ಪ್ರಧಾನಿ ನರೇಂದ್ರ ಮೋದಿ ಸರಕಾರದ 8 ವರ್ಷ ಪೂರ್ಣದ ಸಂಭ್ರಮಾಚರಣೆ: ಸೇವೆ, ಸುಶಾಸನ, ಬಡವರಕಲ್ಯಾಣ ಯೋಜನೆಯಡಿ ಮಹಿಳಾ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ

0

  • ಸ್ತ್ರೀಶಕ್ತಿ ರಾಷ್ಟ್ರಶಕ್ತಿಯಾಗಬೇಕು – ಸಂಜೀವ ಮಠಂದೂರು


ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರ ಸರಕಾರ 8 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಯ ಅಂಗವಾಗಿ ಸೇವೆ ಸುಶಾಸನ ಬಡವರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಬಿಜೆಪಿ ಪುತ್ತೂರು ಮಂಡಲದ ವತಿಯಿಂದ ಮಹಿಳಾ ಮೋರ್ಚಾದಿಂದ 60 ವರ್ಷ ಮೇಲ್ಪಟ್ಟ ಮಹಿಳಾ ಹಿರಿಯ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ಮತ್ತು ಅಭಿನಂದಿಸುವ ಮತ್ತು ಮಹಿಳೆಯರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಮಾಹಿತಿ ಕಾರ್ಯಕ್ರಮ ಜೂ.14 ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. 60 ವರ್ಷ ಮೇಲ್ಪಟ್ಟ 60 ಮಂದಿ ಹಿರಿಯ ಕಾರ್ಯಕರ್ತರಿಗೆ ಮತ್ತು ಕಲಾವಿದೆಯೊಬ್ಬರನ್ನು ಗೌರವಿಸಲಾಯಿತು.


ಸ್ತ್ರೀಶಕ್ತಿ ರಾಷ್ಟ್ರಶಕ್ತಿಯಾಗಬೇಕು:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಾಡಗೀತೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರು ಉಲ್ಲೇಖಿಸಿದಂತೆ ಮಾತೆಗೆ ಪ್ರಾದಾನ್ಯತೆ ಇರುವ ದೇಶ ನಮ್ಮದು. ಕರ್ನಾಟಕ ಮಾತೆಯ ಸುಪುತ್ರಿಯಾಗಿರುವ ನಮ್ಮದು ಮಾತೃಪ್ರಧಾನ ಲಕ್ಷಣ. ಹಾಗಾಗಿ ಭಾರತದ ಸಂಸ್ಕೃತಿ ಪರಂಪರೆ ನೋಡಿದಾಗ ಸ್ತ್ರೀಗೆ ವಿಶೇಷ ಗೌರವ ಕೊಡುತ್ತಿದೆ. ಇವತ್ತು ಪುರುಷರಿಗೆ ಸಮಾನವಾಗಿ ಕೂಡಾ ಸಮಾಜವನ್ನು ಮುನ್ನಡೆಸುವ ಕೆಲಸ ಮಾತೆಯರಿಂದ ಆಗುತ್ತಿದೆ. ಸ್ತ್ರಿಶಕ್ತಿ ರಾಷ್ಟ್ರಶಕ್ತಿಯಾಗಬೇಕೆಂದು ಬಿಜೆಪಿ ಹಲವು ಕಾರ್ಯಕ್ರಮ ಹಾಕಿಕೊಂಡಿದೆ. ದೇಶವನ್ನು ಆಳಿದ ನಮ್ಮ ವಿಚಾರಕ್ಕೆ ವಿರುದ್ಧವಾಗಿರುವ ಸಮರ್ಥ ಮಹಿಳೆ ಇಂದಿರಾ ಗಾಂಧಿಯವರನ್ನು ಬಹಳಷ್ಟು ಮಂದಿ ಉಲ್ಲೇಖ ಮಾಡುತ್ತಾರೆ. ಅಕೆ ದೇಶಕ್ಕೆ ತುರ್ತುಪರಿಸ್ಥಿತಿ ತರುವ ದೈರ್ಯ ಮಾಡುತ್ತಾಳೆ. ಅಂತಹ ಧೈರ್ಯ ಎಲ್ಲಾ ಮಹಿಳೆಯರಿಗೆ ಇದೆ. ವಿಮಾನ ಓಡಿಸುವ ತಾಯಂದಿರು, ಸೈನ್ಯದಲ್ಲಿ ಸೇವೆ ಮಾಡುವ ತಾಯಂದಿರು ಇರಬಹುದು. ಆದರೆ ನಾಯಕತ್ವದಲ್ಲಿ ಕೂಡಾ ತಾಯಂದಿರು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟವರಿದ್ದಾರೆ. ಆರ್ಥಿಕ ಸಚಿವೆಯಾದ ನಿರ್ಮಲ ಸೀತಾರಾಮನ್, ದಿ. ಸುಶ್ಮಸ್ವರಾಜ್, ಜನಸಂಘದ ಕಾಲದಲ್ಲಿ ಸಂಘಟನೆ ಹೆಗ್ಗೆ ಕಟ್ಟಬಹುದು ಎಂದು ತೋರಿಸಿಕೊಟ್ಟ ವಿಜಯರಾಜ್ ಸಿಂಧ್ಯಾ ಸೇರಿದಂತೆ ಹತ್ತಾರು ಮಂದಿಯನ್ನು ಉಲ್ಲೇಖ ಮಾಡಬಹುದು. ಅವರೆಲ್ಲ ಬಿಜೆಪಿಯಲ್ಲಿ ತಮ್ಮ ಛಾಪನ್ನು ತೋರಿಸುವ ಜೊತೆಯಲ್ಲಿ ಇತರರಿಗೆ ಪ್ರೇರಣೆ ನೀಡಿದ್ದಾರೆ ಎಂದ ಅವರು ಅವರ ಪ್ರೇರಣೆಯಿಂದ ನಮ್ಮ ತಾಯಂದಿರು ಇನ್ನಷ್ಟು ಪ್ರೇರಿತರಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಆಡಳಿತಕ್ಕೆ ತರುವಂತೆ ತಮ್ಮ ಸೇವಾ ಕಾರ್ಯ ನಡೆಸಬೇಕೆಂದು ಹೇಳಿದರು.

ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ತ್ರಿವೇಣಿ ಪೆರ್ವೋಡಿ, ಕೋಶಾಧಿಕಾರಿ ಪ್ರೇಮಲತಾ ರಾವ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಭಾವತಿ, ಉಪ್ಪಿನಂಗಡಿ ಗ್ರಾ.ಪಂ ಅಧ್ಯಕ್ಷೆ ಮಹಿಳಾ ಪ್ರಭಾರಿ ಉಷಾ ಮುಳಿಯ, ಪ್ರಭಾ ಅಚಾರ್ಯ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಮೋರ್ಚಾದ ಮಹಾಶಕ್ತಿ ಕೇಂದ್ರದ ಅಧ್ಯಕ್ಷೆ ಜ್ಯೋತಿ ನಾಯಕ್ ಪ್ರಾರ್ಥಿಸಿದರು. ನಗರ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜಯಶ್ರೀ ನಾಯಕ್ ಸ್ವಾಗತಿಸಿದರು. ಗ್ರಾಮೀಣ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಬಂಟ್ವಾಳ ಸಾಂತ್ವನ ಕೇಂದ್ರದ ಗೀತಾಶ್ರೀ ಅವರು ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯ ಮತ್ತು ಸರಕಾರದ ಸೌಲಭ್ಯಗಳ ಕುರಿತ ವಿವಿಧ ಮಾಹಿತಿಗಳನ್ನು ನೀಡಿದರು. ಮಹಿಳಾ ಮೋರ್ಚಾದ ಯಶೋದಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here