ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ

0

  • ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ, ಸರಿಪಡಿಸಲು ಆಗ್ರಹ

 

ಉಪ್ಪಿನಂಗಡಿ: ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ, ಬೇಕಾಬಿಟ್ಟಿಯಾಗಿ ನೆಪ ಮಾತ್ರಕ್ಕೆ ಇರುವಂತಿದೆ, ಯಾರೂ ಯಾರ ಮಾತನ್ನೂ ಕೇಳುತ್ತಿಲ್ಲ, 8ತಿಂಗಳ ಹಿಂದೆ ವಾರ್ಡುವಾರು ವಿಸ್ತರಣೆ ಮಾಡುವ ಬಗ್ಗೆ ನಿರ್ಣಯ ಆಗಿದೆ, ಅದೂ ಕಾರ್‍ಯರೂಪಕ್ಕೆ ಬಂದಿಲ್ಲ, ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಸದಸ್ಯರು ಆಗ್ರಹಿಸಿದ ಮತ್ತು ಅಧ್ಯಕ್ಷರು ವಾರದ ಒಳಗಾಗಿ ಎಲ್ಲಾ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ ಘಟನೆ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ಜೂನ್. 16ರಂದು ಸಭೆಯಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆದು ವಾರದ ಒಳಗಾಗಿ ಸಮಸ್ಯೆ ಬಗೆಹರಿಸುವ ಬಗ್ಗೆ ತೀರ್ಮಾನಕ್ಕೆ ಬರಲಾಯಿತು.

 

ಸದಸ್ಯ ಅಬ್ದುಲ್ ರಹಿಮಾನ್‌ರವರು ವಿಷಯ ಪ್ರಸ್ತಾಪಿಸಿ 2021ಆಗಸ್ಟ್ ತಿಂಗಳ ಸಭೆಯಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ವಾರ್ಡುಗಳಿಗೆ ವಿಸ್ತರಿಸುವ ಬಗ್ಗೆ ನಿರ್ಣಯಿಸಲಾಗಿತ್ತು. ಇಲ್ಲಿ ಚರ್ಚೆ ನಡೆದ ರೀತಿಯಲ್ಲಿ ನಾವುಗಳು ಸದಸ್ಯರು ವಾರ್ಡುಗಳ ಮನೆಗಳಿಗೆ ಭೇಟಿ ನೀಡಿ ತ್ಯಾಜ್ಯ ವಿಲೇವಾರಿಗೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದ್ದೆವು. ಆದರೆ ಅದು ಇಂದಿಗೂ ಕಾರ್‍ಯರೂಪಕ್ಕೆ ಬಂದಿಲ್ಲ. ಯಾಕಾಗಿ ಹೀಗೆಲ್ಲ ಆಗುತ್ತದೆ ಎಂದರು.

ಆಗ ಇದಕ್ಕೆ ಪೂರಕವಾಗಿ ಸುರೇಶ್ ಅತ್ರಮಜಲು ಮಾತನಾಡಿ ಅದರಲ್ಲೂ ಪೇಟೆಯಲ್ಲೂ ಇದೀಗ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಹದಗೆಟ್ಟಿದೆ. ಅವರುಗಳು ಯಾರ ಮಾತನ್ನೂ ಕೇಳುತ್ತಿಲ್ಲ, ಅವರ ಪಾಡಿಗೆ ತಮಗೆ ಇಷ್ಟಬಂದಂತೆ ಮಾಡುತ್ತಿದ್ದಾರೆ. ಘಟಕ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಯೂ ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಇದೆಲ್ಲ ಸರಿ ಅಲ್ಲ ಎಂದರು.

ಆಗ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಪ್ರತಿಕ್ರಿಯಿಸಿ ಈ ಬಗ್ಗೆ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಜೊತೆಗೆ ಮಾತನಾಡಿzವೆ. ವಾರದ ಒಳಗಾಗಿ ಎಲ್ಲವನ್ನೂ ಸರಿಪಡಿಸುವ ಬಗ್ಗೆ ತಿಳಿಸಿದ್ದಾರೆ. ಸರಿ ಆಗಲಿದೆ ಎಂದರು.

 

ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದಾಗಿ ಚರಂಡಿಯಲ್ಲಿ ಮಣ್ಣುಗಳು ತುಂಬಿ ಹೋಗಿದೆ. ಕಾಲು ದಾರಿಯೂ ಬಂದ್ ಆಗಿದೆ. ಹೆದ್ದಾರಿ ಬದಿಯ ಸೂಪರ್ ಮನೆಯವರ ಮುಂದೆ ಮೋರಿ ಬಂದ್ ಆಗಿದ್ದು, ಅಲ್ಲಿಂದ ಮುಂದೆ ನೀರು ಹರಿದು ಹೋಗದೆ ಮಳೆ ನೀರು ಮತ್ತೆ ಪೇಟೆಯ ಒಳಗೆ ನುಗ್ಗಿ ಬರುತ್ತಿದೆ. ಇನ್ನೊಂದು ಮಗ್ಗುಲಲ್ಲಿ ತಿರುಗಿ ನಟ್ಟಿಬೈಲ್ ಕಡೆಗೆ ಹರಿದು ಹೋಗುತ್ತಿದೆ. ನಟ್ಟಿಬೈಲು ಪರಿಸರದಲ್ಲಿ ಮನೆಯೊಳಗೆ ನೀರು ನುಗ್ಗುವಂತಾಗಿದೆ ಎಂದು ಸದಸ್ಯ ಧನಂಜಯ ಸಭೆಯ ಗಮನ ಸೆಳೆದು ಈ ಬಗ್ಗೆ ಶೀಘ್ರವಾಗಿ ಕ್ರಮಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರುಗಳಾದ ಯು.ಕೆ. ಇಬ್ರಾಹಿಂ, ಯು.ಟಿ. ತೌಸೀಫ್, ಲೋಕೇಶ್ ಬೆತ್ತೋಡಿ, ಸಣ್ಣಣ್ಣ ಯಾ ಸಂಜೀವ ಮಡಿವಾಳ, ಮೈಸಿದಿ ಇಬ್ರಾಹಿಂ, ಲಲಿತಾ, ವಿದ್ಯಾಲಕ್ಷ್ಮಿ ಪ್ರಭು, ಉಷಾ ನಾಯ್ಕ್, ರುಕ್ಮಿಣಿ, ಶೋಭಾ, ಜಯಂತಿ, ವನಿತಾ, ನೆಬಿಸಾ, ಸೌದ ಉಪಸ್ಥಿತರಿದ್ದರು. ಕಾರ್‍ಯದರ್ಶಿ ದಿನೇಶ್ ಸ್ವಾಗತಿಸಿ, ಲೆಕ್ಕ ಸಹಾಯಕಿ ಜ್ಯೋತಿ ವಂದಿಸಿದರು.

ಮನವಿ ಕೊಡಲು ಬಂದ ವ್ಯಕ್ತಿಗೆ ಉಪಾಧ್ಯಕ್ಷರ ಕುರ್ಚಿ..!!
ಸಭೆ ನಡೆಯುತ್ತಿದ್ದಾಗ ಗ್ರಾಮಸ್ಥರಾದ ನಿವೃತ್ತ ಅಧಿಕಾರಿಯೋರ್ವರು ಬಂದು ಸೂರಪ್ಪ ಕಂಪೌಂಡ್ ಬಳಿಯಲ್ಲಿ ತ್ಯಾಜ್ಯ ನೀರು ಹರಿದು ಹೋಗುತ್ತಿಲ್ಲ, ಇದನ್ನು ಸರಿಪಡಿಸುವ ಬಗ್ಗೆ ಮನವಿ ತಂದಿರುವುದಾಗಿ ತಿಳಿಸಿದರು. ಆಗ ಸದಸ್ಯ ಯು.ಟಿ. ತೌಸೀಫ್ ಅವರನ್ನು ನೇರವಾಗಿ ಸಭೆಗೆ ಕರೆದರು. ಸಭೆಗೆ ಆಗಮಿಸಿದ ಅವರು ಉಪಾಧ್ಯಕ್ಷರ ಕುರ್ಚಿಯಲ್ಲಿ ಕುಳಿತುಕೊಂಡು ತಾನು ತಂದಿದ್ದ ಮನವಿ ಪತ್ರವನ್ನು ಓದಿ ಹೇಳಿ, ಸರಿಪಡಿಸಿಕೊಡುವಂತೆ ಕೇಳಿಕೊಂಡರು. ಮನವಿ ಪ್ರತಿಯನ್ನು ಕೊಡಿ ಎಂದು ಸದಸ್ಯರು ಹೇಳಲಾಗಿ ಮನವಿ ಸ್ವೀಕರಿಸಲಾಯಿತು. ಅವರು ಸಭೆಯಿಂದ ಹೊರ ಹೋದರು. ಆಗ ಸದಸ್ಯ ಅಬ್ದುಲ್ ರಹಿಮಾನ್‌ರವರು ಅಧ್ಯಕ್ಷರನ್ನು ಉದ್ದೇಶಿಸಿ ಮನವಿ ಕೊಡಲು ಬಂದವರನ್ನು ವೇದಿಕೆಗೆ ಕರೆಸಿ, ಅದರಲ್ಲೂ ಉಪಾಧ್ಯಕ್ಷರ ಕುರ್ಚಿಯಲ್ಲಿ ಕೂರಿಸಿದ್ದೀರಿ, ಇದೇನಿದು, ಸರಿಯಾ?, ಉಪಾಧ್ಯಕ್ಷರ ಕುರ್ಚಿಗೂ ಗೌರವ ಇಲ್ಲವೇ ಎಂದರು. ಆಗ ಸುರೇಶ್ ಅತ್ರಮಜಲು, ಅಬ್ದುಲ್ ರಶೀದ್ ಮಾತನಾಡಿ ಇದೆಲ್ಲ ಸರಿ ಅಲ್ಲ, ಅವರ ಮನವಿ ಸ್ವೀಕರಿಸಿ, ಅವರನ್ನು ಕಳುಹಿಸಬೇಕಿತ್ತು. ವೇದಿಕೆಯಲ್ಲಿ ಉಪಾಧ್ಯಕ್ಷರ ಕುರ್ಚಿಯಲ್ಲಿ ಕೂರಿಸಿರುವುದು ಸರಿ ಅಲ್ಲ, ಇನ್ನು ಮುಂದೆ ಹೀಗೆ ಆಗಬಾರದು ಎಂದು ಅಧ್ಯಕ್ಷರಿಗೆ ಸಲಹೆ ನೀಡಿದರು.

ಪಿಡಿಒ,ಗೆ ಅಧ್ಯಕ್ಷರ ಜೊತೆಗೆ ಸರಿ ಇಲ್ಲ..!!

ಪೊಲೀಸರ ಜೊತೆಯೂ ಸರಿ ಇಲ್ಲ, ಇನ್ನು ಯಾರ ಜೊತೆ ಸರಿ ಇದ್ದಾರೆ…?

ಇಲ್ಲಿ ಯಾವುದೂ, ಏನೂ ಆಗುತ್ತಿಲ್ಲ. ಪಿಡಿಒ. ಮತ್ತು ಅಧ್ಯಕ್ಷರೊಳಗೆ ಹೊಂದಾಣಿಕೆ ಇಲ್ಲ, ಅವರೊಳಗೆ ಸರಿ ಇಲ್ಲ ಎಂದು ಹೇಳುತ್ತಾರೆ. ಟ್ರಾಫಿಕ್ ಸಮಸ್ಯೆ ಸರಿಪಡಿಸಲು ಹೊರಡುವಾಗ ಪೊಲೀಸರು ಪಂಚಾಯಿತಿ ಜೊತೆ ಸ್ಪಂಧಿಸುತ್ತಿಲ್ಲ, ಪೊಲೀಸ್ ಮತ್ತು ಪಿಡಿಒ. ಮಧ್ಯೆ ಸರಿ ಇಲ್ಲ ಅಂತಾರೆ. ಹಾಗಾದರೆ ಪಿಡಿಒ. ಯಾರ ಜೊತೆ ಸರಿ ಇದ್ದಾರೆ ಅಂತಲೇ ಗೊತ್ತಾಗುತ್ತಿಲ್ಲ ಎಂದು ಸದಸ್ಯ ಸುರೇಶ್ ಅತ್ರಮಜಲು ಅಸಮಾಧಾನ ವ್ಯಕ್ತಪಡಿಸಿದರು. ಆಗ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಪ್ರತಿಕ್ರಿಯಿಸಿ ನಮ್ಮ ಮಧ್ಯೆ ಸರಿ ಇಲ್ಲ ಅಂತ ಏನೂ ಇಲ್ಲ. ನಾನು ಹೇಳಿದ್ದನ್ನೆಲಾ ಕೇಳಿಸಿಕೊಳ್ಳುತ್ತಾರೆ. ಎಲ್ಲಾ ಮಾಡುವ ಅಂತ ಹೇಳುತ್ತಾರೆ. ಆದರೆ ಯಾವುದನ್ನೂ ಮಾಡುವುದಿಲ್ಲ ಎಂದು ತಿಳಿಸಿದರು. ಆಗ ಅಬ್ದುಲ್ ರಹಿಮಾನ್ ಪ್ರತಿಕ್ರಿಯಿಸಿ ಪಿಡಿಒ. ಮತ್ತು ಸದಸ್ಯರುಗಳು ಒಮ್ಮೆ ಕುಳಿತು ಅವರೊಂದಿಗೆ ಮಾತನಾಡುವ, ಅವರ ಸಮಸ್ಯೆ ಏನು ಅಂತ ತಿಳಿದುಕೊಳ್ಳುವ ಎಂದರು. ಇದಕ್ಕೆ ಸದಸ್ಯರುಗಳು ಸಮ್ಮತಿ ಸೂಚಿಸಿದರು.

LEAVE A REPLY

Please enter your comment!
Please enter your name here