ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಸಾಧಕರಿಗೆ ಅಭಿನಂದನೆ `ಸಾಧನಾಭಿವಂದನಾ’

0

 

ಪುತ್ತೂರು; ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ೨೦೨೧-೨೨ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ `ಸಾಧನಾಭಿವಂದನಾ’ವು ಜೂ.೧೧ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕನ್ನಡ ಮಾಧ್ಯಮದ ಬಗ್ಗೆ ಕೀಲರಿಮೆ ಬೇಡ. ಕನ್ನಡದಲ್ಲಿ ಕಲಿತವರು ಸ್ವಾಭಿಮಾನದಿಂದ ತಲೆ ಎತ್ತಿ ನಡೆಯಬೇಕು. ಆಗ ಭಾಷೆ, ಕರ್ನಾಟಕದ ಪರಂಪರೆ ಉಳಿಸಲು ಸಾಧ್ಯ. ಕನ್ನಡದಲ್ಲಿ ಕಲಿತವರು ಶ್ರೇಷ್ಠ ವಿಜ್ಞಾನ, ತತ್ವಜ್ಞಾನಿ, ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ ಎಂದರು. ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆವಶ್ಯಕವಾದ ಮೌಲ್ಯಾಧರಿತ ಶಿಕ್ಷಣ ನೀಡಲಾಗುತ್ತಿದೆ. ಪ್ರತಿಭೆಗಳಿಗೆ ಪೂರಕವಾಗಿ ಪ್ರಯತ್ನ ಮಾಡಿದಾಗ ಯಶಸ್ಸು ಸಾಧ್ಯ. ಜೀವನದಲ್ಲಿ ಮಾನವೀಯತೆ ಹೃದಯ ಹಾಗೂ ಶ್ರೀಮತಿಗೆ ಮೈಗೂಡಿಸಿಕೊಂಡಾಗ ನಾವು ಇತರರಿಗಿಂತ ಭಿನ್ನವಾಗಿ ಕಾಣಲು ಸಾಧ್ಯ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಂಸ್ಥೆಯ ಮುಂದಿನ ರಾಯಬಾರಿಗಳಾಗಬೇಕು. ಅಭಿನಂದನಾ ಕಾರ್ಯಕ್ರಮವು ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕಾರ್ಯಕ್ರಮ ಆಗಿದೆ ಎಂದ ಅವರು ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಪ್ರಾಯೋಕತ್ವ ಮಾಡಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ಮಣಿಲ ಮಹಾದೇವ ಶಾಸ್ತ್ರಿ ಮಾತನಾಡಿ, ಬಡ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಗಿದೆ. ಶಾಲೆಯ ಪ್ರಥಮ ಬ್ಯಾಚ್‌ನಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು ಅದನ್ನು ಉಳಿಸಿಕೊಂಡು ಬಂದಿದೆ. ಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಗೆ ಪೂರಕವಾದ ತರಗತಿಗಳನ್ನು ನೀಡಲಾಗುತ್ತದೆ. ಶಿಕ್ಷಕರ ಪರಿಶ್ರಮದ ಫಲವಾಗಿ ಶಾಲೆಯಲ್ಲಿ ಉತ್ತಮ ಫಲಿತಾಂಶ ಎಂದರು.


ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣ ಭಟ್ ಕೊಂಕೋಡಿ ಮಾತನಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ಈ ವರ್ಷದ ಸಾಧನೆಗೆ ವಿದ್ಯಾರ್ಥಿಗಳು, ಶಿಕ್ಷಕರ ಪ್ರಯತ್ನದಿಂದ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಇದಕ್ಕೆ ಪೋಷಕರ ಪ್ರೋತ್ಸಾಹವು ದೊರೆತಿದೆ. ಈ ಸಾಧನೆಯು ಇಲ್ಲಿಗೆ ನಿಲ್ಲದೇ ನಿರಂತರವಾಗಿರಲಿ. ವಿದ್ಯಾರ್ಥಿಗಳು ಮುಂದಿನ ಶಿಕ್ಷಣಕ್ಕೂ ಸಹಕಾರಿಯಾಗಿರಲಿ ಎಂದರು.

ಶಾಲಾ ಸಂಚಾಲಕ ವಸಂತ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಸದೃಡ ರಾಷ್ಟ್ರ ನಿರ್ಮಾಣಕ್ಕೆ ವ್ಯಕ್ತಿ ನಿರ್ಮಾಣ ಅವಶ್ಯಕ ಎಂಬಂತೆ ಸಂಸ್ಥೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಏಳು ಮಕ್ಕಳಿಂದ ಪ್ರಾರಂಭಗೊಂಡ ಶಾಲೆಯಲ್ಲಿ ಇದೀಗ ೯೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿ ಕೂಲಿ ಕಾರ್ಮಿಕರಿಂದ ಹಿಡಿದು ಶ್ರೀಮಂತರ ಮಕ್ಕಳು ಇಲ್ಲಿ ಶಿಕ್ಷಣ ಪಡೆದವರಿದ್ದಾರೆ. ಗುಣಮಟ್ಟದ ರಾಷ್ಟ್ರ ನಿರ್ಮಾಣದ ಕಾರ್ಯವಾಗುತ್ತಿದೆ ಎಂದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಿಗೆ ಅಭಿನಂದನೆ, ನಿವೃತ್ತರಿಗೆ ಸನ್ಮಾನ:
ಈ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಗರೀಷ್ಠ ಅಂಕ, ವಿಶಿಷ್ಟ ಶ್ರೇಣಿ ಹಾಗೂ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲಾ ನಿವೃತ್ತ ಶಿಕ್ಷಕರಾದ ದುರ್ಗಾದೇವಿ, ವಿಶ್ವನಾಥ ಹಾಗೂ ಚಾಲಕ ಬೋಜಪ್ಪ ಗೌಡರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ ಸ್ವಾಗತಿಸಿದರು. ಶಿಕ್ಷಕಿಯರಾದ ಲೀಲಾವತಿ ಅಭಿನಂದನಾ ಭಾಷಣ ಮಾಡಿದರು. ಪೂರ್ಣಿಮಾ, ರೇವತಿ, ನಳಿನಿ ವಾಗ್ಲೆ ಸನ್ಮಾನಿತರ ಪರಿಚಯ ಮಾಡಿದರು. ಧನ್ಯ ಅಭಿನಂದಿತ ವಿದ್ಯಾರ್ಥಿಗಳ ಪಟ್ಟಿ ಓದಿದರು. ಚಂದ್ರಶೇಖರ ಸುಳ್ಯಪದವು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸನ್ಮಾನ ಸ್ವೀಕರಿಸಿದ ವಿಶ್ವನಾಥ, ಅಭಿನಂದನೆ ಸ್ವೀಕರಿಸಿದ ವಿದ್ಯಾರ್ಥಿಗಳಾದ ಶಂಹಿತಾ ಶರ್ಮ, ಭೂಮಿಕಾ, ವಿದ್ಯಾರ್ಥಿಗಳ ಪೋಷಕರಾದ ಮಾರ್ಕೋಪೋಲೋ ತೋಟರ, ಶ್ರೀಧರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here