ಕೋರ್ಟ್ ಆದೇಶವಾಗಿದ್ದರೂ ಹಿಜಾಬ್ ವಿಚಾರವನ್ನು ಶಾಶ್ವತವಾಗಿರಿಸಿ ರಾಜಕೀಯ ಲಾಭ ಗಳಿಸಲು ಕೋಮು ಸಂಘಟನೆಗಳ ಷಡ್ಯಂತ್ರ –  ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ ಆರೋಪ

0

ಪುತ್ತೂರು: ಹಿಜಾಬ್ ವಿವಾದದ ಬಗ್ಗೆ ಕೋರ್ಟ್ ತೀರ್ಪು ನೀಡಿದೆ. ಆದರೆ ಅದನ್ನು ಪಾಲಿಸದೆ ಎರಡು ಕೋಮುವಾದಿ ಸಂಘಟನೆಗಳು ಅದನ್ನು ಶಾಶ್ವತವಾಗಿ ಜೀವಂತವಿರಿಸಿ ತಮ್ಮ ರಾಜಕೀಯ ಲಾಭ ಗಳಿಸಲು ಷಡ್ಯಂತ್ರ ರೂಪಿಸಿದೆ. ಈ ಬಗ್ಗೆ ಸಮುದಾಯ ಜಾಗೃತವಾಗಬೇಕು ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಅಲಿಯವರು ಬ್ಲಾಕ್  ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹಿಜಾಬ್ ವಿವಾದದ ಬಗ್ಗೆ ಗೊಂದಲ ಉಂಟುಮಾಡಲು ಮತ್ತು ಜೀವಂತವಾಗಿರಿಸುವ ಕೆಲಸ ಆರಂಭದಿಂದಲೇ ನಡೆಯಿತು. ವಿವಿಧ ಜಿಲ್ಲೆಗಳ ಮುಸ್ಲಿಂ ಮುಖಂಡರುಗಳು ನ್ಯಾಯಾಲಯದ ತೀರ್ಪನ್ನು ಪಾಲಿಸಿಕೊಂಡು ಮುಂದೆ ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಎಂದು ಸಮುದಾಯಕ್ಕೆ ಕರೆ ನೀಡಿದ್ದರು. ಕೋರ್ಟ್ ತೀರ್ಪಿನಲ್ಲಿ ಹಿಜಾಬ್ ಇಸ್ಲಾಂ ಧರ್ಮದ ಅಂಗವಲ್ಲ ಎಂದು ಉಲ್ಲೇಖಿಸಲಾಗಿತ್ತು. ಅದರ ಬಗ್ಗೆ ಅಸಮಾಧಾನಗೊಂಡು ಈ ಬಗ್ಗೆ ರಾಜ್ಯಾದ್ಯಂತ ಯಾರಿಗೂ ತೊಂದರೆ ಆಗದ ರೀತಿಯಲ್ಲಿ ಮೌನವಾಗಿ ಮುಸ್ಲಿಮರು ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿದ್ದರು. ಬಳಿಕ ಕ್ಲಾಸಿನೊಳಗೆ ಹಿಜಾಬ್ ಹಾಕದಂತೆ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಯಿತು.

ಹಿಜಾಬ್‌ನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಹಾಗೂ ಕೋರ್ಟ್‌ಗೆ ಹೋಗದಂತೆ ಸಮುದಾಯ ಹೇಳಿದರೂ ಹಠ ಕಟ್ಟಿ ನ್ಯಾಯಾಲಯದ ಮೆಟ್ಟಿಲೇರಲಾಯಿತು. ಹಿಜಾಬ್‌ನ್ನು ಧರಿಸಿಕೊಂಡು ಹೋಗುವಂತ ಸಂಸ್ಥೆಗಳು ಕೂಡ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಹಿಜಾಬ್ ಧರಿಸಿಕೊಂಡು ಬರಬಾರದೆಂದು ಆದೇಶಿಸಿದೆ. ಕೋಮುವಾದಿ ಸಂಘಟನೆಗಳು ಮುಗ್ಧ ಮನಸ್ಸಿನ ವಿದ್ಯಾರ್ಥಿಗಳ ತಲೆಕೆಡಿಸಿ ವಿದ್ಯೆ ಇಲ್ಲದಿದ್ದರೂ ಪರವಾಗಿಲ್ಲ. ಹಿಜಾಬ್‌ನ ಬಗ್ಗೆ ಹೋರಾಟ ಮಾಡುವಂತೆ ಪ್ರೇರೇಪಿಸಿರುವುದಾಗಿ ಆಲಿ ಆರೋಪಿಸಿದರು.

ಕೋರ್ಟ್ ತೀರ್ಪಿನ ಬಳಿಕವೂ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ವಿದ್ಯಾ ಸಂಸ್ಥೆಗಳಿಗೆ ಬರುತ್ತಿದ್ದಾರೆ. ಇವರಿಗೆ ಮಾತ್ರವೇ ಇಸ್ಲಾಂ ಧರ್ಮ ಇರುವುದೇ. ಇವರು ಮಾತ್ರ ಇಸ್ಲಾಂ ಧರ್ಮ ಪಾಲಿಸುವುದೇ? ಕ್ಲಾಸ್ ರೂಂನಲ್ಲಿ ಹಿಜಾಬ್ ತೆಗೆದಿಟ್ಟು ಹೋಗುವ ವಿದ್ಯಾರ್ಥಿನಿಯರು ಧರ್ಮಭ್ರಷ್ಟರೇ? ಎಂದು ನಾವು ಆಲೋಚಿಸಬೇಕಾಗಿದೆ ಎಂದ ಆಲಿಯವರು ಚುನಾವಣೆ ಮುಗಿಯುವವರೆಗೆ ಈ ಎರಡೂ ಸಂಘಟನೆಗಳಿಂದಲೂ ಈ ರೀತಿಯ ವಿವಾದ ಸೃಷ್ಠಿಯಾಗುತ್ತಲೇ ಇರುತ್ತದೆ. ವಿವಾದಗಳನ್ನು ಪರಿಹರಿಸಿದರೂ ಕೂಡ ಆ ವಿವಾದದ ಬಿಸಿ ಆರದೆ ಹೋಗದ ರೀತಿಯಲ್ಲಿ ಇವತ್ತು ಈ ಎರಡು ಕೋಮುವಾದಿ ಸಂಘಟನೆಗಳು ಪ್ರಯತ್ನಿಸುತ್ತಲೇ ಇರುತ್ತದೆ ಎಂದು ಆರೋಪಿಸಿದರು.

ಕೋರ್ಟ್ ತೀರ್ಪನ್ನು ಎಲ್ಲರೂ ಒಪ್ಪಬೇಕು. ಸಮುದಾಯ ಹೇಳಿದಾಗ ಕೆಲವು ವಿದ್ಯಾರ್ಥಿಗಳು, ನಾವು ಹಿಜಾಬ್ ಧರಿಸಿಕೊಂಡು ಹೋಗುತ್ತೇವೆ ಎಂಬ ಹಠಮಾರಿತನ ಯಾಕೆ? ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರು ಕ್ಲಾಸಿನೊಳಗೆ ಹಿಜಾಬ್ ತೆಗೆದಿಟ್ಟು ಹೋಗುತ್ತಿರುವಾಗ ಕೇವಲ ಬೆರಳೆಣಿಕೆಯ ವಿದ್ಯಾರ್ಥಿನಿಯರು ಈ ತರಹದ ವಿವಾದವನ್ನು ಎಬ್ಬಿಸುವ ವಿಚಾರ ಹಿಂದಿರುವ ಷಡ್ಯಂತ್ರವನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದರು.

ಹಿಜಾಬ್ ವಿವಾದದ ಬಗ್ಗೆ ಯು.ಟಿ ಖಾದರ್‌ರವರ ಹೆಸರವನ್ನು ಎಳೆದು ತರಲಾಗುತ್ತಿದೆ. ಅವರು ಹಿಜಾಬ್ ವಿವಾದದ ಬಗ್ಗೆ ಸ್ಪಂದಿಸಲಿಲ್ಲ ಎಂದು ಆಪಾದಿಸಲಾಗುತ್ತಿದೆ ಎಂದು ಹೇಳಿದ ಆಲಿಯವರು ಈಗ ಯು.ಟಿ ಖಾದರ್ ಜಿಲ್ಲೆಯ ಸಚಿವರೇ ಅಥವಾ ಅವರ ಸರಕಾರವಿದೆಯೇ? ಸುಮ್ಮನೆ ಅವರ ಹೆಸರನ್ನು ಎಳೆದು ತಂದು ಸಂಘಟನೆಯವರ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರನ್ನು ಬಲಿಪಶು ಮಾಡಲಾಗುತ್ತಿದೆ. ನಮ್ಮ ಧರ್ಮದ ಆಚರಣೆಗೆ ನಮ್ಮ ಮನೆಯಲ್ಲಿ ಇರಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿಹೆಚ್‌ಎ. ಶಕೂರ್ ಹಾಜಿ, ಹಾಗೂ ಸಿರಿಲ್ ರೋಡ್ರಿಗಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here