34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸಭೆ

0

ಕುಡಿಯುವ ನೀರಿನ ಕರ ಬ್ಯಾಂಕ್‌ಗೆ ಕಟ್ಟದ ಆರೋಪ ಸಿಬ್ಬಂದಿಯೋರ್ವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ನಿರ್ಣಯ

ಉಪ್ಪಿನಂಗಡಿ: ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಕರವನ್ನು ಬ್ಯಾಂಕ್‌ಗೆ ಕಟ್ಟದೇ ತನ್ನಲ್ಲೇ ಇರಿಸಿಕೊಂಡ ಆರೋಪದಲ್ಲಿ ಸಿಬ್ಬಂದಿಯೋರ್ವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಮೇಲಾಧಿಕಾರಿಯನ್ನು ಕೋರಿ 34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

34-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಪಿಡಿಒ. ಕುಮಾರಯ್ಯ ಗತ ಸಭೆಯ ವರದಿ ತಿಳಿಸುತ್ತಿದ್ದಂತೆ ನೀರಿನ ಕರ ವಸೂಲಿ ಸಿಬ್ಬಂದಿ 30 ಸಾವಿರಕ್ಕೂ ಮಿಕ್ಕ ಹಣವನ್ನು ಬ್ಯಾಂಕ್‌ಗೆ ನಿಗದಿತ ಅವಧಿಗೆ ಮುನ್ನ ಜಮೆ ಮಾಡದೇ ಇರುವ ವಿಚಾರ ಮತ್ತು ದಾಖಲೆಗಳ ತಿದ್ದುಪಡಿ ಮಾಡಿದ ಕುರಿತು ಸಭೆಯ ಗಮನಕ್ಕೆ ತಂದಾಗ ಸದಸ್ಯರು ಅಂತಹ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವ ಬಗ್ಗೆ ಮೇಲಾಧಿಕಾರಿಯನ್ನು ಕೋರಿ ನಿರ್ಣಯ ಅಂಗೀಕರಿಸುವಂತೆ ಸೂಚನೆ ನೀಡಿದ್ದು, ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಗ್ರಾಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಯೋಜನೆಯಡಿ ಕಾಮಗಾರಿ ನಡೆಯುತ್ತಿರುತ್ತದೆ, ಆದರೆ ಗುತ್ತಿಗೆ ಪಡೆದವರು ಗುಣಮಟ್ಟವಿಲ್ಲದ ಕಾಮಗಾರಿ ನಡೆಸಿ ತಮ್ಮ ಪಾಡಿಗೆ ಹಿಂತಿರುಗುತ್ತಾರೆ. ಅಲ್ಲದೆ ಈ ಕುರಿತು ಇಂಜಿನಿಯರ್‌ಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಇನ್ನೂ ಮುಂದೆ ಗ್ರಾಮ ಪಂಚಾಯಿತಿ ನಿರಾಪೇಕ್ಷಣಾ ಪತ್ರವಿಲ್ಲದೆ ಬಿಲ್ಲು ಪಾವತಿಸಿದಲ್ಲಿ ಸಂಬಂಧಪಟ್ಟ ಇಲಾಖೆಯೇ ಹೊಣೆಗಾರಿಕೆ ವಹಿಸಲಿ ಎಂದು ನಿರ್ಣಯಿಸಲಾಗಿ, ಅಲ್ಲದೆ ಕಾಮಗಾರಿ ಮುಗಿದ ಬಳಿಕ ಕಳಪೆ ನಡೆಸಿದ ಕಾಮಗಾರಿ ಹಸ್ತಾಂತರಕ್ಕೂ ಒಪ್ಪದಿರಲು ನಿರ್ಣಯಿಸಲಾಯಿತು.

ಗ್ರಾಮದಲ್ಲಿ ಅನಧಿಕೃತ ಅಂಗಡಿಗಳು ತಲೆ ಎತ್ತಿದ್ದು, ಅಂತಹವರಿಗೆ ದಂಡ ವಿಧಿಸುವ ಬಗ್ಗೆ ಪಿಡಿಒ.ಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ, ಆದರೆ ಪಿಡಿಒ. ಯಾಕೆ ಈ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಸದಸ್ಯರು ದಂಡ ವಿಧಿಸುವಂತೆ ಸೂಚನೆ ನೀಡಿದರು.

ಪಕ್ಕದ ಕೋಡಿಂಬಾಡಿ ಗ್ರಾಮದಲ್ಲಿ ನಿರಂತರ ವಿದ್ಯುತ್ ಇದ್ದರೂ ನಮಗೆ ಯಾಕೆ ಪವರ್ ಕಟ್ ನೆಪದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಇಲಾಖೆಯ ಗಮನಕ್ಕೆ ತಂದರೂ ಸಮಸ್ಯೆ ಸರಿ ಆಗಿಲ್ಲ. ಮುಂದೆ ಗ್ರಾಮಸ್ಥರನ್ನು ಒಳಗೊಂಡು ಗ್ರಾಮ ಪಂಚಾಯಿತಿ ಆಡಳಿತ ಮೆಸ್ಕಾಂ ಉಪ ವಿಭಾಗದ ಕಛೇರಿ ಮುಂದೆ ಪ್ರತಿಭಟನೆ ನಡೆಸುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಸ್ವಪ್ನಾ, ಸದಸ್ಯರಾದ ವಿಜಯ ಕುಮಾರ್, ಹರೀಶ ಕೆ, ರಮೇಶ ನಾಯ್ಕ, ತುಳಸಿ, ಹರೀಶ ಡಿ, ವೇದಾವತಿ, ಗೀತಾ, ರತ್ನಾವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here