‘ಜಯಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಗುಣರಂಜನ್ ಶೆಟ್ಟಿಗೂ ನನಗೂ ಯಾವುದೇ ದ್ವೇಷ ಇಲ್ಲ ಆರೋಪದ ಹಿಂದಿರುವ ಸತ್ಯಾಸತ್ಯತೆ ತನಿಖೆಯಿಂದ ಹೊರಬರಲಿ’-ಮನ್ಮಿತ್ ರೈ ಓಲೆಮುಂಡೋವು

0

ಪುತ್ತೂರು: ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಗುಣರಂಜನ್ ಶೆಟ್ಟಿಯವರನ್ನು ಹತ್ಯೆಗೈಯ್ಯಲು ಸಂಚು ರೂಪಿಸಲಾಗಿದೆ ಮತ್ತು ಈ ಸಂಚಿನಲ್ಲಿ ಪುತ್ತೂರು ಮೂಲದ ವ್ಯಕ್ತಿಯೋರ್ವರ ಕೈವಾಡ ಇದೆ ಎಂಬ ವಿಷಯ ಈಗಾಗಲೇ ಪ್ರಚಾರಗೊಂಡಿದ್ದು ಇದರಲ್ಲಿ ಓಲೆಮುಂಡೋವು ನಿವಾಸಿ ಮನ್ಮಿತ್ ರೈಯವರ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಮನ್ಮಿತ್ ರೈಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಗುಣರಂಜನ್ ಶೆಟ್ಟಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದವರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು ಇದರಲ್ಲಿ ಯುವ ಉದ್ಯಮಿಯಾಗಿರುವ ಮನ್ಮಿತ್ ರೈಯವರ ಹೆಸರು ಇದೆ ಎಂದು ಪ್ರಚಾರವಾಗಿದೆ. ಮುತ್ತಪ್ಪ ರೈಯವರ ಆಪ್ತ ಬಳಗದಲ್ಲಿದ್ದ ಮನ್ಮಿತ್ ರೈಯವರು ಮುತ್ತಪ್ಪ ರೈಯವರ ಕೊನೆ ಕಾಲದಲ್ಲಿ ಅವರಿಂದ ದೂರವಾಗಿದ್ದರು. ಬಳಿಕ ಎಂ.ಆರ್.ಗ್ರೂಪ್ಸ್ ಪ್ರಾರಂಭಿಸಿ ಉದ್ಯಮಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ಗುಣರಂಜನ್ ಶೆಟ್ಟಿ ಹತ್ಯೆ ಸಂಚಿನಲ್ಲಿ ನನ್ನದು ಯಾವ ಪಾತ್ರವೂ ಇಲ್ಲ ಎಂದಿರುವ ಮನ್ಮಿತ್ ರೈಯವರು, ನಾನು ಇದುವರೆಗೆ ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ, ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿಲ್ಲ, ಯಾರಿಗೂ ಬೆದರಿಕೆ ಹಾಕುವುದಾಗಲಿ, ಹಪ್ತಾ ವಸೂಲು ಮಾಡುವುದಾಗಲಿ ಅಥವಾ ಯಾರಿಗೂ ಸ್ಕೆಚ್ ಹಾಕುವುದಾಗಲಿ ನಾನು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ, ನಾನು ನನ್ನದೇ ಎಂ.ಆರ್.ಗ್ರೂಪ್ಸ್ ಕಟ್ಟಿಕೊಂಡು ಉದ್ಯಮ ನಡೆಸುತ್ತಿದ್ದೇನೆ. ಉದ್ಯಮದ ಕೆಲಸದಲ್ಲೇ ಥೈಲ್ಯಾಂಡ್‌ಗೆ ಹೋಗಿದ್ದೇನೆ ವಿನಹ ಬೇರೆ ಯಾವುದೇ ಕಾರಣಕ್ಕೆ ಅಲ್ಲ ಎಂದು ಮನ್ಮಿತ್ ಸ್ಪಷ್ಟಪಡಿಸಿದ್ದಾರೆ.

ನನಗೂ ಗುಣರಂಜನ್‌ಗೂ ಯಾವುದೇ ದ್ವೇಷ ಇಲ್ಲ

ಹತ್ಯೆ ಸಂಚು ಮಾಡುವುದಕ್ಕೆ ನನಗೂ ಗುಣರಂಜನ್ ಶೆಟ್ಟಿಗೂ ಯಾವುದೇ ದ್ವೇಷವಾಗಲಿ, ಹಳೆಯ ಕೋಪವಾಗಲಿ ಇಲ್ಲ, ನಾವು ಒಳ್ಳೆಯ ರೀತಿಯಲ್ಲೆ ಇದ್ದೇವೆ. ನನ್ನ ಹೆಸರು ಯಾಕೆ ಇದರಲ್ಲಿ ಸೇರ್ಪಡೆಗೊಂಡಿತೋ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಪೊಲೀಸರಾಗಲಿ, ಗುಪ್ತಚರ ಇಲಾಖೆಯವರಾಗಲಿ ನನ್ನಲ್ಲಿ ಯಾವುದೇ ಮಾಹಿತಿ ಪಡೆದುಕೊಂಡಿಲ್ಲ. ಸ್ವತಃ ಗುಣರಂಜನ್ ಶೆಟ್ಟಿಯವರಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದೇನೆ ಮತ್ತು ನಾನು ಇದರಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಮನವರಿಕೆ ಮಾಡಿದ್ದೇನೆ.

ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿ

ನನ್ನಲ್ಲಿ ಇದುವರೆಗೆ ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿಯನ್ನು ಕೇಳಿಲ್ಲ. ಪತ್ರಿಕೆಗಳಲ್ಲಿ ಮಾತ್ರ ಈ ರೀತಿಯ ಪ್ರಚಾರವಾಗಿದೆ. ಕೊಲೆಗೆ ಸಂಚು ರೂಪಿಸಿರುವ ಪ್ರಕರಣದ ಬಗ್ಗೆ ಪೊಲೀಸರು ಸ್ಪಷ್ಟ ತನಿಖೆ ನಡೆಸಿದ್ದೇ ಆದಲ್ಲಿ ಸತ್ಯ ಹೊರಬರಲಿದೆ. ಸರಿಯಾದ ತನಿಖೆಯಾಗಲಿ, ಬೆದರಿಕೆ ಇದೆಯೋ ಇಲ್ಲವೋ ಅಥವಾ ಇದರಲ್ಲಿ ಬೇರೆ ಯಾರದ್ದಾದರೂ ಕೈವಾಡ ಇದೆಯೋ ಎಂಬುದು ತನಿಖೆಯಿಂದ ಗೊತ್ತಾಗಬೇಕಾಗಿದೆ. ಪೊಲೀಸ್ ಇಲಾಖೆ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ? ತನಿಖೆ ಹಂತದಲ್ಲಿ ಇರುವಾಗ ನಮ್ಮ ಹೆಸರು ಮನ್ಮಿತ್ ರೈ ಮತ್ತು ಸಹಚರರು ಎಂದು ಬರಲು ನಾವು ಯಾವ ರೌಡಿಗಳೂ ಅಲ್ಲ ಈ ಬಗ್ಗೆ ತನಿಖೆಯಾಗಲಿ ಎಂದು ಮನ್ಮಿತ್ ರೈ ಸುದ್ದಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನನ್ನದು ಹೆಸರು ಪಡೆದ ಮನೆತನ, ಬೇಕಾದಷ್ಟು ಆಸ್ತಿ,ಹಣ ಇದೆ

ಹತ್ಯೆಯ ಸಂಚು ಆರೋಪ ಸಾಬೀತು ಆಗದಿದ್ದಲ್ಲಿ ನನ್ನ ಹೆಸರಿನ ತೇಜೋವಧೆಗೆ ಯಾರು ಹೊಣೆ ಎಂದು ಪ್ರಶ್ನಿಸಿರುವ ಮನ್ಮಿತ್ ರೈ, ನಾನು ಯಾವ ಸೆಟಲ್‌ಮೆಂಟ್ ಮಾಡಿ ಹಣ ಮಾಡಬೇಕೆಂದಿಲ್ಲ, ನನ್ನದು ಹೆಸರು ಪಡೆದ ಮನೆತನ, ನಮ್ಮೂರಿನಲ್ಲಿ ನನಗೆ ಬೇಕಾದಷ್ಟು ಆಸ್ತಿ, ಹಣ ಇದೆ.ಬೆದರಿಕೆ ಒಡ್ಡಿ ನನಗೆ ಹಣ ಸಂಪಾದನೆ ಮಾಡುವ ಅವಶ್ಯಕತೆಯೇ ಇಲ್ಲ. ನನಗೂ ಈ ಹಿಂದೆ ಬೆದರಿಕೆ ಬಂದಿತ್ತು, ಯಾರು ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಗೊತ್ತಿಲ್ಲ ಅದಕ್ಕಾಗಿ ಖಾಸಗಿ ಸೆಕ್ಯೂರಿಟಿ ಇಟ್ಟುಕೊಂಡಿದ್ದೇನೆ. ಇದನ್ನು ಶೋಕಿ ಎಂದು ಕರೆಯುವುದು ಸರಿಯಲ್ಲ, ತಿಂಗಳಿಗೆ ಲಕ್ಷ ರೂ.ಖರ್ಚು ಮಾಡಿ ಶೋಕಿ ಮಾಡುವ ಅಗತ್ಯ ನನಗೆ ಇಲ್ಲ. ಈ ಬಗ್ಗೆ ಜನರೂ ಅರ್ಥ ಮಾಡಿಕೊಳ್ಳಬೇಕು ಎಂದು ಮನ್ಮಿತ್ ರೈ ಹೇಳಿಕೊಂಡಿದ್ದಾರೆ.

ಭೂಗತ ಲೋಕಕ್ಕೆ ಎಂಟ್ರಿಯಾಗಲ್ಲ

ಗುಣರಂಜನ್ ಶೆಟ್ಟಿ ಹತ್ಯೆ ಸಂಚಿನಲ್ಲಿ ನನ್ನ ಹೆಸರು ಬಳಕೆಯಾಗಿರುವುದು ಬೇಸರ ತಂದಿದೆ ಎಂದ ಮನ್ಮಿತ್ ರೈ, ನಾನು ಕ್ರಿಮಿನಲ್ ಚಟುವಟಿಕೆಗಳಲ್ಲಿ ಈ ಹಿಂದೆಯೂ ಗುರುತಿಸಿಕೊಂಡಿಲ್ಲ, ಭವಿಷ್ಯದ ದಿನಗಳಲ್ಲೂ ಭೂಗತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ,ನಾನು ಭೂಗತ ಲೋಕಕ್ಕೆ ಎಂಟ್ರಿಯಾಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪುತ್ತೂರು ತಾಲೂಕಿನಲ್ಲಿ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೆ ಕೊರೋನ ಸಂಕಷ್ಟದ ದಿನಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಹಾರ ಕಿಟ್‌ಗಳನ್ನು ವಿತರಿಸಿದ್ದೇನೆ. ಬಡವರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುತ್ತಲೇ ಬಂದಿದ್ದೇನೆ. ನನಗೆ ಭೂಗತ ಲೋಕದ ಅಗತ್ಯವೇ ಇಲ್ಲ, ನನಗೆ ಬೇಕಾದಷ್ಟು ಆಸ್ತಿ ಹಣ ನನ್ನ ಊರಿನಲ್ಲಿದೆ. ಅದು ಬಿಟ್ಟು ಇಂತಹ ಚಿಲ್ಲರೆ ಕೆಲಸಗಳಿಗೆ ನಾನು ಕೈಹಾಕಲ್ಲ. ಯಾರೋ ನನ್ನ ಸಮಾಜಸೇವೆಯನ್ನು ಸಹಿಸದ ವ್ಯಕ್ತಿಗಳು ಹತ್ಯೆ ಸಂಚಿನಲ್ಲಿ ನನ್ನ ಹೆಸರನ್ನು ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಕಾಲವೇ ಉತ್ತರ ನೀಡಲಿದೆ.

LEAVE A REPLY

Please enter your comment!
Please enter your name here