ಪಕ್ಷದ ವರ್ಚಸ್ಸಿಗೆ ಧಕ್ಕೆ ಆರೋಪ:ಯುವ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ರಾಜ್ಯಾಧ್ಯಕ್ಷರಿಗೆ ದೂರು

0

ಪುತ್ತೂರು:ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕೆಲವು ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಕೆಮ್ಮಾರರವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪ್ಪಾಡ್‌ರವರಿಗೆ ದೂರು ನೀಡಿದ್ದಾರೆ.

ಪುತ್ತೂರು ಯುವ ಕಾಂಗ್ರೆಸ್‌ಗೆ ಚುನಾವಣೆ ನಡೆದು ಅಧ್ಯಕ್ಷರಾಗಿ ಶ್ರೀಪ್ರಸಾದ್ ಪಾಣಾಜೆರವರು ನೇಮಕಗೊಂಡು ಹಲವು ಸಮಯವಾದರೂ ಅವರು ಯುವ ಕಾಂಗ್ರೆಸ್ಸಿಗರ ಸಭೆ ನಡೆಸಲು ಮುಂದಾಗಿರುವುದಿಲ್ಲ.ಯುವಕರಲ್ಲದ ಮತ್ತು ಪಕ್ಷಕ್ಕೆ ಸಂಬಂಧ ಪಡದ ಕೆಲವರನ್ನು ಕರೆಸಿ ಸಭೆ ನಡೆಸಿರುತ್ತಾರೆ.ಈ ಸಭೆಗಳಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸುವ ಬದಲು ಪಕ್ಷದ ನಾಯಕರನ್ನು ದೂಷಿಸುವ ಕೆಲಸ ಮಾಡಿರುತ್ತಾರೆ.ಯುವ ಕಾಂಗ್ರೆಸ್ ಹೆಸರಲ್ಲಿ ಇವರು ನಡೆಸುವ ಯಾವುದೇ ಕಾರ್ಯಕ್ರಮಕ್ಕೆ ಚುನಾಯಿತ ಉಪಾಧ್ಯಕ್ಷನಾಗಿರುವ ನನ್ನನ್ನಾಗಲಿ ಹಾಗೂ ಯುವ ಕಾಂಗ್ರೆಸ್‌ನ ಇನ್ನಿತರ ಚುನಾಯಿತ ಪದಾಧಿಕಾರಿಗಳನ್ನಾಗಲಿ ಕರೆದಿರುವುದಿಲ್ಲ.ಯುವಕ ಕಾಂಗ್ರೆಸ್‌ನ್ನು ಸಂಘಟಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದಿಲ್ಲ.ಪ್ರತಿ ತಿಂಗಳು ನಡೆಯುವ ಬ್ಲಾಕ್ ಕಾಂಗ್ರೆಸ್ ಸಭೆಗೆ ಬ್ಲಾಕ್ ಮುಂಚೂಣಿ ಘಟಕದ ಎಲ್ಲಾ ಅಧ್ಯಕ್ಷರುಗಳು ಸತತವಾಗಿ ಭಾಗಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುತ್ತಾರೆ.ಆದರೆ ಯುವ ಕಾಂಗ್ರೆಸ್ ಅಧ್ಯಕ್ಷರು ಮಾತ್ರ ಸತತವಾಗಿ ಗೈರು ಹಾಜರಾಗಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಬೂತ್ ಮತ್ತು ವಲಯ ಮಟ್ಟದಲ್ಲಿ ಬ್ಲಾಕ್ ಕಾಂಗ್ರೆಸ್ ನಡೆಸುತ್ತಿರುವ ಸಭೆಗೆ ಹಾಜರಾಗಿ ಯುವ ಕಾಂಗ್ರೆಸ್ ಸಮಿತಿಯನ್ನು ಬೂತ್ ಮಟ್ಟದಲ್ಲಿ ರಚಿಸುವಂತೆ ಹಾಗೂ ಅದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡುತ್ತೇನೆ ಎಂದು ಬ್ಲಾಕ್ ಅಧ್ಯಕ್ಷರು ಹೇಳಿದ್ದರು.ಆದರೆ ಇದಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷರು ಸ್ಪಂದಿಸಿರುವುದಿಲ್ಲ.ಕೆಪಿಸಿಸಿ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿರುವ ಹಲವಾರು ಪ್ರತಿಭಟನೆ ಹಾಗೂ ಇನ್ನಿತರ ಪಕ್ಷದ ಕಾರ್ಯಕ್ರಮಗಳಿಗೂ ಅವರು ಹಾಜರಾಗಿರುವುದಿಲ್ಲ.ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಾವಣೆ ಕಾರ್ಯಕ್ರಮದ ಮುಖ್ಯ ನೊಂದಾವಣೆದಾರ(Chief enroller))ಆಗಿ ಕೆಪಿಸಿಸಿ ವತಿಯಿಂದ ನೇಮಕಗೊಂಡಿದ್ದ ಪ್ರಸಾದ್ ಪಾಣಾಜೆಯವರು ಪ್ರತಿ ಬೂತ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು enroller ಆಗಿ ನೇಮಿಸಿ ಅವರ ಮೂಲಕ ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸದಸ್ಯರನ್ನಾಗಿ ಸೇರ್ಪಡೆಗೊಳಿಸುವ ಜವಾಬ್ದಾರಿ ಹೊತ್ತುಕೊಂಡಿದ್ದರೂ ಒಬ್ಬನೇ ಒಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತನನ್ನು enroller ಆಗಿ ನೇಮಕ ಗೊಳಿಸಿರುವುದಿಲ್ಲ ಎಂದು ದೂರಿನಲ್ಲಿ ಆಪಾದಿಸಿದ್ದಾರೆ.ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್‌ರವರಿಗೂ ದೂರಿನ ಪ್ರತಿಯನ್ನು ಕಳಿಸಿದ್ದಾರೆ.

LEAVE A REPLY

Please enter your comment!
Please enter your name here