ಕೂಟೇಲು ಸೇತುವೆ ಕಾಮಗಾರಿ ಶೀಘ್ರ ಪೂರ್ತಿಗೊಳಿಸಲು ಶಾಸಕರ ಸೂಚನೆ-ಶಾಸಕರ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

0

ನಿಡ್ಪಳ್ಳಿ; ಬೆಟ್ಟಂಪಾಡಿ ಸುಳ್ಯಪದವು ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆಯ ನಿಡ್ಪಳ್ಳಿ ಗ್ರಾಮದ ಕೂಟೇಲು ಎಂಬಲ್ಲಿ ಶಾಸಕರ ಅನುದಾನ ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸೇತುವೆಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ತಿಗೊಳಿಸಲು ಪುತ್ತೂರು ಶಾಸಕ ಸಂಜೀವ ಮಠಂದೂರು ಪಿಡಬ್ಲ್ಯೂಡಿ ಸಹಾಯಕ ಅಭಿಯಂತರರಿಗೆ‌ ಮತ್ತು ಇತರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದ್ದು ನಿಡ್ಪಳ್ಳಿ, ಸುಳ್ಯಪದವು, ಕೌಡಿಚಾರು ಭಾಗದ ಜನರಿಗೆ ಬೆಟ್ಟಂಪಾಡಿ, ಕೇರಳ, ಪುತ್ತೂರು ಸಂಪರ್ಕ ಕಲ್ಪಿಸಲು ತೀರಾ ಸಮಸ್ಯೆಯಾಗುತ್ತಿರುವ ಬಗ್ಗೆ ಮಾಹಿತಿ ಬಂದ ಕಾರಣ ವಿಳಂಬ ಮಾಡದೆ ಗುಣಮಟ್ಟದ ಕಾಮಗಾರಿ ನಡೆಸಿ ಶೀಘ್ರವಾಗಿ ಪೂರ್ತಿಗೊಳಿಸಲು ಶಾಸಕರು ಸೂಚನೆ ನೀಡಿದ್ದಾರೆ.
ಅಲ್ಲದೆ ಇದರ ಪಕ್ಕದ ಎಂಪೆಕಲ್ಲು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದ್ದು ಅಕ್ಕಪಕ್ಕ ಎರಡು ಕಾಮಗಾರಿಗಳು ಏಕಕಾಲದಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ನಡೆದಾಡಲು ಮತ್ತು ವಾಹನ ಸವಾರರಿಗೆ ಸಮಸ್ಯೆಯಾಯಾಗಿದ್ದು ಸಾರ್ವಜನಿಕರಿಗೆ ಅನುಕೂಲವಾಗುವಂತೆ  ಹದಿನೈದು ದಿನದೊಳಗೆ ಈ ಎರಡು ಕಾಮಗಾರಿಯನ್ನು ಯಾವುದೇ ಕಾರಣಕ್ಕೆ ವಿಳಂಬ ಮಾಡದೆ ಪೂರ್ತಿ ಗೊಳಿಸುವಂತೆ ಶಾಸಕರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅರ್ಧದಲ್ಲಿ ನಿಲ್ಲಿಸಿದ್ದ ಕಿಂಡಿ ಅಣೆಕಟ್ಟಿನ ಕಾಮಗಾರಿ ಕೂಡ ಮತ್ತೆ ಅರಂಭವಾಗಿದೆ.ಈಗಾಗಲೇ ಪಿಲ್ಲರ್ ಮೇಲೆ ಕಾಂಕ್ರೀಟ್ ಹಾಕುವ ಕೆಲಸ ನಡೆಯುತ್ತಿದೆ.
ಶಾಸಕರ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ-ಸೇತುವೆ ನಿರ್ಮಾಣ ಕಾರ್ಯ‌ ಕಳೆದ ಜನವರಿ ತಿಂಗಳಲ್ಲಿ ಆರಂಭವಾಗಿ‌ ಜೂನ್ ಒಳಗೆ ಮುಕ್ತಾಯವಾಗಿ ಸಂಚಾರಕ್ಕೆ ಅನುವುಮಾಡಿಕೊಡಲಾಗುವುದು ಎಂಬ ಮಾಹಿತಿ ಇತ್ತು. ಆದರೆ ಇದುವರೆಗೆ ‌‌ಕಾಮಗಾರಿ ಅರ್ಧದಷ್ಟು ಮಾತ್ರ ಆಗಿದ್ದು ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಬಹಳ ಸಮಸ್ಯೆಯಾಗುತ್ತಿದೆ ಎಂದು ಜನರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸುದ್ದಿ ಬಿಡುಗಡೆ  ಈ ಬಗ್ಗೆ ವಿಸ್ತೃತ ವರದಿ ಮಾಡಿತ್ತು. ಹೀಗಾಗಿ ಸುದ್ದಿ ವರದಿಗೆ ಶಾಸಕರು ತಕ್ಷಣ ಸ್ಪಂದಿಸಿ ಈ ಸೂಚನೆ ನೀಡಿದ್ದು ಶಾಸಕರ ಕಾರ್ಯಕ್ಕೆ ಗ್ರಾಮಸ್ಥರು ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
 
ಎಂಪೆಕಲ್ಲು ಬೆಟ್ಟಂಪಾಡಿ ಸಂಪರ್ಕ ರಸ್ತೆ ಅಭಿವೃದ್ಧಿಗೂ ಒತ್ತಾಯ- ಎಂಪೆಕಲ್ಲು ಬೆಟ್ಟಂಪಾಡಿ ಸಂಪರ್ಕ ರಸ್ತೆಯೂ ತೀರಾ ಕೆಟ್ಟು ಹೋಗಿದೆ. ಕೂಟೇಲು ಸೇತುವೆ ಕಾಮಗಾರಿ ಆರಂಭವಾದ ನಂತರ ಬೆಟ್ಟಂಪಾಡಿಗೆ ಸಂಪರ್ಕಿಸಲು ಎಂಪೆಕಲ್ಲು ಮೂಲಕ ಸಂಚರಿಸಲು ಬದಲಿ ರಸ್ತೆ ವ್ಯವಸ್ಥೆ ಮಾಡಿದ್ದರು. ಆದುದರಿಂದ ಇಲ್ಲಿ ಹೆಚ್ಚಾಗಿ ವಾಹನಗಳು ಒಡಾಡಿದ ಕಾರಣ ಮತ್ತು ಮಳೆಗೆ ನೀರು ರಸ್ತೆಯಲ್ಲಿ ಹರಿದ ಕಾರಣ ಗುಂಡಿ ಬಿದ್ದು ಈಗ ಬಹಳ ಹಾಳಾಗಿದೆ. ಅಲ್ಲದೆ ಮಳೆ ಬರುತ್ತಿರುವಾಗ ಈ ರಸ್ತೆಯಲ್ಲಿ ವಾಹನ ಚಲಿಸಿದರೆ ಜಾರುತ್ತದೆ.ಆದುದರಿಂದ ಈ ರಸ್ತೆಗೆ ಕಾಂಕ್ರೀಟ್ ಹಾಕಿ ಅಭಿವೃದ್ಧಿ ಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.    
 
ಕಾಮಗಾರಿ ಶೀಘ್ರ ಪೂರ್ತಿಯಾಗದಿದ್ದರೆ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ- ಸೇತುವೆ ಕಾಮಾಗಾರಿ ಶೀಘ್ರ ಪೂರ್ತಿಯಾಗದಿದ್ದರೆ‌ ನೂರಾರು ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಲಿದೆ.ಈಗ ಪದವಿ ಪೂರ್ವ ಕಾಲೇಜು ಆರಂಭ ಗೊಂಡಿದ್ದು ಸದ್ಯದಲ್ಲಿಯೆ ಪದವಿ ಕಾಲೇಜು ಕೂಡ ಆರಂಭವಾಗಲಿದೆ. ಬಡಗನ್ನೂರು, ಸುಳ್ಯಪದವು, ನಿಡ್ಪಳ್ಳಿ ಭಾಗದಿಂದ   ಬೆಟ್ಟಂಪಾಡಿ ಪ್ರೌಢಶಾಲೆ ಮತ್ತು ಕಾಲೇಜಿಗೆ ದಿನ ನಿತ್ಯ ನೂರಾರು ವಿದ್ಯಾರ್ಥಿಗಳು ಸ್ಕೂಲ್ ಬಸ್ , ಕೆ.ಎಸ್.ಅರ್.ಟಿ.ಸಿ, ಒಂದು ಖಾಸಗಿ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಆದರೆ ಸೇತುವೆ ಕಾಮಗಾರಿಯಿಂದ ಈಗ ಬಸ್ಸು ಸಂಚಾರವೂ ಸ್ಥಗಿತ ಗೊಂಡಿದೆ. ಬಸ್ಸು ಮತ್ತು ಘನ ವಾಹನಗಳು ಸಂಚಾರಕ್ಕೆ ಇರುವುದು ಇದು ಒಂದೇ ರಸ್ತೆ. ಅಲ್ಲದೆ ಬಾಡಿಗೆಯನ್ನೆ ನಂಬಿ ಜೀವನ ಸಾಗಿಸುತ್ತಿರುವ ರಿಕ್ಷಾ ಚಾಲಕರಿಗೂ ಬಾಡಿಗೆ ಇಲ್ಲದೆ ಸಂಕಷ್ಟ ಎದುರಾಗಿದೆ.ಒ ಅದುದರಿಂದ ಎಲ್ಲರ ಅನುಕೂಲಕ್ಕಾಗಿ ಸೇತುವೆ ಶೀಘ್ರವಾಗಿ ಪೂರ್ತಿಯಾಗಲಿ ಎಂಬುದೇ ಎಲ್ಲರ ಆಶಯ.
 ನಿಡ್ಪಳ್ಳಿ, ಸುಳ್ಯಪದವು ಭಾಗದಿಂದ ಬೆಟ್ಟಂಪಾಡಿ ಸಂಪರ್ಕಿಸುವ ಕೂಟೇಲು ಸೇತುವೆ ಕಾಮಗಾರಿ ವಿಳಂಬವಾದ ಕಾರಣ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದ್ದು ಪಿಡಬ್ಲ್ಯೂಡಿ ಸಹಾಯಕ ಅಭಿಯಂತರರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಸೇತುವೆ ಕಾಮಗಾರಿ ಹದಿನೈದು ದಿನದಲ್ಲಿ ಪೂರ್ತಿ ಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸೂಚನೆ ನೀಡಿದ್ದೇನೆ. ಅಲ್ಲದೆ ಪಕ್ಕದಲ್ಲಿ ನಡೆಯುತ್ತಿರುವ ಕಿಂಡಿ ಅಣೆಕಟ್ಟು ಕಾಮಗಾರಿಯನ್ನೂ ಪೂರ್ತಿಗೊಳಿಸಲು ಸಂಬಂದಿಸಿದ ಇಲಾಖೆಗೆ ಸೂಚನೆ ನೀಡಿದ್ದೇನೆ.- ಸಂಜೀವ ಮಠಂದೂರು, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here