ಬಲ್ಯಪಟ್ಟೆ ಕಿ.ಪ್ರಾ.ಶಾಲೆಗೆ 7 ವರ್ಷದಿಂದ ಖಾಯಂ ಶಿಕ್ಷಕರಿಲ್ಲ:  5 ತರಗತಿಯೂ ನಿಭಾಯಿಸುತ್ತಿರುವ ಅತಿಥಿ ಶಿಕ್ಷಕಿ..!

0

ನೆಲ್ಯಾಡಿ: ಕಡಬ ತಾಲೂಕಿನ ಬಲ್ಯ ಗ್ರಾಮದ ಬಲ್ಯಪಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳೆದ ೭ ವರ್ಷಗಳಿಂದ ಖಾಯಂ ಶಿಕ್ಷಕರ ನೇಮಕ ಆಗಿಲ್ಲ. ಇಲ್ಲಿ ಒಬ್ಬರು ಅತಿಥಿ ಶಿಕ್ಷಕಿ ಮಾತ್ರ ಇದ್ದು ಅವರೊಬ್ಬರೇ 1 ರಿಂದ 5ನೇ ತರಗತಿ ತನಕದ ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಇತರೇ ಜವಾಬ್ದಾರಿಯೂ ನಿಭಾಯಿಸಬೇಕಾಗಿದೆ.


1959 ರಲ್ಲಿ ಸ್ಥಾಪನೆಗೊಂಡ ಬಲ್ಯ ಕಿರಿಯ ಪ್ರಾಥಮಿಕ ಶಾಲೆಗೆ ಕಟ್ಟಡ, 50 ಸೆಂಟ್ಸ್‌ಗಿಂತ ಹೆಚ್ಚು ಜಾಗವಿದೆ. ಸಮೀಪದಲ್ಲಿ ಬೇರೆ ಸರಕಾರಿ ಶಾಲೆ ಇಲ್ಲದೇ ಇರುವುದರಿಂದ ಇಲ್ಲಿ ಸರಕಾರಿ ಶಾಲೆ ಆರಂಭಗೊಂಡಿರುವುದು ಈ ಭಾಗದ ಜನರಿಗೆ ಹೆಚ್ಚು ಪ್ರಯೋಜನವಾಗಿದೆ. ಇಲ್ಲಿ ಕೃಷಿ, ಕೂಲಿಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಶಾಲೆ ಆರಂಭಗೊಂಡಿರುವುದರಿಂದ ತಮ್ಮ ಮಕ್ಕಳು ಪ್ರಾಥಮಿಕ ವಿದ್ಯಾಭ್ಯಾಸ ಪಡೆಯುವಂತೆ ಆಗಿದೆ. ಈ ತನಕ ಸಾವಿರಾರು ಮಕ್ಕಳು ಇಲ್ಲಿ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಿದ್ದು ಬೇರೆ ಬೇರೆ ಉದ್ಯೋಗ, ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಶಾಲೆಯಲ್ಲಿ ಈಗ 17 ಮಕ್ಕಳು ಕಲಿಯುತ್ತಿದ್ದರೂ ಕಳೆದ 7 ವರ್ಷಗಳಿಂದ ಖಾಯಂ ಶಿಕ್ಷಕರ ನೇಮಕ ಆಗದೇ ಇರುವುದರಿಂದ ಪಾಠ ಪ್ರವಚನಕ್ಕೆ ಅಡ್ಡಿಯಾಗುತ್ತಿದೆ ಎಂಬ ಆರೋಪ ಪೋಷಕರಿಂದ ಕೇಳಿಬಂದಿದೆ.

ರಾಮಯ್ಯ ರೈ, ಅಧ್ಯಕ್ಷರು ಎಸ್‌ಡಿಎಂಸಿ

2015ರಿಂದ ಖಾಯಂ ಶಿಕ್ಷಕರಿಲ್ಲ:
ಬಲ್ಯ ಪಟ್ಟೆ ಸರಕಾರಿ ಕಿ.ಪ್ರಾ.ಶಾಲೆಯಲ್ಲಿ 2015 ರಿಂದ ಖಾಯಂ ಶಿಕ್ಷಕರು ಇಲ್ಲ. ಇಲ್ಲಿ ಖಾಯಂ ಶಿಕ್ಷಕರಾಗಿದ್ದ ಹಾಸನ ಬೇಲೂರಿನ ಶಿಕ್ಷಕಿಯೊಬ್ಬರು 2015ರಲ್ಲಿ ವರ್ಗಾವಣೆ ಮೇಲೆ ಗುಂಡ್ಯ ದೇರಣೆ ಕಿ.ಪ್ರಾ.ಶಾಲೆಗೆ ತೆರಳಿದ್ದಾರೆ. ಅಲ್ಲಿಂದ ಇಲ್ಲಿಯ ತನಕವೂ ಇಲ್ಲಿಗೆ ಖಾಯಂ ಶಿಕ್ಷಕರ ನೇಮಕ ಆಗಿಲ್ಲ. ಶಾಲಾ ಎಸ್‌ಡಿಎಂಸಿ, ಪೋಷಕರು ಮನವಿ ಮಾಡುತ್ತಲೇ ಇದ್ದಾರೆ. ಶಿಕ್ಷಕರ ನಿಯೋಜನೆ ಮಾಡಲಾಗಿದೆಯಾದರೂ ಅವರು ವಾರದ ಎಲ್ಲಾ ದಿನ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರಿಂದ ಮಕ್ಕಳ ಕಲಿಗೆ ಹಿನ್ನಡೆಯಾಗುತ್ತಿದೆ ಎಂದು ಪೋಷಕರು ಹೇಳುತ್ತಿದ್ದಾರೆ.

ಅತಿಥಿ ಶಿಕ್ಷಕಿ ನೇಮಕ:
ಪ್ರಸ್ತುತ ಇಲ್ಲಿ 17 ಮಕ್ಕಳು ಕಲಿಯುತ್ತಿದ್ದಾರೆ. 1 ರಿಂದ 5ನೇ ತನಕ ತರಗತಿಗಳು ಇದ್ದು ಅತಿಥಿ ಶಿಕ್ಷಕಿಯೊಬ್ಬರೇ 5 ತರಗತಿಗಳಿಗೂ ಪಾಠ ಮಾಡಬೇಕಾಗಿದೆ. ಇದರ ಜೊತೆಗೆ ಇತರೇ ಜವಾಬ್ದಾರಿಯನ್ನೂ ನಿಭಾಯಿಸಬೇಕಾಗಿದೆ. ಕುಂತೂರು ಪದವು ಸರಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕರೊಬ್ಬರನ್ನು ಇಲ್ಲಿಗೆ ನಿಯೋಜನೆ ಮಾಡಲಾಗಿದೆಯಾದರೂ ಅವರು ವಾರದಲ್ಲಿ 1 ದಿನ ಮಾತ್ರ ಬಲ್ಯಪಟ್ಟೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ಖಾಯಂ ಶಿಕ್ಷಕರ ನೇಮಕ ಆಗದೇ ತಮ್ಮ ಮಕ್ಕಳನ್ನು ಖಾಸಗಿ ಇಲ್ಲವೇ ಬೇರೆ ಕಡೆ ಕಳುಹಿಸಲು ಪೋಷಕರು ಮುಂದಾಗುತ್ತಿದ್ದಾರೆ. ಈ ರೀತಿಯಾದಲ್ಲಿ ಶಾಲೆಯಲ್ಲಿ ಮಕ್ಕಳ ಕೊರತೆಯಾಗಿ ಸರಕಾರಿ ಶಾಲೆಯೊಂದು ಮುಚ್ಚುವ ಹಂತಕ್ಕೂ ಬರುವ ಸಾಧ್ಯತೆ ಇದೆ.

ಸಚಿವರಿಗೂ ಮನವಿ:
ಖಾಯಂ ಶಿಕ್ಷಕರ ನೇಮಕ ಮಾಡುವಂತೆ ಸಚಿವರೂ ಆಗಿರುವ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಎಸ್‌ಡಿಎಂಸಿ ವತಿಯಿಂದ ಮನವಿ ಮಾಡಲಾಗಿದೆ. ಶಿಕ್ಷಣ ಇಲಾಖೆಗೆ ಪ್ರತಿ ವರ್ಷವೂ ಮನವಿ ನೀಡಿ ಪ್ರತಿಭಟನೆಯ ಎಚ್ಚರಿಕೆ ನೀಡಲಾಗುತ್ತಿದೆ. ಆದರೆ ಖಾಯಂ ಶಿಕ್ಷಕರ ನೇಮಕ ಆಗಿಲ್ಲ. ಎಸ್‌ಡಿಎಂಸಿ, ಪೋಷಕರು ಕಳೆದ ೭ ವರ್ಷಗಳಿಂದ ಕಾಯುತ್ತಲೇ ಇದ್ದಾರೆ. ಇನ್ನಾದರೂ ಇಲ್ಲಿಗೆ ಖಾಯಂ ಶಿಕ್ಷಕರ ನೇಮಕ ಆಗಬಹುದೇ ಎಂದು ಕಾದು ನೋಡಬೇಕಾಗಿದೆ.

ವಾರದೊಳಗೆ ನೇಮಕ ಆಗಲಿ:
೨೦೨೨-೨೩ನೇ ಶೈಕ್ಷಣಿಕ ವರ್ಷದ ತರಗತಿ ಆರಂಭಗೊಂಡು ೧ ತಿಂಗಳು ಆಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಖಾಯಂ ಶಿಕ್ಷಕರ ನೇಮಕಕ್ಕೆ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದನೆ ಸಿಗುತ್ತಿಲ್ಲ. ಇನ್ನು ೧ ವಾರ ಕಾಯುತ್ತೇವೆ. ಇಲ್ಲದೇ ಇದ್ದಲ್ಲಿ ಎಸ್‌ಡಿಎಂಸಿಯವರು, ಪೋಷಕರು ಮಕ್ಕಳ ಜೊತೆ ಬಂದು ಬಿಒ ಕಚೇರಿ ಮುಂದೆ ಧರಣಿ ನಡೆಸುತ್ತೇವೆ.

LEAVE A REPLY

Please enter your comment!
Please enter your name here