ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ “ಬಿತ್ತೋತ್ಸವ” ಬೀಜ ಬಿತ್ತನೆ ಕಾರ್ಯಕ್ರಮ

0

 ಕೆಯ್ಯೂರು:  ಕೆಪಿಎಸ್ ಕೆಯ್ಯೂರಿನ ಪ್ರೌಢಶಾಲಾ ವಿಭಾಗದಲ್ಲಿ  ಅರಣ್ಯ ಇಲಾಖೆ ವತಿಯಿಂದ “ಬಿತ್ತೋತ್ಸವ”  ಬೀಜ ಬಿತ್ತನೆ ಕಾರ್ಯಕ್ರಮ ನಡೆಯಿತು.

ಎತ್ತರಕ್ಕೆ ಬೆಳೆಯುವ ಹಣ್ಣಿನ ಮರ ಹಾಗೂ ಕಾಡು ಮರಗಳ ಬೀಜಗಳನ್ನು ಬಿತ್ತುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಸ್ ಭಂಡಾರಿಯವರು ಬೀಜ ಬಿತ್ತನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ , ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಕ್ರಮ ಎಂದು ಅವರು ಹೇಳಿದರು. ವಲಯ ಅರಣ್ಯ ಅಧಿಕಾರಿ ಕಾರ್ಯಪ್ಪನವರು  ಪ್ರಾಸ್ತಾವಿಕ ಮಾತುಗಳಲ್ಲಿ ಅರಣ್ಯ ಸಂರಕ್ಷಣೆ, ಪರಿಸರ ಸಮತೋಲನ ಇತ್ಯಾದಿಗಳ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ  ಹೇಳಿದರು. ಒಂದು ಮಗು ಬೆಳೆದು ದೇಶದ ಪ್ರಜೆಯಾದಂತೆ, ಬೀಜವೊಂದು ಮೊಳೆತು, ಗಿಡವಾಗಿ, ಮರವಾಗಿ ಪ್ರಕೃತಿಯ ಭಾಗವಾಗುತ್ತದೆ ಎಂದರು. ಮನೆಯೆಂಬುದು ವಿದ್ಯಾರ್ಥಿಗಳಿಗೆ ಒಂದು ಪ್ರಯೋಗ ಶಾಲೆ ಇದ್ದಂತೆ, ಅಲ್ಲಿ ಪರಿಸರದ ಕುರಿತ ಪಾಠಗಳನ್ನು ಮಗು ನೋಡಿ ಕಲಿಯಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು  ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ ಯವರು ಈ ಬಾರಿಯ ಪರಿಸರ ದಿನಾಚರಣೆಯನ್ನು ಅರಣ್ಯ ಇಲಾಖೆಯವರು ವಿನೂತನ ರೀತಿಯಲ್ಲಿ ಆಚರಿಸುತ್ತಿರುವುದು ಖುಷಿ ತಂದಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಹಾಗೂ ಪರಿಸರದ ಕುರಿತ ಕಾಳಜಿ ಬೆಳೆಸಲು ಇದು ಕಾರಣವಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.  ಈ ಸಂದರ್ಭದಲ್ಲಿ ವಿವಿಧ ಮರಗಳ ಬೀಜಗಳನ್ನು ಸಂಗ್ರಹಿಸುವ ಸ್ಪರ್ಧೆ ನಡೆಸಲಾಗಿದ್ದು ಅತಿ ಹೆಚ್ಚು ಬೀಜ ಸಂಗ್ರಹ ಮಾಡಿದ ಹರ್ಷ ಕೆ 10ನೇ ತರಗತಿ ಪ್ರಥಮ, ತೇಜಸ್ 8 ನೇ ತರಗತಿ ದ್ವಿತೀಯ ಹಾಗೂ ಪುನೀತ್ ಎಂ.ಎಸ್  9ನೇ ತರಗತಿ ತೃತೀಯ ಸ್ಥಾನ ಪಡೆದು ಕ್ರಮವಾಗಿ ರಲ ಒಂದುಸಾವಿರ, ಐನೂರು ಮತ್ತು ಮುನ್ನೂರ ನ್ನು ನಗದು ಬಹುಮಾನವಾಗಿ ಪಡೆದರು. ಶಿಕ್ಷಕಿ ನಳಿನಿ ಡಿ ವಿಜೇತರ ಪಟ್ಟಿ ವಾಚಿಸಿದರು. ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್ ಸ್ವಾಗತಿಸಿ, ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಉಪವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿ ವಂದಿಸಿದರು. ಶಿಕ್ಷಕಿ ಜೆಸ್ಸಿ ಪಿ.ವಿ ನಿರೂಪಿಸಿದರು. 

  
  ACF ಕಾರ್ಯಪ್ಪ, RFO ಕಿರಣ್ ಕುಮಾರ್ , ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮೀನಾಕ್ಷಿ ರೈ, ಶಾಲಾ ನಾಯಕ ಸೆಬೀಲ್  ವೇದಿಕೆಯಲ್ಲಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳಾದ ಕುಮಾರಸ್ವಾಮಿ, ಚಿದಾನಂದ್, ಪ್ರಸಾದ್ ಕೆ.ಜೆ, ದೀಪಕ್ ಹಾಗೂ ಸತ್ಯನ್, ಕೆಯ್ಯೂರು ಪ್ರೌಢಶಾಲಾ ವಿಭಾಗದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here