ಪುತ್ತೂರು,ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಕೇಂದ್ರ, ರಾಜ್ಯ ಸರಕಾರದ ವಿರುದ್ದ ಪ್ರತಿಭಟನೆ

0

  • ಉದ್ಯೋಗ ನೀಡಲು ಸಾಧ್ಯವಾಗದ ಬಿಜೆಪಿ ಸರಕಾರ ಯುವಕರನ್ನು ರಾಜಕೀಯ, ಧರ್ಮದಂಗಲ್‌ಗೆ ಬಳಸುತ್ತಿದೆ: ಲಾರೆನ್ಸ್ ಡಿಸೋಜಾ


ಪುತ್ತೂರು: ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ವಿದ್ಯಾವಂತ ಯವಕರು ಉದ್ಯೋಗವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರವೇ ನೇರ ಕಾರಣವಾಗಿದ್ದು ಉದ್ಯೋಗ ಕೇಳಿದ ಯುವಕರನ್ನು ರಾಜಕೀಯ ಮತ್ತು ಧರ್ಮದಂಗಲ್‌ಗೆ ಬಳಕೆ ಮಾಡಿ ಅವರ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ನಿರಂತರ ನಡೆಯುತ್ತಿದೆ ಎಂದು ದ ಕ ಜಿಲ್ಲಾ   ಕಾಂಗ್ರೆಸ್  ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ ಆರೋಪಿಸಿದರು.

ಅವರು ಜೂ. 9 ರಂದು ಕುಂಬ್ರ ಜಂಕ್ಷನ್‌ನಲ್ಲಿ ಪುತ್ತೂರು, ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಚುನಾವಣೆಯ ಸಂದರ್ಭದಲ್ಲಿ ಯುವಕರಿಗೆ ಉದ್ಯೋಗದ ಭರವಸೆ ಕೊಟ್ಟ ಈಗಿನ ಶಾಸಕರು, ಸಂಸದರು ಗೆದ್ದ ಬಳಿಕ ಅವೆಲ್ಲವನ್ನೂ ಮರೆತಿದ್ದಾರೆ. ಜಿಲ್ಲೆಯಲ್ಲಿ ಹೂಡಿಕೆದಾರರು ಕಡಿಮೆಯಾಗುತ್ತಿದ್ದಾರೆ. ಕೇಂದ್ರ ಸರಕಾರದ ಆರ್ಥಿಕ ನೀತಿಯ ಕಾರಣಕ್ಕೆ ಸಣ್ಣ ಉದ್ಯಮಗಳು ಬಂದ್ ಆಗಿವೆ, ಗ್ರಾಮೀಣ ಭಾಗದ ಯುವಕರು ಕೆಲಸ ಮಾಡುತ್ತಿದ್ದ ಸಣ್ಣ ಸಂಸ್ಥೆಗಳು ಬಾಗಿಲು ಮುಚ್ಚಿದೆ ಇದಕ್ಕೆಲ್ಲಾ ಕರಣ ಬಿಜೆಪಿ ಸರಕಾರ ಮತ್ತು ಪ್ರಧಾನಿ ಮೋಧಿಯವರೇ ಆಗಿದ್ದಾರೆ. ಎರಡು ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು ಯುವಕರಿಗೆ ಉದ್ಯೋಗ ಕೊಟದೆ ವಂಚನೆ ಮಾಡಿದ್ದಾರೆ. 15 ಲಕ್ಷ ಕೊಡುವುದಾಗಿ, ಅಕೌಂಟಿಗೆ ಹಾಕುವುದಾಗಿ ಮೋದಿ ಹೇಳಿದ್ದರು, 15 ಲಕ್ಷ ಬೇಡ ನಮ್ಮ ಯುವಕರಿಗೆ ಉದ್ಯೋಗ ಕೊಡಿ ಎಂದು ಆಗ್ರಹಿಸಿದರು.

ಉದ್ಯೋಗವಿಲ್ಲದೆ ಯುವಕರು ದಾರಿ ತಪ್ಪುತ್ತಿದ್ದಾರೆ. ವಿದ್ಯಾವಂತ ಯುವಕರನ್ನು ಬಿಜೆಪಿ ಧರ್ಮ ದಂಗಲ್‌ಗೆ ಬಳಕೆ ಮಾಡಿ ಅವರ ಜೀವನವನ್ನೇ ಹಾಳುಮಾಡುತ್ತಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮಕ್ಕಳ ಭವಿಷ್ಯವನ್ನು ಹಾಳು ಮಾಡುವವರ ಬಗ್ಗೆ ಸದಾ ನಿಗಾ ವಹಿಸಿ ಎಂದು ಹೇಳಿದರು.ದೇಶದಲ್ಲಿ ಧರ್ಮ, ಸಂಸ್ಕೃತಿ ಉಳಿಯಬೇಕಾದರೆ ಯುವಕರ ಕೈಗೆ ಉದ್ಯೋಗ ಕೊಡಿ ಎಂದು ಹೇಳಿದ ಅವರು ಬೀಡಿಕಾರ್ಮಿಕರು, ಕಟ್ಟಡ ಕಾರ್ಮಿಕರು, ಹೊಟೇಲ್ ಕಾರ್ಮಿಕರು, ಕೂಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದು ಅವರ ಬಾಳು ಬೆಳಗಬೇಕದರೆ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅವಧಿಯಲ್ಲಿ ಜಾರಿಗೆ ತಂದ ಕಾರ್ಮಿಕ ಪರ ಕಾನೂನನ್ನು ಮೋದಿ ಸರಕಾರ ನಿಷ್ಕ್ರೀಯಗೊಳಿಸಿ ಕಾರ್ಮಿಕರನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಕಾರ್ಮಿಕರೇ ಭಾರತವನ್ನು ಕಟ್ಟಿ ಬೆಳೆಸಿದ್ದಾರೆ: ರಕ್ಷಿತ್ ಶಿವರಾಂ

ಭಾರತ ಸಮೃದ್ದವಾಗಿ ಬೆಳೆಯುವಲ್ಲಿ ಕಾರ್ಮಿಕರ ಶ್ರಮವಿದೆ. ಕಾರ್ಮಿಕರ ಬೆವರು ಈ ದೇಶವನ್ನು ಅಭಿವೃದ್ದಿಪಥದತ್ತ ಕೊಂಡೊಯ್ದಿದೆ. ಆದರೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಕಾರ್ಮಿಕರನ್ನು ಮೂಲೆಗುಂಪು ಮಾಡಿದೆ. ಇಂದು ದೇಶದಲ್ಲಿ ಕಾರ್ಮಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಪ್ರಧಾನಿ ಮೋಧಿಯವರು ಅಂಬಾನಿ, ಅದಾನಿ ಪರ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸ್ಥಾಪಿಸಿದ ಎಲ್ಲಾ ಸಂಸ್ಥೆಗಳನ್ನು ಪ್ರಧಾನಿಗಳು ಅಂಬಾನಿ , ಅದಾನಿಗೆ ಮಾರಾಟ ಮಾಡುವ ಮೂಲಕ ದೇಶದ ಕಾರ್ಮಿಕರನ್ನು ಬೀದಿಗೆ ಬೀಳುವಂತೆ ಮಾಡಿದ್ದಾರೆ. ಮಂಗಳೂರಿನ ಏರ್‌ಪೋರ್ಟ್ ಕಾಂಗ್ರೆಸ್ ನಿರ್ಮಾಣ ಮಾಡಿತ್ತು, ಅಲ್ಲಿ ಸ್ಥಳೀಯರಿಗೇ ಕೆಲಸವನ್ನು ನೀಡಿತ್ತು ಆದರೆ ಕೇಂದ್ರದ ಬಿಜೆಪಿ ಸರಕಾರ ಏರ್‌ಪೋರ್ಟನ್ನು ಖಾಸಗಿಯವರಿಗೆ ಬಿಟ್ಟುಕೊಟ್ಟು ಮಾರ್ವಾಡಿಗಳಿಗೆ ಕೆಲಸವನ್ನು ನೀಡಿದೆ. ಜಿಲ್ಲೆಯಲ್ಲಿ ಅನೇಕ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದರೆ ಅದಕ್ಕೆ ಕೇಂದ್ರ ಆರ್ಥಿಕ ನೀತಿಯೇ ಕಾರಣವಾಗಿದೆ ಎಂದು ಕಾಂಗ್ರೆಸ್‌ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.

ದ ಕ ಜಿಲ್ಲೆಯ ನಿರುದ್ಯೋಗಿ ಯವಕರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕಿದೆ. ಇಲ್ಲಿನ ಶಾಸಕರು, ಸಂಸದರು ಈ ವಿಚಾರದಲ್ಲಿಮಾತನಡಬೇಕಿದೆ. ಬೆಲೆ ಏರಿಕೆಯ ವಿಚಾರದಲ್ಲಿ ಬಿಜೆಪಿ ಮೌನವಾಗಿದೆ. ಬೆಲೆ ಏರಿಕೆ ಎಲ್ಲಾ ವರ್ಗಕ್ಕೂ ತಟ್ಟಿದೆ ಬಿಜೆಪಿಗರು ಆತ್ಮಸ್ಥೈರ್ಯಯಿಂದ ಬೆಲೆ ಏರಿಕೆ ವಿರುದ್ದ ಪ್ರತಿಭಟನೆಯನ್ನು ನಡೆಸುವ ಮೂಲಕ ನಾವು ಜನರ ಪರ ಇದ್ದೇವೆ, ಬೆಲೆ ಏರಿಕೆಯ ವಿರುದ್ದ ಇದ್ದೇವೆ ಎಂಬುದನ್ನು ತೋರ್ಪಡಿಸಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮವದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ ಯವರುಗಳು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಮಿಕ ನೀತಿಗಳನ್ನು ವಿರೋಧಿಸಿದರು. ಯುವಕರ ಕೈಗೆ ಉದ್ಯೋಗ ಕೊಡಿ ಎಂಬ ಆಗ್ರಹವನ್ನು ವ್ಯಕ್ತಪಡಿಸಿದರು. ನಿರುದ್ಯೋಗಿ ಯುವಕರನ್ನು ಕೆಟ್ಟ ಕೆಲಸಗಳಿಗೆ ಬಳಸದೆ ಅವರ ಭವಿಷ್ಯವನ್ನು ರೂಪಿಸುವ ಕೆಲಸ ಬಿಜೆಪಿ ಮಾಡಬೇಕಿದೆ. ನೀವು ಚುನಾವಣೆಯ ವೇಳೆ ಕೊಟ್ಟ ಭರವಸೆಯಂತೆ ಅವರಿಗೆ ಉದ್ಯೋಗವನ್ನು ಕೊಡಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ್ ರೈ ಕೋರಿಕ್ಕಾರ, ವಲಯ ಕಾಂಗ್ರೆಸ್ ಕಾರ್ಯದರ್ಶಿ ಸಲಾಂ ಕುಂಬ್ರ, ಕಾರ್ಮಿಕ ಘಟಕದ ವಿಟ್ಲ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ, ವಿವಿಧ ಘಟಕದ ಪದಾಧಿಕಾರಿಗಳಾದ ಮೆಲ್ವಿನ್ ಮೊಂತೆರೋ, ಇಸ್ಮಾಯಿಲ್ ಗಟ್ಟಮನೆ, ಸಿದ್ದಿಕ್ ಕೂಡುರಸ್ತೆ, ಸಂತೋಷ್ ರೈ ಚಿಲ್ಮೆತ್ತರು, ಇಕ್ಬಾಲ್ ಹುಸೇನ್ ಕೌಡಿಚ್ಚಾರ್, ಮಹಮ್ಮದ್ ಬೊಳ್ಳಾಡಿ, ಹಬೀಬ್ ಕಣ್ಣೂರು,ರಶೀದ್ ಮುರ, ಜಯಂತಿ ಬಲ್ನಾಡು, ರಾಮಚಂದ್ರ ಸೊರಕೆ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಪುತ್ತೂರು ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here