ಶಾಲಾ ಆವರಣದೊಳಗೆ ವಸತಿ ಸಮುಚ್ಛಯಗಳ ಮಲೀನ ನೀರು: ದುರ್ವಾಸನೆಯ ನಡುವೆ ಪಾಠ ಕೇಳುತ್ತಿರುವ ಪುಟಾಣಿಗಳು !

0

ಉಪ್ಪಿನಂಗಡಿ: ಖಾಸಗಿ ವಸತಿ ಸಮುಚ್ಚಯಗಳಿಂದ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಮಲೀನ ನೀರನ್ನು ಹರಿಯಬಿಡಲಾಗುತ್ತಿದ್ದು, ಇದರಿಂದ ಶಾಲಾ ಮೆಟ್ಟಿಲಿನ ತನಕ ತ್ಯಾಜ್ಯ ನೀರು ಹರಿದು ಬರುತ್ತಿದೆ. ಇದರ ದುರ್ವಾಸನೆ, ಸೊಳ್ಳೆ ಕಾಟದ ನಡುವೆಯೇ ಎಲ್‌ಕೆಜಿ, ಯುಕೆಜಿ ಹಾಗೂ ಅಂಗನವಾಡಿಯ ನೂರಾರು ಪುಟಾಣಿಗಳು ಪಾಠ ಕೇಳಬೇಕಾದ ಅನಿವಾರ್ಯತೆ ಇದೀಗ ಬಂದೊದಗಿದೆ.

ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎದುರು ಭಾಗದಲ್ಲಿ ಅದಕ್ಕೆ ಸೇರಿದ ಜಾಗವಿದ್ದು, ಅದರೊಳಗಿರುವ ಕಟ್ಟಡಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ, ಅಂಗನವಾಡಿ ಕೇಂದ್ರ ನಡೆಯುತ್ತಿವೆ. ಇಲ್ಲಿ ಈ ಬಾರಿ ಎಲ್‌ಕೆಜಿ, ಯುಕೆಜಿಗೆ ೯೫ರಷ್ಟು ಮಕ್ಕಳು ಪ್ರವೇಶಾತಿಯನ್ನು ಪಡೆದಿದ್ದು, ಅಂಗನವಾಡಿಯಲ್ಲಿ ಸುಮಾರು ೩೦ರಿಂದ ೪೦ರಷ್ಟು ಪುಟಾಣಿಗಳಿದ್ದಾರೆ. ಇದರ ಆವರಣದಲ್ಲಿಯೇ ನೆಲದಡಿ ಮೋರಿಯನ್ನು ಹಾಕಿ ಖಾಸಗಿ ವಸತಿ ಸಮುಚ್ಛಯಗಳಿಂದ ಮಲೀನ ನೀರನ್ನು ಪಕ್ಕದ ಚರಂಡಿಗೆ ಹರಿಯಬಿಡಲಾಗುತ್ತಿತ್ತು. ಆದರೆ ಈ ಮೋರಿಯು ಮೂರು ಕಡೆ ಒಡೆದು ಹೋಗಿ ಮಲೀನ ನೀರೆಲ್ಲಾ ಶಾಲಾ ಮೈದಾನಕ್ಕೆ ಬರುತ್ತಿತ್ತು. ಹಲವು ಬಾರಿ ಗ್ರಾ.ಪಂ.ಗೆ ಮನವಿ ಮಾಡಿದ ಬಳಿಕ ಸ್ಪಂದಿಸಿದ ಗ್ರಾ.ಪಂ. ಒಡೆದು ಹೋದ ಜಾಗಕ್ಕೆ ಸಿಮೆಂಟ್ ಹಾಕಿ ಮುಚ್ಚಿ ಶಾಲಾ ಆವರಣದೊಳಗಿರುವ ಮೋರಿಯೊಳಗೆ ಮಲೀನ ನೀರು ಹರಿಯದಂತೆ ಸಂಪೂರ್ಣ ಬಂದ್ ಮಾಡಿತ್ತು. ಅಲ್ಲದೇ, ಖಾಸಗಿ ವಸತಿ ಸಮುಚ್ಛಯದವರಿಗೆ ಮಲೀನ ನೀರನ್ನು ಇಂಗುಗುಂಡಿ ರಚಿಸಿ, ಅದಕ್ಕೆ ಬಿಡುವಂತೆ ತಿಳಿಸಿತ್ತು. ಆದರೆ ಶಾಲಾ ರಜಾ ದಿನವಾದ ಭಾನುವಾರ ಯಾರೋ ಶಾಲೆಯ ಆವರಣಕ್ಕೆ ಪ್ರವೇಶಿಸಿ ಮೋರಿಯನ್ನು ಒಡೆದು ಮತ್ತೆ ಮಲೀನ ನೀರು ಶಾಲೆಯ ಆವರಣಕ್ಕೆ ಬರುವಂತೆ ಮಾಡಿದ್ದಾರೆ. ಈಗ ಕಪ್ಪಡರಿದ ದುರ್ವಾಸನೆಯುಕ್ತ ಮಲೀನ ನೀರು ಶಾಲೆಯ ಆವರಣಕ್ಕೆ ಬರುತ್ತಿದ್ದು, ಶಾಲಾ ಮೆಟ್ಟಿಲು ತನಕ ಹರಿಯುತ್ತಿದೆ. ಮಳೆ ಬಂದಾಗ ಶಾಲೆಯ ಇಡೀ ಆವರಣಕ್ಕೆ ಇದು ಪಸರಿಸುತ್ತಿದೆ.

ಕಠಿಣ ನಿಲುವು ಯಾಕಿಲ್ಲ?: ಒಬ್ಬ ಬಡವ ಮನೆ ನಿರ್ಮಿಸುವಾಗ ಇಂಗುಗುಂಡಿ ರಚಿಸದೇ ಡೋರ್ ನಂಬರ್ ನೀಡುವುದಿಲ್ಲ ಎಂದು ಕಠಿಣ ನಿಲುವು ತಾಳುವ ಉಪ್ಪಿನಂಗಡಿ ಗ್ರಾ.ಪಂ. ಖಾಸಗಿ ವಸತಿ ಸಂಕೀರ್ಣದಿಂದ ಮಲೀನ ನೀರು ಬಂದು ಶಾಲಾ ಪರಿಸರದ ಸ್ವಚ್ಛತೆಗೆ, ಮಕ್ಕಳ ಆರೋಗ್ಯಕ್ಕೆ ಧಕ್ಕೆಯಾಗುತ್ತಿದ್ದರೂ ಅವರ ಬಗ್ಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಮೃಧು ಧೋರಣೆ ಅನುಸರಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸುವ ಪೋಷಕರು, ಮಕ್ಕಳಿಗೆ ಶುಭ್ರ ವಾತಾವರಣ ಕಲ್ಪಿಸಿಕೊಡಲು ಗ್ರಾ.ಪಂ. ತಕ್ಷಣ ಇಚ್ಛಾಶಕ್ತಿ ತೋರಬೇಕಿದೆ ಎಂದು ಆಗ್ರಹಿಸಿದ್ದಾರೆ.

“ಇಲ್ಲಿ ನೂರಾರು ಪುಟಾಣಿಗಳಿದ್ದಾರೆ. ಆದರೆ ಮಲೀನ ನೀರಿನ ದುರ್ವಾಸನೆಯಿಂದಾಗಿ ಶಾಲೆಯೊಳಗೆ ಕುಳಿತುಕೊಳ್ಳಲಾಗದಂತಹ ಸ್ಥಿತಿ ಎದುರಾಗಿದೆ. ಶಾಲೆಯ ಆವರಣದೊಳಗೆ ನೆಲದಡಿ ಈ ಮೋರಿಗಳನ್ನು ಹಾಕಲಾಗಿದ್ದು, ಅದರಲ್ಲಿ ವಸತಿ ಸಂಕೀರ್ಣ, ಮನೆಗಳ ತ್ಯಾಜ್ಯ ನೀರು ಹರಿದು ಮುಂದಕ್ಕೆ ಚರಂಡಿಯನ್ನು ಸೇರುತ್ತದೆ. ಆ ಮೋರಿಯು ಶಿಥಿಲಗೊಂಡು ಶಾಲಾ ಆವರದಲ್ಲಿ ಎರಡು ಮೂರು ಕಡೆ ಒಡೆದು ಹೋಗಿ ನೆಲದಿಂದ ಮೇಲೆದ್ದು ಬಂದಿತ್ತು. ಇದರಿಂದ ಒಂದೆಡೆ ತ್ಯಾಜ್ಯ ನೀರು ಶಾಲಾ ಆವರಣಕ್ಕೆ ಬಂದರೆ, ಇನ್ನೊಂದೆಡೆ ಮಕ್ಕಳು ಓಡಾಡುವಾಗ ಅಪಾಯವುಂಟಾಗುವ ಸ್ಥಿತಿ ಇತ್ತು. ಇದನ್ನು ಗ್ರಾ.ಪಂ.ನವರ ಗಮನಕ್ಕೆ ತಂದಾಗ ಅವರು ಅದಕ್ಕೆ ಸಿಮೆಂಟ್ ಹಾಕಿ ಮೋರಿಯನ್ನೇ ಬಂದ್ ಮಾಡಿದ್ದರು. ಆಗ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಕಳೆದ ಭಾನುವಾರ ಯಾರೋ ಶಾಲಾ ಆವರಣಕ್ಕೆ ಬಂದು ಮೋರಿಯನ್ನು ಒಡೆದು ಮಲೀನ ನೀರು ಮತ್ತೆ ನೇರವಾಗಿ ಶಾಲಾ ಆವರಣದೊಳಗೆ ಪ್ರವೇಶಿಸುವಂತೆ ಮಾಡಿದ್ದಾರೆ. ಇದನ್ನು ಪೊಲೀಸ್ ಇಲಾಖೆ ಹಾಗೂ ಗ್ರಾ.ಪಂ.ನ ಗಮನಕ್ಕೆ ನಾವು ತಂದಿದ್ದು, ಅವರು ಬಂದು ಪರಿಶೀಲಿಸಿದ್ದಾರೆ. ಅವರಿಗೆ ಇಂಗು ಗುಂಡಿ ನಿರ್ಮಿಸಲು ನಾವು ಹೇಳಿದ್ದೇವೆ. ಆದರೆ ಅವರು ನಿರ್ಮಿಸಿಲ್ಲ. ಇನ್ನು ನೀವು ಶಾಲೆಯ ಆವರಣದೊಳಗಿರುವ ಎಲ್ಲಾ ಮೋರಿಗಳನ್ನು ತೆಗೆದು ಬಿಡಿ. ಅವರೇನು ಬೇಕಾದರೂ ಮಾಡಿಕೊಳ್ಳಲಿ ಎಂದು ಪಿಡಿಒ ನಮಗೆ ತಿಳಿಸಿದ್ದಾರೆ.”
– ರವಿಚಂದ್ರ ಶಾಂತಿ ಅಧ್ಯಕ್ಷರು, ಎಸ್‌ಡಿಎಂಸಿ ಸರಕಾರಿ ಮಾದರಿ ಉನ್ನತ ಹಿ.ಪ್ರಾ. ಶಾಲೆ ಉಪ್ಪಿನಂಗಡಿ

LEAVE A REPLY

Please enter your comment!
Please enter your name here