ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಬಿತ್ತೋತ್ಸವ

0

 

ನೆಲ್ಯಾಡಿ: ಪುತ್ತೂರು ಅರಣ್ಯ ಇಲಾಖೆ ಕೊಯಿಲ ಶಾಖೆಯ ಸಹಯೋಗದೊಂದಿಗೆ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ವನಸಿರಿ ಇಕೋ ಕ್ಲಬ್ ಇದರ ನೇತೃತ್ವದಲ್ಲಿ ಜೂ.11ರಂದು ಬಿತ್ತೋತ್ಸವ ಕಾರ್ಯಕ್ರಮ ನಡೆಯಿತು.

 


ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಸಂಗ್ರಹಿಸಿದ ಹಣ್ಣಿನ ಮರಗಳ ಬೀಜಗಳನ್ನು ಕಾಡಿನಲ್ಲಿ ಬಿತ್ತಿದರು. ಪುತ್ತೂರು ವಲಯ ಅರಣ್ಯಾಧಿಕಾರಿ ಸಂಜೀವ ಕೆ.,ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಹಣ್ಣು ಕೊಡುವ ಮರಗಳ ಬೀಜಗಳನ್ನು ಬಿತ್ತುವ ಉದ್ದೇಶ ಮತ್ತು ಅವುಗಳನ್ನು ಪೋಷಿಸುವ ಜವಾಬ್ದಾರಿಯ ಬಗ್ಗೆ ತಿಳಿಸಿದರು. ಪ್ರಾಣಿ ಪಕ್ಷಿಗಳನ್ನು ಬದುಕುವ, ಬದುಕಲು ಬಿಡುವುದು ನಮ್ಮ ಪ್ರಥಮ ಆದ್ಯತೆಯಾಗಬೇಕು. ಇದೇ ಉದ್ದೇಶಕ್ಕಾಗಿ ಹಣ್ಣು ಕೊಡುವ ಮರಗಳನ್ನು ಹೆಚ್ಚು ಬೆಳೆಸುವಂತೆ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಾವತಿಯವರು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಪಣ ತೊಡಬೇಕಾಗಿದೆ ಎಂದು ಹೇಳಿದರು. ಪುತ್ತೂರು ವಲಯ ಅರಣ್ಯ ರಕ್ಷಕರಾದ ಗಿರೀಶ್, ಮಹಮ್ಮದ್ ಹನೀಫ್‌ರವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸಂಗ್ರಹಿಸಿದ ಹಣ್ಣಿನ ಬೀಜಗಳ ಆಧಾರದಲ್ಲಿ 9ನೇ ತರಗತಿಯ ಚರಣ್ ಪ್ರಥಮ, ದೀಕ್ಷಿತ್ ದ್ವಿತೀಯ ಹಾಗೂ ೮ನೇ ತರಗತಿಯ ಮಾನ್ಯ ತೃತೀಯ ಎಂದು ಘೋಷಿಸಲಾಯಿತು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ., ಆಂಗ್ಲಭಾಷಾ ಅಧ್ಯಾಪಕ ವಸಂತ ಕುಮಾರ್, ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ, ಅತಿಥಿ ಶಿಕ್ಷಕಿಯರಾದ ಶ್ವೇತ, ಆರತಿ ಸಹಕರಿಸಿದರು. ವನಸಿರಿ ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕ ಮನೋಹರ್ ಎಂ.,ಕಾರ್ಯಕ್ರಮ ನಿರೂಪಿಸಿದರು. ಗಣಿತ ಅಧ್ಯಾಪಕ ಹರಿಕಿರಣ್ ಕೆ.,ವಂದಿಸಿದರು.

(ಫೋಠೋ ಇದೆ-ಹಿರೇಬಂಡಾಡಿ ೧, ಹಿರೇಬಂಡಾಡಿ ೨)
===========================================================
ಅಂಡೆತ್ತಡ್ಕ: ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನೆ
ಉಪ್ಪಿನಂಗಡಿ: ವಿಂಶತಿ ವರ್ಷದ ಸಡಗರದಲ್ಲಿರುವ ಯಕ್ಷನಂದನ ಕಲಾ ಸಂಘ, ಗೋಕುಲನಗರ ಇದರ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಅಂಡೆತ್ತಡ್ಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ನಾಟ್ಯ ತರಬೇತಿಯನ್ನು ಉದ್ಘಾಟಿಸಿದ ಯಕ್ಷಗಾನ ಭಾಗವತ ಪದ್ಮನಾಭ ಕುಲಾಲ್ ಇಳಂತಿಲ ಮಾತನಾಡಿ, ವಿದ್ಯಾರ್ಥಿಗಳು ನಾಟ್ಯ ಗುರುಗಳ ಮಾರ್ಗದರ್ಶನದಂತೆ ಶ್ರದ್ಧೆಯಿಂದ ನಿರಂತರವಾಗಿ ಅಭ್ಯಾಸದಲ್ಲಿ ತೊಡಗುವಂತೆ ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡುವಂತೆ ತಿಳಿಸಿದರು. ಯಕ್ಷನಂದನ ಕಲಾಸಂಘದ ಅಧ್ಯಕ್ಷ ಗಣರಾಜ ಕುಂಬ್ಳೆಯವರು ದಿಕ್ಸೂಚಿ ನುಡಿಗಳನ್ನಾಡಿ, ಪೋಷಕರು ಸಂಘದ ಯಕ್ಷಗಾನಕ್ಕೆ ಪೂರಕವಾದ ಕಾರ್ಯಕ್ರಮಗಳಿಗೆ ಸಹಕರಿಸುವಂತೆ ವಿನಂತಿಸಿದರು. ಮುಖ್ಯ ಶಿಕ್ಷಕ ಕೃಷ್ಣಪ್ಪ ಪೂಜಾರಿಯವರು ಮಾತನಾಡಿ, ಯಕ್ಷಗಾನ ನಾಟ್ಯ ತರಬೇತಿಯ ಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ತಿಳಿಸಿದರು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸತೀಶ ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ನಾಟ್ಯ ಗುರು ಲಕ್ಷ್ಮಣ ಆಚಾರ್ಯ ಎಡಮಂಗಲ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಯಕ್ಷಗಾನ ಕಲಾಸಕ್ತ ಬಾಬುಗೌಡ, ಯಕ್ಷನಂದನ ಕಲಾ ಸಂಘದ ನಾಟ್ಯ ತರಬೇತಿಯ ಸಂಚಾಲಕ ಭಾಸ್ಕರ ಬಟ್ಟೋಡಿ ಹಾಗೂ ಸಹ ತರಬೇತುದಾರ ಶ್ರುತಿ ವಿಸ್ಮಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ರಾಘು ಕಾರ್ಯಕ್ರಮ ನಿರೂಪಿಸಿದರು. ಯಕ್ಷನಂದನ ಕಲಾ ಸಂಘದ ಕಾರ್ಯದರ್ಶಿ ಹರಿಕಿರಣ ಕೊಯಿಲ ಸ್ವಾಗತಿಸಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಕೆಮ್ಮಾರ ವಂದಿಸಿದರು.

LEAVE A REPLY

Please enter your comment!
Please enter your name here