ಜೂ.24-26: ಪುತ್ತೂರು ತಾಲೂಕು ಚೆಸ್ ಅಸೋಷಿಯೇಶನ್‌ನಿಂದ ರಾಜ್ಯಮಟ್ಟದ ಸೆಲೆಕ್ಷನ್ ಟೂರ್ನಮೆಂಟ್

0

ಪುತ್ತೂರು: ಪುತ್ತೂರು ತಾಲೂಕು ಚೆಸ್ ಅಸೋಷಿಯೇಷನ್ (ಪಿಟಿಸಿಎ) ವತಿಯಿಂದ ಯು-೧೭ ರಾಜ್ಯಮಟ್ಟದ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಶಿಪ್ ಜೂನ್ 24ರಿಂದ26ರವರೆಗೆ ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘದ ಸಹಕಾರದೊಂದಿಗೆ ಒಕ್ಕಲಿಗ ಗೌಡ ಸಮುದಾಯ ಭವನ ತೆಂಕಿಲದಲ್ಲಿ ನಡೆಯಲಿದೆ.

ಈ ಬಗ್ಗೆ ಜೂ.15ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷೆ ಉಮಾ ಡಿ. ಪ್ರಸನ್ನ ಅವರು ಮಾಹಿತಿ ನೀಡಿದರು. ಪುತ್ತೂರು ತಾಲೂಕು ಚೆಸ್ ಎಸೋಷಿಯೇ?ನ್ 2020ರಲ್ಲಿ 7 ಜನ ಸದಸ್ಯರೊಂದಿಗೆ ನೋಂದಾವಣೆಗೊಂಡು ಆರಂಭವಾದ ಸಂಸ್ಥೆ. ಪುತ್ತೂರಿನ ಸುತ್ತಮುತ್ತ ಹಲವು ಬೆಳೆಯುತ್ತಿರುವ ಚೆಸ್ ಪ್ರತಿಭೆಗಳಿಗೆ ಅವಕಾಶ ಒದಗಿಸಬೇಕೆಂಬ ಉದ್ದೇಶದಿಂದ ರೂಪುಗೊಂಡ ಸಂಸ್ಥೆ. ಬೆಳೆಯುವ ಪ್ರತಿಭೆಗಳಿಗೆ ಸರಿಯಾದ ವೇದಿಕೆ, ಅವಕಾಶ ದೊರೆಯಬೇಕೆಂಬ ಆಕಾಂಕ್ಷೆಯಿಂದ ರೂಪುಗೊಂಡ ಸಂಸ್ಥೆಯ ಮೂಲಕ ಹಲವು ಚೆಸ್, ಟೂರ್ನಮೆಂಟುಗಳನ್ನು ಆಯೋಜಿಸಿ ಪುತ್ತೂರು ಸುತ್ತಮುತ್ತಲಿನ ಪ್ರತಿಭೆಗಳು ಹತ್ತೂರಲ್ಲಿ ಹೆಸರು ಗಳಿಸಬೇಕೆಂಬ ಉದ್ದೇಶ ಮತ್ತು ಆಶಯ ನಮ್ಮದು ಎಂದು ಉಮಾ ಡಿ. ಪ್ರಸನ್ನ ಮಾಹಿತಿ ನೀಡಿದರು.

ಮಂಡ್ಯ, ಮೈಸೂರು, ಶಿವಮೊಗ್ಗ ಬೆಂಗಳೂರು ಹೀಗೆ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿದ್ದ ರಾಜ್ಯಮಟ್ಟದ ಸೆಲೆಕ್ಷನ್ ಟೂರ್ನಮೆಂಟ್ ಇದೀಗ ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಯೋಜನೆಗೊಳ್ಳುತ್ತಿದೆ. ಜೂನ್ 24,25,26 ರಂದು ಯು-17 ರಾಜ್ಯಮಟ್ಟದ ಫಿಡೆ ರೇಟೆಡ್ ಚೆಸ್ ಚಾಂಪಿಯನ್‌ಷಿಪ್ ಮೂರು ದಿನಗಳ ಕಾಲ ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘದ ಸಹಕಾರದೊಂದಿಗೆ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

ಈ ಸ್ಪರ್ಧಾಕೂಟವು FIDE (International Chess Federation) ನಿಯಮದಂತೆAICF (All India Chess Federation), KSCA (Karnataka State Chess Association) DKCA (Dakshina Kannada Chess Association)ನ ನಿರ್ದೇಶನಾನುಸಾರ ಅಂತರ್‌ರಾಷ್ಟ್ರೀಯ ಚೆಸ್ ನಿರ್ಣಾಯಕರುಗಳ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಅರ್ಹ ಸ್ಪರ್ಧಾಳುಗಳಿಗೆ FIDE rating ದೊರೆಯಲಿದೆ. ರಾಜ್ಯದ ವಿವಿಧೆಡೆಯಿಂದ ಸುಮಾರು ೨೦೦ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸ್ಪರ್ಧಾಳುಗಳಿಗೆ ಮತ್ತು ಪೋಷಕರಿಗಾಗಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.

ಚೆಸ್ ಒಬ್ಬ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿರುವ ಆಟ. ಮಕ್ಕಳ ಮಾನಸಿಕ ಸಮತೋಲನತೆಯನ್ನು ಕಾಯ್ದುಕೊಳ್ಳುವುದನ್ನು ಮಕ್ಕಳು ಈ ಆಟದಿಂದ ಕಲಿತುಕೊಳ್ಳುತ್ತಾರೆ. ಇತರ ರಾಜ್ಯಗಳಲ್ಲಿ ಚೆಸ್ ಪ್ರತಿಭೆಗಳಿಗೆ ಬೇಕಾದಷ್ಟು ಪ್ರೋತ್ಸಾಹ ಲಭಿಸುತ್ತಿದೆ. ಆದರೆ ದುರಾದೃಷ್ಟವಶಾತ್ ಚೆಸ್‌ಗೆ ಬೇಕಾದಷ್ಟು ಪ್ರೋತ್ಸಾಹ ದೊರೆಯುತ್ತಿಲ್ಲ. ಹೀಗಾಗಿ ಹೆಚ್ಚಿನ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ ಎಂದು ಹೇಳಿದರು.
ಯು-೧೭ ಚಾಂಪಿಯನ್‌ಷಿಪ್‌ನ ಹುಡುಗರ ಹಾಗು ಹುಡುಗಿಯರ ವಿಭಾಗದ ಮೊದಲ ಹತ್ತು ಸ್ಥಾನಗಳಿಗೆ ನಗದು ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ. ಇದಲ್ಲದೆ ಸರ್ಧಾಳುಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ವಿವಿಧ ವಯೋಮಾನದ (U-೧೫, U-೧೩, U-೧೧, U-೯ & U-೭) ಮೊದಲ 5 ವಿಜೇತ ಸ್ಪರ್ಧಾಳುಗಳಿಗೆ (ಹುಡುಗರು ಹಾಗೂ ಹುಡುಗಿಯರಿಗೆ ಪ್ರತ್ಯೇಕ) ಟ್ರೋಫಿಗಳನ್ನು ನೀಡಲಾಗುತ್ತದೆ. ಈ ಚಾಂಪಿಯನ್‌ಷಿಪ್‌ನ ಹುಡುಗರ ಮತ್ತು ಹುಡುಗಿಯರ ವಿಭಾಗಗಳಲ್ಲಿ ಮೊದಲ 2 ಸ್ಥಾನ ಪಡೆದವರನ್ನು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಆ ಸ್ಪರ್ಧಾಳುಗಳ ನೋಂದಣಿ ಶುಲ್ಕವನ್ನು ನಮ್ಮ ಸಂಸ್ಥೆಯು ಭರಿಸಲಿದೆ ಎಂದು ಮಾಹಿತಿ ನೀಡಿದರು.

ಜೂ.24ರಂದು ಸ್ಪರ್ಧೆಯ ಉದ್ಘಾಟನೆಯನ್ನು ಶಾಸಕರು ನೆರವೇರಿಸಲಿದ್ದಾರೆ. 9.30ಕ್ಕೆ ಸರಿಯಾಗಿ ಸ್ಪರ್ಧಾಕೂಟದ ಉದ್ಘಾಟನೆ ಮತ್ತು ೧೦.೩೦ಕ್ಕೆ ಸರಿಯಾಗಿ ಸ್ಪರ್ಧೆಗಳು ಪ್ರಾರಂಭವಾಗುತ್ತದೆ. ಒಟ್ಟು 9 ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ಬಹುಮಾನ ವಿತರಣೆ ಜೂ.26ರಂದು ಸಂಜೆ ಗಂಟೆ 6ಕ್ಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ ಕಾರ್ಯದರ್ಶಿ ದಾಮೋದರ ಕಣಜಾಲು, ಕೋಶಾಧಿಕಾರಿ ಸೀಮಾ ಶರ್ಮಾ, ಟೂರ್ನಮೆಂಟ್ ಕಮಿಟಿ ಸೆಕ್ರೆಟರಿ ಡಾ.ಎಸ್.ಎಂ. ಪ್ರಸಾದ್, ಗಣೇಶ್ ಪ್ರಸನ್ನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here