ಕೋಡಿಂಬಾಡಿ ಗ್ರಾ.ಪಂ. ಸದಸ್ಯರಿಂದ ತಾ.ಪಂ. ಕಛೇರಿ ಎದುರು ಧರಣಿ: ಸಂಜೀವಿನಿ ಒಕ್ಕೂಟಕ್ಕೆ ನೂತನ ಎಂ.ಬಿ.ಕೆ. ಆಯ್ಕೆ ಮಾಡಲು ಇ.ಓ. ಆದೇಶ: ಆದೇಶ ಪಾಲಿಸದೇ ಇದ್ದಲ್ಲಿ ೧೫ ದಿನದೊಳಗೆ ಒಕ್ಕೂಟ ನಿಷ್ಕ್ರಿಯಗೊಳಿಸುವ ಎಚ್ಚರಿಕೆ

0

ಗ್ರಾ.ಪಂ. ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ಮತ್ತು ಜಯಪ್ರಕಾಶ್ ಬದಿನಾರುರವರಿಂದ ಧರಣಿ

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಮಟ್ಟದ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾಗಿರುವ ಸಂಧ್ಯಾ ರಾಮಚಂದ್ರ ಗೌಡ ಕೈಲಾಜೆರವರನ್ನು ಆ ಹುದ್ದೆಯಿಂದ ಬದಲಾವಣೆ ಮಾಡಿ ಒಕ್ಕೂಟದ ಮಾನದಂಡದಂತೆ ನೂತನ ಮುಖ್ಯ ಪುಸ್ತಕ ಬರಹಗಾರರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು ಮತ್ತು ಜಗನ್ನಾಥ ಶೆಟ್ಟಿ ನಡುಮನೆರವರು ಪುತ್ತೂರು ತಾಲೂಕು ಪಂಚಾಯತ್ ಕಛೇರಿ ಎದುರು ಧರಣಿ ಕುಳಿತ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿಯವರು ಮುಖ್ಯ ಪುಸ್ತಕ ಬರಹಗಾರರ ಹುದ್ದೆಗೆ ಹೊಸದಾಗಿ ಆಯ್ಕೆ ಮಾಡುವಂತೆ ಆದೇಶಿಸಿದ ಹಾಗೂ ಈ ಆದೇಶವನ್ನು ಪಾಲಿಸದೇ ಇದ್ದಲ್ಲಿ ಸಂಜೀವಿನಿ ಒಕ್ಕೂಟವನ್ನು 15 ದಿವಸದೊಳಗೆ ನಿಷ್ಕ್ರಿಯಗೊಳಿಸುವುದಾಗಿ ಆದೇಶದಲ್ಲಿ ತಿಳಿಸಿದ ಘಟನೆ ಜೂನ್ ೧೬ರಂದು ನಡೆದಿದೆ.

ತಾ. ಪಂ. ಇ.ಓ. ನವೀನ್ ಭಂಡಾರಿ

ತಾ.ಪಂ. ಕಛೇರಿ ಎದುರು ಧರಣಿ ಕುಳಿತ ಗ್ರಾಂ.ಪಂ. ಸದಸ್ಯರು-ಸ್ಪಂದಿಸಿದ ತಾ.ಪಂ. ಇ.ಓ.
ಕೋಡಿಂಬಾಡಿ ಗ್ರಾಮ ಪಂಚಾಯತ್ ಮಟ್ಟದ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾಗಿರುವ ಸಂಧ್ಯಾ ರಾಮಚಂದ್ರ ಗೌಡರವರನ್ನು ಒಕ್ಕೂಟದ ಮಾನದಂಡಗಳನ್ನು ಪಾಲಿಸದೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಹಲವು ಬಾರಿ ಸಂಬಂಧಿಸಿದವರಿಗೆ ದೂರು ನೀಡಲಾಗಿದೆ. ಮನವಿಗೆ ಸ್ಪಂದಿಸಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಯವರು ಮುಖ್ಯ ಪುಸ್ತಕ ಬರಹಗಾರರನ್ನು ಅಮಾನತುಗೊಳಿಸಿ ಆದೇಶಿಸಿದ್ದರಲ್ಲದೆ ಹೊಸದಾಗಿ ನೇಮಕ ಮಾಡುವಂತೆ ಸೂಚಿಸಿ ಹೊಸ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದರು. ಬಳಿಕ ಇದನ್ನು ಅನುಷ್ಠಾನಕ್ಕೆ ತಾರದೇ ಸಂಧ್ಯಾರವರನ್ನೇ ಮುಖ್ಯ ಪುಸ್ತಕ ಬರಹಗಾರರಾಗಿ ಮುಂದುವರಿಸಲಾಗಿತ್ತು. ಬಳಿಕ ಒಕ್ಕೂಟದ ಯಾವುದೇ ನೀತಿ ನಿಯಮಗಳನ್ನು ಪಾಲಿಸದೆ, ಮಾನದಂಡಗಳನ್ನು ಉಲ್ಲಂಘಿಸಿ ಆಯ್ಕೆಯಾಗಿರುವ ಸಂಧ್ಯಾರವರನ್ನು ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ ಹುದ್ದೆಯಿಂದ ಅಮಾನತು ಮಾಡಬೇಕು, ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಲಾಗಿತ್ತು. ಸ್ಪಂದಿಸಿದ್ದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯವರು ಈಗಿನ ಮುಖ್ಯ ಪುಸ್ತಕ ಬರಹಗಾರರನ್ನು ಬದಲಾಯಿಸಿ ಹೊಸದಾಗಿ ನೇಮಕ ಮಾಡುವಂತೆ ಆದೇಶ ಹೊರಡಿಸಿದ್ದರು. ಆದರೂ ಈ ಆದೇಶವನ್ನು ಇನ್ನೂ ಜಾರಿ ಮಾಡಲಾಗಿಲ್ಲ. ಅಲ್ಲದೆ, ಈ ಹಿಂದೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ವೇಳೆ ಕಾಂಪೋಸ್ಟ್ ಪೈಪ್ ಹಗರಣದಲ್ಲಿ ಭಾಗಿಯಾದ ಆರೋಪದಡಿ ಭ್ರಷ್ಟಾಚಾರದ ಕೇಸು ಎದುರಿಸುತ್ತಿರುವ ಸಂಧ್ಯಾ ರಾಮಚಂದ್ರರವರನ್ನು ಮುಖ್ಯ ಪುಸ್ತಕ ಬರಹಗಾರರ ಹುದ್ದೆಯಿಂದ ಬದಲಾಯಿಸಬೇಕು ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಕಛೇರಿ ಎದುರು ನಡೆಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಲಾಗಿತ್ತು. ಆಗ ಅಲ್ಲಿಗೆ ಭೇಟಿ ನೀಡಿದ್ದ ಅಧಿಕಾರಿಗಳು ತಮ್ಮ ಬೇಡಿಕೆಗೆ ಸ್ಪಂದಿಸಲಾಗುವುದು ಎಂದು ನಮಗೆ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಈ ಬಗ್ಗೆ ಗಮನ ಹರಿಸಿಲ್ಲ. ಆದ್ದರಿಂದ ಒಕ್ಕೂಟದ ಈಗಿನ ಮುಖ್ಯ ಪುಸ್ತಕ ಬರಹಗಾರರನ್ನು ಬದಲಾಯಿಸಿ ಮಾನದಂಡಕ್ಕೆ ಅನುಸಾರವಾಗಿ ನೂತನ ಮುಖ್ಯ ಪುಸ್ತಕ ಬರಹಗಾರರನ್ನು ಆಯ್ಕೆ ಮಾಡಬೇಕು, ಇಲ್ಲದಿದ್ದಲ್ಲಿ ತಾಲೂಕು ಪಂಚಾಯತ್ ಎದುರು ನಿರಂತರ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ಹಾಗೂ ಜಯಪ್ರಕಾಶ್ ಬದಿನಾರುರವರು ಜೂನ್ ೧೬ರಂದು ಬೆಳಿಗ್ಗೆಯೇ ತಾಲೂಕು ಪಂಚಾಯತ್ ಕಛೇರಿ ಎದುರು ಧರಣಿ ಆರಂಭಿಸಿದ್ದರು. ಈ ವಿಚಾರ ತಿಳಿದು ಅಲ್ಲಿಗೆ ಆಗಮಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿರವರು ಕೂಡಲೇ ಈ ಬಗ್ಗೆ ಆದೇಶ ಹೊರಡಿಸುವುದಾಗಿ ಹೇಳಿದರಲ್ಲದೆ ಧರಣಿ ವಾಪಸ್ ಪಡೆಯುವಂತೆ ಹೇಳಿದರು. ತಾ.ಪಂ. ಇ.ಓ.ರವರು ಆದೇಶ ಹೊರಡಿಸಿದ ಬಳಿಕ ಧರಣಿ ವಾಪಸ್ ಪಡೆದುಕೊಳ್ಳಲಾಯಿತು.

ಹೊಸ ಆಯ್ಕೆಗೆ ಅದೇಶ ನೀಡಲಾಗಿದೆ-ನವೀನ್ ಭಂಡಾರಿ
ಈ ಹಿಂದೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ಹುದ್ದೆಗೆ ಮೂರು ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾದವರನ್ನು ಮುಖ್ಯ ಪುಸ್ತಕ ಬರಹಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಸೂಚನೆಯಂತೆ ಈಗಿನ ಮುಖ್ಯ ಪುಸ್ತಕ ಬರಹಗಾರರನ್ನು ಬದಲಾಯಿಸಿ ನೂತನ ನೇಮಕಾತಿಯನ್ನು ಮಾಡಲು ಆದೇಶಿಸಲಾಗಿದೆ. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗೆ ಎಂ.ಬಿ.ಕೆ. ಹುದ್ದೆಗೆ ಆಯ್ಕೆ ಮಾಡುವ ಅಧಿಕಾರವಿಲ್ಲ. ತಾಲೂಕು ಪಂಚಾಯತ್ ಟಪ್ಪಾಲಿನಲ್ಲಿರುವ ಹೊಸ ಅರ್ಜಿಗಳನ್ನು ಗ್ರಾಮ ಪಂಚಾಯತ್‌ಗೆ ಕಳುಹಿಸಿಕೊಡಲಾಗುವುದು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ‘ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ.

ಎಂ.ಬಿ.ಕೆ. ಬದಲಾವಣೆಗೆ ಆದೇಶ ನೀಡಿದ್ದರಿಂದ ಧರಣಿ ವಾಪಸ್-ಜಗನ್ನಾಥ ಶೆಟ್ಟಿ, ಜಯಪ್ರಕಾಶ್ ಬದಿನಾರು
ಪಿಯುಸಿ ಅರ್ಹತೆಯುಳ್ಳ ವಿಧವೆ ಅಥವಾ ಅಂಗವಿಕಲರಿಗೆ ಅಥವಾ ಎಸ್ಸಿ ಇಲ್ಲವೇ ಎಸ್ಟಿ ಸಮುದಾಯಕ್ಕೆ ಆದ್ಯತೆ ನೀಡಿ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರನ್ನಾಗಿ ಆಯ್ಕೆ ಮಾಡಬೇಕೆಂಬ ಮಾನದಂಡ ಇದೆ. ಆದರೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಕ್ಕೆ ಮಾಜಿ ಗ್ರಾಂ.ಪಂ ಅಧ್ಯಕ್ಷರಾಗಿದ್ದು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಯುಳ್ಳವರನ್ನು ಮುಖ್ಯ ಪುಸ್ತಕ ಬರಹಗಾರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಅಕ್ಟೋಬರ್‌ನಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್‌ನ ಐವರು ಸದಸ್ಯರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದೆವು. ಜನವರಿ ೨೫ರಂದು ಎಂ.ಬಿ.ಕೆ ಆಯ್ಕೆಯನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿದ್ದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹೊಸ ಆಯ್ಕೆ ಮಾಡುವಂತೆ ಮತ್ತು ಮುಂದಿನ ಆಯ್ಕೆಯವರೆಗೆ ಹಿಂದಿನ ಮುಖ್ಯ ಪುಸ್ತಕ ಬರಹಗಾರರನ್ನು ಮುಂದುವರಿಯುವಂತೆ ಸೂಚನೆ ನೀಡಿದ್ದರು. ನಂತರ ನೂತನ ಆಯ್ಕೆಗೆ ಅರ್ಜಿ ಆಹ್ವಾನ ಮಾಡಲಾಗಿತ್ತು, ಅರ್ಜಿಗಳು ಬಂದಿದ್ದು ಅವುಗಳನ್ನು ತಾ.ಪಂ. ಕಛೇರಿಗೆ ತರಿಸಿಕೊಂಡ ತಾಲೂಕು ಪಂಚಾಯತ್ ಇ.ಓ.ರವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಳಿಕ ಮಾರ್ಚ್ ೨೩ರಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಲಾಗಿತ್ತು ಅದೇ ದಿನ ಸಂಜೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ನೂತನ ಆಯ್ಕೆಗೆ ಆದೇಶ ಹೊರಡಿಸಿದ್ದರು. ಆದರೆ ತಾಲೂಕು ಪಂಚಾಯತ್ ಇ.ಓ.ರವರು ಇಂದು, ನಾಳೆ ಎಂದು ಮೀನಾಮೇಷ ಎಣಿಸುತ್ತಿದ್ದರು. ಇದನ್ನು ವಿರೋಧಿಸಿ ಗ್ರಾಂ.ಪಂ. ಸದಸ್ಯರುಗಳಾದ ನಾವು ಧರಣಿ ಕುಳಿತಿದ್ದೆವು. ಇದೀಗ ನಮ್ಮ ಬೇಡಿಕೆ ಈಡೇರಿದ್ದು ಧರಣಿ ವಾಪಸ್ ಪಡೆದಿದ್ದೇವೆ ಎಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ನಡುಮನೆ ಮತ್ತು ಜಯಪ್ರಕಾಶ್ ಬದಿನಾರು ಪ್ರತಿಕ್ರಿಯಿಸಿದ್ದಾರೆ.

ಆದೇಶ ಪಾಲಿಸದೇ ಇದ್ದಲ್ಲಿ 15 ದಿನದೊಳಗೆ ಒಕ್ಕೂಟ ನಿಷ್ಕ್ರಿಯ-ಇ.ಓ. ಆದೇಶ
ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾಲಿಂಗೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ(ಎಂ.ಬಿ.ಕೆ) ಆಯ್ಕೆಯಲ್ಲಿ ಗೊಂದಲವಾಗಿ, ಮಾನದಂಡದಲ್ಲಿ ಸೂಚಿಸಲಾಗಿರುವ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರದೇ ಇರುವವರು ಮುಖ್ಯ ಪುಸ್ತಕ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಕಾರ್ಯಕಾರಿ ಸಮಿತಿ ಮಹಾಲಿಂಗೇಶ್ವರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೋಡಿಂಬಾಡಿ ಗ್ರಾಮ ಪಂಚಾಯತ್ ಇವರಿಗೆ ಮಾರ್ಗಸೂಚಿಯನ್ನು ಅನುಸರಿಸಿ ನಿಯಮಾನುಸಾರ ಮುಖ್ಯ ಪುಸ್ತಕ ಬರಹಗಾರರ ಮರು ಆಯ್ಕೆ ಮಾಡಲು ಆದೇಶಿಸಲಾಗಿತ್ತು. ಆದರೆ, ಈವರೆಗೂ ಮರು ಆಯ್ಕೆ ಮಾಡದೇ ಇರುವುದರ ಬಗ್ಗೆ ಅರ್ಜಿ ಸಲ್ಲಿಕೆಯಾಗಿದೆ. ಇನ್ನೊಂದೆಡೆ ಈಗಿನ ಮುಖ್ಯ ಪುಸ್ತಕ ಬರಹಗಾರರನ್ನೇ ಹುದ್ದೆಯಲ್ಲಿ ಮುಂದುವರಿಸಲು ಅರ್ಜಿ ಸಲ್ಲಿಕೆಯಾಗಿದೆ. ಈ ರೀತಿ ಸದ್ರಿ ಗೊಂದಲದ ಬಗ್ಗೆ ಸೂಕ್ತ ನಿರ್ದೇಶನ ಕೋರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಲಾಗಿದ್ದು ಅದರಂತೆ ಮುಖ್ಯ ಪುಸ್ತಕ ಬರಹಗಾರರ ಆಯ್ಕೆ ಮಾನದಂಡದಂತೆ ಅದೇ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕನಿಷ್ಠ ಪಿಯುಸಿ ಪಾಸಾಗಿರುವ ಸ್ವಸಹಾಯ ಗುಂಪಿನ ಸದಸ್ಯರನ್ನೇ ಆಯ್ಕೆ ಮಾಡಲು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶಿಸಿದ್ದಾರೆ. ಆದ್ದರಿಂದ ಈಗಾಗಲೇ ಮಾನದಂಡ ಉಲ್ಲಂಘಿಸಿ ನೇಮಿಸಲಾದ ಮುಖ್ಯ ಪುಸ್ತಕ ಬರಹಗಾರರನ್ನು ಹುದ್ದೆಯಿಂದ ವಜಾಗೊಳಿಸಿ ಅರ್ಹ ಅಭ್ಯರ್ಥಿಯ ಆಯ್ಕೆಗೆ ಕ್ರಮ ಕೈಗೊಳ್ಳಬೇಕಾಗಿಯೂ ಹಾಗೂ ಸಂಬಂಧಿಸಿದ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟಕ್ಕೆ ಮುಖ್ಯ ಪುಸ್ತಕ ಬರಹಗಾರರ ಮರು ಆಯ್ಕೆಗೆ ಕಛೇರಿಯಿಂದ ಆದೇಶ ಮಾಡಲಾಗಿದ್ದರೂ ಈವರೆಗೆ ಮುಖ್ಯ ಪುಸ್ತಕ ಬರಹಗಾರರ ಮರು ಆಯ್ಕೆ ನಡೆಸದೇ ಇರುವುದರಿಂದ ಮತ್ತು ಈ ಆದೇಶಕ್ಕೂ ಸದ್ರಿ ಒಕ್ಕೂಟ ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸದ್ರಿ ಒಕ್ಕೂಟವನ್ನು ೧೫ ದಿವಸದ ಒಳಗಾಗಿ ನಿಷ್ಕ್ರಿಯಗೊಳಿಸಿ, ಒಕ್ಕೂಟದ ಬ್ಯಾಂಕ್ ಖಾತೆಯ ವ್ಯವಹಾರಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಸಂಬಂಧಿಸಿದ ಬ್ಯಾಂಕಿಗೆ ಪತ್ರ ವ್ಯವಹಾರ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ. ಕೈಗೊಂಡ ಕ್ರಮದ ವರದಿಯನ್ನು 3೦ ದಿವಸಗಳ ಒಳಗಾಗಿ ತಾ.ಪಂ. ಕಚೇರಿಗೆ ನೀಡುವಂತೆ ಸೂಚಿಸಿ ಅದೇಶ ನೀಡಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿಯವರು ತನ್ನ ಆದೇಶದಲ್ಲಿ ತಿಳಿಸಿದ್ದಾರೆ. ಆದೇಶದ ಪ್ರತಿಯನ್ನು ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಮತ್ತು ಬೊಳ್ವಾರು ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರಿಗೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here