ಭ್ರಷ್ಟಾಚಾರದ ವಿರುದ್ಧ ಸುದ್ದಿ ಪತ್ರಿಕೆಯ ಜನಾಂದೋಲನ

0

ಲಂಚ ಭ್ರಷ್ಟಾಚಾರದ ವಿರುದ್ಧದ ಸುದ್ದಿ ಬಿಡುಗಡೆ ಪ್ರವರ್ತಿತ ಜನಾಂದೋಲನವು ಇದೀಗ ದೇಶದ ರಾಜಧಾನಿಗೂ ಲಗ್ಗೆ ಇರಿಸಿದ ಸುದ್ದಿ ವರದಿಯಾಗಿದೆ. ಪತ್ರಿಕೆಯ ಸಂಪಾದಕರಾದ ಡಾ.ಯು.ಪಿ.ಶಿವಾನಂದರ ನೇತೃತ್ವದಲ್ಲಿ ಇಂತಹದ್ದೊಂದು ಚಾರಿತ್ರಿಕ ಹೋರಾಟ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ರೂಪುಗೊಂಡದ್ದು ಸುಳ್ಯಕ್ಕೆ ಮಾತ್ರವಲ್ಲ ರಾಜ್ಯಕ್ಕೇ ಹೆಮ್ಮೆ ತರುವಂತಹದ್ದು. ಸಣ್ಣದೊಂದು ಕಿಡಿಯು ಬಹುಬೇಗನೇ ಶಾಲಾಮಕ್ಕಳಿಂದ ತೊಡಗಿ, ಮಹಿಳೆಯರು, ಪುರುಷರು, ಅಧಿಕಾರಿಗಳು, ಆಡಳಿತಗಾರರನ್ನೂ ಆವರಿಸಿಕೊಂಡು, ಜಾತಿ, ಭಾಷೆ, ಮತಗಳ ಎಲ್ಲೆಮೀರಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಯು ಕೇವಲ ರಾಷ್ಟ್ರವೊಂದರ ಸಮಸ್ಯೆಯಾಗಿರದೆ ಅಂತರಾಷ್ಟ್ರೀಯ ಕಾರ್‍ಯಸೂಚಿಯಾಗಿದ್ದು , ವಿಶ್ವಸಂಸ್ಥೆಯು ಕೂಡಾ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಒಂದಷ್ಟು ವಿವರಗಳನ್ನು ಈ ಪುಟ್ಟ ಲೇಖನದಲ್ಲಿ ದಾಖಲಿಸಲಾಗಿದೆ.

ಎ.ಕೆ.ಹಿಮಕರ, ಗುತ್ತಿಗಾರು
ಮಾಜಿ ಅಧ್ಯಕ್ಷ ಕ.ಸಾ.ಪ. ಸುಳ್ಯ

ಸುದ್ದಿ ಬಿಡುಗಡೆಯು ಆರಂಭಿಸಿರುವ ಪ್ರಸ್ತುತ ಆಂದೋಲನದ ಮಹತ್ವ ಏನೆಂದು ವಿಶ್ವಸಂಸ್ಥೆಯ ಮಾಜಿ ಮಹಾಕಾರ್ಯದರ್ಶಿ ಹೇಳಿರುವ ಈ ಮೇಲಿನ ಮಾತುಗಳೇ ಸಾಕ್ಷಿ. ಕರ್ನಾಟಕದೊಳಗೆ ಚಾರಿತ್ರಿಕ ಮಹತ್ವವಿರುವ ಇಂತಹದ್ದೊಂದು ಆಂದೋಲನ ಶುರುವಾದ ವಿಶೇಷ. ಲಂಚ-ಭ್ರಷ್ಟಾಚಾರದ ನೇರ ಫಲಾನುಭವಿಗಳು ಅಧಿಕಾರಿಗಳಿರಲಿ, ಆಡಳಿತಗಾರರಾಗಿರಲಿ ತಾ ಮುಂದು ತಾ ಮುಂದು ಎಂಬಂತೆ ಘೋಷಣೆಯ ಫಲಕ ಹಿಡಿದು ಛಾಯಾಚಿತ್ರ ತೆಗೆಸಿಕೊಳ್ಳುತ್ತಿರುವುದೂ ನಾಚಿಕೆ ಹಾಗೂ ಮುಜುಗರದ ಭಯದಿಂದ. ಅಷ್ಟರಮಟ್ಟಿಗೆ ಜನಾಂದೋಲನವು ಪರಿಣಾಮ ಬೀರಿರುವುದಂತೂ ಸತ್ಯ. ಅದೂ ೪೦% ಕಮಿಶನ್ ಕೂಗು ಕರ್ನಾಟಕ ಸರಕಾರದ ಹಣೆಗೆ ಅಪ್ಪಳಿಸುತ್ತಿರುವ ಈ ದಿನಗಳಲ್ಲಿ ಸದ್ರಿ ಆಂದೋಲನದಿಂದ ಹೊರಗುಳಿಯಲು ಯಾವುದೇ ಆಡಳಿತಗಾರನಿಗೂ ಅಸಾಧ್ಯ. ಈ ಆಂದೋಲನವು ಜನತೆಯ ಪರವಾಗಿಯೂ ಮಾನವೀಯತೆಯ ಪರವಾಗಿಯೂ ಇದೆ. ಅದೇ ಇದರ ಗಟ್ಟಿತನ. ನಮ್ಮೂರಲ್ಲಿ ಯಾರು ಲಂಚ ತೆಗೆದುಕೊಳ್ಳುವವರು ಎಂಬುದು ಆಯಾಯ ಪ್ರದೇಶದ ಜನರಿಗೇ ತಿಳಿದಿದೆ. ಅಂತಹ ಅಧಿಕಾರಿ/ಆಡಳಿತಗಾರರೇ ಲಂಚ- ಭ್ರಷ್ಟಾಚಾರದ ವಿರುದ್ಧದ ಘೋಷಣಾ ಫಲಕ ಹಿಡಿದು ನಿಂತಿರುವುದನ್ನು ಪತ್ರಿಕೆಯಲ್ಲಿ ನೋಡುವುದೇ ನಗೆತರಿಸುವಂತಹದ್ದು. ಹಾಗಾಗಿ ರಾಜಾರೋಷವಾಗಿ ನಡೆಯುತ್ತಾ ಬಂದಿರುವ ಲಂಚ ಕೇಳುವ ರೋಷಾವೇಶದ ಧ್ವನಿ ಕುಗ್ಗಿರುವುದಂತೂ ನಿಜ. ಆ ಮೇಲೆ ಇದೊಂದು ಗೌರವದ ವಿಷಯವಲ್ಲ ಎಂಬುದು ಪ್ರಾಥಮಿಕ ಶಾಲೆಗೆ ಹೋಗುತ್ತಿರುವ ಮಗುವಿನ ಮನಸ್ಸಲ್ಲೂ ಅಚ್ಚು ಮೂಡಿಸಿರುವುದಂತೂ ಸತ್ಯ.

ನೇರ ನಡೆನುಡಿಯ, ಲಂಚ-ಭ್ರಷ್ಟಾಚಾರದ ಕಳಂಕ ರಹಿತ ಅಧಿಕಾರಿ, ಕಾನೂನಿಗೆ ತಕ್ಕಂತೆ, ಮಾನವೀಯತೆಯ ಗುಣ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಖಡಕ್ ಅಧಿಕಾರಿಯನ್ನು ಯಾವ ಆಡಳಿತಗಾರ ರಾಜಕಾರಣಿಯೂ ಸಹಿಸುವುದಿಲ್ಲ. ನಮ್ಮೆಲ್ಲಾ ಜನಪ್ರಿಯ ಸಿನೆಮಾಗಳನ್ನೊಮ್ಮೆ ಅವಲೋಕಿಸಿದರೂ ಇದೇ ಪ್ರಧಾನ ವಸ್ತು. ಅಂತಹ ಅಧಿಕಾರಿಗಳು ಸದಾ ಕಿರುಕುಳ, ಅವಮಾನ, ವರ್ಗಾವಣೆ, ಪದೋನ್ನತಿ ರಹಿತವಾಗಿ ಇರಬೇಕು ಇಲ್ಲವಾದಲ್ಲಿ ಸ್ವಯಂ ನಿವೃತ್ತಿ ಘೋಷಿಸಿಕೊಳ್ಳಬೇಕು. ಇಂತಹ ವಿಷಮ ಪರಿಸ್ಥಿತಿ ಒಂದೆಡೆಯಾದರೆ, ಭ್ರಷ್ಟರೊಂದಿಗೆ ಹೊಂದಿಬಾಳುವ ಅಧಿಕಾರಿಗಳು ಸದಾ ಸುಖಿಗಳಂತಿರುತ್ತಾರೆ. ಇದನ್ನು ಜನಸಾಮಾನ್ಯರೂ ಸಹಜವೆಂಬಂತೆ ಸ್ವೀಕರಿಸಿ ಆಗಿದೆ. ಯಾವುದೇ ಕೆಟ್ಟ ಮಾರ್ಗದಿಂದಾಗಿಯಾದರೂ `ದುಡ್ಡು’ಮಾಡಿದವನನ್ನೇ ಯಶಸ್ವೀ ವ್ಯಕ್ತಿ ಎಂಬುದಾಗಿ ಮಾನ್ಯ ಮಾಡುವ ಪರಿಸ್ಥಿತಿ ಬದಲಾಗಬೇಕು. ನ್ಯಾಯಯುತವಾದ ಸಂಪಾದನೆ, ಸತ್ಯ ಧರ್ಮದಲ್ಲಿ ಜೀವಿಸುವಾತನೇ ನಿಜವಾದ ಪ್ರಜೆ ಎನಿಸುವಂತಿರಬೇಕು. `ಸುದ್ದಿ’ ಜನಾಂದೋಲನವು ಇಂತಹ ಭಿನ್ನತೆಗಳನ್ನು ಎತ್ತಿ ತೋರಿಸುವಲ್ಲಿ ಖಂಡಿತಾ ಯಶಸ್ವಿಯಾಗಿದೆ. ಅಂದರೆ ನಮ್ಮ ಸಮಾಜವು ಭ್ರಷ್ಟಾಚಾರ ಮತ್ತು ಭ್ರಷ್ಟವಲ್ಲದ ಆಚಾರಗಳ ನಡುವಿನ ಭಿನ್ನತೆಯನ್ನು ಮರೆತು ಬದುಕುವ ಸಾಮಾಜಿಕ, ಸಾಂಸ್ಕೃತಿಕ ವಾತಾವರಣದಲ್ಲಿ ಬದುಕುತ್ತಾ ಬಂದಾಗಿದೆ. ಆದರೆ ಪ್ರಸಿದ್ಧ ಸಮಾಜ ವಿಜ್ಞಾನಿ ಡಾ.ರಾಮಮನೋಹರ ಲೋಹಿಯಾ ಹೇಳಿದಂತೆ `ಜೀವಂತ ಜನತೆ ಎಂದೂ ಸುಮ್ಮನಿರುವುದಿಲ್ಲ’…..!

ಲಂಚ-ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ಅತ್ಯುತ್ತಮ ಆಯಾಮವೆಂದರೆ, ಬಹುಷಃ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಭಾಗವಹಿಸುವಂತೆ ಮಾಡಿ ಅವರನ್ನು ಒಳಗೊಳಿಸಿದ ವಿಧಾನ. ಈ ಮಕ್ಕಳೇ ಮುಂದಿನ ಅಧಿಕಾರಿಗಳು, ಆಡಳಿತಗಾರರು ಮತ್ತು ಪ್ರಜ್ಞಾವಂತ ಪ್ರಜೆಗಳು. ಮಕ್ಕಳ ಮನಸ್ಸು ಹೂವಿನಂತೆ, ಮೃದುವಾಗಿ ಮತ್ತು ಕೋಮಲವಾಗಿರುತ್ತದೆ. ಮಾತ್ರವಲ್ಲದೇ ಶುಭ್ರವಾದ ಬಿಳಿ ಹಾಳೆಯಂತಿರುತ್ತದೆ. ನಮ್ಮ ಸಮಾಜವು ಒದಗಿಸುವ ಎಲ್ಲಾ ವಸ್ತು ವಿಚಾರಗಳು , ಅವರ ಮೇಲೆ ತೀವ್ರವಾದ ಪ್ರಭಾವ, ಪರಿಣಾಮಗಳನ್ನುಂಟು ಮಾಡುತ್ತದೆ. ಹಾಗಾಗಿ ಸೂಕ್ತವಾದ ವಿಚಾರಗಳನ್ನು ನೀಡಿದರೆ ಅದರ ಪರಿಣಾಮವೂ ನಿರೀಕ್ಷಿತ ಫಲಿತಾಂಶವನ್ನು ನೀಡಬಹುದು. ಹಾಗಾಗಿ ಹಾಲಿ ಜನಾಂದೋಲನವು ಶಾಲಾ ಕಾಲೇಜುಗಳ ಆವರಣದೊಳಗೆ ವ್ಯಾಪಿಸಿರುವುದೇ ಅದರ ಯಶಸ್ಸಿನ ಸೋಪಾನವಾಗಲಿದೆ.

 

ಮನೋಭಾವ ಬೆಳೆಸಬೇಕು

ಲಂಚ-ಭ್ರಷ್ಟಚಾರ ನಿರ್ಮೂಲನೆಗೆ ಕೇವಲ ಕಾನೂನು ಮಾಡಿದರೆ ಸಾಲದು. ಇದೊಂದು ಮನಃಸ್ಥಿತಿ/ಪ್ರವೃತ್ತಿ ವ್ಯಕ್ತಿಗಳಲ್ಲಿ ಚಾರಿತ್ರ್ಯ-ನೈತಿಕತೆ ನಿರ್ಮಾಣ ಮಾಡುವ ಅವಶ್ಯಕತೆ ಇದೆ; ಹಾಗೆಯೇ ಭ್ರಷ್ಟಾಚಾರ ವಿರೋಧೀ ಮನೋಭಾವವನ್ನು ಬೆಳೆಸಿಕೊಳ್ಳುವ ಹಾಗೂ ಹೋರಾಟವನ್ನು ನಡೆಸುವ ಇಚ್ಛಾಶಕ್ತಿಯನ್ನು ಸಾಮಾನ್ಯ ಜನತೆಯಲ್ಲಿ ಮೂಡಿಸುವ ಅವಶ್ಯಕತೆ ಇದೆ.ಹೊಸಬೆಟ್ಟು ಸುರೇಶ್ ಮುಂಬಯಿ ಹೈಕೋರ್ಟಿನ ನ್ಯಾಯಮೂರ್ತಿ (ನಿವೃತ್ತ)

 

`ಭ್ರಷ್ಟಾಚಾರಕ್ಕೂ ಬಡತನಕ್ಕೂ ನೇರ ಸಂಬಂಧವಿದೆ, ಬಡವರಿಗಾಗಿ ರೂಪುಗೊಳ್ಳುವ ಕಾರ್‍ಯಕ್ರಮಗಳ ಅನುಷ್ಠಾನದಲ್ಲೇ ಹೆಚ್ಚು ಭ್ರಷ್ಟಾಚಾರ ನಡೆಯುತ್ತದೆ. ಭ್ರಷ್ಟಾಚಾರಕ್ಕೆ ತಡೆ ಬಿದ್ದರೆ, ಈ ಕಾರ್‍ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತದೆ; ಅನ್ಯಾಯ-ಅಸಮಾನತೆಗಳು ತೀವ್ರಗೊಳ್ಳಲು ಭ್ರಷ್ಟಾಚಾರವು ಮೂಲಕಾರಣ; ದೇಶಗಳು ಸಾಲದ ಜಾಲದಲ್ಲಿ ಸಿಕ್ಕಿ ಬೀಳಲೂ ಭ್ರಷ್ಟಾಚಾರ ಕಾರಣವಾಗಿದೆ…..‘ – ಕೋಫಿ ಅನ್ನಾನ್, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ(4.12.2000)

 

ಲಂಚ- ಭ್ರಷ್ಟಾಚಾರದ ವಿರುದ್ಧ ಅಂತಾರಾಷ್ಟ್ರೀಯ ಆಂದೋಲನ
2000ನೇ ಇಸವಿ ಡಿಸೆಂಬರ್ 4ರಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಭ್ರಷ್ಟಾಚಾರವು ವಿಶ್ವವ್ಯಾಪಿ ಸಮಸ್ಯೆಯಾಗಿದೆ ಎಂದು ಗುರುತಿಸಿ, ಅದರ ವಿರುದ್ಧ ಅಂತರಾಷ್ಟ್ರೀಯ ಮಟ್ಟದ ಆಂದೋಲನ ಅತ್ಯಗತ್ಯವೆಂದು ನಿರ್ಣಯವನ್ನು ಕೈಗೊಳ್ಳಲಾಯಿತು. ಈ ಉದ್ದೇಶಕ್ಕಾಗಿ ವಿಶ್ವಸಂಸ್ಥೆಯು ನಡೆಸಿದ ಮೊದಲ ಸಭೆಗೆ, ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಹಾಜರಾದರು. 21 ಜನವರಿ 2002ರಿಂದ 2003ರ ಅಕ್ಟೋಬರ್ 1ರವರೆಗಿನ ಅವಧಿಯಲ್ಲಿ ವಿಶ್ವಸಂಸ್ಥೆಯು ಇದೇ ವಿಷಯದ ಕುರಿತು ಏಳು ಸಭೆಗಳನ್ನುನಡೆಸಿತು. 18 ಡಿಸೆಂಬರ್ 2002ರಲ್ಲಿ ಮೆಕ್ಸಿಕೋ ದೇಶದ ಮೆರಿಡಿಯಾದಲ್ಲಿ ನಡೆಸಲಾದ ವಿಶೇಷ ಅಧಿವೇಶನದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಜರುಗಿಸಬೇಕಾದ ಕಠಿಣ ಕ್ರಮಗಳ ಪಟ್ಟಿಯನ್ನು ಮಾಡಲಾಯಿತು. ಭ್ರಷ್ಟಾಚಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಬಲಪಡಿಸುವುದು, ಚುನಾವಣಾ ವೆಚ್ಚವನ್ನು ನಿಷ್ಠಾಪೂರ್ವಕವಾಗಿ ಬಹಿರಂಗ ಪಡಿಸುವುದು, ಖರೀದಿ ವ್ಯವಹಾರಗಳಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಸಾಧಿಸುವುದು, ಭ್ರಷ್ಟಾಚಾರ ಪ್ರಕರಣಗಳನ್ನೂ ಶೀಘ್ರವಾಗಿ ಇತ್ಯರ್ಥಗೊಳಿಸುವುದು, ಭ್ರಷ್ಟಾಚಾರ ಸಾಬೀತಾದ ಪ್ರಕರಣಗಳಲ್ಲಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವುದು, ಆಡಳಿತಗಾರರ ಆದಾಯ-ವೆಚ್ಚಪಟ್ಟಿಯನ್ನು, ಆಸ್ತಿ-ಖರೀದಿ ವಿವರಗಳನ್ನು ಸಾರ್ವಜನಿಕಗೊಳಿಸುವುದು, ಭ್ರಷ್ಟಾಚಾರ ತಡೆಗೆ ಅಗತ್ಯವಿರುವ ಹೊಸ ಕಾನೂನುಗಳನ್ನು ಜಾರಿಗೆ ತರುವುದು, ಇತ್ಯಾದಿ.

ಈ ಅಧಿವೇಶನದಲ್ಲಿ ಒಟ್ಟು 118 ದೇಶಗಳ ಪ್ರತಿನಿಧಿಗಳು ಹಾಜರಿದ್ದರು. ಭಾರತ ಸೇರಿದಂತೆ ೧೯ ರಾಷ್ಟ್ರಗಳು ಗೈರು ಹಾಜರಾಗಿದ್ದವು. ಆದರೆ, ಭಾರತ ಸರಕಾರವು ಹೇಳಿಕೆ ನೀಡಿ, ಅನಿವಾರ್‍ಯ ಕಾರಣಗಳಿಂದಾಗಿ ಮಹಾಧಿವೇಶನದಲ್ಲಿ ಭಾಗವಹಿಸಲಾಗದಿದ್ದರೂ ಭ್ರಷ್ಟಾಚಾರ ನಿರ್ಮೂಲನೆ ಕುರಿತಂತೆ ವಿಶ್ವಸಂಸ್ಥೆ ಕೈಗೊಂಡಿರುವ ಆಂದೋಲನಕ್ಕೆ ಭಾರತವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಈ ಬಗ್ಗೆ ವಿಶ್ವಸಂಸ್ಥೆಯು ಪಾಸ್ ಮಾಡಿರುವ ಗೊತ್ತುವಳಿಗೆ ಭಾರತ ಸಹಿ ಹಾಕುತ್ತದೆ ಎಂಬುದಾಗಿ ತಿಳಿಸಿದೆ.

 

 

LEAVE A REPLY

Please enter your comment!
Please enter your name here