ಬ್ಯಾಂಕ್ ಉಳಿತಾಯ ಖಾತೆಗೆ ಒದಗಿಸಿರುವ ಅಪಘಾತ ವಿಮಾ ಸೌಲಭ್ಯ ; ಅತಂತ್ರ ಕುಟುಂಬಕ್ಕೆ 10 ಲಕ್ಷ ರೂಪಾಯಿ ವಿಮೆ, ಚೆಕ್ ಹಸ್ತಾಂತರ

0

ಉಪ್ಪಿನಂಗಡಿ: ಬ್ಯಾಂಕ್ ಉಳಿತಾಯ ಖಾತೆಗೆ ಒದಗಿಸಿರುವ ಅಪಘಾತ ವಿಮಾ ಸೌಲಭ್ಯಕ್ಕೆ ವಾರ್ಷಿಕ 150 ರೂಪಾಯಿ ಪಾವತಿಸಿದ್ದ ಯುವಕನ ಅಕಾಲಿಕ ಮರಣದಿಂದ ಹೆತ್ತವರಿಗೆ ಹತ್ತು ಲಕ್ಷ ರೂಪಾಯಿ ವಿಮಾ ಮೊತ್ತ ದೊರೆತಿದ್ದು, ಉಪ್ಪಿನಂಗಡಿ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ವಿಮಾ ಮೊತ್ತವನ್ನು ಹಸ್ತಾಂತರಿಸಲಾಯಿತು.

2021 ನವೆಂಬರ್ 14ರಂದು ಬಂಟ್ವಾಳ ತಾಲೂಕು ತುಂಬೆಯ ರಾಮಲ್‌ಕಟ್ಟೆ ಎಂಬಲ್ಲಿ ಸಂಭವಿಸಿದ ಪಿಕ್‌ಅಪ್ ವಾಹನ ಅಪಘಾತದಲ್ಲಿ ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ ಆಶಿಕ್ (21 ವ.) ಹಾಗೂ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ನಿವಾಸಿ ಚೇತನ್ (21 ವ.) ಎಂಬಿಬ್ಬರು ಸಾವನ್ನಪ್ಪಿದ್ದರು. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ, ತನ್ನ ವಿದ್ಯಾರ್ಥಿ ಜೀವನದಲ್ಲೂ ಬಿಡುವಿನ ವೇಳೆ ಕ್ಯಾಟರಿಂಗ್ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಶಿಕ್ ಮತ್ತು ಚೇತನ್ ಎಂಬಿಬ್ಬರು ಪ್ರಾಣ ಸ್ನೇಹಿತರಾಗಿದ್ದುಕೊಂಡು ಬದುಕಿನ ಅಂತ್ಯವನ್ನು ಜೊತೆಯಾಗಿಯೇ ಕಂಡಿದ್ದರು.

ಮೃತ ಯುವಕರಿಬ್ಬರೂ ಉಪ್ಪಿನಂಗಡಿಯ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಜೊತೆಯಾಗಿಯೇ ತೆರೆದಿದ್ದು, ಖಾತೆ ತೆರೆಯುವ ವೇಳೆ ಕೆಬಿಎಲ್ ಸುರಕ್ಷಾ ಅಪಘಾತ ವಿಮಾ ಸೌಲಭ್ಯವನ್ನು ಪಡೆಯಲು ವಿನಂತಿಸಲಾಗಿತ್ತು. ಅಂದು ವಾರ್ಷಿಕ 150 ರೂ ಪಾವತಿಸಬೇಕಾಗಿದ್ದ ಈ ಯೋಜನೆಯನ್ನು ಆಶಿಕ್ ಪಡೆದುಕೊಂಡಿದ್ದು, ಚೇತನ್ ನಿರಾಕರಿಸಿದ್ದರು.

ಇದರ ಪರಿಣಾಮವಾಗಿ ಆಶಿಕ್ ವಾರಸುದಾರರಾದ ಆತನ ತಾಯಿಗೆ ರೂಪಾಯಿ ಹತ್ತು ಲಕ್ಷದ ಅಪಘಾತ ವಿಮಾ ಮೊತ್ತವು ದೊರೆಯುವಂತಾಯಿತು. ಜೂನ್ 16ರಂದು ಉಪ್ಪಿನಂಗಡಿಯ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಶಾಖಾಧಿಕಾರಿ ಮುರಳಿ ಆರ್. ಶ್ಯಾಮ್ ಭಟ್‌ರವರು ಮಮತಾರವರಿಗೆ ವಿಮಾ ಮೊತ್ತವನ್ನು ಹಸ್ತಾಂತರಿಸಿದರು. ಸಹಾಯಕ ಮೆನೇಜರ್ ಫ್ಲೆವಿಟಾ ಶೈನಿ ಫೆರ್ನಾಂಡೀಸ್, ವಿಮಾ ಸಂಸ್ಥೆಯ ಪ್ರಸನ್ನ ದೇವಾಡಿಗ ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here