15ನೇ ಹಣಕಾಸು ಯೋಜನೆಯಡಿ ಖರ್ಚಾಗದೆ ಉಳಿಕೆಯಾದ 6.59 ಕೋಟಿ ರೂ.; ನಿಮಗೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲವೇ..?;  ಗ್ರಾ.ಪಂ.ಪಿಡಿಒಗಳನ್ನು ಪ್ರಶ್ನಿಸಿದ ಶಾಸಕರು

0

  • ಗ್ರಾ.ಪಂ. ಅಭಿವೃದ್ಧಿ ಪರಾಮರ್ಶೆಗೆ ಅಧ್ಯಕ್ಷ, ಉಪಾಧ್ಯಕ್ಷರು, ಪಿಡಿಒಗಳ ಸಭೆ
ಶಾಸಕರ ನೇತೃತ್ವದಲ್ಲಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳ ಸಭೆ

ಪುತ್ತೂರು: ಒಂದು ಕಡೆ ಹಣ ಇಲ್ಲ ಎಂದು ಹೇಳುತ್ತಾರೆ.ಇನ್ನೊಂದು ಕಡೆ ಹಣ ಕೊಟ್ಟರೂ ಖರ್ಚು ಮಾಡುವುದಿಲ್ಲ.ಗ್ರಾ.ಪಂ.ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲವೋ ಏನು ಎಂದು ಶಾಸಕ ಸಂಜೀವ ಮಠಂದೂರು ಅವರು, 15ನೇ ಹಣಕಾಸು ಯೋಜನೆಯಡಿ ತಾಲೂಕಿನ ಪಂಚಾಯತ್‌ಗಳಲ್ಲಿ ರೂ.6.59 ಕೋಟಿ ಖರ್ಚಾಗದೆ ಉಳಿಕೆಯಾಗಿರುವುದಕ್ಕೆ ಪಿಡಿಒಗಳನ್ನು ತರಾಟೆಗೆತ್ತಿಕೊಂಡಿದ್ದಾರೆ. ಪುತ್ತೂರು ತಾಲೂಕು ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ತಾಲೂಕಿನ 22 ಗ್ರಾ.ಪಂ.ಗಳ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಪಿಡಿಒಗಳ ಸಭೆಯು ಜೂ.೧೪ರಂದು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ತಾ.ಪಂ ಸಭಾಂಗಣದಲ್ಲಿ ನಡೆಯಿತು.


ಈ ಸಭೆಯಲ್ಲಿ ಈ ಘಟನೆ ನಡೆಯಿತು.ರೂ.6.59ಕೋಟಿ ಸಣ್ಣ ಮೊತ್ತವಲ್ಲ. ಇಷ್ಟೊಂದು ಹಣವನ್ನು ಯಾಕೆ ಖರ್ಚು ಮಾಡದೆ ನಿಮ್ಮ ನಿಮ್ಮ ಖಾತೆಯಲ್ಲಿ ಹಣ ಇಟ್ಟು ಕೊಂಡಿದ್ದೀರಿ ಎಂದು ಶಾಸಕರು ಪ್ರಶ್ನಿಸಿದರು. ಕಬಕದಲ್ಲಿ 11 ಲಕ್ಷ, ಕೆದಂಬಾಡಿಯಲ್ಲಿ 9 ಲಕ್ಷ ಮಾತ್ರ ಉಳಿಕೆಯಾಗಿದೆ. ಉಳಿದಂತೆ, 34 ನೆಕ್ಕಿಲಾಡಿಯಲ್ಲಿ 35 ಲಕ್ಷ, ಅರಿಯಡ್ಕದಲ್ಲಿ 59 ಲಕ್ಷ, ನರಿಮೊಗರಿನಲ್ಲಿ 54 ಲಕ್ಷ, ಕೊಳ್ತಿಗೆಯಲ್ಲಿ 64 ಲಕ್ಷ ಉಳಿಕೆಯಾಗಿದೆ. ಇತರ ಪಂಚಾಯತ್‌ಗಳಲ್ಲಿ ಹಣ ಖರ್ಚಾಗಿಲ್ಲ. ಏನು ನಿಮಗೆ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲವಾ? ಇದನ್ನು ಅಧ್ಯಕ್ಷರ ಗಮನಕ್ಕೆ ಯಾಕೆ ನೀವು ತರುವುದಿಲ್ಲ?ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡುವುದಿಲ್ಲವೇ?ಅನುಷ್ಟಾನ ಮಾಡಲು ನಿಮಗೇನು ಸಮಸ್ಯೆ ? ಎಂದು ಪ್ರಶ್ನಿಸಿದ ಶಾಸಕರು, ನೀವು ಖರ್ಚು ಮಾಡಿದ್ದು ಒಟ್ಟು ಶೇ.19.3 ಮಾತ್ರ ಎಂದರು. ಅನುದಾನ ಬಳಕೆಯಾಗಿದೆ. ಆದರೆ ಬಿಲ್ ಮಾಡುವಾಗ ತಡವಾಗಿರಬಹುದು ಎಂದು ಪಿಡಿಒಗಳು ಉತ್ತರಿಸಿದರು. ಗ್ರಾಮೀಣ ಅಭಿವೃದ್ಧಿ ಇಂಜಿನಿಯರ್ ಭರತ್ ಅವರು ಮಾತನಾಡಿ ಬಿಲ್ ಆಗಿರುವುದಕ್ಕೆ ಪೇಮೆಂಟ್ ಆಗುತ್ತದೆ ಎಂದರು. ಆರ್ಥಿಕ ವರ್ಷದ ಅಂತ್ಯಕ್ಕೆ ಬಿಲ್‌ಗಳು ಆಗಬೇಕು. ಮಾರ್ಚ್ 3೦ರೊಳಗೆ ಬಿಲ್ ಆಗದಿದ್ದರೆ ಅದು ಉಳಿಕೆ ಹಣ ತೋರಿಸುತ್ತದೆ. ಇದು ಕೇಂದ್ರ ಸರಕಾರದ ಅನುದಾನ. ತಾಲೂಕು ಪಂಚಾಯತ್ ವರ್ಷದ ಅಭಿವೃದ್ಧಿ ಕಾರ್ಯಗಳ ಕುರಿತು ಜಿಲ್ಲಾಪಂಚಾಯತ್‌ಗೆ ಕಳುಹಿಸಿ ಅಲ್ಲಿಂದ ರಾಜ್ಯ ಸರಕಾರಕ್ಕೆ ಕಳುಹಿಸಿ,ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ ಹೋಗುತ್ತದೆ.ಕೇಂದ್ರ ಸರಕಾರದಿಂದ ಹಣ ಬಿಡುಗಡೆಯಾಗುತ್ತದೆ.ಇಲ್ಲಿ ಎಷ್ಟು ಹಣ ಖರ್ಚಾಗಿದೆ ಅದರ ಅಧಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಹಣ ಬಿಡುಗಡೆ ಮಾಡುತ್ತದೆ. ಆದರೆ ಇಲ್ಲಿ ಹಣ ಖರ್ಚಾಗದೆ ಇದ್ದರೆ ಕೇಂದ್ರ ಸರಕಾರ ಮುಂದೆ ಅನುದಾನ ಕೊಡುವುದಿಲ್ಲ ಎಂದು ಹೇಳಿದ ಶಾಸಕರು, ಈ ಕುರಿತು ಪರಿಶೀಲನೆ ನಡೆಸುವಂತೆ ಗ್ರಾಮೀಣ ಪಂಚಾಯತ್ ರಾಜ್ ಇಂಜಿನಿಯರ್ ಭರತ್ ಅವರಿಗೆ ಸೂಚಿಸಿದರು.ಖರ್ಚು ಆಗಿರುವ ಹಣವನ್ನು ಮಾರ್ಚ್ ಅಂತ್ಯದೊಳಗೆ ಬಿಲ್ ಮಾಡಬೇಕಾಗಿತ್ತು. ತಡ ಮಾಡಿದರೆ ಮುಂದೆ ಅನುದಾನಕ್ಕೆ ತೊಂದರೆ ಆಗುತ್ತದೆ ಎಂದೂ ಶಾಸಕರು ಹೇಳಿದರು.

ರಸ್ತೆ ನಿರ್ವಹಣೆ, ಅಗಲೀಕರಣಕ್ಕೆ ಒತ್ತು ಕೊಡಿ: ಗ್ರಾ.ಪಂ.ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಮಾಡಲಾಗುತ್ತಿದೆ.ಆದರೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಪೊದರು ತೆರವು ರಸ್ತೆ ನಿರ್ವಹಣೆ ಗ್ರಾ.ಪಂ ಅನುದಾನದಲ್ಲಿ ಸಾಧ್ಯವಿಲ್ಲ.ರಸ್ತೆ ನಿರ್ವಹಣೆ ಮಾಡದಿದ್ದರೆ ರಸ್ತೆ ಕೆಟ್ಟು ಹೋಗುತ್ತದೆ.ಅದಕ್ಕಾಗಿ ನರೇಗ ಮೂಲಕ ಈ ಕೆಲಸ ಮಾಡುವ ಕುರಿತು ಸಲಹೆ ವ್ಯಕ್ತವಾದಾಗ ಉತ್ತರಿಸಿದ ಶಾಸಕರು, ಈ ಕುರಿತು ಪ್ರಿನ್ಸಿಪಾಲ್ ಸೆಕ್ರೆಟರಿಯವರಲ್ಲಿ ಮಾತನಾಡುತ್ತೇನೆ.ಆದರೂ ನೀವು ನಿಮ್ಮ ಅನುದಾನದಲ್ಲಿ ಹೊಸ ರಸ್ತೆ ಮಾಡಲು ಹೋಗಬೇಡಿ.ಯಾಕೆಂದರೆ ಲೋಕೋಪಯೋಗಿ ಗುಣಮಟ್ಟದಲ್ಲಿ ರಸ್ತೆ ಮಾಡಲು ಪಂಚಾಯತ್‌ನಲ್ಲಿ ಅನುದಾನದ ಕೊರತೆ ಇದೆ.ಹಾಗಾಗಿ ರಸ್ತೆ ಅಗಲೀಕರಣ ಅಥವಾ ಮೋರಿ ಹಾಕುವ ಕೆಲಸ ಮಾಡಿ.ಡಾಮರೀಕರಣ, ಕಾಂಕ್ರಿಟೀಕರಣ ಮಾಡಲು ಹೋಗಬೇಡಿ.ಅದನ್ನು ಜಿ.ಪಂ, ತಾ.ಪಂ ಅಥವಾ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಮಾಡಲು ಅವಕಾಶವಿದೆ.ಆದ್ದರಿಂದ ಎಲ್ಲಾ ಪಂಚಾಯತ್‌ಗಳು ರಸ್ತೆ ನಿರ್ವಹಣೆ ಮಾಡುವ ಕೆಲಸ ಮಾಡಿ.ಅದೇ ರೀತಿ ಪಂಚಾಯತ್ ಕಚೇರಿಗಳಲ್ಲಿ ವಿದ್ಯುತ್ ಉಳಿಸುವ ಯೋಜನೆಗೆ ಸಂಬಂಧಿಸಿ ಸೋಲಾರ್ ಅಳವಡಿಸುವ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಎಂದು ಶಾಸಕರು ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರುಗಳಿಗೆ ಸಲಹೆ ನೀಡಿದರು.

ಸ್ವಚ್ಛ ಭಾರತ್ ನೂರಕ್ಕೆ ನೂರು ಅನುಷ್ಠಾನ ಆಗಬೇಕು: ಪಂಚಾಯತ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿರುವ ಕುರಿತು ಮಾಹಿತಿ ಪಡೆದ ಶಾಸಕರು, ೬ ಪಂಚಾಯತ್‌ಗಳಲ್ಲಿ ತ್ಯಾಜ್ಯ ಘಟಕಗಳಿಲ್ಲ.ಉಳಿದ ಪಂಚಾಯತ್‌ನಲ್ಲಿ ಘಟಕ ಇದೆ. ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಗೊತ್ತಿಲ್ಲ.ಘನ ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಕುರಿತು ಅಳವಡಿಸಿದ ಬ್ಯಾನರ್ ಹರಿದು ಹೋಗಿದೆ.ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ಅಥವಾ ಶಾಸಕರ ಒತ್ತಡದಿಂದ ಬ್ಯಾನರ್ ಅಳವಡಿಸಿದ್ದೀರೋ ಅಥವಾ ಸಾಮಾಜಿಕ ಕಳಕಳಿಯಿಂದ, ದೇಶದ ಪ್ರಧಾನಿಯವರ ಅಪೇಕ್ಷೆ ಮೇರೆಗೆ ಬ್ಯಾನರ್ ಹಾಕಿರುವುದೋ ಎಂದು ಗೊತ್ತಿಲ್ಲ.ಒಟ್ಟು ನಮ್ಮ ಸ್ವಚ್ಛ ಭಾರತ್ ಕಾರ್ಯಕ್ರಮ ನೂರಕ್ಕೆ ನೂರು ಅನುಷ್ಟಾನ ಆಗಬೇಕು.ಒಂದು ಗ್ರಾ.ಪಂ ಗುರುತಿಸುವುದಾದರೆ ಅಲ್ಲಿನ ಸ್ವಚ್ಛತೆ ಆಧಾರದಲ್ಲಿ ಅಂಕ ಕೊಡುತ್ತಾರೆ.ಪುತ್ತೂರು ನಗರಸಭೆ ಸ್ವಚ್ಛತಾ ಕಾರ್ಯಕ್ರಮದ ಮೂಲಕ ೩೬ನೇ ಸ್ಥಾನದಿಂದ ೬ನೇ ಸ್ಥಾನಕ್ಕೆ ಬಂದಿದೆ.ಮುಂದೆ ೧ನೇ ಸ್ಥಾನಕ್ಕೆ ಬರುವ ಗುರಿ ನಗರಸಭೆಯಲ್ಲಿದೆ.ನಗರ ಪ್ರದೇಶದಲ್ಲಿ ಸ್ವಚ್ಛತೆಯನ್ನು ನಿಯಂತ್ರಣ ಮಾಡಲು ಆಗುತ್ತದೆ ಎಂದಾದರೆ ಕೇವಲ ಒಣ ಕಸ ಮಾತ್ರ ಇರುವ ಗ್ರಾಮಾಂತರದಲ್ಲಿ ಯಾಕೆ ಆಗುವುದಿಲ್ಲ ಎಂಬುದು ನನ್ನ ಪ್ರಶ್ನೆ ಎಂದು ಹೇಳಿದ ಶಾಸಕರು,ಇದು ಪಿಡಿಒಗಳ ಅಸಡ್ಡೆಯೋ ಏನು ಗೊತ್ತಾಗುತ್ತಿಲ್ಲ.ನಾನು ಸೀರಿಯಸ್ ಆಗಿ ಹೇಳುವುದು ಇಷ್ಟೆ.ಎಲ್ಲಾ ಪಂಚಾಯತ್‌ಗಳು ನೂರಕ್ಕೆ ನೂರು ಸ್ವಚ್ಛತೆ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.

ವಸತಿ ಯೋಜನೆಯಲ್ಲಿ ನೂರಕ್ಕೆ ನೂರು ಗುರಿ ತಲುಪಬೇಕು: ವಸತಿ ಯೋಜನೆಗೆ ಸಂಬಂಧಿಸಿ ಹಲವು ಪಂಚಾಯತ್‌ಗಳಿಗೆ ಕೊಟ್ಟ ಗುರಿಯಲ್ಲಿ ಬಹುತೇಕ ಮಂದಿ ಸರಂಡರ್ ಮಾಡಿದ್ದಾರೆ.ಕೆಲವು ಪಂಚಾಯತ್‌ಗಳಲ್ಲಿ ತಾಂತ್ರಿಕ ತೊಂದರೆಯಿಂದ ಪೆಂಡಿಂಗ್ ಆಗಿದೆ ಎಂಬ ಕುರಿತು ಮಾಹಿತಿ ಪಡೆದ ಶಾಸಕರು, ಕಳೆದ 4 ವರ್ಷದಿಂದ ಒಂದೇ ಒಂದು ವಸತಿ ಕೊಟ್ಟಿಲ್ಲ ಎಂದು ಜನರು ಕೂಗಾಡುತ್ತಿದ್ದರು.ಇವತ್ತು ೧೧೨೦ ಮನೆಗಳನ್ನು ಕೊಡಲಾಗಿದೆ. ಅದರಲ್ಲಿ 140 ಪೆಂಡಿಂಗ್ ಇದೆ.ಪೆಂಡಿಂಗ್‌ಗೆ ಬೇರೆ ಬೇರೆ ಕಾರಣ ಇರಬಹುದು.ಸರಕಾರ ಆದೇಶ ನೀಡಿದ ನಿವೇಶನಕ್ಕೆ ಸಂಬಂಧಿಸಿ ನೂರಕ್ಕೆ ನೂರು ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಕೊಡುವ ಸಂಗತಿ ಮಾಡಬೇಕು.ಹೆಚ್ಚುವರಿ ಇದ್ದರೆ ಮತ್ತೆ ನೋಡೋಣ.ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳು ಒಂದು ವಾರದಲ್ಲಿ ಅಂತಿಮ ಮಾಡಿ ಹೆಚ್ಚುವರಿ ಇದ್ದರೆ ಮತ್ತೆ ನೋಡುವ ಎಂದರು.ಅದೇ ರೀತಿ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿರುವ ಕುರಿತು ಮಾಹಿತಿ ಪಡೆದು ನಿರಾಶ್ರಿತರಿಗೆ ನಿವೇಶನ ಕೊಡಿಸುವ ಕೆಲಸ ಮಾಡಬೇಕೆಂದು ಶಾಸಕರು ಸೂಚಿಸಿದರು.

ಬಾಕಿಯಾದ 25 ಟಿಸಿ ಅಳವಡಿಸಲು ಸೂಚನೆ: ಜಲಜೀವನ್ ಮಿಶನ್ ಯೋಜನೆಯ ಪ್ರಥಮ ಹಂತದಲ್ಲಿ ಸಿವಿಲ್ ಕಾಮಗಾರಿ ಮುಗಿದಿದೆ.೨೫ ಕಡೆಗಳಲ್ಲಿ ಮೆಸ್ಕಾಂನಿಂದ ಟಿಸಿ ಕೊಡಲು ಬಾಕಿ ಇದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರೂಪಲ್ ನಾಯಕ್ ಮಾಹಿತಿ ನೀಡಿದರು.ತಕ್ಷಣ ಟಿಸಿ ಒದಗಿಸಲು ಶಾಸಕರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ಕುಡಿಯುವ ನೀರಿನ ಯೋಜನೆಯ ನಿರ್ವಹಣಾ ವೆಚ್ಚವನ್ನು ನೀರಿನ ಶುಲ್ಕದಲ್ಲೇ ಭರಿಸಲು ಯೋಜನೆ ರೂಪಿಸಿ.ಅಭಿವೃದ್ಧಿ ಅನುದಾನ ನೀರಿಗೆ ಖರ್ಚಾಗದಂತೆ ನೋಡಿಕೊಳ್ಳಿ.ಅನೇಕ ಗ್ರಾಮಗಳಲ್ಲಿ ಬಹುಪಾಲು ಮಂದಿ ಜೆಜೆಎಂ ಮೂಲಕ ನೀರಿನ ಸಂಪರ್ಕ ಬೇಡವೆಂದಿದ್ದಾರೆ.ಅಂದರೆ ಅವರೆಲ್ಲ ನೀರಿನ ಸ್ವಂತ ಮೂಲ ಹೊಂದಿದ್ದಾರೆ.ಆದರೆ ಕೇವಲ ಈಗಿನ ಸ್ಥಿತಿ ನೋಡಿ ಈ ಲೆಕ್ಕ ಹಾಕಲಾಗದು.ಮುಂದಿನ ೨೫ ವರ್ಷಗಳ ದೂರದೃಷ್ಟಿ ಇಟ್ಟು ಈ ಯೋಜನೆ ರೂಪಿಸಲಾಗಿದೆ.ಹೀಗಾಗಿ ಭವಿಷ್ಯದ ಯೋಚನೆ ಮಾಡಿ.ಅತ್ಯಂತ ವೈಜ್ಞಾನಿಕವಾಗಿ ನೀರು ಸಂಪರ್ಕ ಹಂಚಿಕೆ ಮಾಡಿ ಎಂದು ಶಾಸಕರು ಸೂಚಿಸಿದರು. ನಮ್ಮ ಕ್ಷೇತ್ರದಲ್ಲಿ 1120 ಹೊಸ ಮನೆಗಳನ್ನು ನೀಡಲಾಗಿದೆ. ಇದಲ್ಲದೆ 94 ಸಿಯಲ್ಲಿ ಸಾವಿರಾರು ಮನೆಗಳಿಗೆ ಅಡಿಸ್ಥಳ ನೀಡಲಾಗಿದೆ.ಇವರೆಲ್ಲ ಮುಂದಿನ ದಿನ ನೀರಿನ ಸಂಪರ್ಕ ಕೇಳೋದಿಲ್ವಾ ಎಂದು ಶಾಸಕರು ಪ್ರಶ್ನಿಸಿದರಲ್ಲದೆ ಮುಂದಿನ ದಿನ ಇದೆಲ್ಲಾ ಪಂಚಾಯತ್‌ನವರಿಗೆ ಸಮಸ್ಯೆ ಆಗಲಿದೆ ಎಂದರು.

ಸಮಯಕ್ಕೆ ಸರಿಯಾಗಿ ಕೆಲಸ ಮಾಡದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ: ಜಲಜೀವನ್ ಮಿಶನ್ ಯೋಜನೆಯ ಅಡಿಯಲ್ಲಿ ಈಗ ಬಹುಪಾಲು ಬೋರ್‌ವೆಲ್ ಮೂಲಗಳನ್ನು ಅವಲಂಬಿಸಲಾಗಿದೆ.ಪ್ರತೀ ವ್ಯಕ್ತಿಗೆ ದಿನವೊಂದಕ್ಕೆ 55 ಲೀಟರ್ ನೀರು ಒದಗಿಸುವುದು ಇದರ ಉದ್ದೇಶ.ಸಂಪರ್ಕ ಕೊಟ್ಟು ನೀರು ಒದಗಿಸುವ ಕೆಲಸ ನಮ್ಮದು.ಭವಿಷ್ಯದ ನಿರ್ವಹಣೆ ಮತ್ತು ಶುಲ್ಕ ಸಂಗ್ರಹ ಗ್ರಾಪಂಗಳಿಗೆ ಸೇರಿದ್ದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರೂಪಲ್ ನಾಯಕ್ ಹೇಳಿದರು.ಟೆಂಡರ್ ಅವಧಿಯಲ್ಲಿ ಯೋಜನೆ ಮುಗಿಯಬೇಕು.ಈ ಕುರಿತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ.ಅದನ್ನು ಉಲ್ಲಂಘನೆ ಮಾಡುವವರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಶಾಸಕರು ಸೂಚಿಸಿದರು.ಮೂರು ಹಂತದಲ್ಲಿ ಯೋಜನೆ ಜಾರಿಗೆ ಬರುತ್ತಿದೆ. ಮೊದಲ ಹಂತದಲ್ಲಿ ಸಿವಿಲ್ ಕೆಲಸ ಪೂರ್ಣಗೊಂಡಿದೆ.2ನೇ ಹಂತದಲ್ಲಿ ಕೆಲಸ ನಡೆಯುತ್ತಿದೆ. ಮೂರನೇ ಹಂತದ ಡಿಪಿಆರ್ ಸಿದ್ಧಗೊಳ್ಳುತ್ತಿದೆ ಎಂದು ರೂಪಲ್ ನಾಯಕ್ ವಿವರಿಸಿದರು.

ತನ್ನ ಗ್ರಾಮದ ಮಾಹಿತಿ ಇಲ್ಲದಿದ್ದರೆ ಹೇಗೆ?: ಪ್ರತಿಯೊಬ್ಬ ಅಭಿವೃದ್ಧಿ ಅಧಿಕಾರಿಗೂ ತನ್ನ ಗ್ರಾಮ ಪಂಚಾಯಿತಿ ಬಗ್ಗೆ ಸಮಗ್ರ ಮಾಹಿತಿ ಬೇಕು.ಎಷ್ಟು ವಿಸ್ತೀರ್ಣವಿದೆ? ಎಷ್ಟು ಜನಸಂಖ್ಯೆ ಇದೆ? ಎಷ್ಟು ಮನೆಗಳಿವೆ? ಎಷ್ಟು ಬಡವರಿದ್ದಾರೆ ? ಎಷ್ಟು ಅಂತ್ಯೋದಯದವರಿದ್ದಾರೆ? ಎಷ್ಟು ಕೃಷಿಕರಿದ್ದಾರೆ ? ಎಷ್ಟು ನೀರಿನ ಸಂಪರ್ಕವಿದೆ ಇತ್ಯಾದಿ.ಆ ಚಿತ್ರಣ ಕಣ್ಣ ಮುಂದೆಯೇ ಇದ್ದು, ಪ್ರತೀ ವರ್ಷ ಅದನ್ನು ಅಪ್‌ಡೇಟ್ ಮಾಡುತ್ತಾ ಇರಬೇಕು.ಇಂಥ ಚಿತ್ರಣವಿದ್ದರೆ ಮಾತ್ರ ನೀವು ನಿಮ್ಮ ಗ್ರಾಮದ ಅಭಿವೃದ್ಧಿಗೆ ಒಂದು ಕ್ರಿಯಾಯೋಜನೆ ಮಾಡಬಹುದು.ಅದಿಲ್ಲದಿದ್ದರೆ ಏನು ಮಾಡಲು ಸಾಧ್ಯ ಎಂದು ಶಾಸಕರು ಕಿವಿ ಮಾತು ಹೇಳಿದರು.

1ನೇ ಸ್ಥಾನಕ್ಕೆ ಪ್ರಯತ್ನಿಸಿ: ಕಳೆದ ವರ್ಷ ಪುತ್ತೂರು ತಾಲೂಕು ನರೇಗಾ ಸಾಧನೆಯಲ್ಲಿ ಜಿಲ್ಲೆಯಲ್ಲಿ ೨ನೇ ಸ್ಥಾನ ಪಡೆದಿದ್ದು, ೧೧೯ ಶೇ.ಪ್ರಗತಿ ಸಾಧಿಸಿದೆ.ಈ ವರ್ಷ ಸಾಧನೆ ಹೆಚ್ಚಿಸಿ. ವರ್ಷದ ೩೬೫ ದಿನವೂ ಕಾರ್ಮಿಕರಿಗೆ ಉದ್ಯೋಗ ಸಿಗಲಿ ಎಂಬ ಕಾರಣಕ್ಕೆ ಸರಕಾರ ಯೋಜನೆ ಜಾರಿಗೆ ತಂದಿದೆ.ಗ್ರಾಪಂಗಳು ಜನರಿಗೆ ಈ ಬಗ್ಗೆ ಮಾಹಿತಿ ಒದಗಿಸಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವಂತೆ ಮಾಡಿ.೨ ವರ್ಷ ಕೊರೋನಾ ಕಾರಣದಿಂದ ಜನ ಊರಲ್ಲೇ ಇದ್ದು ಸದ್ಬಳಕೆ ಮಾಡಿಕೊಂಡರು.ಈಗ ಅಡಿಕೆ ತೋಟ ವಿಸ್ತರಣೆಯಾಗುತ್ತಿದೆ.ಜನರು ಕೂಡಾ ಸಹಜ ಸ್ಥಿತಿಯಲ್ಲಿದ್ದಾರೆ.ಹೀಗಾಗಿ ನರೇಗಾ ಬಳಕೆ ಪ್ರಮಾಣ ಹೆಚ್ಚಿಸುವಂತೆ ನೋಡಿಕೊಳ್ಳಿ ಎಂದು ಶಾಸಕರು ಸೂಚಿಸಿದರು.

ರಸ್ತೆ ಚರಂಡಿ ನಿರ್ವಹಣೆಗೂ ನರೇಗಾದಲ್ಲಿ ಅವಕಾಶ ನೀಡಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಹೊಸ ಕಾಮಗಾರಿಗಳನ್ನು ಸೇರಿಸಿ ಸರಕಾರ ಆದೇಶ ಹೊರಡಿಸಿದೆ.ಗ್ರಾಪಂಗೆ ಒಂದರಂತೆ ಕೆರೆ ಅಭಿವೃದ್ಧಿ ಇದರಲ್ಲಿ ಮಾಡಬಹುದು.ಶಾಲಾ ಮೈದಾನ, ಆವರಣ ಗೋಡೆ ಮಾಡಬಹುದು ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.ಗ್ರಾ.ಪಂ ಅಧ್ಯಕ್ಷೆಯೊಬ್ಬರು, ಅಂಗನವಾಡಿಯ ಆವರಣಗೋಡೆಗೂ ನರೇಗದಲ್ಲಿ ಅವಕಾಶ ನೀಡುವಂತೆ ವಿನಂತಿಸಿದರು.ಇನ್ನೊಂದು ಪಂಚಾಯತ್ ಅಧ್ಯಕ್ಷರು, ರಸ್ತೆಯ ಚರಂಡಿ ನಿರ್ಮಾಣವನ್ನೂ ಇದರಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.ಈ ಕುರಿತು ಶಾಸಕರು ಮಾತನಾಡಿ ಸಾರ್ವಜನಿಕರ ಉದ್ದೇಶಕ್ಕಾಗಿ ಇಂಗು ಗುಂಡಿಗೆ ನರೇಗದಲ್ಲಿ ಅವಕಾಶವಿದೆ.ಅದೇ ರೀತಿ ಚರಂಡಿಯೂ ಸಾರ್ವಜನಿಕ ಉದ್ದೇಶಕ್ಕಾಗಿ ಇರುವುದರಿಂದ ನರೇಗದಲ್ಲಿ ಇದನ್ನು ಸೇರಿಸುವ ಕುರಿತು ಪ್ರಿನ್ಸಿಪಾಲ್ ಸೆಕ್ರೆಟರಿಯಲ್ಲಿ ಮಾತನಾಡುತ್ತೇನೆ ಎಂದರು.ತಾಪಂ ಆಡಳಿತಾಧಿಕಾರಿ ಸಂಧ್ಯಾ, ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ಸಹಾಯಕ ನಿರ್ದೇಶಕಿ ಶೈಲಜಾ ವೇದಿಕೆಯಲ್ಲಿದ್ದರು.ಅರಿಯಡ್ಕ ಗ್ರಾ.ಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ, ಉಪಾಧ್ಯಕ್ಷ ಸಂತೋಷ್, ಆರ್ಯಾಪು ಗ್ರಾ.ಪಂನ ಅಧ್ಯಕ್ಷ ಸರಸ್ವತಿ, ಉಪಾಧ್ಯಕ್ಷೆ ಪೂರ್ಣಿಮಾ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ ಎ, ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ಇಂದಿರಾ ಎಸ್ ರೈ, ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ಪವಿತ್ರ ಡಿ, ಉಪಾಧ್ಯಕ್ಷೆ ವಿನೋದ್ ಕುಮಾರ್ ರೈ, ಹಿರೇಬಂಡಾಡಿ ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕಲ್ಲೇಗ, ಉಪಾಧ್ಯಕ್ಷ ರುಕ್ಮಯ್ಯ ಗೌಡ ಎಂ, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ, ಕೆಯ್ಯೂರು ಗ್ರಾ.ಪಂ ಅಧ್ಯಕ್ಷೆ ಜಯಂತಿ ಭಂಡಾರಿ, ಕೊಳ್ತಿಗೆ ಗ್ರಾ.ಪಂ ಉಪಾಧ್ಯಕ್ಷೆ ನಾಗವೇಣಿ ಕೆ, ಕುಡಿಪ್ಪಾಡಿ ಗ್ರಾ.ಪಂ ಅಧ್ಯಕ್ಷೆ ರೇಖಾ, ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪ ಎನ್, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಎ, ಉಪಾಧ್ಯಕ್ಷ ಸುಧಾಕರ ಕುಲಾಲ್, ೩೪ ನೆಕ್ಕಿಲಾಡಿ ಗ್ರಾ.ಪಂ ಅಧ್ಯಕ್ಷೆ ಪ್ರಶಾಂತಿ ಎನ್, ಉಪಾಧ್ಯಕ್ಷೆ ಸ್ವಪ್ನ, ನೆಟ್ಟಣಿಗೆಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ, ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷೆ ಪಿ ಸುಂದರಿ, ಉಪ್ಪಿನಂಗಡಿ ಗ್ರಾ.ಪಂ ಅಧ್ಯಕ್ಷೆ ಉಷಾ ಮುಳಿಯ,ಗ್ರಾ.ಪಂ ಪಿಡಿಒಗಳು ಉಪಸ್ಥಿತರಿದ್ದರು.

ಮೋಡೆಲ್ ಪಂಚಾಯತ್ ಆಗಬೇಕೆಂಬ ಛಲದಿಂದ ಕೆಲಸ ಮಾಡಿ:
ಪುತ್ತೂರು ತಾಲೂಕಿನ ೨೨ ಪಂಚಾಯತ್‌ಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ ಯಾವ ರೀತಿಯಾಗಿ ಸದ್ವಿನಿಯೋಗವಾಗಿದೆ ಮತ್ತು ಅನುಷ್ಠಾನ ಯಾವ ಹಂತದಲ್ಲಿ ಆಗಿದೆ ಎಂದು ಪರಾಮರ್ಶೆಗಾಗಿ ಇಲ್ಲಿ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳ ಸಭೆ ನಡೆಸಲಾಗಿದೆ. ಇಲ್ಲಿ ನಾವು ಏನು ಸಾಧನೆ ಮಾಡಬೇಕೆಂಬುದನ್ನು ತಿಳಿಯುವ ಸಂಗತಿ ಆಗಿದೆ.ಸ್ವಲ್ಪ ನಮ್ಮ ಪಂಚಾಯತ್ ಇತರ ಪಂಚಾಯತ್‌ಗಿಂತ ಭಿನ್ನವಾಗಿರಬೇಕು.ಒಂದು ಮೋಡೆಲ್ ಪಂಚಾಯತ್ ಆಗಬೇಕು ಎಂದು ಛಲದಿಂದ ಕೆಲಸ ಮಾಡಿದಾಗ ಖಂಡಿತಾ ಒಳ್ಳೆಯ ಪರಿಣಾಮ ಕಾಣಬಹುದು. ಅದನ್ನು ಜನರು ಸ್ವಾಗತಿಸುವ ಸಂಗತಿ ಆಗುತ್ತದೆ.ಎಲ್ಲೆಲ್ಲಿ ಕೊರತೆ ಆಗಿದೆ ಅದನ್ನು ಭರ್ತಿ ಮಾಡುವ ಕೆಲಸ ಆಗಬೇಕು.ಜನರಿಗೆ ಪ್ರಾಮಾಣಿಕ ಸೇವೆ ನೀಡುವ ಕೆಲಸ ಆಗಬೇಕು.ಬಹಳಷ್ಟು ಕಡೆ ನಮಗೆ ಸಮಸ್ಯೆ ಬರುವುದು ಪಂಚಾಯತ್‌ನಿಂದ.ನೀವು ಮಾಹಿತಿ ಸರಿಯಾಗಿ ಕೊಟ್ಟರೆ ಸಮಸ್ಯೆ ಬರುವುದಿಲ್ಲ.ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಪಂಚಾಯತ್‌ಗಳಲ್ಲೇ ವ್ಯವಸ್ಥೆ ಮಾಡಬೇಕು.ಇನ್ನು ಒಂದು ವರ್ಷದಲ್ಲಿ ಸಾಧಕರಾಗಿ ಇತರ ಪಂಚಾಯತ್‌ಗಳಿಗೆ ಮಾದರಿಯಾಗಿ- ಸಂಜೀವ ಮಠಂದೂರು, ಶಾಸಕರು ಪುತ್ತೂರು

ಪುತ್ತೂರಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸಿದ್ದತೆ:
ಪುತ್ತೂರಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಮಾಡಲು ಯಾವುದೇ ಡ್ಯಾಮ್‌ಗಳಿಲ್ಲ.ಬಹುಗ್ರಾಮ ಯೋಜನೆ ಅನುಷ್ಠಾನ ಆಗಬೇಕಾದರೆ 364 ದಿವಸವೂ ಹರಿಯುವಂತಹ ನೀರಿನ ಜಲಮೂಲ ಬೇಕು. ಕುಮಾರಧಾರದಲ್ಲಿ ಈ ನೀರಿನ ವ್ಯವಸ್ಥೆ ಇದೆ.ಆದರೆ ನಮ್ಮಲ್ಲಿ ಡ್ಯಾಮ್ ಇಲ್ಲ.ನಗರಸಭೆಯ ಚೆಕ್ ಡ್ಯಾಮ್‌ಗೆ ಅನುಮತಿ ಕೊಡುತ್ತಿಲ್ಲ. ಹಾಗಾಗಿ ಎರಡುಮೂರು ಯೋಜನೆ ಹಾಕಿದ್ದೇವೆ.ಉಪ್ಪಿನಂಗಡಿ ಬಿಳಿಯೂರಿನಲ್ಲಿ ರೂ.50 ಕೋಟಿಯ ಡ್ಯಾಮ್ ಮತ್ತು ಬ್ರಿಡ್ಜ್ ಆಗುತ್ತಿದೆ. ಬರುವ ವರ್ಷದಿಂದ ಅಲ್ಲಿಂದ ಬಹುಗ್ರಾಮ ಯೋಜನೆಯಲ್ಲಿ ನೀರು ಪಡೆಯಲು ಸಾಧ್ಯವಿದೆ. ಇನ್ನೊಂದು, ಕುಮಾರಧಾರ ನದಿಗೆ ಬೆಳ್ಳಿಪ್ಪಾಡಿ ಕಠಾರದಲ್ಲಿ ಯೋಜನೆ ಆಗಿ ಡಿಪಿಆರ್ ಆಗಿದೆ.ಅದು ಆದರೆ ಈ ಭಾಗದವರಿಗೆ ನೀರಿನ ವ್ಯವಸ್ಥೆ ಆಗುತ್ತದೆ.ಅದೇ ರೀತಿ ಶಾಂತಿಮೊಗರಿನಲ್ಲಿ ಡ್ಯಾಮ್ ಆಗಿದೆ.ಅಲ್ಲಿಂದ ಕಡಬ ಭಾಗಕ್ಕೆ ನೀರಿನ ವ್ಯವಸ್ಥೆಗೆ ಡಿಪಿಆರ್ ಆಗಿದೆ.ಪುತ್ತೂರು ತಾಲೂಕಿನ ಬೇರೆ ಪಂಚಾಯತ್‌ಗಳಿಗೆ ಕಡೆಶೀವಾಲಯ ಕೇಮಾರು ಡ್ಯಾಮ್‌ನಿಂದ ಈಗಾಗಲೇ ಬಹುಗ್ರಾಮಯೋಜನೆಗೆ ರೂ.೩೭೫ ಕೋಟಿ ಅನುದಾನ ಡಿಪಿಆರ್ ಆಗಿದೆ.ಕಾಮಗಾರಿಗೆ ಸಂಬಂಧಿಸಿ ಸರಕಾರದ ಹಂತದಲ್ಲಿ ಅನುಮತಿಗೆ ಬಾಕಿ ಇದೆ.ಇದರ ಅಡಿಯಲ್ಲಿ ಪುಣಚ ಮತ್ತು ಬಲ್ನಾಡಿನಲ್ಲಿ ಬೃಹತ್ ಟ್ಯಾಂಕ್‌ಗಳನ್ನು ನಿರ್ಮಿಸಿ ಅವುಗಳಿಗೆ ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಎಎಂಆರ್ ಡ್ಯಾಂನಿಂದ ನೀರು ಪೂರೈಸುವ ಯೋಜನೆಯಿದೆ.ಟ್ಯಾಂಕ್‌ಗಳಿಂದ ಪೈಪ್‌ಲೈನ್ ಮೂಲಕ ವಿಟ್ಲ, ಕನ್ಯಾನ, ಪೆರುವಾಯಿ ಸೇರಿದಂತೆ ಆ ಬಾಗದ ಎಲ್ಲ ಗ್ರಾಮಗಳಿಗೆ ಮತ್ತು ಪುತ್ತೂರು ತಾಲೂಕಿನ ಇತರ ಗ್ರಾಮಗಳಿಗೂ ನೀರು ಸರಬರಾಜು ಮಾಡಲಾಗುತ್ತದೆ. ಅಲ್ಲಿಯವರೆಗೆ ಜೆಜೆಎಂ ಯೋಜನೆಯ ಅಡಿಯಲ್ಲಿ ಬೋರ್‌ವೆಲ್‌ಗಳ ಮೂಲಕವೇ ನೀರು ಒದಗಿಸಬೇಕಾಗಿದೆ ಎಂದು ಶಾಸಕರು ವಿವರಿಸಿದರು.

ಜು.9ಕ್ಕೆ ಪುತ್ತೂರಿನಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧದ ಜಾಥಾ-ಆಹ್ವಾನ

ಲಂಚ ಭ್ರಷ್ಟಾಚಾರ ವಿರುದ್ಧ ಶಾಸಕರ ನೇತೃತ್ವದಲ್ಲಿ ಘೋಷಣೆ , ಪ್ರತಿಜ್ಞಾ ಸ್ವೀಕಾರ

ಶಾಸಕರಿಂದ ತಾ. ಪಂ ಸಭಾಂಗಣದಲ್ಲಿ ಗ್ರಾ.ಪಂ.ಅಭಿವೃದ್ಧಿ ಪರಾಮರ್ಶೆಗೆ ಅಧ್ಯಕ್ಷ, ಉಪಾಧ್ಯಕ್ಷರು, ಪಿಡಿಒಗಳ ಸಭೆ

ಜು.9ಕ್ಕೆ ಪುತ್ತೂರಿನಲ್ಲಿ ಲಂಚ ಭ್ರಷ್ಟಾಚಾರ ವಿರುದ್ಧದ ಆಂದೋಲನ ವಾಹನ ಜಾಥಾ ರೂಪದಲ್ಲಿ ನಡೆಯಲಿದೆ. ಶಾಸಕರೇ ಜಾಥಾವನ್ನು ಉದ್ಘಾಟಿಸಲಿದ್ದಾರೆ. ಅಂದು ‘ಲಂಚ-ಭ್ರಷ್ಟಾಚಾರ ಮುಕ್ತ ಗ್ರಾಮ’ ಎಂದು ಘೋಷಣೆ ಕೂಗಿದ ಗ್ರಾಮದವರು ಮತ್ತು ಜನರು ಆರಿಸಿದ ಉತ್ತಮ ಅಧಿಕಾರಿಗಳನ್ನು ಮೆರವಣಿಗೆ ಮಾಡಿ ಅವರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಗುವುದು ಎಂದು ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ ಜಾಥಾದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ವಿನಂತಿಸಿದರು.೨೦೦೨ರಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಉಲ್ಲೇಖ ಮಾಡಿದಂತೆ, ದೇಶದಲ್ಲಿ ಬಡತನಕ್ಕೆ ಹೆಚ್ಚು ಕಾರಣ ಭ್ರಷ್ಟಾಚಾರ ಆಗಿದೆ.೨೦೦೨ರಿಂದ ೨೦೦೩ರ ತನಕ ಒಂದು ವರ್ಷ ವಿಶ್ವ ಸಂಸ್ಥೆ ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿತ್ತು. ಅಂದಿನಿಂದ ಡಿಸೆಂಬರ್ 9ನ್ನು ವರ್ಷದ ಜಾಗತಿಕ ಭ್ರಷ್ಟಾಚಾರ ಮುಕ್ತ ದಿನವೆಂದು ಆಚರಣೆ ಮಾಡಲಾಗುತ್ತಿದೆ. ಆದರೂ ಲಂಚ ಭ್ರಷ್ಟಾಚಾರ ನಿಂತಿಲ್ಲ. ಎಲ್ಲರ ಮನಸ್ಸಿನಲ್ಲಿ ಲಂಚ ಭ್ರಷ್ಟಾಚಾರ ನಿಲ್ಲಬೇಕೆಂದಿದೆ. ಹಾಗಾಗಿ ಲಂಚ-ಭ್ರಷ್ಟಾಚಾರದ ವಿರುದ್ಧ ಅನೇಕ ಆಂದೋಲನ ಮಾಡಿದ್ದೇವೆ. ಪುತ್ತೂರು ತಾಲೂಕನ್ನು ಲಂಚ ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಮಾಡಬೇಕು.ಅದಕ್ಕಾಗಿ ಪುತ್ತೂರಿನಲ್ಲಿ ಜು.೯ಕ್ಕೆ ಆಂದೋಲನದ ಮೆರವಣಿಗೆ ಹಮ್ಮಿಕೊಂಡಿದ್ದೇವೆ.ಅವತ್ತು ಜನರು ಗುರುತಿಸಿದ ಉತ್ತಮ ಅಧಿಕಾರಿಗಳನ್ನು ಮೆರವಣಿಗೆ ಮಾಡಿ ಅವರನ್ನು ಸನ್ಮಾನ ಮಾಡಲಾಗುವುದು.ಈಗಾಗಲೇ ಪುತ್ತೂರಿನಲ್ಲಿ ಒಳಮೊಗ್ರು, ಕೊಳ್ತಿಗೆ, ಬೆಳ್ತಂಗಡಿಯಲ್ಲಿ ನೆರಿಯ, ಸುಳ್ಯದಲ್ಲಿ ಮಂಡೆಕೋಲು ಪಂಚಾಯತ್ ಮತ್ತು ಆಡಳಿತ ಸೇರಿ ನಮ್ಮ ಗ್ರಾಮ ಲಂಚ ಭ್ರಷ್ಟಾಚಾರ ಮುಕ್ತ ಗ್ರಾಮವೆಂದು ಘೋಷಣೆ ಮಾಡಿದ್ದಾರೆ.ಯಾವ ಗ್ರಾಮದವರು ಲಂಚ ಭ್ರಷ್ಟಾಚಾರಮುಕ್ತ ಎಂದು ಘೋಷಣೆ ಮಾಡಿರುತ್ತಾರೋ ಅವರನ್ನು ಕರೆದು ಅಭಿನಂದಿಸಲಾಗುವುದು. ಆ ದಿನ ಪುತ್ತೂರು ತಾಲೂಕು ಲಂಚ ಭ್ರಷ್ಟಾಚಾರ ಮುಕ್ತ ತಾಲೂಕು ಎಂದು ಘೋಷಣೆ ಆಗಬೇಕು.ಇದು ಜಾಗತಿಕ ಪುಟದಲ್ಲಿ ಸೇರಬೇಕು ಎಂದು ಡಾ.ಶಿವಾನಂದ್ ಹೇಳಿದರು. ಪ್ರಸ್ತುತ ನಾವು ಲಂಚ-ಭ್ರಷ್ಟಾಚಾರ ಮಾಡುವವರನ್ನು ಗುರುತಿಸುವ ಬದಲು ಉತ್ತಮ ಸೇವೆ ಮಾಡುವವರನ್ನು ಗುರುತಿಸುತ್ತೇವೆ.ಪ್ರತಿ ವಾರ ಪುತ್ತೂರು, ಸುಳ್ಯ, ಬೆಳ್ತಂಗಡಿ ಪತ್ರಿಕೆಯಲ್ಲಿ ತಲಾ ನಾಲ್ಕು ಮಂದಿ ಅಧಿಕಾರಿಗಳ ಫೊಟೋ ಪ್ರಕಟಿಸುತ್ತಿದ್ದೇವೆ. ಅವರು ಮೊದಲು ಹೇಗಿದ್ದರು ಎಂಬ ಪ್ರಶ್ನೆಯಲ್ಲ.ಪ್ರಸ್ತುತ ಉತ್ತಮ ಅಧಿಕಾರಿ ಆಗಿದ್ದಾರೆ ಎಂಬುದು ಮುಖ್ಯ.ನಾವು ಮನಪರಿವರ್ತನೆ ಮಾಡುವ ಕೆಲಸ ಮಾಡಿದ್ದೇವೆ. ಜು.9ರಂದು ನಡೆಯುವ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ದೇಶದಲ್ಲೇ ಪ್ರಥಮ ಲಂಚ-ಭ್ರಷ್ಟಾಚಾರ ಮುಕ್ತ ತಾಲೂಕು ಆಗಬೆಕೆಂದು ಘೋಷಣೆ ಕೂಗಿಸಲಿದ್ದೇವೆ ಎಂದು ಡಾ.ಯು.ಪಿ.ಶಿವಾನಂದರು ಹೇಳಿದರು.

 ಪಕ್ಷ ರಹಿತ ಪಂಚಾಯತ್ ನನಗೆ ಪ್ರಿಯ: ಪ್ರಜಾಪ್ರಭುತ್ವದಲ್ಲಿ ಪಕ್ಷ ರಹಿತವಾದ ಆಡಳಿತ ಎಂದರೆ ಅದು ಗ್ರಾಮ ಪಂಚಾಯತ್ ಆಡಳಿತ. ಅದು ನನಗೆ ಪ್ರಿಯ. ತಾಲೂಕಿನ ಪತ್ರಿಕೆ ನಮಗೆ ಗ್ರಾ.ಪಂ ರಾಜ್ಯವಿದ್ದಂತೆ.ಅಲ್ಲಿನ ಆಡಳಿತವೇ ನಮಗೆ ಮುಖ್ಯಮಂತ್ರಿಗಳು.ಹಾಗಾಗಿ ನಾವು ನಿಮ್ಮನ್ನು ಮಂತ್ರಿಗಳಂತೆ ಕಂಡು ಮಾತನಾಡುತ್ತೇವೆ ಎಂದು ಡಾ.ಶಿವಾನಂದ್ ಹೇಳಿದರು.ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಹಮತ: ಯಾವ ಊರು ಲಂಚ ಭ್ರಷ್ಟಾಚಾರ ಮುಕ್ತ ಆಗುತ್ತದೆಯೋ ಅಲ್ಲಿ ಒಳ್ಳೆಯ ಕೆಲಸ ಆಗುತ್ತದೆ. ಸ್ಥಳೀಯವಾಗಿ ನಿಮ್ಮ ಗ್ರಾಮ ಲಂಚ ಭ್ರಷ್ಟಾಚಾರ ಮುಕ್ತ ಆಯಿತು ಎಂದಾದರೆ ನಿಮ್ಮಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಹಮತವಿದೆ.ನೀವು ಮಾಡುವ ಯೋಜನೆಗಳನ್ನು ನಾವು ಜನರ ಮುಂದೆ ಇಡುತ್ತೇವೆ. ನಮ್ಮ ತಾಲೂಕು ದೇಶದಲ್ಲಿ ಅತೀ ಹೆಚ್ಚು ಸಾಧನೆ ಮಾಡುವ ತಾಲೂಕು ಆಗಿ ಮೂಡಿ ಬರಬೇಕು. ದೆಹಲಿಯಲ್ಲೂ ನಮ್ಮೂರಿನ ಕಾರ್ಯಕ್ರಮಕ್ಕೆ ಕೊಡುಗೆ ಕೊಡಲು ಅಲ್ಲಿನವರು ಮುಂದೆ ಬಂದಿದ್ದಾರೆ. ಮೋದಿಯವರು ಪರದೇಶಕ್ಕೆ ಹೋದಾಗ ನಮ್ಮ ದೇಶಕ್ಕೆ ಬನ್ನಿ ಎಂದು ಆಹ್ವಾನ ಮಾಡುವ ರೀತಿ ನಾವು ಜಗತ್ತಿನಲ್ಲಿರುವ ಪುತ್ತೂರಿನವರು ಪುತ್ತೂರಿಗೆ ಕೊಡುಗೆ ಕೊಡಿ ಎಂದು ಆಹ್ವಾನಿಸುತ್ತೇವೆ. ಬೆಂಗಳೂರಿನಲ್ಲಿರುವ ಸುಳ್ಯ ಪುತ್ತೂರಿನವರಿಗೂ ಏನು ಕೊಡುಗೆ ಕೊಡುತ್ತೀರಿ ಎಂದು ಕೇಳುತ್ತೇವೆ. ಗಾಂಧಿಯವರ ಗ್ರಾಮ ಸ್ವರಾಜ್ಯದ ಚಿಂತನೆಯಿಂದ ಗ್ರಾಮದ ಜನರನ್ನು ತೊಡಗಿಸುವ ಮೂಲಕ ಸಹಭಾಗಿತ್ವದಿಂದ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ಯು.ಪಿ.ಶಿವಾನಂದ ಅವರು ಹೇಳಿದರು.ಕೊನೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಶಾಸಕರ ನೇತೃತ್ವದಲ್ಲಿ ಘೋಷಣೆ ಕೂಗಿ, ಪ್ರತಿಜ್ಞೆ ಸ್ವೀಕರಿಸಲಾಯಿತು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.

LEAVE A REPLY

Please enter your comment!
Please enter your name here