ನೆರೆ ಬಾಧಿತ ಉಪ್ಪಿನಂಗಡಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ: ಸಿಬ್ಬಂದಿಗಳ ಕೊರತೆ, ರಾತ್ರಿ ಹೊತ್ತಿನಲ್ಲಿ ಸಮಸ್ಯೆ ಕೇಳುವವರೇ ಇಲ್ಲ…!!!

0

✍️..ವಿಶೇಷ ವರದಿ/ಚಿತ್ರ: ಸಿದ್ದಿಕ್ ನೀರಾಜೆ

  • ಉಪ್ಪಿನಂಗಡಿ ಮೆಸ್ಕಾಂ ಶಾಖಾ ಕಚೇರಿ.
  • 630 ಸ್ಥಾವರಗಳಿವೆ. 17 ಸಾವಿರ ವಿದ್ಯುತ್ ಸಂಪರ್ಕಗಳಿವೆ.
  •  ಸಹಾಯಕ ಇಂಜಿನಿಯರ್ ಹುದ್ದೆಯೂ ಖಾಲಿ…!!
  • 26 ಸಿಬ್ಬಂದಿಗಳ ಪೈಕಿ 19 ಮಂದಿ ಕೆಲಸದಲ್ಲಿ ನಿರತ
  •  ರಾತ್ರಿ ಪಾಲಿಗೆ ಸಿಬ್ಬಂದಿಗಳಿಲ್ಲ, ಹಗಲಿನವರೇ ಸ್ಪಂಧಿಸಬೇಕು.
  •  ಸಂಜೆ ಬಂದು ನಿಲ್ಲುವ ವಾಹನ ಬೆಳಿಗ್ಗೆ ಹೋಗುತ್ತದೆ..!!!

ಉಪ್ಪಿನಂಗಡಿ: ದಿನೇ ದಿನೇ ಬೆಳೆಯುತ್ತಿರುವ ಮತ್ತು ಎರಡು ನದಿಗಳ ಸಂಗಮ ಸ್ಥಾನ ಎಂದು ಕರೆಯಲ್ಪಡುವ ಅದಾಗ್ಯೂ ನೆರೆ ಬಾಧಿತ ಪ್ರದೇಶ ಎಂದು ಗುರುತಿಸಿಕೊಂಡಿರುವ ಉಪ್ಪಿನಂಗಡಿಯಲ್ಲಿ ವಿದ್ಯುತ್ ಸಮಸ್ಯೆ ನಿರಂತರವಾಗಿ ಕಾಡುತ್ತಲೇ ಇದೆ. ಆದರಲ್ಲೂ ಮಳೆಗಾಲದಲ್ಲಿ ಇಲ್ಲಿನ ಸಮಸ್ಯೆಗಳನ್ನು ಹೇಳ ತೀರದಂತಿರುತ್ತದೆ. ಇಲ್ಲಿನ ಶಾಖಾ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಿದ್ದು, ಸಮಸ್ಯೆಯ ಆಗರವೇ ಸೃಷ್ಠಿಯಾಗಿರುವ ಬಗ್ಗೆ ದೂರುಗಳು ವ್ಯಕ್ತವಾಗಿದೆ.

ಕುಮಾರಧಾರಾ ಮತ್ತು ನೇತ್ರಾವತಿ ಎರಡೂ ನದಿಗಳು ಹರಿದು ಬಂದು ಉಪ್ಪಿನಂಗಡಿ ಸಂಗಮ ಕ್ಷೇತ್ರವಾಗಿದೆ. ಮಳೆಗಾಲ ಆರಂಭ ಆಗುತ್ತಿದ್ದಂತೆ ಇಲ್ಲಿ ನೆರೆ ಭೀತಿ ಇರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಢಳಿತ ಉಪ್ಪಿನಂಗಡಿಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುತ್ತದೆ. ಅದಕ್ಕೆ ಪೂರಕವಾಗಿ ಇಲ್ಲಿನ ವಿದ್ಯುತ್ ಸಮಸ್ಯೆ ಎದುರಾಗದಂತೆ ನಿಗಾ ಇರಿಸುವುದೂ ಇದೆ. ಆದರೆ ಈ ಬಾರಿ ಇಲ್ಲಿ ಸಿಬ್ಬಂದಿಗಳ ಕೊರತೆ ಮತ್ತಷ್ಟು ಜಟಿಲವಾಗಿರುವುದರಿಂದಾಗಿ ವಿದ್ಯುತ್ ಸಮಸ್ಯೆ ಆಯೋಮಯವಾಗುವ ಎಲ್ಲಾ ಲಕ್ಷಣಗಳು ವ್ಯಕ್ತವಾಗಿದೆ.

ಸಿಬ್ಬಂದಿಗಳ ಕೊರತೆ, 10 ಹುದ್ದೆಗಳು ಖಾಲಿ:
ಉಪ್ಪಿನಂಗಡಿ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಒಟ್ಟು 63೦ ಸ್ಥಾವರಗಳಿವೆ. 17 ಸಾವಿರ ವಿದ್ಯುತ್ ಸಂಪರ್ಕಗಳಿವೆ. 7 ಕ್ಯಾಂಪ್‌ಗಳು ಇದ್ದು, ಸಹಾಯಕ ಇಂಜಿನಿಯರ್-1, ಮೀಟರ್ ರೀಡರ್-1, ಮೆಕಾನಿಕ್-4, ಪವರ್‌ಮೆನ್-6, ಸಹಾಯಕ ಪವರ್‌ಮೆನ್-6, ಜ್ಯೂನಿಯರ್ ಪವರ್‌ಮೆನ್-11 ಹೀಗೆ ಒಟ್ಟು 29 ಹುದ್ದೆಗಳ ಮಂಜೂರಾತಿ ಇದೆ. ಆದರೆ ಇಲ್ಲಿ ಮೆಕಾನಿಕ್-1, ಪವರ್‌ಮೆನ್-2, ಸಹಾಯಕ ಪವರ್‌ಮೆನ್-6, ಜ್ಯೂನಿಯರ್ ಪವರ್‌ಮೆನ್-1 ಸೇರಿದಂತೆ ಒಟ್ಟು 10 ಹುದ್ದೆಗಳು ಖಾಲಿ ಇವೆ. ಅದರಲ್ಲೂ ರಾತ್ರಿ ಪಾಲಿಗೆ ಪ್ರತ್ಯೇಕ ಸಿಬ್ಬಂದಿಗಳು ಇಲ್ಲವಾಗಿದ್ದು, ಹಗಲು ಕೆಲಸ ಮಾಡುವವರೇ ರಾತ್ರಿ ಪಾಲಿಯಲ್ಲಿ ಕೆಲಸ ಮಾಡುವ ಅನಿವಾರ್‍ಯತೆ ಇಲ್ಲಿ ಎದುರಾಗಿದೆ.

ಸಂಜೆ ಬಂದು ಬೆಳಿಗ್ಗೆ ಹೋಗುತ್ತದೆ ವಾಹನ:
ಉಪ್ಪಿನಂಗಡಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನಡೆಯುವ ಹೋಬಳಿ ಮಟ್ಟದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ವ್ಯಕ್ತವಾಗುತ್ತಿದ್ದ ನಿರಂತರ ಬೇಡಿಕೆಯ ಮೇರೆಗೆ ರಾತ್ರಿ ಪಾಳಿಯಲ್ಲಿ ಗ್ರಾಮೀಣ ಪ್ರದೇಶ ಮತ್ತು ನೆರೆ ಭಾದಿತ ಪ್ರದೇಶಗಳಿಗೆ ಲೈನ್‌ಮೆನ್‌ಗಳು ಹೋಗುವುದಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ವರ್ಷದ ಮಳೆಗಾಲದಲ್ಲಿ ಮೇ, ಜೂನ್, ಜುಲೈ ಸೇರಿದಂತೆ 3 ಅಥವಾ 4 ತಿಂಗಳು ಉಪ್ಪಿನಂಗಡಿಗೆ ವಾಹನವೊಂದು ಮಂಜೂರು ಆಗಿರುತ್ತದೆ. ಅದರಿಂದ ಬಹಳಷ್ಟು ಪ್ರಯೋಜನವೂ ಆಗುತ್ತಿತ್ತು. ಆದರೆ ಈ ವಾಹನ ಇದೀಗ ಸಂಜೆ 6 ಗಂಟೆಗೆ ಬಂದು ಉಪ್ಪಿನಂಗಡಿ ಮೆಸ್ಕಾಂ ಕಚೇರಿ ಬಳಿ ಬಂದು ನಿಂತು, ಮರುದಿನ ಬೆಳಿಗ್ಗೆ ಮರಳಿ ಹೋಗುವುದು ಬಿಟ್ಟರೆ, ಈ ವಾಹನ ಇದೀಗ ರಾತ್ರಿ ಸಮಯದಲ್ಲಿ ವಿದ್ಯುತ್ ಸಮಸ್ಯೆ ಎದುರಾದರೆ ಪ್ರಯೋಜನಕ್ಕೆ ಲಭಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

ರಾತ್ರಿ ವಿದ್ಯುತ್ ಕೈಕೊಟ್ಟರೆ ಬೆಳಿಗ್ಗೆನೇ ದುರಸ್ಥಿ!!
ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶದಲ್ಲಿ ಗಾಳಿ, ಮಳೆಗೆ ಮರದ ರೆಂಬೆ, ಕೊಂಬೆ ಬಿದ್ದು ಯಾ ಇನ್ನಿತರ ಯಾವುದೇ ಕಾರಣದಿಂದ ವಿದ್ಯುತ್ ಕಡಿತವಾದರೆ ಹಿಂದೆಲ್ಲಾ ಈ ವಾಹನದಲ್ಲಿ ಲೈನ್‌ಮೆನ್ ಪರಿಕರಗಳ ಸಮೇತ ಬಂದು ದುರಸ್ಥಿ ಮಾಡಿ ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಹೋಗುತ್ತಿದ್ದರು. ಆದರೆ ಇದೀಗ ತೀರಾ ಅನಿವಾರ್‍ಯ ಪರಿಸ್ಥಿತಿಯಲ್ಲಿ ಹಗಲು ಹೊತ್ತಿನಲ್ಲಿ ಕೆಲಸ ಮಾಡಿದ ಸಿಬ್ಬಂದಿಗಳೇ ಮತ್ತೆ ರಾತ್ರಿ ಹೊತ್ತಿನಲ್ಲಿ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಕೆಲವೊಂದು ಬಾರಿ ಬೆಳಿಗ್ಗೆ 10 ಗಂಟೆಯ ಬಳಿಕವೇ ದುರಸ್ಥಿ ಎನ್ನುವಂತಾಗಿದ್ದು, ಇಲ್ಲಿನ ಅವ್ಯವಸ್ಥೆಯನ್ನು ಕೇಳುವವರೇ ಇಲ್ಲ ಎಂದು ಹೇಳಲಾಗುತ್ತಿದೆ.

ಕೃತಕ ನೆರೆಯ ಜೊತೆಗೆ ಇನ್ನಷ್ಟು ಭೀತಿ.!
ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದಾಗಿ ಎಲ್ಲೆಡೆ ಚರಂಡಿ ಮುಚ್ಚಿ ಹೋಗಿ ಕೃತಕ ನೆರೆ ಭೀತಿ ಎದುರಾಗಿದೆ. ಇದರ ಜೊತೆಗೆ ವಿದ್ಯುತ್ ಸಮಸ್ಯೆ ಎದುರಾಗಿ ಕತ್ತಲು ಆವರಿಸಿದರೆ ಪೇಟೆ ಪರಿಸರದಲ್ಲಿ ಯಾವುದು ನೆರೆ ನೀರು, ಯಾವುದು ಕೃತಕ ನೆರೆ ನೀರು ಎಂದು ತೋಚದಂತಹ ಪರಿಸ್ಥಿತಿ ಇದ್ದು, ಈ ಎಲ್ಲಾ ಸಮಸ್ಯೆಗೆ ಪರಿಹಾರವಾಗಿ ಮೆಸ್ಕಾಂ ಇಲಾಖೆ ಇಲ್ಲಿನ ಸಿಬ್ಬಂದಿಗಳ ಕೊರತೆಯನ್ನು ನೀಗಿಸಿ ಜನರ ಸಂಕಷ್ಟವನ್ನು ದೂರ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ.

ಸಹಾಯಕ ಇಂಜಿನಿಯರ್ ಹುದ್ದೆಯೂ ಖಾಲಿ..!!
ಇಲ್ಲಿ ಸಹಾಯಕ ಇಂಜಿನಿಯರ್ ಆಗಿದ್ದ ರಾಜೇಶ್ ಪುತ್ತೂರು ಮೆಸ್ಕಾಂ ವಿಭಾಗೀಯ ಕಚೇರಿಗೆ ವರ್ಗಾವಣೆ ಹೊಂದಿ ತೆರಳಿರುತ್ತಾರೆ. ಆದರೆ ಪ್ರಸಕ್ತ ಇಲ್ಲಿಗೆ ಅವರನ್ನೇ ಪ್ರಭಾರ ನೆಲೆಯಲ್ಲಿ ನಿಯೋಜಿಸಲಾಗಿದೆ. ಒಟ್ಟಿನಲ್ಲಿ ಉಪ್ಪಿನಂಗಡಿ ಮೆಸ್ಕಾಂ ಶಾಖಾ ಕಚೇರಿ ಸಿಬ್ಬಂದಿಗಳು ಇಲ್ಲದೆ ಖಾಲಿ, ಖಾಲಿ ಇದೆ.

ಇನ್ನೂ ೨ ಶಾಖಾ ಕಚೇರಿ ಹೊಂದುವುದು ಸೂಕ್ತ-ಜಯಂತ ಪೊರೋಳಿ
ಉಪ್ಪಿನಂಗಡಿ ಶಾಖಾ ಕಚೇರಿ ವ್ಯಾಪ್ತಿಯಲ್ಲಿ ಉಪ್ಪಿನಂಗಡಿ, 34-ನೆಕ್ಕಿಲಾಡಿ, ಹಿರೇಬಂಡಾಡಿ, ಬಜತ್ತೂರು, ಗೋಳಿತೊಟ್ಟು, ಕೊಣಾಲು, ಆಲಂತಾಯ, ಹಳೆನೇರೆಂಕಿ, ರಾಮಕುಂಜ, ಕೊಲ ಹೀಗೆ 10 ಗ್ರಾಮ ವ್ಯಾಪ್ತಿಯನ್ನು ಒಳಗೊಂಡಿದೆ. ಇದರಲ್ಲಿ ೬ ವರ್ಷಗಳ ಹಿಂದೆ ಸುಮಾರು 400 ಸ್ಥಾವರಗಳು ಇದ್ದವು. ಆದರೆ ಇದೀಗ 650ರಷ್ಟು ಸ್ಥಾವರಗಳು ಇದೆ.

 

                  ಜಯಂತ ಪೊರೋಳಿ

ಹೀಗಾಗಿ ಇಷ್ಟೊಂದು ಕೆಲಸಗಳ ಒತ್ತಡ ಇರುವ ಈ ವ್ಯಾಪ್ತಿಗೆ ಕನಿಷ್ಠ 3 ಶಾಖಾ ಕಚೇರಿ ಇರಬೇಕಾಗಿದ್ದು, ಕೇವಲ 1 ಶಾಖಾ ಕಚೇರಿ ಅಡಿಯಲ್ಲಿ ಇವುಗಳು ಇದ್ದುದರಿಂದಲೇ ಇಲ್ಲಿ ಸಮಸ್ಯೆಗಳ ಆಗರ ಸೃಷ್ಠಿಯಾಗಿದೆ. ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ಕೊಲ ಮತ್ತು ಬಜತ್ತೂರುನಲ್ಲಿ ಶಾಖಾ ಕಚೇರಿ ತೆರೆಯುವುದು ಸೂಕ್ತ ಎಂದು ವಿದ್ಯುತ್ ಬಳಕೆದಾರರ ಸಂಘದ ಅಧ್ಯಕ್ಷ ಜಯಂತ ಪೊರೋಳಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here