ಮುತ್ತಿನ ನಗರಿಗೆ ಮುತ್ತನ್ನು ಹೋಲುವ ಜಂಕ್ಷನ್ ಪುಡಾದ ಯೋಜನೆಗೆ ನಗರಸಭೆ ಅನುಮೋದನೆ

ನಗರಸಭೆ ಸಾಮಾನ್ಯ ಸಭೆ

 • ಅಮೃತ ನಗರ ಯೋಜನೆಯಡಿ ರೂ.೩ ಕೋಟಿ
 • ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಶಾಲೆಗಳಲ್ಲಿ ಅರಿವು
 • ಪ್ಲಾಸ್ಟಿಕ್ ಉತ್ಪಾದನೆ ಉದ್ಯಮವನ್ನೇ ನಿಲ್ಲಿಸಲಿ
 • ದಂಡದ ಬದಲು ಅರಿವು ಮೂಡಿಸೋಣ
 • ಚರಂಡಿ ಹೂಳೆತ್ತುವ ಕಾಮಗಾರಿ ಆರಂಭ
 • ಕಾಮಗಾರಿಗೆ ಅಡ್ಡಿಪಡಿಸುವವರಿಗೆ
 • ಗೋಣಿ ಹಾಕಿ ಹೊಡೆಯಬೇಕಷ್ಟೆ
 • ಉದ್ಯಮ ಪರವಾನಿಗೆ ಸರ್ವೆಗೆ ಸೂಚನೆ
 • ವಿವಿಧ ಅನುದಾನದ ಉಳಿಕೆ ಹಣದಲ್ಲಿ
 • ರೈಲ್ವೇ ರಸ್ತೆ ಅಭಿವೃದ್ಧಿ
 • ನೇರಪಾವತಿ, ಪೌರಕಾರ್ಮಿಕರ,
 • ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆ
 • ಲಂಚ, ಭ್ರಷ್ಟಾಚಾರ ವಿರುದ್ಧದ ಜಾಥಾಕ್ಕೆ ಬೆಂಬಲ

ಪುತ್ತೂರು:ಪುತ್ತೂರಿಗೆ ಮುತ್ತಿನ ನಗರಿ ಎಂದು ಕರೆಯಲಾಗುತ್ತಿದೆಯಾದರೂ ಎಲ್ಲಿಯೂ ಮುತ್ತಿನ ಗುರುತು ತೋರಿಸಲಾಗಿಲ್ಲ.ಈ ನಿಟ್ಟಿನಲ್ಲಿ ಪುತ್ತೂರಿಗೊಂದು ಮುತ್ತಿನ ನಗರಿಯ ಜಂಕ್ಷನ್ ಮಾಡುವ ಯೋಜನೆ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಮುಂದಿದ್ದು, ಪುತ್ತೂರು ಮುಖ್ಯರಸ್ತೆ ಮಯೂರದ ಬಳಿ ಮುತ್ತಿನ ಗುರುತನ್ನು ಹೋಲುವ ದೊಡ್ಡ ವೃತ್ತವೊಂದನ್ನು ನಿರ್ಮಾಣ ಮಾಡುವ ನಗರ ಯೋಜನಾ ಪ್ರಾಧಿಕಾರದ ಯೋಜನೆಗೆ ಪುತ್ತೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.


ಪುತ್ತೂರು ನಗರಸಭೆ ಸಾಮಾನ್ಯ ಸಭೆಯು ಜೂ.15ರಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆಯಿತು.ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರಸಭೆ ಸದಸ್ಯ ಭಾಮಿ ಅಶೋಕ್ ಶೆಣೈ ಅವರು ವಿಷಯ ಪ್ರಸ್ತಾಪಿಸಿ, ಪುತ್ತೂರು ನಗರದ ಮುಖ್ಯ ರಸ್ತೆ ಮಯೂರದ ಬಳಿ ಪುಡಾದಿಂದ ಹೊಸ ಯೋಜನೆ ಹಮ್ಮಿಕೊಳ್ಳಲಾಗಿದೆ.ಅದಕ್ಕೆ ಅನುಮೋದನೆ ನೀಡುವಂತೆ ಕೇಳಿಕೊಂಡರು.ಪುಡಾದಿಂದ ಈಗಾಗಲೇ ಬಂದಿರುವ ಪತ್ರದಂತೆ ಪುತ್ತೂರು ಮುಖ್ಯರಸ್ತೆ ಮಯೂರದ ಬಳಿಕ ರಸ್ತೆ ಅಗಲೀಕರಣಗೊಳಿಸಿ ಬೃಹತ್ ಜಂಕ್ಷನ್ ನಿರ್ಮಾಣ ಮಾಡುವ ಕುರಿತು ಅನುಮೋದನೆಗೆ ಕೇಳಲಾಗಿದೆ ಎಂದು ಹೇಳಿದ ಅಧ್ಯಕ್ಷ ಜೀವಂಧರ್ ಜೈನ್,ಈ ಕುರಿತು ಅನುಮೋದನೆ ನೀಡಲಾಗುವುದು ಎಂದರು.ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ, ಮುತ್ತಿನ ನಗರಿಗೆ ಮುತ್ತಿನ ಗುರುತು ನೀಡುವ ರೀತಿಯಲ್ಲಿ ವೃತ್ತ ನಿರ್ಮಾಣದ ಕೆಲಸ ಮಾಡಲಾಗುವುದು ಮತ್ತು ರಸ್ತೆ ಅಗಲೀಕರಣ ಮಾಡಲಾಗುವುದು.ಆದರೆ ಪುಡಾದಲ್ಲಿ ಇಂಜಿನಿಯರ್ ಕೊರತೆಯಿರುವುದರಿಂದಾಗಿ ನಗರಸಭೆ ಇಂಜಿನಿಯರ್ ಇದರ ತಾಂತ್ರಿಕ ವ್ಯವಸ್ಥೆ ಮಾಡಲಿದ್ದಾರೆ ಎಂದರು.ಜಂಕ್ಷನ್ ನಿರ್ಮಾಣ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಿ ನಿರ್ಣಯಿಸಲಾಯಿತು.

ಅಮೃತ ನಗರ ಯೋಜನೆಯಡಿ ರೂ. 3 ಕೋಟಿ: ಅಮೃತ ನಗರ ಯೋಜನೆಯಡಿ ಶಾಸಕರ ಮೂಲಕ ರೂ.3 ಕೋಟಿ ಅನುದಾನ ಬರುವ ಹಂತದಲ್ಲಿದೆ.ಈ ನಿಟ್ಟಿನಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ದ ಪಡಿಸುವಂತೆ ಶಾಸಕರು ಪತ್ರ ಬರೆದಿದ್ದಾರೆ.ಆದಷ್ಟು ಮುಖ್ಯ ರಸ್ತೆಯನ್ನು ತೆಗೆದುಕೊಳ್ಳುವಂತೆ ಶಾಸಕರು ಪತ್ರದಲ್ಲಿ ತಿಳಿಸಿರುವುದಾಗಿ ಅಧ್ಯಕ್ಷರು ಪ್ರಸ್ತಾಪಿಸಿದರು.ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಶಾಲೆಗಳಲ್ಲಿ ಅರಿವು: ಕಡಿಮೆ ಉಪಯುಕ್ತತತೆ ಮತ್ತು ಪರಿಸರದ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುವ, ಗುರುತಿಸಲಾದ ಕೆಲವೊಂದು ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡುವ ಕುರಿತು ಸರಕಾರದಿಂದ ಆದೇಶ ಬಂದಿರುವುದಾಗಿ ಅಧ್ಯಕ್ಷರು ಪ್ರಸ್ತಾಪಿಸಿ, ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಸದಸ್ಯರಿಂದ ಸಲಹೆ ಪಡೆದರು.ಜನರಿಂದಲೇ ಜಾಗೃತಿ ಮೂಡಬೇಕು.ಈ ನಿಟ್ಟಿನಲ್ಲಿ ಮಾಹಿತಿ ಕಾರ್ಯಗಾರ ನಡೆಸುವ ಕುರಿತು ಮತ್ತು ಪ್ಲಾಸ್ಟಿಕ್ ಉತ್ಪಾದಿಸುವ ಉದ್ಯಮವನ್ನೇ ನಿಲ್ಲಿಸುವಂತೆ ಸದಸ್ಯರು ತಿಳಿಸಿದರು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಅವರು ಮಾತನಾಡಿ ಅಂಗಡಿಯವರು ಪ್ಲಾಸ್ಟಿಕ್‌ನಲ್ಲಿ ಸಾಮಾಗ್ರಿ ಕೊಡದೆ ಜನರಿಗೆ ಅರಿವು ಮೂಡಿಸಬೇಕೆಂದರು.ಅಧ್ಯಕ್ಷರು ಮಾತನಾಡಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಕಸದಿಂದ ಭೂ ಮತ್ತು ಜಲಪರಿಸರ ವ್ಯವಸ್ಥೆಗಳೆರಡರ ಮೇಲೂ ಆಗುವ ಪ್ರತಿಕೂಲ ಪರಿಣಾಮಗಳನ್ನು ಪರಿಗಣಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೨೦೨೨ರ ವೇಳೆಗೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡಲು ಕರೆ ನೀಡಿದ್ದಾರೆ.ಜೊತಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ವಹಿಸಲು ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು ನಗರಸಭೆ ವ್ಯಾಪ್ತಿಯಲ್ಲೂ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಶಾಲೆಗಳಲ್ಲಿ ಮಕ್ಕಳಿಗೆ ಅರಿವು, ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆ.ಮಕ್ಕಳಿಗೆ ಪ್ಲಾಸ್ಟಿಕ್ ಜಾಗೃತಿ ಮೂಡಿದರೆ ಮಕ್ಕಳ ಮೂಲಕ ಹೆತ್ತವರಿಗೆ, ಮನೆಯವರಿಗೆ ಹೋಗಿ ಮನಪರಿವರ್ತನೆ ಮಾಡುವ ಕಾರ್ಯ ಆಗುತ್ತದೆ.ಪ್ಲಾಸ್ಟಿಕ್ ನಿಯಂತ್ರಣಕ್ಕೆ ದಂಡ ಪ್ರಯೋಗಕ್ಕಿಂತ ಅರಿವು ಮೂಡಿಸುವ ಕಾರ್ಯಕ್ರಮ ಹಾಕಿಕೊಳ್ಳೋಣ ಎಂದರು.

ಚರಂಡಿ ಹೂಳೆತ್ತುವ ಕಾಮಗಾರಿ ಆರಂಭಗೊಂಡಿದೆ: ನಗರಸಭೆ 31ವಾರ್ಡ್‌ಗಳಲ್ಲೂ ಚರಂಡಿಗಳ ಹೂಳೆತ್ತುವ ಕಾಮಗಾರಿಗಳು ಆರಂಭಗೊಂಡಿದ್ದು,ಕಾಮಗಾರಿ ಕೈಗೆತ್ತಿಕೊಂಡವರು ಹಂತ ಹಂತವಾಗಿ ವಾರ್ಡ್‌ಗಳಿಗೆ ಬರುತ್ತಾರೆ.ಆ ಸಂದರ್ಭ ಸದಸ್ಯರು ಮಾಹಿತಿ ನೀಡಿ ಕೆಲಸ ಮಾಡಿಸಿಕೊಳ್ಳಿ ಎಂದು ಅಧ್ಯಕ್ಷರು ತಿಳಿಸಿದರು.

ಕಾಮಗಾರಿಗೆ ಅಡ್ಡಿಪಡಿಸುವವರಿಗೆ ಗೋಣಿ ಹಾಕಿ ಹೊಡೆಯಬೇಕಷ್ಟೆ: ದರ್ಬೆ ಕೆ.ವಿ.ಶೆಣೈ ಬಡಾವಣೆ ರಸ್ತೆಯಲ್ಲಿ ಮೋರಿಯಲ್ಲಿ ಹೂಳು ತುಂಬಿ ಕೃತಕ ನೆರೆ ಸೃಷ್ಟಿಯಾಗಿತ್ತು.ಅಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ಮಳೆಗಾಲದ ಸಂದರ್ಭ ಅನೇಕ ಕಾಮಗಾರಿಗಳನ್ನು ತುರ್ತಾಗಿ ಮಾಡಬೇಕಾಗಿದೆ.ಅದಕ್ಕೆ ಟೆಂಡರ್ ಕರೆಯಲು ಕಾಯಬೇಡಿ ಎಂದರು.ಇತರ ಸದಸ್ಯರು ಧ್ವನಿಗೂಡಿಸಿದರು.ಟೆಂಡರ್ ಕರೆಯದೆ ತುರ್ತು ಕಾಮಗಾರಿ ಮಾಡಿದ ಬಳಿಕ ಟೆಂಡರ್ ಪ್ರೊಸೆಸ್ ಮಾಡಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು, ಆಗಿರುವ ಕಾಮಗಾರಿಗೆ ಪುನಃ ಟೆಂಡರ್ ಕರೆಯುತ್ತಾರೆ ಎಂದು ಬರೆದು ಹಾಕುತ್ತಾರೆ ಎಂದು ಅಧ್ಯಕ್ಷರು ಹೇಳಿದರು.ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ಆ ರೀತಿಯ ಮನಸ್ಥಿತಿಯುಳ್ಳ ಒಂದು ಸೆಕ್ಷನ್ ಇದೆ. ಕಾಮಗಾರಿಗಳಿಗೆ ಅಡ್ಡಿ ಮಾಡುವವರಿಗೆ ಗೋಣಿ ಹಾಕಿ ಹೊಡೆಯಬೇಕಷ್ಟೆ.ಯಾರು ಏನು ಹೇಳಿದರೂ ನಾವು ಸದಸ್ಯರು ನಿಮ್ಮ ಜೊತೆ ಇದ್ದೇವೆ ಎಂದರು.

ಉದ್ಯಮ ಪರವಾನಿಗೆ ಸರ್ವೆಗೆ ಸೂಚನೆ: ಉದ್ಯಮ ಪರವಾನಿಗೆ ಅರ್ಜಿಗಳ ವಿಚಾರ ಪ್ರಸ್ತಾಪವಾಗಿ, ೪ ಸಾವಿರಕ್ಕಿಂತ ಮೇಲ್ಪಟ್ಟು ಉದ್ಯಮಗಳು ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿವೆ.ಈಗಾಗಲೇ ಪುನಃ ಸರ್ವೆ ಮಾಡಿ ಉದ್ಯಮ ಪರವಾನಿಗೆ ತೆಗೆದುಕೊಳ್ಳದವರ ವಿರುದ್ಧ ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿದೆ.೨೯೭೧ ಬಹಳ ಹಿಂದಿನಿಂದಲೇ ಇರುವ ಉದ್ಯಮಗಳಲ್ಲಿ ಬಹಳಷ್ಟು ಮಂದಿ ಪರವಾನಿಗೆ ನವೀಕರಣ ಮಾಡಿಲ್ಲ. ಅವರಿಗೆ ನೋಟೀಸ್ ಜಾರಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಸಭೆ ಅಧ್ಯಕ್ಷರು ತಿಳಿಸಿದರು.ಗೂಡಂಡಿಗಳಿಗೆ ಪರವಾನಿಗೆ ಕೊಡುವಾಗ ಕಾನೂನಿನ ಚೌಕಟ್ಟಿನಲ್ಲಿ ಕೊಡಬೇಕು ಎಂದು ಭಾಮಿ ಅಶೋಕ್ ಶೆಣೈ ಹೇಳಿದರು.ದಿನವಹಿ ಬಾಡಿಗೆ ಪಡೆಯುವ ಚಿಂತನೆ ಇದೆ ಎಂದು ಅಧ್ಯಕ್ಷರು ಉತ್ತರಿಸಿದರು.

ವಿವಿಧ ಅನುದಾನದ ಉಳಿಕೆ ಹಣದಲ್ಲಿ ರೈಲ್ವೇ ರಸ್ತೆ ಅಭಿವೃದ್ದಿ: ಹಾರಾಡಿಯಿಂದ ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕುರಿತು ಈಗಾಗಲೇ ಸರಕಾರದ ಸೂಚನೆ ಮೇರೆಗೆ ರೈಲ್ವೇ ಇಲಾಖೆ ನಗರಸಭೆಗೆ ಎನ್‌ಒಸಿ ಕೊಟ್ಟಿದೆ. ಹಾಗಾಗಿ ರಸ್ತೆ ಅಭಿವೃದ್ಧಿ ಪಡಿಸಲು ರೂ.೧ ಕೋಟಿಯ ಅಂದಾಜು ಪಟ್ಟಿ ತಯಾರಿಸಲಾಗಿದೆ.ಬೇರೆ ಬೇರೆ ಅನುದಾನದಲ್ಲಿ ಉಳಿಕೆ ಮೊತ್ತವನ್ನು ಸೇರಿಸಿಕೊಂಡು ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ.ಇದಕ್ಕೆ ಸದಸ್ಯರು ಒಪ್ಪಿಗೆ ಇದ್ದರೆ ತಿಳಿಸುವಂತೆ ಅಧ್ಯಕ್ಷರು ಪ್ರಸ್ತಾಪಿಸಿದರು.ಸದಸ್ಯರು ಒಪ್ಪಿಗೆ ಸೂಚಿಸಿದರು.ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ನಗರದ ಹೃದಯ ಭಾಗದಲ್ಲಿರುವ ರಸ್ತೆ ಅಭಿವೃದ್ಧಿ ಆಗಲೇ ಬೇಕು.ಇದರ ಜೊತೆಗೆ ರೈಲ್ವೇ ರಸ್ತೆ ಅಭಿವೃದ್ಧಿಗಾಗಿ ಶ್ರಮವಹಿಸಿದ ನಗರಸಭೆ ಅಧಿಕಾರಿಗಳು, ಲೋಕಸಭೆ ಸದಸ್ಯರು, ಶಾಸಕರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.

ನೇರಪಾವತಿ ಪೌರಕಾರ್ಮಿಕರ, ಹೊರಗುತ್ತಿಗೆ ನೌಕರರ ವೇತನ ಪರಿಷ್ಕರಣೆ: ಕರ್ನಾಟಕ ಸರಕಾರದ ಕನಿಷ್ಟ ವೇತನ ನಿಯಮಾವಳಿಯ ಆದೇಶದಂತೆ ಕನಿಷ್ಟ ವೇತನ ದರವನ್ನು ಪರಿಷ್ಕರಿಸಿರುವುದರಿಂದ ಪ್ರತಿ ನೇರ ಪಾವತಿ ಪೌರ ಕಾರ್ಮಿಕರಿಗೆ, ಹೊರಗುತ್ತಿಗೆಯ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ 2 ಮಂದಿ ಸ್ಯಾನಿಟರಿ ಸೂಪರ್ ವೈಸರ್‌ಗಳಿಗೆ, 17 ಮಂದಿ ಚಾಲಕರಿಗೆ ಹೆಚ್ಚುವರಿ ಮೊತ್ತ ನೀಡಲು ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.ಸದಸ್ಯರು ಅನುಮೋದನೆ ವ್ಯಕ್ತಪಡಿಸಿದರು.ಅದೇ ರೀತಿ ಪಂಪು ಚಾಲಕರಿಗೂ ಹೆಚ್ಚುವರಿ ವೇತನ ಪಾವತಿಗೆ ಅನುಮೋದನೆ ನೀಡಲಾಯಿತು.ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸದಸ್ಯರಾದ ಶಿವರಾಮ ಎಸ್, ವಸಂತ ಕಾರೆಕ್ಕಾಡು, ಗೌರಿ ಬನ್ನೂರು, ಕೆ.ಫಾತಿಮತ್ ಝೋರಾ, ಮೋಹಿನಿ ವಿಶ್ವನಾಥ ಗೌಡ, ಲೀಲಾವತಿ ಅಣ್ಣು ನಾಯ್ಕ, ರೋಬಿನ್ ತಾವ್ರೋ, ಪ್ರೇಂ ಕುಮಾರ್, ಪದ್ಮನಾಭ ಪಡೀಲು, ಪಿ.ಜಿ.ಜಗನ್ನಿವಾಸ ರಾವ್, ಪ್ರೇಮಲತಾ ಜಿ, ಕೆ.ಸಂತೋಷ್ ಕುಮಾರ್, ನವೀನ್ ಕುಮಾರ್ ಎಮ್, ಭಾಮಿ ಅಶೋಕ್ ಶೆಣೈ, ದೀಕ್ಷಾ ಪೈ, ಇಂದಿರಾ ಪಿ, ಶಶಿಕಲಾ ಸಿ.ಎಸ್, ಮನೋಹರ್ ಕಲ್ಲಾರೆ, ರೋಹಿಣಿ ಕೇಶವ ಪೂಜಾರಿ, ಮಮತ ರಂಜನ್, ಇಸುಬು, ಮಹಮ್ಮದ್ ರಿಯಾಝ್ ಕೆ, ಬಿ.ಶೀನಪ್ಪ ನಾಯ್ಕ, ಪೂರ್ಣಿಮ ಕೋಡಿಯಡ್ಕ ಮತ್ತು ನಗರಸಭೆ ಅಭಿಯಂತರರು, ಆರೋಗ್ಯ ನಿರೀಕ್ಷಕರು ಉಪಸ್ಥಿತರಿದ್ದರು.

ಲಂಚ, ಭ್ರಷ್ಟಾಚಾರ ವಿರುದ್ಧದ ಜಾಥಾಕ್ಕೆ ನಮ್ಮ ಬೆಂಬಲ-ಜೀವಂಧರ್ ಜೈನ್
ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಆಂದೋಲನಕ್ಕೆ ಪೂರಕವಾಗಿ ಜು.9ರಂದು ಪುತ್ತೂರಿನಲ್ಲಿ ಲಂಚ-ಭ್ರಷ್ಟಾಚಾರ ವಿರುದ್ಧ ಜಾಥಾ ನಡೆಯಲಿದೆ.ಈ ಜಾಥಾದಲ್ಲಿ ಪುತ್ತೂರು ನಗರಸಭೆಯ ಎಲ್ಲಾ ಸದಸ್ಯರು ಭಾಗವಹಿಸಿ, ಬೆಂಬಲ ನೀಡುವಂತೆ ಸುದ್ದಿ ಜನಾಂದೋಲನ ವೇದಿಕೆಯವರು ಕೇಳಿಕೊಂಡಿದ್ದಾರೆ.ಅದಕ್ಕೆ ನಾವೆಲ್ಲರೂ ಬೆಂಬಲ ಕೊಡುತ್ತೇವೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಸಭೆಯ ಕೊನೆಯಲ್ಲಿ ಹೇಳಿದರು.ಸದಸ್ಯರು ಚಪ್ಪಾಳೆಯ ಮೂಲಕ ಒಕ್ಕೊರಳ ಬೆಂಬಲ ವ್ಯಕ್ತಪಡಿಸಿದರು.

ಪುತ್ತೂರಿಗೆ ಬರುವವರಿಗೆ ಪುತ್ತೂರಿನ ಮುತ್ತಿನ ನಗರಿಯ ಗುರುತಿಸುವ ಕೆಲಸ ಆಗುವಂತೆ ಮಯೂರದ ಬಳಿ ಬೃಹತ್ ವೃತ್ತ ನಿರ್ಮಾಣ ಮಾಡಿಅಲ್ಲಿ ಮುತ್ತನ್ನು ಹೋಲುವ ಗುರುತಿನ ವ್ಯವಸ್ಥೆ ಮಾಡಲಾಗುತ್ತದೆ ಮತ್ತು ಪ್ರಗತಿ ಆಸ್ಪತ್ರೆ ತನಕ ಈಗಿರುವ ಕಾಲುವೆಯನ್ನು ಪಕ್ಕಕ್ಕೆ ಮಾಡಿ ಹೊಸದಾಗಿ ಮುಖ್ಯರಸ್ತೆಯ ಬದಿಯಲ್ಲಿ ಸರ್ವಿಸ್ ರಸ್ತೆ ಮಾಡಲಾಗುತ್ತದೆ.ಉರ್ಲಾಂಡಿ, ಕೊಂಬೆಟ್ಟು ಮತ್ತು ಮುಖ್ಯರಸ್ತೆಯ ನಡುವೆ ವೃತ್ತ ನಿರ್ಮಾಣ ಆಗಲಿದೆ.ಈಗಾಗಲೇ ಇಂಜಿನಿಯರ್‌ಗಳು ಅಳತೆ ಮಾಡಿ ನೋಡಿ ಆಗಿದೆ.ಒಟ್ಟಿನಲ್ಲಿ ಪುತ್ತೂರು ಸುಂದರವಾಗಿರಬೇಕು.
-ಭಾಮಿ ಅಶೋಕ್ ಶೆಣೈ, ಸದಸ್ಯರು ನಗರಸಭೆ, ಅಧ್ಯಕ್ಷರು ಪುಡಾ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.