ್ರಮವಹಿಸಿ ಪರೀಕ್ಷೆಯಲ್ಲಿ ಅದನ್ನು ಸಾಬೀತು ಮಾಡಿರುವ ೧೮ ವಿದ್ಯಾರ್ಥಿಗಳಿಗೆ ಅಭಿನಂದಿಸಿದ ಅವರು, ಕೋವಿಡ್-19 ಸೋಂಕು, ಆನ್‌ಲೈನ್ ಕ್ಲಾಸ್ ಇತ್ಯಾದಿ ಸವಾಲುಗಳನ್ನು ಎದುರಿಸಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಸಮಾಜದಲ್ಲಿ ಜವಾಬ್ದಾರಿ ಹೆಚ್ಚಿದೆ:ಡಾ| ಕುಮಾರ್:

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಅಂಕ ಗಳಿಕೆಯೊಂದಿಗೆ ಮುಂದೆ ಸಮಾಜದಲ್ಲಿ ಜವಾಬ್ದಾರಿಯೂ ಕೂಡ ಹೆಚ್ಚಿದೆ,ಪಿ.ಯು.ಸಿಯಲ್ಲಿ ಕೂಡ ೬೦೦ ಅಂಕಗಳಿಸಿ ಈ ಸಾಧನೆಯನ್ನು ಮುಂದುವರಿಸಿ ಎಂದು ಕಿವಿ ಮಾತು ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಾಧಕ ವಿದ್ಯಾರ್ಥಿಗಳ ಪೋಷಕರು,ಸಂಬಂಧಿಸಿದ ಶಾಲೆಗಳ ಶಿಕ್ಷಕರು ಈ ಸಂದರ್ಭದಲ್ಲಿದ್ದರು.

LEAVE A REPLY

Please enter your comment!
Please enter your name here