ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳ ಪರದಾಟ- ರೆಂಜಲಾಡಿ, ಕಲ್ಪಣೆ, ಸೊರಕೆ ಪರಿಸರಕ್ಕೆ ಬೇಕಿದೆ ಬಸ್ ಸೌಕರ್ಯ

0

@ಯೂಸುಫ್ ರೆಂಜಲಾಡಿ

 

ಪುತ್ತೂರು: ಬಸ್ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಿತ್ಯ ಸಂಕಷ್ಟಪಡುತ್ತಿರುವ ಸನ್ನಿವೇಶ ಸರ್ವೆ ಗ್ರಾಮದ ಸೊರಕೆ, ರೆಂಜಲಾಡಿ, ಕಲ್ಪಣೆ ಪರಿಸರದಲ್ಲಿ ಕಂಡು ಬಂದಿದ್ದು ಆ ಭಾಗಕ್ಕೆ ಬಸ್ ಸೌಕರ್ಯ ಒದಗಿಸಿಕೊಡಿ ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

 


ಈ ಭಾಗಕ್ಕೆ ಬಸ್ ಸೌಕರ್ಯ ಇಲ್ಲದ ಪರಿಣಾಮ ಮುಖ್ಯವಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳಿಗ್ಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಬಸ್ಸಿಗಾಗಿ ದೂರದ ಸರ್ವೆ, ಭಕ್ತಕೋಡಿ, ಕೂಡುರಸ್ತೆ ಮೊದಲಾದ ಕಡೆಗಳಿಗೆ ನಡೆದುಕೊಂಡೇ ಹೋಗುತ್ತಿದ್ದಾರೆ. ಆಟೋ ರಿಕ್ಷಾ ಸರ್ವೀಸ್ ಕೂಡಾ ಈ ಭಾಗದಲ್ಲಿ ಇಲ್ಲದ ಕಾರಣದಿಂದ ವಿದ್ಯಾರ್ಥಿಗಳು ಇನ್ನಷ್ಟು ಸಂಕಷ್ಟ ಎದುರಿಸುವಂತಾಗಿದೆ. ಶಾಲಾ ಕಾಲೇಜು ಬಿಟ್ಟು ಸಂಜೆ ವೇಳೆ ಮನೆ ಕಡೆಗೆ ಬರಲು ಇದೇ ಸಮಸ್ಯೆ ಇಲ್ಲಿನ ವಿದ್ಯಾರ್ಥಿಗಳನ್ನು ಕಾಡುತ್ತಿದ್ದು ನಮಗೆ ಬಸ್ ಸೌಕರ್ಯ ಮಾಡಿಕೊಡಿ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈ ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಂಬ ಆಗ್ರಹ ಅನೇಕ ವರ್ಷಗಳಿಂದ ಕೇಳಿ ಬರುತ್ತಿದ್ದರೂ ಕೂಡಾ ಅದು ಇನ್ನೂ ಈಡೇರಿಲ್ಲ.

ವಿದ್ಯಾರ್ಥಿಗಳ ಪರದಾಟ:
ಕಲ್ಪನೆ, ನೆಕ್ಕಿಲು, ರೆಂಜಲಾಡಿ, ಮೇಗಿನಗುತ್ತು, ಸೊರಕೆ ಪರಿಸರದಿಂದ ಹಲವಾರು ವಿದ್ಯಾರ್ಥಿಗಳು ಪುತ್ತೂರು ಸೇರಿದಂತೆ ವಿವಿಧ ಕಡೆಗಳಲ್ಲಿರುವ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದು ಬೆಳಗ್ಗಿನ ಹೊತ್ತು ಬಸ್ ಸೌಕರ್ಯ ಇಲ್ಲದ ಕಾರಣಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಆಟೋ ರಿಕ್ಷಾ ಸರ್ವೀಸ್ ಕೂಡಾ ನಿಂತು ಹೋದ ಕಾರಣ ವಿದ್ಯಾರ್ಥಿಗಳು ಬಸ್ಸಿಗಾಗಿ ದೂರದ ಪ್ರದೇಶಗಳಿಗೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿಯಿದೆ. ಈ ರೀತಿಯ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ತರಗತಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದೇ ಪರಿತಪಿಸುವ ಸನ್ನಿವೇಶವೂ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಈ ಭಾಗಕ್ಕೆ ಬಸ್ ಸೌಕರ್ಯ ಆಗಲೇಬೇಕು ಎನ್ನುವುದು ಈ ಭಾಗದ ಜನರ ಒಕ್ಕೊರಳ ಆಗ್ರಹವಾಗಿದೆ.

ಗ್ರಾ.ಪಂ ಸಭೆಯಲ್ಲೂ ಆಗ್ರಹ:
ಈ ಭಾಗಕ್ಕೆ ಬಸ್ ಬೇಕೆಂಬ ಆಗ್ರಹ ಮುಂಡೂರು ಗ್ರಾಮ ಸಭೆ ಮತ್ತು ಸಾಮಾನ್ಯ ಸಭೆಯಲ್ಲೂ ಆಗ್ರಹ ವ್ಯಕ್ತವಾಗಿತ್ತು. ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಕೆಎಸ್‌ಆರ್‌ಟಿಸಿ ಡಿ.ಸಿಯವರಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು.

ಗ್ರಾಮದ ಪ್ರೌಢಶಾಲೆಯ ದಾಖಲಾತಿಗೂ ಕುತ್ತು…!
ಸರ್ವೆ ಗ್ರಾಮದ ಕಲ್ಪಣೆ ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಸಂಖ್ಯೆಯಲ್ಲೂ ಇಳಿಮುಖವಾಗುತ್ತಿದ್ದು ಈ ಪ್ರದೇಶಕ್ಕೆ ಬಸ್ ಸೌಕರ್ಯ ಇಲ್ಲದೇ ಇರುವುದೇ ಪ್ರಮುಖ ಕಾರಣ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಾರಿ ಎಂಟನೇ ತರಗತಿಗೆ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಿದ್ದು ಸಮೀಪದ ಪ್ರದೇಶದ ವಿದ್ಯಾರ್ಥಿಗಳು ಬಸ್ ಸೌಕರ್ಯ ಇಲ್ಲದ ಕಾರಣಕ್ಕೆ ಬೇರೆ ಕಡೆಗಳಲ್ಲಿರುವ ಶಾಲೆಗಳಿಗೆ ತೇರ್ಗಡೆ ಹೊಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಪರೂಪಕ್ಕೊಂದು ಬಸ್ ಬರುತ್ತಿದೆ:
ಪುತ್ತೂರಿನಿಂದ ಭಕ್ತಕೋಡಿ-ರೆಂಜಲಾಡಿ ಮಾರ್ಗವಾಗಿ ಆಗೊಮ್ಮೆ, ಈಗೊಮ್ಮೆ ಬಸ್‌ವೊಂದು ಬರುತ್ತಿದ್ದು ಬೆಳಿಗ್ಗೆ ಗಂಟೆ ೭.೩೦ಕ್ಕೆ ಸರಿಯಾಗಿ ಈ ಭಾಗದಲ್ಲಿ ಸಂಚರಿಸುತ್ತದೆ. ಈ ಬಸ್‌ನಿಂದಾಗಿ ವಿದ್ಯಾರ್ಥಿಗಳಿಗಾಗಲೀ, ಸಾರ್ವಜನಿಕರಿಗಾಗಲೀ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಅಪರೂಪಕ್ಕೊಮ್ಮೆ ಬರುವ ಇದೇ ಬಸ್ ಬೆಳಿಗ್ಗೆ ೮.೩೦-೯-೦೦ ಗಂಟೆಯ ಮಧ್ಯೆ ಪ್ರತಿ ದಿನ ಇದೇ ರೂಟ್‌ನಲ್ಲಿ ಬಂದರೆ ಬಹಳಷ್ಟು ಉಪಯುಕ್ತವಾಗಲಿದೆ.

ಶಾಸಕರ ಮೇಲೆ ಭರವಸೆ:
ಈ ಹಿಂದೆ ಈ ಭಾಗಕ್ಕೆ ಬಸ್ ಸೌಕರ್ಯ ಒದಗಿಸುವ ವಿಚಾರದಲ್ಲಿ ಕೆಎಸ್‌ಆರ್‌ಟಿಸಿ ಡಿಪೋಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಶಾಸಕರು ಮನಸ್ಸು ಮಾಡಿದರೆ ಈ ಪ್ರದೇಶಕ್ಕೆ ದಿನದಲ್ಲಿ ಕನಿಷ್ಠ ಎರಡು ಬಾರಿಯಾದರೂ ಬಸ್ ಬರುವಂತೆ ಮಾಡಬಹುದು ಎನ್ನುವುದು ಗ್ರಾಮಸ್ಥರ ಅಭಿಪ್ರಾಯವಾಗಿದ್ದು ಶಾಸಕರು ಮುತುವರ್ಜಿ ವಹಿಸಿ ಈ ಭಾಗದ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುತ್ತಾರೆ ಎನ್ನುವ ಭರವಸೆ ವಿದ್ಯಾರ್ಥಿಗಳದ್ದು ಮತ್ತು ಗ್ರಾಮಸ್ಥರದ್ದಾಗಿದೆ.

ಅನೇಕ ವರ್ಷಗಳ ಬೇಡಿಕೆ-ಕರುಣಾಕರ ಗೌಡ

 


ಸರ್ವೆ ಗ್ರಾಮ ವ್ಯಾಪ್ತಿಯಲ್ಲಿ ಬಸ್ ಸೌಕರ್ಯ ಇಲ್ಲದೇ ವಿದ್ಯಾರ್ಥಿಗಳು, ಜನ ಸಾಮಾನ್ಯರು ಅನೇಕ ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಹಿಂದೆ ಸಂಬಂಧಪಟ್ಟವರೊಂದಿಗೆ ಮಾತನಾಡಿದ್ದರು ಕೂಡಾ ಫಲಪ್ರದವಾಗಿಲ್ಲ. ಬೆಳಿಗ್ಗೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುವ ಸಂದರ್ಭದಲ್ಲಿ ಈ ಭಾಗಕ್ಕೆ ಬಸ್ ಬರಬೇಕಾದ ಅವಶ್ಯಕತೆಯಿದ್ದು ಪುತ್ತೂರಿನಿಂದ ಮುಂಡೂರು-ಕೂಡುರಸ್ತೆ-ರೆಂಜಲಾಡಿ-ಭಕ್ತಕೋಡಿ-ಸರ್ವೆ ಸೊರಕೆ ಮಾರ್ಗವಾಗಿ ವಾಪಸ್ ಮುಂಡೂರು ಮಾರ್ಗವಾಗಿ ಪುತ್ತೂರಿಗೆ ಬಸ್ ಸೌಕರ್ಯ ಆಗಬೇಕು. ಸಂಜೆ ವೇಳೆಯೂ ಪುತ್ತೂರಿನಿಂದ ಕಲ್ಪಣೆ, ರೆಂಜಲಾಡಿ, ಸೊರಕೆ ಭಾಗಕ್ಕೆ ಬಸ್ ಸೌಲಭ್ಯ ಆಗಬೇಕಾಗಿದೆ. ಸಾರ್ವಜನಕರೂ ಬಸ್ ಸೌಕರ್ಯವಿಲ್ಲದ ಕಾರಣ ತೊಂದೆರೆಯನುಭವಿಸುತ್ತಿದ್ದು ಗ್ರಾ.ಪಂ, ಗ್ರಾಮ ಕರಣಿಕರ ಕಚೇರಿ, ಪ್ರಾ.ಕೃ.ಪ.ಸಹಕಾರಿ ಸಂಘ ಇವೆಲ್ಲವೂ ಮುಂಡೂರಿನಲ್ಲಿದ್ದು ತಮ್ಮ ಅವಶ್ಯಕತೆಗಳಿಗೆ ಅಲ್ಲಿಗೆ ಹೋಗಬೇಕಾದರೂ ಸರ್ವೆ ಭಾಗದ ಜನರು ದುಬಾರಿ ಖರ್ಚು ಮಾಡಿ ವಾಹನಗಳಲ್ಲಿ ಹೋಗಬೇಕಾಗುತ್ತದೆ. ಇದೆಲ್ಲವೂ ಬಹಳ ಸಮಸ್ಯೆಯಾಗುತ್ತಿದೆ. ಕರುಣಾಕರ ಗೌಡ ಎಲಿಯ, ಸದಸ್ಯರು ಗ್ರಾ.ಪಂ ಮುಂಡೂರು

ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ-ಹನೀಫ್ ರೆಂಜಲಾಡಿ

 


ಗ್ರಾಮಾಂತರ ಪ್ರದೇಶವಾಗಿರುವ ರೆಂಜಲಾಡಿ, ಕಲ್ಪಣೆ ಭಾಗಕ್ಕೆ ಬಸ್ ಸೌಕರ್ಯ ಇಲ್ಲದೇ ಇರುವುದರಿಂದ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದು ಮುಖ್ಯವಾಗಿ ವಿದ್ಯಾರ್ಥಿಗಳು ಬಹಳ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಎರಡೂವರೆ, ಮೂರು ಕಿ.ಮೀ ನಡೆದು ಬಳಿಕ ಬಸ್ ಮೂಲಕ ಪ್ರಯಾಣಿಸಬೇಕಾದ ಪರಿಸ್ಥಿತಿಯಿದ್ದು ಇದರಿಂದಾಗಿ ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ವಿದ್ಯಾರ್ಥಿನಿಯರಂತೂ ಈ ರೀತಿ ನಡೆದುಕೊಂಡು ಹೋಗಲು ಸಾಧ್ಯವಾಗದೇ ತೊಂದರೆ ಎದುರಿಸುತ್ತಿದ್ದಾರೆ. ಈ ಪ್ರದೇಶಕ್ಕೆ ಬಸ್ ಸೌಕರ್ಯ ಬೇಕೆಂಬ ಕೂಗು ಅನೇಕ ವರ್ಷಗಳಿಂದ ಇದ್ದರೂ ಕೂಡಾ ಇನ್ನೂ ಆ ಬೇಡಿಕೆ ಈಡೇರಿಲ್ಲ. ಇನ್ನಾದರೂ ಈ ಭಾಗದ ವಿದ್ಯಾರ್ಥಿಗಳ, ಸಾರ್ವಜನಿಕರ ಸಮಸ್ಯೆ ಅರ್ಥ ಮಾಡಿಕೊಂಡು ಸಂಬಂಧಪಟ್ಟವರು ಬಸ್ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಿದೆ.ಕೆ.ಎಂ ಹನೀಫ್ ರೆಂಜಲಾಡಿ, ಪೋಷಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಸ.ಹಿ.ಪ್ರಾ.ಶಾಲೆ ಕಲ್ಪಣೆ, ಸರ್ವೆ

ನಮ್ಮೂರಿಗೆ ಬಸ್ ಬರಲಿ-ಪ್ರಜ್ವಲ್ (ವಿದ್ಯಾರ್ಥಿ)
ನಮ್ಮ ಊರಿಗೆ ಬಸ್ ಸೌಕರ್ಯ ಇಲ್ಲದ ಕಾರಣಕ್ಕೆ ನಮಗೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪಲು ಕಷ್ಟ ಆಗುತ್ತಿದೆ. ಬೆಳಗ್ಗೆ ಭಕ್ತಕೋಡಿವರೆಗೆ ಸುಮಾರು ಎರಡೂವರೆ ಕಿ.ಮೀ ನಡೆದುಕೊಂಡು ಹೋಗಿ ಈ ಭಾಗದ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಿದ್ದು ಸಂಜೆ ವೇಳೆಯೂ ಮತ್ತೆ ನಡೆದುಕೊಂಡೇ ಮನೆ ಸೇರಬೇಕಾಗಿದೆ. ಇದು ಬಹಳ ತ್ರಾಸದಾಯಕವಾಗಿದ್ದು ದಿನ ನಿತ್ಯ ಸಂಕಷ್ಟಪಡಬೇಕಾಗಿದೆ. ವಿದ್ಯಾರ್ಥಿಗಳಾದ ನಮ್ಮ ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸಂಬಂಧಪಟ್ಟವರು ಶೀಘ್ರದಲ್ಲೇ ನಮ್ಮೂರಿಗೆ ಬಸ್ ಸೌಕರ್ಯ ಒದಗಿಸಿಕೊಡಬೇಕಾಗಿ ಕಳಕಳಿಯ ಮನವಿ. ಪ್ರಜ್ವಲ್ ರೆಂಜಲಾಡಿ, ವಿದ್ಯಾರ್ಥಿ ಜಿಡೆಕಲ್ಲು ಪ್ರಥಮ ದರ್ಜೆ ಕಾಲೇಜು

LEAVE A REPLY

Please enter your comment!
Please enter your name here