ಕೈಬರಹದಲ್ಲಿ ಮೂಡಿಬಂದ ಉಪನಯನದ ಆಮಂತ್ರಣ ಪತ್ರಿಕೆ

0

ಡಿಜಿಟಲ್ ಯುಗದಲ್ಲೂ ಕೈಬರಹಕ್ಕೆ ಆದ್ಯತೆ ನೀಡಿದ ಸಂಗೀತ ಕಲಾವಿದ

@ ಸಿಶೇ ಕಜೆಮಾರ್

ಪುತ್ತೂರು: ಥರಾವರಿ ಆಮಂತ್ರಣ ಪತ್ರಿಕೆಗಳು ಮಿಂಚುತ್ತಿರುವ ಇಂದಿನಿ ಡಿಜಿಟಲ್ ಯುಗದಲ್ಲಿ ಇಲ್ಲೊಬ್ಬರು ಕೈಬರಹಕ್ಕೆ ಮಾರುಹೋಗಿದ್ದು ಕೈಬರಹದಲ್ಲೇ ತಮ್ಮ ಪುತ್ರನ ಉಪನಯನದ ಆಮಂತ್ರಣ ಪತ್ರಿಕೆಯನ್ನು ಮಾಡಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮೊಬೈಲ್, ಕಂಪ್ಯೂಟರ್, ಟ್ಯಾಬ್ ಇತ್ಯಾದಿಗಳಿಗೆ ಮಾರು ಹೋಗುತ್ತಿರುವ ಜನರ ಮಧ್ಯೆ ಕೈ ಬರಹ ಎಲ್ಲೋ ಮರೆಯಾಗುತ್ತಿದೆಯೋ ಎಂಬ ಭಯ ಕಾಡತೊಡಗುತ್ತಿದೆ. ಬೆಳಿಗ್ಗೆ ಎದ್ದ ತಕ್ಷಣವೇ ಮೊಬೈಲ್ ಕೀಬೋರ್ಡ್‌ನ ಮೇಲೆ ಕೈಯಾಡಿಸಿ ಸಂದೇಶ ಕಳುಹಿಸುವ ಇಂದಿನ ಕಾಲದಲ್ಲಿ ಪೆನ್ನು ಹಿಡಿದು ಅಕ್ಷರಗಳ ಸೃಷ್ಟಿಸುವ ಕೈಗಳೇ ಕಾಣುತ್ತಿಲ್ಲ ಇಂತಹ ಕಾಲಘಟ್ಟದಲ್ಲಿ ಸಂಗೀತ ಕಲಾವಿದ, ಕೃಷಿಕ ಶಾಂತಿಗೋಡಿನ ಸುಹಾಸ್ ಹೆಬ್ಬಾರ್ ಎಂಬವರು ತಮ್ಮ ಪುತ್ರ ಸಾತ್ಯಕಿಯವರ ಉಪನಯನದ ಆಮಂತ್ರಣ ಪತ್ರವನ್ನು ಸರ್ವೆ ಕಲ್ಪಣೆ ಸರಕಾರಿ ಶಾಲೆಯ ಸಹ ಶಿಕ್ಷಕ ಸತೀಶ್ ಎಂಬವರ ಕೈಬರಹದಲ್ಲಿ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕೈ ಬರಹದಲ್ಲಿದೆ ಆತ್ಮೀಯತೆ

ಪತ್ರ ವ್ಯವಹಾರವಿದ್ದ ಕಾಲದಲ್ಲಿ ಆತ್ಮೀಯರಿಗೆ ಕಳುಹಿಸುವ ಕೈಬರಹದ ಪತ್ರಗಳಲ್ಲಿದ್ದ ಆತ್ಮೀಯತೆ ಇಂದಿನ ಡಿಜಿಟಲ್ ಅಕ್ಷರಗಳಲ್ಲಿ ಸಿಗಲು ಸಾಧ್ಯವಿಲ್ಲ. ಕೈಬರಹದ ಪತ್ರಗಳನ್ನು ಓದುತ್ತಿದ್ದಂತೆ ಎಲ್ಲೋ ಮನಸ್ಸಲ್ಲಿ ಒಂದು ಆತ್ಮೀಯತೆಯ ಭಾವನೆ ಎದ್ದು ಕಾಣುತ್ತಿತ್ತು. ಇಂತಹ ಆತ್ಮೀಯತೆಯನ್ನು ಮತ್ತೆ ಮನಸ್ಸಿನಲ್ಲಿ ತುಂಬಬೇಕು ಎಂಬ ನಿಟ್ಟಿನಲ್ಲಿ ಸುಹಾಸ್ ಹೆಬ್ಬಾರ್‌ರವರು ತಮ್ಮ ಪುತ್ರನ ಉಪನಯನದ ಆಮಂತ್ರಣ ಪತ್ರಿಕೆಯನ್ನು ಕೈಬರಹದಲ್ಲಿ ಮಾಡಿಸಲು ಮುಂದಾಗಿದ್ದಾರೆ. ಆಮಂತ್ರಣ ಪತ್ರಿಕೆ ಓದುತ್ತಿದ್ದಾಗ ಮನಸ್ಸಿಗೆ ಖುಷಿಯಾಗಬೇಕು ಎಂಬುದೇ ಇದರ ಉದ್ದೇಶ ಎನ್ನುತ್ತಾರೆ ಸುಹಾಸ್ ಹೆಬ್ಬಾರ್.

ಅಕ್ಷರ ತುಂಬಿದ ಶಿಕ್ಷಕ

ಸಂಗೀತ ಕಲಾವಿದ ಸುಹಾಸ್ ಹೆಬ್ಬಾರ್‌ರವರ ಕಲ್ಪನೆಗೆ ಅಕ್ಷರಗಳ ಮೆರುಗು ತುಂಬಿದವರು ಶಿಕ್ಷಕ ಸತೀಶ್ ಎಂಬವರು, ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾಗಿರುವ ಸತೀಶ್‌ರವರು ಒಬ್ಬ ಹವ್ಯಾಸಿ ಚಿತ್ರಕಲಾವಿದ. ಮಕ್ಕಳಿಗೆ ಬೋಧನೋಪಕರಣಗಳನ್ನು ತಯಾರಿಸಿ ಆ ಮೂಲಕ ಮಕ್ಕಳಿಗೆ ಪಾಠ ಪ್ರವಚನಗಳನ್ನು ಮಾಡುತ್ತಿದ್ದಾರೆ. ಸುಹಾಸ್ ಹೆಬ್ಬಾರ್‌ರವರ ಕಲ್ಪನೆಗೆ ತಮ್ಮ ಮುದ್ದಾದ ಕೈಬರಹ ಮತ್ತು ಸಂಗೀತ ಉಪಕರಣಗಳನ್ನೇ ಬಳಸಿಕೊಂಡು ಸಾತ್ಯಕಿ ಎಂದು ಹೆಸರು ಬರೆದಿರುವುದು ಇಲ್ಲಿ ಸತೀಶ್‌ರವರ ಪ್ರತಿಭೆ ಎದ್ದು ಕಾಣುತ್ತದೆ. ಒಟ್ಟಿನಲ್ಲಿ ಕೈಬರಹಕ್ಕೆ ಮತ್ತೆ ಜೀವ ತುಂಬಿದ ಸುಹಾಸ್ ಹೆಬ್ಬಾರ್ ಹಾಗೂ ಸತೀಶ್ ಇಲ್ಲಿ ಪ್ರಶಂಸನೀಯರಾಗಿದ್ದಾರೆ.

ಆತ್ಮೀಯತೆ ಇರಲಿ ಎಂಬ ನಿಟ್ಟಿನಲ್ಲಿ ಕೈಬರಹದಲ್ಲಿ ನನ್ನ ಮಗನ ಉಪನಯನದ ಆಮಂತ್ರಣ ಪತ್ರಿಕೆ ಮಾಡಿಸಿದ್ದೇನೆ. ನನ್ನ ಕಲ್ಪನೆಗೆ ಶಿಕ್ಷಕ ಸತೀಶ್ ಎಂಬವರು ಮುದ್ದಾದ ಕೈಬರಹ ಹಾಗೂ ಚಿತ್ರಗಳನ್ನು ಬಿಡಿಸುವ ಮೂಲಕ ಸಾಥ್ ನೀಡಿದ್ದಾರೆ.

-ಸುಹಾಸ್ ಹೆಬ್ಬಾರ್ ಶಾಂತಿಗೋಡು, ಸಂಗೀತ ಕಲಾವಿದ

LEAVE A REPLY

Please enter your comment!
Please enter your name here