`ಸಹಕಾರ ರತ್ನ’ ಸವಣೂರು ಸೀತಾರಾಮ ರೈಯವರ 75ನೇ ಹುಟ್ಟು ಹಬ್ಬ ಸಂಭ್ರಮ `ಅಮೃತ ರಶ್ಮಿ’

0

ಪುತ್ತೂರು:`ಸಹಕಾರ ರತ್ನ’ ಸವಣೂರು ಕೆ.ಸೀತಾರಾಮ ರೈಯವರು ಸಮಾಜ ಕಂಡ ಅತ್ಯಂತ ಶ್ರೇಷ್ಠ ಸಹಕಾರಿ, ಸಾಮಾಜಿಕ ಮುಂದಾಳು.ಅವರು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಸ್ಥಾನವನ್ನು ಗಳಿಸಿದ್ದಾರೆ.ನೂರಾರು ಮಂದಿಗೆ ಉದ್ಯೋಗವನ್ನು ನೀಡಿ ಅವರು ಸಮಾಜದಲ್ಲಿ ಪರಿವರ್ತನೆಯನ್ನು ತಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.


ಜೂ.9ರಂದು ಸವಣೂರು ವಿದ್ಯಾಗಂಗೋತ್ರಿಯಲ್ಲಿ ನಡೆದ, `ಸಹಕಾರ ರತ್ನ’ ಸವಣೂರು ಕೆ.ಸೀತಾರಾಮ ರೈಯವರ 75ನೇ ಹುಟ್ಟು ಹಬ್ಬ ಸಂಭ್ರಮ `ಅಮೃತ ರಶ್ಮಿ’ ಕಾರ್‍ಯಕ್ರಮದಲ್ಲಿ ಸೀತಾರಾಮ ರೈಯವರಿಗೆ ಅಮೃತ ರಶ್ಮಿ ಸನ್ಮಾನವನ್ನು ನೆರವೇರಿಸಿ ಮಾತನಾಡಿದ ಡಿ.ವಿ.ಸದಾನಂದ ಗೌಡ, ಸಾಮಾಜಿಕ ಕ್ಷೇತ್ರದಲ್ಲಿ ಸಮಚಿತ್ತ ಭಾವದಿಂದ ದುಡಿದು ಯಶಸ್ಸನ್ನು ಸಾಧಿಸಿರುವ ಸೀತಾರಾಮ ರೈಯವರ ವಿಚಾರಧಾರೆಗಳು, ಅವರ ಸಾಧನೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು,ಪ್ರತಿಯೊಂದು ಮನೆಯವರು ಮತ್ತು ಮುಂದಿನ ಯುವಜನಾಂಗ ರೈಯವರ ವಿಚಾರಧಾರೆಗಳನ್ನು, ಸಾಧನೆಗಳನ್ನು ಅನುಕರಣೆ ಮಾಡಿದಾಗ ಇಂತಹ ಉತ್ತಮ ಕಾರ್‍ಯಕ್ರಮ ಅವರಿಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರಲ್ಲದೆ, ಸಹಕಾರ ಕ್ಷೇತ್ರದಲ್ಲಿನ ಬಹುದೊಡ್ಡ ಸಾಧನೆಗಾಗಿ ರೈಯವರಿಗೆ ಈ ಬಾರಿ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ದೊರೆತಿರುವುದು ಆ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ.ಸೀತಾರಾಮ ರೈಯವರು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಯನ್ನು ಮಾಡುವ ಸೌಭಾಗ್ಯ ಕೂಡಿ ಬರಲಿ ಎಂದು ಹಾರೈಸಿದರು.


ಸವಣೂರು ಸುವರ್ಣ ಊರಾಗಲಿ: ಸೀತಾರಾಮ ರೈಯವರು ತಮ್ಮ ಬದುಕಿನುದ್ದಕ್ಕೂ ಆದರ್ಶ ಜೀವನವನ್ನು ಅಳವಡಿಸಿಕೊಂಡು,ಸಮಾಜದ ಆದರ್ಶ ವ್ಯಕ್ತಿಯಾಗಿದ್ದಾರೆ.ಸಮಾಜದಲ್ಲಿ ಸೀತಾರಾಮ ರೈಯವರು ಮಾಡಿರುವ ಸಾಧನೆಗಳ ಕೈಗನ್ನಡಿ ನಮ್ಮ ಎದುರು ಇದೆ.ರೈಯವರು ಸವಣೂರಿನ ಅಭಿವೃದ್ಧಿಯ ಹರಿಕಾರರಾಗಿದ್ದು ಮುಂದಿನ ದಿನಗಳಲ್ಲಿ ಸವಣೂರು `ಸುವರ್ಣ ಊರು’ಆಗಲಿ ಎಂದು ಡಿ.ವಿ.ಎಸ್ ಶುಭಹಾರೈಸಿದರು.

ಸೀತಾರಾಮ ರೈ ಧರ್ಮ ಮಾರ್ಗದಲ್ಲಿ ನಡೆದು ಯಶಸ್ಸು ಸಾಧಿಸಿದ್ದಾರೆ-ಒಡಿಯೂರು ಶ್ರೀ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ, ಸೀತಾರಾಮ ರೈಯವರು ಧರ್ಮ ಮಾರ್ಗದಲ್ಲಿ ನಡೆದು ಯಶಸ್ಸು ಸಾಧಿಸಿದ್ದಾರೆ, ಇದು ಸಮಾಜದ ಎಲ್ಲರೂ ತಿಳಿದುಕೊಳ್ಳಬೇಕು.ಒಬ್ಬ ವ್ಯಕ್ತಿ ಸಮಾಜದಲ್ಲಿ ಸಾಧನೆ ಮಾಡಿದರೆ ಯಶಸ್ಸು ಗಳಿಸಬಹುದು ಎಂಬುದಕ್ಕೆ ಸೀತಾರಾಮ ರೈಯವರೇ ಉದಾಹರಣೆ ಎಂದರು.ರೈಯವರು ಸಹಕಾರ ಕ್ಷೇತ್ರದ ಮೂಲಕ ಸಮಾಜಕ್ಕೆ ಬಂದವರು ಇಂದು ಸರ್ವ ಜನರ ಪ್ರೀತಿಯ ಸಹಕಾರಿ ಬಂಧುವಾಗಿದ್ದಾರೆ,ಕಠಿಣ ಪರಿಶ್ರಮಿ,ಸಮಯಕ್ಕೆ ಮಹತ್ವವನ್ನು ನೀಡುವ ಸೀತಾರಾಮ ರೈ ಸಂಘಟನಾ ಕ್ಷೇತ್ರದಲ್ಲಿ ಅತ್ಯಂತ ಯಶಸ್ಸು ಪಡೆದಿದ್ದಾರೆ.ಅವರ ಮುಂದಿನ ಜೀವನವು ಸುಖ ಸಂತೋಷದಿಂದ ಕೂಡಿರಲಿ ಎಂದು ಶ್ರೀಗಳು ಹಾರೈಸಿದರು.

 

 

 


ಸೀತಾರಾಮ ರೈ ಉತ್ತಮ ಹೆಸರು ಮಾಡಿದ್ದಾರೆ-ಎ.ಜೆ.ಶೆಟ್ಟಿ: ಕಾರ್‍ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ|ಎ.ಜೆ.ಶೆಟ್ಟಿಯವರು ಮಾತನಾಡಿ, ಸೀತಾರಾಮ ರೈಯವರು ಸಹಕಾರ, ಶಿಕ್ಷಣ ಹಾಗೂ ಸಮಾಜಮುಖಿ ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಮಾಡಿದ್ದಾರೆ.೫೩ ವರ್ಷಗಳ ಹಿಂದೆ ಸವಣೂರಿನಲ್ಲಿ ಕೃಷಿಯಲ್ಲಿ ತೊಡಗಿಕೊಂಡು ಆದರ್ಶ ಕೃಷಿಕನಾಗಿ, ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ನೀಡುವ ದೊಡ್ಡ ಕಾಯಕದಲ್ಲಿ ಹೆಸರನ್ನು ಪಡೆದಿರುವ ಸೀತಾರಾಮ ರೈಯವರಿಗೆ ೧೦೦ ವರ್ಷದವರೆಗೆ ಉತ್ತಮ ಆರೋಗ್ಯದಿಂದ ಕೂಡಿದ ಬದುಕು ದೊರೆಯಲಿ ಎಂದು ಹಾರೈಸಿದರು.


ಉತ್ತಮವಾದ ಶಿಕ್ಷಣವನ್ನು ನೀಡುತ್ತಿದ್ದಾರೆ-ಡಾ.ಮೋಹನ್ ಆಳ್ವ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡಬಿದಿರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವರವರು ಮಾತನಾಡಿ, ಸೀತಾರಾಮ ರೈ ತಮ್ಮ ಬದುಕಿನಲ್ಲಿ ಉತ್ತಮ ಕೆಲಸವನ್ನು ಮಾಡಿದ್ದಾರೆ.ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಆದರ್ಶ ಸಂಸ್ಥೆಯನ್ನು ಕಟ್ಟಿ ಉತ್ತಮ ಸಹಕಾರ ಸಂಸ್ಥೆಯಾಗಿ ಮಾಡಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಸುಲಭದ ಮಾತಲ್ಲ, ಆದರೆ ರೈಯವರು ಸವಣೂರು ಎಂಬ ಗ್ರಾಮಾಂತರ ಪ್ರದೇಶದಲ್ಲಿ ಕಡಿಮೆ ಫೀಸ್‌ನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುತ್ತಿರುವುದು ಅತ್ಯಂತ ಶ್ರೇಷ್ಟವಾದ ಕಾರ್‍ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಸೀತಾರಾಮ ರೈಯವರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರಶಸ್ತಿಗಳು ಬರಲಿ,ಅವರ ಸಮಾಜಮುಖಿ ಚಿಂತನೆಯ ಕಾರ್ಯಗಳು ನಿತ್ಯ ನಿರಂತರವಾಗಿ ನಡೆಯಲಿ, ಆ ಮೂಲಕ ಅವರಿಗೆ ಮತ್ತಷ್ಟು ಕೆಲಸ ಮಾಡಲು ಸಮಾಜ ಸಹಕಾರ ನೀಡಲಿ ಎಂದು ಆಶಿಸಿದರು.
`ಸವಣೂರಿನ ಅಭಿವೃದ್ಧಿಯ ರೂವಾರಿ’-ಎಂ.ಬಿ.ಸದಾಶಿವ: ಸುಳ್ಯದ ಎಂ.ಬಿ.ಫೌಂಡೇಶನ್‌ನ ಅಧ್ಯಕ್ಷ ಎಂ.ಬಿ.ಸದಾಶಿವರವರು ಸೀತಾರಾಮ ರೈಯವರ ಕುರಿತು ಅಭಿನಂದನಾ ಭಾಷಣ ಮಾಡಿದರು.ಸೀತಾರಾಮ ರೈಯವರು ಗಾಂಧೀಜಿ ಕಂಡ ಗ್ರಾಮ ರಾಜ್ಯ-ರಾಮ ರಾಜ್ಯದ ಪರಿಕಲ್ಪನೆಯನ್ನು ನಿಜಾರ್ಥದಲ್ಲಿ ಸಾಕಾರಗೊಳಿಸಿದ ಧೀಮಂತ ವ್ಯಕ್ತಿಯಾಗಿ, ಸಮಾಜದಲ್ಲಿ ಶಕ್ತಿಯಾಗಿ ಹೆಸರನ್ನು ಪಡೆದಿದ್ದಾರೆ.ಸವಣೂರು ಎಂಬ ಪುಟ್ಟ ಊರಿನಲ್ಲಿ ೨೭ ಎಕ್ರೆ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಆಧುನಿಕವಾದ ಶೈಕ್ಷಣಿಕ ಅವಕಾಶಗಳನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒದಗಿಸಿ ಕೊಟ್ಟಿದ್ದಾರೆ.೨ನೇ ಮಹಾಯದ್ಧದಲ್ಲಿ ಸೇನಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದ `ಶಿಸ್ತಿನ ಸಿಪಾಯಿ’ ಶೀಂಟೂರು ನಾರಾಯಣ ರೈಯವರ ಪುತ್ರರಾಗಿರುವ ಸೀತಾರಾಮ ರೈಯವರು ಜಾತಿಯನ್ನು ನೋಡದೇ ತಮ್ಮ ಸಂಸ್ಥೆಯಲ್ಲಿ ಅರ್ಹತೆಯ ಮೇಲೆ ಉದ್ಯೋಗವನ್ನು ನೀಡಿದ ಮಹಾನ್ ವ್ಯಕ್ತಿ.ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸೀತಾರಾಮ ರೈಯವರು ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಎಲ್ಲರೂ ಮೆಚ್ಚಿದ್ದಾರೆ.ಸವಣೂರಿಗೆ ಸಹಕಾರಿ ಸಂಸ್ಥೆಯ ಸೂಪರ್ ವೈಸರ್ ಆಗಿ ಬಂದ ಸೀತಾರಾಮ ರೈಯವರು ಬಳಿಕ ಸವಣೂರಿನ ಅಭಿವೃದ್ಧಿಯ ರುವಾರಿಯಾಗಿರುವುದು ಅತ್ಯಂತ ಖುಷಿಯನ್ನು ಕೊಡುವ ವಿಷಯವಾಗಿದ್ದು, ಹಂತ ಹಂತವಾಗಿ ಸೀತಾರಾಮ ರೈ ಸಾಧಿಸಿದ ಸಾಧನೆಗಳು ಸಮಾಜದ ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಿದೆ ಎಂದರಲ್ಲದೆ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಸಂಸ್ಥೆ ಹಾಗೂ ದ.ಕ.ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಪ್ರಾಮಾಣಿಕವಾದ ಸೇವೆಯನ್ನು ರೈಯವರು ಮಾಡಿದ್ದಾರೆ ಎಂದರು.

ಸುಂದರರಾಮ್ ಶೆಟ್ಟಿಯವರಂತೆ ಉದ್ಯೋಗವನ್ನು ನೀಡಿದವರು: ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದ ವೇಳೆ ತಮಗೆ ಬರಬೇಕಿದ್ದ ೩.೬೦ ಲಕ್ಷ ರೂ.ಭತ್ಯೆಯನ್ನು ತೆಗೆದುಕೊಳ್ಳದೇ, ಅದನ್ನು ಸಂಸ್ಥೆಗೆ ನೀಡುವ ಮೂಲಕ ರೈಯವರು ವಿಶಿಷ್ಟವಾದ ಸೇವೆ ಸಲ್ಲಿಸಿದ್ದರು ಎಂಬುದು ಉಲ್ಲೇಖನೀಯ. ಎಂದು ಹೇಳಿದ ಎಂ.ಬಿ.ಸದಾಶಿವ ಅವರು, ಹಾಲಿನಂತಹ ಮನಸ್ಸನ್ನು ಹೊಂದಿರುವ ರೈಯವರು ಹಾಲು ಒಕ್ಕೂಟದ ಪ್ರಗತಿಗಾಗಿ ವಿಶೇಷವಾದ ಕಾಳಜಿ ವಹಿಸಿದ್ದರು ಎಂದರು.ಸುಂದರರಾಮ್ ಶೆಟ್ಟಿಯವರು ಬ್ಯಾಂಕ್ ಕಟ್ಟುವ ಮೂಲಕ ಈ ಭಾಗದ ಯುವಕರಿಗೆ ಉದ್ಯೋಗವನ್ನು ನೀಡಿದ್ದಾರೆ, ಆ ಬಳಿಕ ಸವಣೂರು ಸೀತಾರಾಮ ರೈಯವರು ತಮ್ಮ ಸಹಕಾರ ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಅತಿ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡಿದ್ದಾರೆ ಎಂದು ಎಂ.ಬಿ.ಸದಾಶಿವ ಹೇಳಿದರು.ತಮ್ಮ ಶಿಕ್ಷಣ ಸಂಸ್ಥೆಯ ಜೊತೆಗೆ ಸರಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಸಹಕಾರವನ್ನು ನೀಡುವ ದೊಡ್ಡ ಗುಣವನ್ನು ಹೊಂದಿರುವ ಸೀತಾರಾಮ ರೈಯವರು ಪುತ್ತೂರಿನ ಬಾಲವನದ ಅಭಿವೃದ್ಧಿಗೂ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಎಂ.ಬಿ.ಹೇಳಿದರು.

ವಿಶೇಷ ರೀತಿಯಲ್ಲಿ ಹುಟ್ಟು ಹಬ್ಬ ಆಚರಣೆ: ಸೀತಾರಾಮ ರೈಯವರ ೭೫ನೇ ಹುಟ್ಟು ಹಬ್ಬ ಆಚರಣೆ ವಿಶೇಷ ರೀತಿಯಲ್ಲಿ ನಡೆಯಿತು.ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್ ರೈ ದಂಪತಿ ಬೆಳ್ಳಿ ದೀಪವನ್ನು ಬೆಳಗಿಸಿ,ಪರಸ್ಪರ ಹಾರ ಬದಲಾಯಿಸಿಕೊಂಡರು.ಆರತಿ ಬೆಳಗಿ ತಿಲಕ ಹಚ್ಚಿ, ಪನ್ನೀರು, ಪುಷ್ಪಾರ್ಚಣೆಯ ಮೂಲಕ ರೈ ದಂಪತಿಯನ್ನು ಗೌರವಿಸಲಾಯಿತು.

ಅಮೃತ ರಶ್ಮಿ ಸಮಾರಂಭದ ಕಾರ್ಯಾಧ್ಯಕ್ಷ ಎನ್.ಸುಂದರ ರೈ ಸವಣೂರು, ಜೊತೆ ಕಾರ್‍ಯದರ್ಶಿ ಕುಸುಮಾ ಪಿ.ಶೆಟ್ಟಿ, ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಕೆಡೆಂಜಿ, ಸೀತಾರಾಮ ರೈಯವರ ಪತ್ನಿ ಕಸ್ತೂರಿಕಲಾ ಎಸ್.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸೀತಾರಾಮ ರೈಯವರ ಪುತ್ರರಾದ ಮಹೇಶ್ ರೈ, ಡಾ.ರಾಜೇಶ್ ರೈ, ಪುತ್ರಿ ರಶ್ಮಿ ಅಶ್ವಿನ್ ಶೆಟ್ಟಿ, ಅಳಿಯ ಅಶ್ವಿನ್ ಶೆಟ್ಟಿ, ಸೊಸೆಯಂದಿರಾದ ಪಲ್ಲವಿ, ಅಶ್ವಿತಾರವರು ಅತಿಥಿಗಳನ್ನು ಗೌರವಿಸಿದರು.

ಆದರ್ಶ ನಿರ್ದೇಶಕರಿಂದ ಕಂಪ್ಯೂಟರ್ ಕೊಡುಗೆ: ಆದರ್ಶ ವಿವಿಧೋzಶ ಸೌಹಾರ್ದ ಸಹಕಾರಿ ಸಂಸ್ಥೆಯ ೧೪ ಮಂದಿ ನಿರ್ದೇಶಕರು ೧.೪೦ ಲಕ್ಷ ರೂ.ವೆಚ್ಚದಲ್ಲಿ ವಿದ್ಯಾರಶ್ಮಿ ಸಂಸ್ಥೆಗೆ ಕಂಪ್ಯೂಟರ್ ಸಿಸ್ಟಮ್ ಕೊಡುಗೆಯಾಗಿ ನೀಡಿದರು.

ಸೀತಾರಾಮ ರೈಯವರ ಸಾಕ್ಷ್ಯ ಚಿತ್ರ ಅನಾವರಣ: ಸುಳ್ಯ ಸುದ್ದಿ ಮೀಡಿಯಾ ಕ್ರಿಯೇಶನ್‌ನ ದುರ್ಗಾ ಕುಮಾರ್ ನಾಯರ್‌ಕೆರೆ ಮತ್ತು ತಂಡದವರು ನಿರ್ಮಿಸಿದ, ಸೀತಾರಾಮ ರೈಯವರ ಜೀವನದ ಸಾಕ್ಷ್ಯಚಿತ್ರವನ್ನು ಉದ್ಯಮಿ ಹಾಗೂ ಅಮೃತ ಮಹೋತ್ಸವ ಸಮಿತಿ ಕಾರ್‍ಯಾಧ್ಯಕ್ಷ ಸವಣೂರು ಸುಂದರ ರೈಯವರು ಅನಾವರಣಗೊಳಿಸಿದರು.

`ಅಮೃತ ರಶ್ಮಿ’ ಅಭಿನಂದನಾ ಗ್ರಂಥ ಬಿಡುಗಡೆ: ಪತ್ರಕರ್ತ ಪಿ.ಬಿ.ಹರೀಶ್ ರೈಯವರ ಸಂಪಾದಕತ್ವದಲ್ಲಿ ಸೀತಾರಾಮ ರೈರವರ ೭೫ನೇ ಹುಟ್ಟು ಹಬ್ಬದ ಪ್ರಯುಕ್ತ ಹೊರತರಲಾದ `ಅಮೃತ ರಶ್ಮಿ’ ಅಭಿನಂದನಾ ಗ್ರಂಥವನ್ನು ಒಡಿಯೂರು ಶ್ರೀಗಳು ಬಿಡುಗಡೆಗೊಳಿಸಿದರು. ಪಿ.ಬಿ. ಹರೀಶ್ ರೈರವರು ಸಂದರ್ಭೋಚಿತವಾಗಿ ಮಾತನಾಡಿದರು.

ಅಮೃತ ರಶ್ಮಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಆರ್.ಗಂಗಾಧರ್ ಸ್ವಾಗತಿಸಿ, ಕೋಶಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ವಂದಿಸಿದರು.ಪ್ರದೀಪ್ ಕುಮಾರ್ ರೈ ಪನ್ನೆ ಕಾರ್‍ಯಕ್ರಮ ನಿರೂಪಿಸಿದರು. ಕಾರ್‍ಯದರ್ಶಿ ಸೀತಾರಾಮ ಕೇವಳ ಸನ್ಮಾನ ಪತ್ರ ವಾಚಿಸಿದರು.

ಸುಸಜ್ಜಿತ ಶೌಚಾಲಯ, ಸ್ನಾನಗೃಹದ ಲೋಕಾರ್ಪಣೆ: ಸೀತಾರಾಮ ರೈಯವರ ಜನ್ಮದಿನದ ಅಮೃತ ಮಹೋತ್ಸವದ ನೆನಪಿಗಾಗಿ ಸವಣೂರಿನಲ್ಲಿ ೯ ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಶೌಚಾಲಯ ಮತ್ತು ಸ್ನಾನಗೃಹವನ್ನು ಮೂಡಬಿದಿರೆ ಡಾ.ಮೋಹನ್ ಆಳ್ವರವರು ಉದ್ಘಾಟಿಸಿದರು.ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿದರು.ಡಾ.ರಾಜೇಶ್ ರೈ, ಅಶ್ವಿನ್ ಎಲ್.ಶೆಟ್ಟಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ,ಉಪಾಧ್ಯಕ್ಷ ಶೀನಪ್ಪ ಶೆಟ್ಟಿ, ಪಿಡಿಓ ಮನ್ಮಥ, ಪಂಚಾಯತ್ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್‍ಯಕ್ರಮಗಳು: ಅಮೃತ ರಶ್ಮಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾರ್ವತಿ ಗಣೇಶ್ ಭಟ್‌ರವರಿಂದ ಗಾನ ಲಹರಿ, ಸತೀಶ್ ಶೆಟ್ಟಿ ಪಟ್ಲ ಮತ್ತು ಬಳಗದರಿಂದ ಯಕ್ಷ ನೃತ್ಯ ರೂಪಕ ಹಾಗೂ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಲಾ ತಂಡದಿಂದ ಆಳ್ವಾಸ್ ಕಲಾ ವಿರಾಸತ್ ನಡೆಯಿತು.ಆಗಮಿಸಿದ್ದ ಎಲ್ಲರಿಗೂ ಸಂಜೆ ಲಘು ಉಪಹಾರ ಮತ್ತು ರಾತ್ರಿ ಸಹ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ರಶ್ಮಿ ನಿವಾಸಕ್ಕೆ ಅಭಿಮಾನಿಗಳ ಆಗಮನ: ಸೀತಾರಾಮ ರೈಯವರ ರಶ್ಮಿ ನಿವಾಸಕ್ಕೆ ಜೂ.೯ರಂದು ಬೆಳಿಗ್ಗೆ ೭.೩೦ರಿಂದಲೇ ಬೆಂಗಳೂರು, ಹಾಸನ, ಸುಳ್ಯ, ಮಂಗಳೂರಿನಿಂದ ಸಹಕಾರಿ ಬಂಧುಗಳು, ಅಭಿಮಾನಿಗಳು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರಮುಖರು, ಹಿತೈಷಿಗಳು ಸೇರಿದಂತೆ ಜನ ತಂಡೋಪತಂಡವಾಗಿ ಆಗಮಿಸಿ ಸೀತಾರಾಮ ರೈಯವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು.ಅಭಿಮಾನಿಗಳು ಬರ್ತ್‌ಡೇ ಕೇಕ್ ಕತ್ತರಿಸಿ, ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಸೀತಾರಾಮ ರೈಯವರ ಮನೆಯವರು ಎಲ್ಲರನ್ನೂ ಸ್ವಾಗತಿಸಿದರು.

ಸನ್ಮಾನ ಸಂತೋಷ ತಂದಿದೆ-ಸೀತಾರಾಮ ರೈ

ಅಮೃತ ರಶ್ಮಿ ಸನ್ಮಾನವನ್ನು ಸ್ವೀಕರಿಸಿದ ಸವಣೂರು ಕೆ.ಸೀತಾರಾಮ ರೈರವರು ಮಾತನಾಡಿ, ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕು ವ್ಯಾಪ್ತಿಯ ನನ್ನ ಸ್ನೇಹಿತರು ಸೇರಿಕೊಂಡು ಮಾಡಿರುವ ಹುಟ್ಟು ಹಬ್ಬದ ಸನ್ಮಾನ ಸಂತೋಷ ತಂದಿದೆ.ಡಾ.ಮೋಹನ್ ಆಳ್ವ,ಕೆ.ಆರ್.ಗಂಗಾಧರ್ ನೇತೃತ್ವದಲ್ಲಿ ಕಾರ್‍ಯಕ್ರಮ ಅಚ್ಚುಕಟ್ಟಾಗಿ ನಡೆದಿದೆ.ನನ್ನ ತಂದೆ, ತಾಯಿ, ಬಾವ ಎ.ಜೆ.ಶೆಟ್ಟಿ ಹಾಗೂ ಮನೆ ಮಂದಿ ನನಗೆ ತುಂಬಾ ಪ್ರೋತ್ಸಾಹವನ್ನು ನೀಡಿದ್ದಾರೆ ಎಂದು ನೆನಪಿಸಿಕೊಂಡರು.

ಸವಣೂರಿಗೇ ಸಂಭ್ರಮ ತಂದ `ಅಮೃತ ರಶ್ಮಿ’

ಸೀತಾರಾಮ ರೈ ಸವಣೂರುರವರ 75ನೇ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ರಾಜಕಿಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಖಂಡರು, ಉದ್ಯಮಿಗಳು, ಸೀತಾರಾಮ ರೈ ಅಭಿಮಾನಿಗಳು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.ಆಗಮಿಸಿದ ಎಲ್ಲರಿಗೂ ಆತ್ಮೀಯವಾದ ಸ್ವಾಗತ ನೀಡಲಾಗುತ್ತಿತ್ತು.ಅಚ್ಚುಕಟ್ಟಾಗಿ, ಸಾಂಗವಾಗಿ ನಡೆದ ಕಾರ್ಯಕ್ರಮ ಇಡೀ ಸವಣೂರಿಗೇ ಸಂಭ್ರಮ ತಂದಂತಿತ್ತು. ಸಭಾಕಾರ್‍ಯಕ್ರಮ ಮುನ್ನ ಅದ್ದೂರಿಯ ಮೆರವಣಿಗೆ ನಡೆಯಿತು.

LEAVE A REPLY

Please enter your comment!
Please enter your name here