ಕೋವಿಡ್ ಬಳಿಕ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿದ ಸೌಲಭ್ಯ

0

  • ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 25ಬೆಡ್‌ನ ಸುಸಜ್ಜಿತ ಐಸಿಯು
  • ಕಾಮಗಾರಿ ಅಂತಿಮ ಹಂತ

 

ಪುತ್ತೂರು: ಕೋವಿಡ್ ಕಾಣಿಸಿಕೊಳ್ಳುವ ಮೊದಲು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರ್ಣ ಮಟ್ಟದ ಸೌಲಭ್ಯಗಳಿಲ್ಲದಿದ್ದರೂ, ರೋಗ ವ್ಯಾಪಿಸಿಕೊಳ್ಳಲಾರಂಭಿಸಿದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ, ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆ, ಆಮ್ಲಜನಕದ ವ್ಯವಸ್ಥೆ ಕಲ್ಪಿಸಿತ್ತು. ಇದರೊಂದಿಗೆ ಸರಕಾರಿ ಆಸ್ಪತ್ರೆಗಳ ತುರ್ತು ನಿಗಾ ಘಟಕ (ಐಸಿಯು)ಗಳನ್ನು ಮೇಲ್ದರ್ಜೆಗೇರಿಸುವ ರಾಜ್ಯ ಸರಕಾರದ ಯೋಜನೆಯಡಿಯಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸುಸಜ್ಜಿತ ಐಸಿಯು ಘಟಕ ರಚನೆಯಾಗಿದ್ದು, ಘಟಕದ ಕಾಮಗಾರಿ ಅಂತಿಮ ಹಂತದಲ್ಲಿದೆ.

 


ಕೋವಿಡ್ ಕಾಯಿಲೆಯು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಸವಾಲನ್ನು ತಂದೊಡ್ಡಿತ್ತು. ಇದೇ ಅವಧಿಯಲ್ಲಿ ಆಸ್ಪತ್ರೆಗಳಿಗೆ ಅಗತ್ಯ ಮೂಲ ಸೌಕರ್ಯ ಕೂಡ ದೊರೆತಿದೆ. ಕಡಿಮೆ ಸಂಖ್ಯೆಯಲ್ಲಿ ಆಮ್ಲಜನಕ ಸಂಪರ್ಕ ಹೊಂದಿರುವ ಆಸ್ಪತ್ರೆಗಳಿಗೆ ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಗೆ ವ್ಯವಸ್ಥೆಯಾಗಿದೆ. ಈಗಾಗಲೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಮೆಗಾ ಆಕ್ಸಿಜನ್ ಪ್ಲ್ಯಾಂಟ್ ನಿರ್ಮಾಣಗೊಂಡಿದ್ದು, ಇದಕ್ಕೆ ಪೂರಕವಾಗಿ ೨೫ ಬೆಡ್‌ಗಳ ಐಸಿಯು ಘಟಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಮೊದಲು ಇಲ್ಲಿ ಕೇವಲ ೩ ಬೆಡ್‌ಗಳ ತುರ್ತು ನಿಗಾ ವಿಭಾಗ ಕಾರ್ಯನಿರ್ವಹಿಸುತ್ತಿದ್ದು, ಅದನ್ನೀಗ ೨೫ ಬೆಡ್‌ಗಳ ಐಸಿಯು ಘಟಕವಾಗಿ ಮೇಲ್ದರ್ಜೆಗೇರಿಸಲಾಗಿದೆ. ಸರಕಾರಿ ಆಸ್ಪತ್ರೆಯ ನೆಲ ಮಹಡಿಯಲ್ಲೇ ಐಸಿಯು ನಿರ್ಮಾಣಗೊಂಡಿದ್ದು, ಎಲ್ಲಾ ಬಗೆಯ ಸಿವಿಲ್ ಕೆಲಸಗಳನ್ನು ಮುಗಿಸಲಾಗಿದೆ. ೨೫೦ ಕೆ.ವಿ. ಜನರೇಟರ್ ಅಳವಡಿಸಲಾಗಿದ್ದು, ಟ್ರಾನ್ಸ್‌ಫಾರ್ಮರ್ ಕೂಡ ನಿರ್ಮಿಸಲಾಗಿದೆ. ಕ್ಯಾಂಪ್ಕೋ ವತಿಯಿಂದ ನಿರ್ಮಿಸಲಾದ ಮೆಗಾ ಆಕ್ಸಿಜನ್ ಪ್ಲ್ಯಾಂಟ್ ಈಗಾಗಲೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಿಂದಲೇ ಐಸಿಯುಗೆ ಬೇಕಾದ ಆಕ್ಸಿಜನ್ ಪೂರೈಕೆಯಾಗಲಿದೆ. ಇದರೊಂದಿಗೆ ವೆಂಟಿಲೇಟರ್ ಮತ್ತಿತರ ಸಾಮಾಗ್ರಿಗಳನ್ನು ಅಳವಡಿಸಲಾಗುತ್ತದೆ. ೨೫ ಹಾಸಿಗೆಗಳು ಶೀಘ್ರದಲ್ಲೇ ಅಳವಡಿಕೆಯಾಗಲಿದೆ. ಆಸ್ಪತ್ರೆಯ ಆವರಣಕ್ಕೆ ಇಂಟರ್‌ಲಾಕ್ ಅಳವಡಿಸಲಾಗುತ್ತಿದೆ. ಒಟ್ಟಿನಲ್ಲಿ ಸರಕಾರಿ ಆಸ್ಪತ್ರೆ ಈಗ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲವೆಂಬಂತೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.

 

24 ಗಂಟೆಗಳ ಸೇವೆ

ಹೊಸ ಐಸಿಯು ವಿಭಾಗ ಕಾರ್ಯಾರಂಭ ಮಾಡಿದ ಮೇಲೆ 24ಟೆಯೂ ತುರ್ತು ರೋಗಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ. ಏಕಕಾಲದಲ್ಲಿ 25 ರೋಗಿಗಳನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸುವ ಸೌಲಭ್ಯ ಇರಲಿದ್ದು, ಇದಕ್ಕಾಗಿ ೩ ಪಾಳಿಯಲ್ಲಿ ಸಿಬ್ಬಂದಿಗಳ ನೇಮಕ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here