ಉಪ್ಪಿನಂಗಡಿ: ವಿಂಶತಿ ವರ್ಷದ ಸಡಗರದಲ್ಲಿರುವ ಯಕ್ಷನಂದನ ಕಲಾ ಸಂಘ, ಗೋಕುಲನಗರ ಇದರ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಅಂಡೆತ್ತಡ್ಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ನಾಟ್ಯ ತರಬೇತಿಯನ್ನು ಉದ್ಘಾಟಿಸಿದ ಯಕ್ಷಗಾನ ಭಾಗವತ ಪದ್ಮನಾಭ ಕುಲಾಲ್ ಇಳಂತಿಲ ಮಾತನಾಡಿ, ವಿದ್ಯಾರ್ಥಿಗಳು ನಾಟ್ಯ ಗುರುಗಳ ಮಾರ್ಗದರ್ಶನದಂತೆ ಶ್ರದ್ಧೆಯಿಂದ ನಿರಂತರವಾಗಿ ಅಭ್ಯಾಸದಲ್ಲಿ ತೊಡಗುವಂತೆ ಹಾಗೂ ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡುವಂತೆ ತಿಳಿಸಿದರು. ಯಕ್ಷನಂದನ ಕಲಾಸಂಘದ ಅಧ್ಯಕ್ಷ ಗಣರಾಜ ಕುಂಬ್ಳೆಯವರು ದಿಕ್ಸೂಚಿ ನುಡಿಗಳನ್ನಾಡಿ, ಪೋಷಕರು ಸಂಘದ ಯಕ್ಷಗಾನಕ್ಕೆ ಪೂರಕವಾದ ಕಾರ್ಯಕ್ರಮಗಳಿಗೆ ಸಹಕರಿಸುವಂತೆ ವಿನಂತಿಸಿದರು. ಮುಖ್ಯ ಶಿಕ್ಷಕ ಕೃಷ್ಣಪ್ಪ ಪೂಜಾರಿಯವರು ಮಾತನಾಡಿ, ಯಕ್ಷಗಾನ ನಾಟ್ಯ ತರಬೇತಿಯ ಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ತಿಳಿಸಿದರು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸತೀಶ ಎಸ್. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ನಾಟ್ಯ ಗುರು ಲಕ್ಷ್ಮಣ ಆಚಾರ್ಯ ಎಡಮಂಗಲ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಯಕ್ಷಗಾನ ಕಲಾಸಕ್ತ ಬಾಬುಗೌಡ, ಯಕ್ಷನಂದನ ಕಲಾ ಸಂಘದ ನಾಟ್ಯ ತರಬೇತಿಯ ಸಂಚಾಲಕ ಭಾಸ್ಕರ ಬಟ್ಟೋಡಿ ಹಾಗೂ ಸಹ ತರಬೇತುದಾರ ಶ್ರುತಿ ವಿಸ್ಮಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ರಾಘು ಕಾರ್ಯಕ್ರಮ ನಿರೂಪಿಸಿದರು. ಯಕ್ಷನಂದನ ಕಲಾ ಸಂಘದ ಕಾರ್ಯದರ್ಶಿ ಹರಿಕಿರಣ ಕೊಯಿಲ ಸ್ವಾಗತಿಸಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಕೆಮ್ಮಾರ ವಂದಿಸಿದರು.