ಕಳಾರ ಅಂಗನವಾಡಿ ಕೇಂದ್ರ ಉದ್ಘಾಟನೆ

0

ಅಂಗನವಾಡಿ ಕೇಂದ್ರಗಳು ಸಂಸ್ಕಾರ ಕೊಡುವ ಕೇಂದ್ರಗಳಾಗಬೇಕು-ಎಸ್. ಅಂಗಾರ

ಕಡಬ: ಇಂದಿನ ಶಿಕ್ಷಣ ಪದ್ದತಿಯಲ್ಲಿ ನಮ್ಮ ಮಕ್ಕಳಿಗೆ ಜೀವನ ಪಾಠದ ಕೊರತೆ ಉಂಟಾಗಿದ್ದು ಅದಕ್ಕಾಗಿ ಅಂಗನವಾಡಿಯಿಂದಲೇ ಮಕ್ಕಳಿಗೆ ಸಂಸ್ಕಾರ ಕೊಡುವಂತಾಗಬೇಕು ಎಂದು ಬಂದರು ಮತ್ತು ಒಳನಾಡು ಮೀನುಗಾರಿಕಾ ಸಚಿವ ಕ್ಷೇತ್ರದ ಶಾಸಕರೂ ಆಗಿರುವ ಎಸ್. ಅಂಗಾರ ಅವರು ಹೇಳಿದರು.

ಅವರು ಕಡಬ ಸಮೀಪದ ಕಳಾರದಲ್ಲಿ ಸುಮಾರು 10ಲಕ್ಷ ರೂ. ಅನುದಾನದಲ್ಲಿ ನಿಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಜಾತಿಯಿಂದ ಯಾರಿಗೂ ಯಾವ ಕೀರ್ತಿ ಬಂದಿಲ್ಲ, ಆದರೆ ಅವರು ಅನುಸರಿಸುವ ನೀತಿಯಿಂದಾಗಿ ಕೀರ್ತಿ ಬಂದಿದೆ, ಶಿಕ್ಷಣ ಕೇಂದ್ರಗಳಿಂದ ಸಂಸ್ಕಾರ ದೊರೆತಾಗ ಮಾತ್ರ ಉತ್ತಮ ಯುವ ಸಮುದಾಯ ಸೃಷ್ಟಿಯಾಗಲು ಸಾಧ್ಯ ಎಂದ ಅವರು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸರಕಾರ ಈಗಾಗಲೇ ಶಿಕ್ಷಕರನ್ನು ನೇಮಕಕ್ಕೆ ಕ್ರಮ ಕೈಗೊಂಡಿದೆ, ಅಲ್ಲದೆ ಒಳನಾಡು ಮಿನುಗಾರಿಕೆ ನಡೆಸಲು ವಿಪುಲ ಅವಕಾಶ ಇದ್ದು ಇದರಲ್ಲಿ ತೊಡಗಿಸಿಕೊಂಡು ಸ್ವ-ಉದ್ಯೋಗವನ್ನು ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಅಂಗಾರ ರಾಜ್ಯದ ಬಂಗಾರ-ಸಿ.ಡಿ.ಪಿ.ಒ

ಪುತ್ತೂರು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ರೀಲತಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ವೇಳೆ ಸಚಿವರ ಕಾರ್ಯಶೈಲಿಯನ್ನು ವಿವರಿಸಿ ರಾಜ್ಯದ ಕೆಲಸದ ಜತೆಯೂ ಜನ ಸಾಮಾನ್ಯರ ಸಂಪರ್ಕಕ್ಕೆ ಸುಲಭವಾಗಿ ಸಿಗುವ ಸಚಿವರಾಗಿದ್ದಾರೆ, ಇವರು ಸುಳ್ಯದ ಬಂಗಾರ ಅಲ್ಲ ಬದಲಾಗಿ ರಾಜ್ಯದ ಬಂಗಾರ ಎಂದು ಹೇಳಿದರು. ಈ ಮಾತು ಎಲ್ಲರ ಗಮನ ಸೆಳೆಯಿತು. ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ, ಮಾಜಿ ತಾ.ಪಂ. ಅಧ್ಯಕ್ಷೆ ಪುಲಸ್ತ್ಯ ರೈ, ವಲಯಾರಣ್ಯಧಿಕಾರಿ ಅಜಿತ್, ಕಳಾರ ಜುಮ್ಮಾ ಮಸಿದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಡ್ಕಾಡಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಮ್ಲಾ, ಮಾಜಿ ಅಧ್ಯಕ್ಷ ಕೆ.ಎಚ್. ಇಸ್ಮಾಯಿಲ್, ಕಡಬ ಗ್ರಾ.ಪಂ. ಮಾಜಿ ಸದಸ್ಯರಾದ ಸೈಮನ್ ಸಿ.ಜೆ, ಶಾಲಿನಿಸತೀಶ್ ನಾಕ್, ಸುಶೀಲ, ಆದಂ ಕುಂಡೋಳಿ, ಶಿಕ್ಷಕ ಹಮೀದ್ ಮಾಸ್ತರ್ ಪಾಲಪ್ಪೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಜಿ ಕಡಬ ಗ್ರಾ.ಪಂ. ಅಧ್ಯಕ್ಷ ಹನೀಫ್ ಕೆ.ಎಂ. ಸ್ವಾಗತಿಸಿ, ಕಡಬ ಪಟ್ಟಣ ಪಂಚಾಯತ್ ಸಿಬ್ಬಂದಿ ಹರೀಶ್ ಬೆದ್ರಾಜೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಿಸಿದ ಗುತ್ತಿಗೆದಾರ ನಾಗೇಶ್ ಹಾಗೂ ಸಹಕರಿಸಿದ ಹಲವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಡಬ ವಲಯ ಮೇಲ್ವಿಚಾರಕಿ ಭವಾನಿ, ಅಂಗನವಾಡಿ ಕಾರ್ಯಕರ್ತೆ ಸುಶೀಲ ಸೇರಿದಂತೆ ಬಾಲವಿಕಾಸ ಸಮಿತಿಯವರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here