ಪ್ರಧಾನಿ ನರೇಂದ್ರ ಮೋದಿ ಸರಕಾರ 8 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆ

0

  • ಬಿಜೆಪಿ ಎಸ್ಟಿ ಮೋರ್ಚಾದಿಂದ ಸಮಾಜ ಗುರಿಕ್ಕಾರರು, ಸಾಧಕರಿಗೆ ಸನ್ಮಾನ

 

ಪುತ್ತೂರು:ಪ್ರಧಾನಿ ನರೇಂದ್ರ ಮೋದಿಯವರ ಸರಕಾರ 8 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಯ ಅಂಗವಾಗಿ ಸೇವೆ-ಸುಶಾಸನ-ಬಡವರ ಕಲ್ಯಾಣ ಕಾರ್ಯಕ್ರಮದಡಿ ಬಿಜೆಪಿ ಪುತ್ತೂರು ಮಂಡಲದ ನೇತೃತ್ವದಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ವತಿಯಿಂದ ಸಮಾಜದ ಗುರಿಕ್ಕಾರರು ಮತ್ತು ಸಾಧಕರಿಗೆ ಗೌರವಾರ್ಪಣೆ ಮತ್ತು ಅಭಿನಂದನೆ ಹಾಗು ಕೇಂದ್ರ, ರಾಜ್ಯ ಸರಕಾರದ ಯೋಜನೆಗಳ ಮಾಹಿತಿ ಕಾರ್ಯಕ್ರಮ ಜೂ.16ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ, ಅಂತರ್ರಾಷ್ಟ್ರೀಯ ಯೋಗಪಟುಗಳಾದ ತೃಪ್ತಿ ಸಣಂಗಲ ಮತ್ತು ರಾಮಚಂದ್ರ ಅವರನ್ನು ಗೌರವಿಸಲಾಯಿತು.ಬಳಿಕ ಸಮಾಜದ ವಿವಿಧ ಕ್ಷೇತ್ರದ ಸಾಧಕರು ಮತ್ತು ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು.

 

ಸಂಸ್ಕೃತಿ, ಹಿಂದುತ್ವಕ್ಕೆ ಒತ್ತುಕೊಟ್ಟ ಸಮಾಜ : ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಗುಡ್ಡಗಾಡು ಪ್ರದೇಶದಲ್ಲಿರುವ ಜನಾಂಗವನ್ನು ಕೂಡಾ ಈ ದೇಶದ ಪ್ರಧಾನಿ ಗುರುತಿಸುವ ಮೂಲಕ ದೇಶದಲ್ಲಿ ಪರಿವರ್ತನೆ ಆಗುತ್ತಿದೆ. `ಪರಂ ವೈಭವೇ ತುಮೆ ತತ್ವ ರಾಷ್ಟ್ರ’ ಎಂಬಂತೆ ಅಮೈ ಮಹಾಲಿಂಗ ನಾಯ್ಕ ಅವರನ್ನು ಗುರುತಿಸಿದಾಗ ದೇಶ ಪರಮವೈಭವಕ್ಕೆ ಹೋಗುತ್ತದೆ.ಸಂಸ್ಕೃತಿ, ಹಿಂದುತ್ವಕ್ಕೆ ಹೆಚ್ಚು ಒತ್ತು ಕೊಟ್ಟು ಹಿಂದು ಸಮಾಜವನ್ನು ಒಟ್ಟು ಮಾಡುವ ಕೆಲಸವನ್ನು ಮರಾಟಿ ಸಮಾಜ ಮಾಡಿದೆ.ಧರ್ಮಿಷ್ಟರಾಗಿ ಕೆಲಸ ಮಾಡುವ ಮರಾಟಿ ಸಮಾಜ ನೂರಕ್ಕೆ ನೂರು ಬಿಜೆಪಿಯೊಂದಿಗೆ ಇದೆ ಎಂದು ಹೇಳುವುದಕ್ಕೆ ನನಗೆ ಹೆಮ್ಮೆ ಆಗುತ್ತಿದೆ ಎಂದರು.

ಸಂಜೀವಣ್ಣನ ಕೈಯನ್ನು ಬಲಪಡಿಸಿ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ತು ಸೇವೆ ಸುಶಾಸನ ಬಡವರ ಕಲ್ಯಾಣ ಕಾರ್ಯಕ್ರಮದ ಸಂಚಾಲಕ ರಾಮದಾಸ್ ಬಂಟ್ವಾಳ ಅವರು ಮಾತನಾಡಿ ದೀನ್ ದಯಾಳ್ ಉಪಾಧ್ಯಾಯರು ಹೇಗೆ ಪ್ರಧಾನಿ ಮೋದಿಗೆ ಪ್ರೇರಣೆಯಾದರೋ ಅದೇ ರೀತಿ ಸಂಜೀವಣ್ಣನಿಗೆ ಮೋದಿ ಪ್ರೇರಣೆಯಾಗಿದ್ದಾರೆ.ಪ್ರಧಾನಿಯವರಂತೆ ಇವರೂ ದಿನದ ೧೮ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಾಗಾಗಿ ಪುತ್ತೂರಿನ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.ಎಲ್ಲಾ ವರ್ಗದವರನ್ನು ಗಮನದಲ್ಲಿಟ್ಟು ಸಮಗ್ರ ಯೋಜನೆ ಸಂಜೀವಣ್ಣನದು.ಕೇಂದ್ರ, ರಾಜ್ಯದಿಂದ ಯಾವ ಅನುದಾನ ದೊರೆಯುತ್ತದೆಯೋ ಅದೆಲ್ಲವನ್ನೂ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ತಂದಿದ್ದಾರೆ.ಹಾಗಾಗಿ ಅವರ ಕೈಗಳನ್ನು ನಾವೆಲ್ಲ ಬಲಪಡಿಸಬೇಕು ಎಂದರು.ಹಿಂದೆ ಗಾಂಧಿ ಕುಟುಂಬವನ್ನು ಓಲೈಸಿದವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತಿತ್ತು.ಆದರೆ ಇವತ್ತು ಜನಸಾಮಾನ್ಯರಿಗೂ ಪದ್ಮಶ್ರೀ ಪ್ರಶಸ್ತಿ ಸಿಗಲು ಕಾರಣ ಪ್ರಧಾನಿ ನರೇಂದ್ರ ಮೋದಿಯವರು.ಹಾಗಾಗಿ ಮುಂದಿನ 2024ರ ಚುನಾವಣೆಯಲ್ಲಿ 400 ಸ್ಥಾನಗಳನ್ನು ಬಿಜೆಪಿ ಪಡೆಯಬೇಕು.ರಾಜ್ಯದಲ್ಲಿ 120 ಸ್ಥಾನ ಬರಬೇಕೆಂದವರು ಹೇಳಿದರು.

ಹಳ್ಳಿಯಿಂದ ದಿಲ್ಲಿಯ ತನಕ ಗುರುತಿಸಿದ್ದು ಮೋದಿ: ಸನ್ಮಾನ ಸ್ವೀಕರಿಸಿದ `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರು ಮಾತನಾಡಿ, ತನ್ನ ಕೃಷಿ ಸಾಧನೆಯನ್ನು ತಿಳಿದು ಹಳ್ಳಿಯಿಂದ ದಿಲ್ಲಿಯ ತನಕ ಗುರುತಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರು.ಅವರಿಗೆ ನನ್ನ ನೂರು ನಮಸ್ಕಾರಗಳು.ಇದು ನನಗೆ ಸಿಕ್ಕಿದ ಪ್ರಶಸ್ತಿಯಲ್ಲ ಇಡೀ ದೇಶಕ್ಕೆ ಸಿಕ್ಕಿದ ಪ್ರಶಸ್ತಿಯಾಗಿದೆ ಎಂದರು.ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸುಮಜಲು, ಸೇವೆ ಸುಶಾಸನ ಬಡವರ ಕಲ್ಯಾಣ ಕಾರ್ಯಕ್ರಮ ಸಂಚಾಲಕರಾಗಿರುವ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಹಿಂದುಳಿದ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್.ಸಿ ನಾರಾಯಣ ಶುಭ ಹಾರೈಸಿದರು.ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಎನ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಹಿರಿಯ ಕಾರ್ಯಕರ್ತ ಕೃಷ್ಣ ನಾಯ್ಕ ಅಗರ್ತಬೈಲು, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಎಸ್ಟಿ ಮೋರ್ಚಾದ ನಗರ ಮಂಡಲದ ಅಧ್ಯಕ್ಷ ಅಶೋಕ್ ಬಲ್ನಾಡು, ಗ್ರಾಮಾಂತರ ಮಂಡಲದ ಅಧ್ಯಕ್ಷ ಶಿವಪ್ಪ ನಾಯ್ಕ ಪೆರ್ನೆ, ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಮಣಿ ಗಾಣಿಗ, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಾರಾಯಣ ಚಾಕೋಟೆ, ಹರೀಶ್ ದರ್ಬೆ, ನಾರಾಯಣ, ಜಯರಾಮ ನಾಯ್ಕ, ಲಿಂಗಪ್ಪ ನಾಯ್ಕ, ಗಣೇಶ್, ತಿರುಮಲೇಶ್ ಅತಿಥಿಗಳನ್ನು ಗೌರವಿಸಿದರು.ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್.ಶೆಟ್ಟಿ ಅವರು ಪ್ರಾರ್ಥಿಸಿದರು.ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ ಸ್ವಾಗತಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಸನ್ಮಾನಿತರ ಪಟ್ಟಿ ಮಂಡನೆ ಮಾಡಿದರು.

ಉಚಿತ 75ಯುನಿಟ್ ವಿದ್ಯುತ್‌ಗೆ ನೋಂದಾವಣೆ
ಪರಿಶಿಷ್ಟ ಜಾತಿ ಪಂಗಡದ ಬಿಪಿಎಲ್ ಫಲಾನುಭವಿಗಳಿಗೆ ಸರಕಾರದ ಯೋಜನೆಯಾದ 75 ಯುನಿಟ್ ಉಚಿತ ವಿದ್ಯುತ್‌ಗೆ ಸಂಬಂಧಿಸಿ ಅದಕ್ಕೆ ಬೇಕಾದ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಪಕ್ಷದ ವತಿಯಿಂದ ಇಲಾಖೆಗೆ ನೀಡುವ ಕಾರ್ಯಕ್ರಮ ನಡೆಯಿತು.ಬಿಪಿಎಲ್ ಫಲಾನುಭವಿಗಳು ತಮ್ಮ ದಾಖಲೆಯನ್ನು ನೀಡಿ ನೋಂದಾವಣೆ ಮಾಡಿಕೊಂಡರು.

LEAVE A REPLY

Please enter your comment!
Please enter your name here