ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಕಾರ್ಯಾಗಾರ: ಆರೋಗ್ಯವಿದ್ದರೆ ಮಾತ್ರ ಎಲ್ಲವು ಸಾಧ್ಯ: ಸುನೀಲ್ ರಾಮಕೃಷ್ಣ

0


ಪುತ್ತೂರು: ಇಂದು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ದೊಡ್ಡ ಕಾರ್ಯವಾಗಿದೆ. ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ದೊಡ್ಡದು. ಕೊರೋನಾ ನಂತರದ ಕಾಲಘಟ್ಟದಲ್ಲಿ ಪ್ರತಿಯೊಬ್ಬರು ಆರೋಗ್ಯದ ಕಡೆಗೆ ವಿಶೇಷ ಗಮನಹರಿಸುವಂತಾಗಿದೆ. ಆರೋಗ್ಯವಿದ್ದರೆ ಮಾತ್ರ ಎಲ್ಲವನ್ನು ಸಾಧಿಸಲು ಸಾಧ್ಯ ಎಂದು ಪುತ್ತೂರು ಮುಳಿಯ ಡೈಮಂಡ್ ಹೆಲ್ತ್ ಅಂಡ್ ಫಿಟ್ನೆಸ್ ಸೆಂಟರ್ ನ ಮುಖ್ಯ ತರಬೇತಿದಾರರಾದ ಶ್ರೀ ಸುನೀಲ್ ರಾಮಕೃಷ್ಣ ಹೇಳಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರೆಡ್ ಕ್ರಾಸ್ ಘಟಕದಿಂದ ಆಯೋಜಿಸಲಾಗಿದ್ದ ಹೆಲ್ತ್ ಅಂಡ್ ಫಿಟ್ನೆಸ್ – ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಆರೋಗ್ಯ ಹಾಗೂ ದೇಹದ ಸೌಂದರ್ಯ ಕಾಪಾಡಲು ಫಿಟ್ನೆಸ್ ಗೆ ಮಾರುಹೋಗುತ್ತಾರೆ. ನಿಮ್ಮ ಫಿಟ್‌ನೆಸ್ ದಿನಚರಿಗಳು ಮತ್ತು ಆಹಾರ ಯೋಜನೆಯನ್ನು ತಪ್ಪಾಗಿ ಅನುಸರಿಸುವುದರಿಂದ ನೀವು ಬಯಸಿದ ಫಲಿತಾಂಶಗಳನ್ನು ನೀಡುವುದಿಲ್ಲ. ಆರೋಗ್ಯದ ಕಡೆಗೆ ಜಾಸ್ತಿ ಗಮನ ನೀಡುವ ಜೊತೆಗೆ ಸರಿಯಾದ ಆಹಾರದ ಯೋಜನೆಯನ್ನು ರೂಪಿಸಿಕೊಳ್ಳಿ. ಉತ್ತಮ ಆರೋಗ್ಯಯುತ ಜೀವನವನ್ನು ನೀವು ನಡೆಸಿ ಎಂದರು. ಜೊತೆಗೆ ಹಲವಾರು ಹೆಲ್ತ್ ಟಿಪ್ಸ್ ಹಾಗೂ ಕೆಲವು ಪ್ರಾಯೋಗಿಕವಾಗಿ ನಡೆಸುವುದರ ಮೂಲಕ ಅವರು ಫಿಟ್ನೆಸ್ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಶಿಕ್ಷಕ-ರಕ್ಷಕ ಸಂಘದ ಕಾರ್ಯದರ್ಶಿ ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಪ್ರಮೀತಾ ಸಿ ಹಾಸ್ ಮಾತನಾಡಿ, ವೇಗವಾಗಿ ಓಡುತ್ತಿರುವ ಈ ಜಗತ್ತಿನಲ್ಲಿ ಹಣ ಸಂಪಾದಿಸುವ ಭರದಲ್ಲಿ ಹಣಕ್ಕಿಂತಲೂ ಹೆಚ್ಚು ಬೆಲೆ ಬಾಳುವ ಆರೋಗ್ಯದ ಕಡೆ ಗಮನಕೊಡದೆ ರಾತ್ರಿ ಹಗಲುಗಳೆನ್ನದೇ ದುಡ್ಡು ದುಡ್ಡು ದುಡ್ಡು ಎಂದು ದುಡ್ಡಿನ ಹಿಂದೆ ಬಿದ್ದಿದ್ದೇವೆ. ಅದರ ಬದಲು ಆರೋಗ್ಯದ ಕಡೆಗೆ ನಾವು ಗಮನಹರಿಸಬೇಕಾಗಿದೆ. ಮನುಷ್ಯನಿಗೆ ಆಹಾರ, ಆರೋಗ್ಯ, ಶಿಕ್ಷಣ ಮುಖ್ಯವಾಗಿದ್ದು, ಆರೋಗ್ಯ ಉತ್ತಮವಾಗಿದ್ದರೆ ಬದುಕಿನಲ್ಲಿ ಏನನ್ನಾದರೂ ಸಾಧನೆ ಮಾಡಬಹುದು ಎಂದರು. ಅರೋಗ್ಯದ ದೃಷ್ಟಿಯಿಂದ ಈ ಶಿಬಿರ ಆಯೋಜನೆ ಮಾಡಿದ್ದು, ಇದರ ಉದ್ದೇಶ ಎಲ್ಲರೂ ಆರೋಗ್ಯವಂತರನ್ನಾಗಿ ಮಾಡುವುದಾಗಿದೆ. ಇಂತಹ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕೆಂದರು. ನಂತರ ವಿದ್ಯಾರ್ಥಿಗಳ ಜೊತೆಗೆ ಸಂವಾದ ಹಾಗೂ ಪ್ರಾಯೋಗಿಕವಾಗಿ ಕಾರ್ಯಾಗಾರ ನಡೆಸಿದರು.

ವೇದಿಕೆಯಲ್ಲಿ ಮುಳಿಯ ಡೈಮಂಡ್ ಹೆಲ್ತ್ ಅಂಡ್ ಫಿಟ್ನೆಸ್ ಸೆಂಟರ್ ನ ತರಬೇತಿದಾರಿಣಿ ಶ್ರೀಮತಿ ಸುಶ್ಮಿತಾ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಎಂ.ಕೆ ನವೀನ್ ಕುಮಾರ್, ವಿದ್ಯಾರ್ಥಿ ಸಂಯೋಜಕರಾದ ಅಜಿತ್ ಕುಮಾರ್ ಮತ್ತು ಶ್ರಾವ್ಯ ಬಿ ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ರೇಖಾ ಕೆ, ಕಾನೂನು ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸಂಗೀತಾ ಎಸ್ ಎಂ, ಕೌಶಿಕ್ ಸಿ, ಕು. ಶ್ರೀರಕ್ಷಾ, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಲಕ್ಷ್ಮಿಕಾಂತ ರೈ ಅನಿಕೂಟೆಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕು. ವಿಜೇತ ಸ್ವಾಗತಿಸಿ, ಜ್ಞಾನೇಶ್ ಪಿ ವಿ ವಂದಿಸಿದರು. ವಿದ್ಯಾರ್ಥಿ ಗುರುತೇಜ್ ಶೆಟ್ಟಿ ಪ್ರಾರ್ಥಿಸಿ, ವಿದ್ಯಾರ್ಥಿ ನಾಯಕ ನಿಶಾನ್ ಎಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here