ಮಾಣಿ ಗ್ರಾಮ ಸಭೆ

0

ಗ್ರಾಮದ ಜನರ ಜೊತೆಗಿನ ನಿರಂತರ ಸಂಪರ್ಕ ಪಂಚಾಯತ್ ಆಡಳಿತ ವ್ಯವಸ್ಥೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು: ಬಾಲಕೃಷ್ಣ ಆಳ್ವ ಕೊಡಾಜೆ

ವಿಟ್ಲ: ಗ್ರಾಮದ ಜನರ ಜೊತೆಗಿನ ನಿರಂತರವಾದ ಸಂಪರ್ಕದಿಂದ ಪಂಚಾಯತ್ ಆಡಳಿತ ವ್ಯವಸ್ಥೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಯಿತು. ಜನರ ಬೇಡಿಕೆಯನ್ನು ಈಡೇರಿಸುವುದು ಮತ್ತು ಗ್ರಾಮದ ಅಭಿವೃದ್ಧಿಯೇ ನಮ್ಮ ಪ್ರಮುಖ ಗುರಿ ಎಂದು ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆರವರು ಹೇಳಿದರು.

ಅವರು ಮಾಣಿ ಗ್ರಾಮ ಪಂಚಾಯತ್ ನ 2022-23ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಆಡಳಿತಾವಧಿಯ ಆರಂಭದಿಂದಲೇ ಪಾರದರ್ಶಕವಾದ ಆಡಳಿತವನ್ನು ನೀಡಬೇಕು ಎನ್ನುವ ದೃಷ್ಟಿಯಿಂದ ಚಿಂತಿಸಿ, ಎಲ್ಲ ಸದಸ್ಯರ ಮತ್ತು ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಯವರ ಸಹಕಾರವನ್ನು ಪಡೆದು, ಅವರವರ ಜವಾಬ್ದಾರಿಯ ನಿರ್ವಹಣೆಗೆ ಮಾರ್ಗದರ್ಶನವನ್ನು ಮಾಡಿ, ತಂಡವಾಗಿ ಕೆಲಸ ಮಾಡುವಲ್ಲಿ ಯಶಸ್ಸನ್ನು ಸಾಧಿಸಲಾಗಿದೆ.

ಪಂಚಾಯತ್ ನಲ್ಲಿ ಸಾರ್ವಜನಿಕವಾಗಿ ದುಡ್ಡು ಖರ್ಚು ಮಾಡಬೇಕಾದರೆ, ಆದಾಯದ ಮೂಲವನ್ನು ಹೆಚ್ಚಿಸುವ ಬಗ್ಗೆ ಗಮನಹರಿಸಿ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಮನೆತೆರಿಗೆ, ಕಟ್ಟಡ ತೆರಿಗೆ, ವ್ಯಾಪಾರ ಪರವಾನಿಗೆ, ನೀರಿನ ಶುಲ್ಕ ಇತ್ಯಾದಿಗಳನ್ನು ಪರಿಷ್ಕರಿಸಲಾಗಿದೆ ಮತ್ತು ಜನರು ಕೂಡಾ ಸಹಕಾರವನ್ನು ನೀಡುತ್ತಿದ್ದಾರೆ.

ಹಿಂದೂ ರುದ್ರಭೂಮಿಯ ಪುನರ್ನಿರ್ಮಾಣ, ವಾಣಿಜ್ಯ ಕಟ್ಟಡಗಳ ನಿರ್ಮಾಣ, ದಾರಿದೀಪ, ಕುಡಿಯುವ ನೀರಿನ ಸೌಲಭ್ಯ, ಸರ್ಕಾರಿ ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಇವೆಲ್ಲವುಗಳು ಸುಸೂತ್ರವಾಗಿ ನೆರವೇರುತ್ತಿವೆ. ಕಸವಿಲೇವಾರಿ ಮತ್ತು ನೈರ್ಮಲ್ಯಕ್ಕೆ ವಿಶೇಷ ಮುತುವರ್ಜಿಯಿಂದ ತೊಡಗಿಕೊಂಡು, ಅದನ್ನು ಸವಾಲಾಗಿ ಸ್ವೀಕರಿಸಿ, ಕಳೆದ ಗಾಂಧಿಜಯಂತಿಯ ವಿಶೇಷ ದಿನದಂದು ಚಾಲನೆಯನ್ನು ನೀಡಿ, ಅಂಗಡಿಗಳಿಂದ ಕಸ ಸಂಗ್ರಹಿಸಿ, ವಿಲೇವಾರಿ ಮಾಡುವುದರಲ್ಲಿಯೂ ಯಶಸ್ವಿಯಾಗಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಮನೆಮನೆಯಿಂದಲೂ ತ್ಯಾಜ್ಯ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ.

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ಗ್ರಾಮದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ವಿಶೇಷವಾಗಿ ತೋಟಗಾರಿಕೆ, ಇಂಗುಗುಂಡಿ, ಬಾವಿ, ದನದ ಕೊಟ್ಟಿಗೆ, ಕೋಳಿ ಗೂಡು, ಕೊಳವೆ ಬಾವಿಗಳ ಪುನಶ್ಚೇತನ, ತೋಡಿನ ಹೂಳೆತ್ತುವುದು ಇತ್ಯಾದಿಗಳಿಗೆ ಒತ್ತು ನೀಡಲಾಗುತ್ತಿದೆ. ಜನರು ಇದರ ಸದುಪಯೋಗವನ್ನು ಪಡೆದುಕೂಳ್ಳಬೇಕು.

ಒಟ್ಟಿನಲ್ಲಿ ಜನರಿಗಾಗಿಯೇ ಇರುವ ಸ್ಥಳೀಯಾಡಳಿತದಿಂದ ಸಿಗಬಹುದಾದ ಮಾಹಿತಿ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಮತ್ತು ಉತ್ತಮ ಆಡಳಿತಕ್ಕಾಗಿ ಜನರು ನಮ್ಮ ಜೊತೆ ಕೈಜೋಡಿಸಬೇಕು ಎಂದು ಹೇಳಿದರು.

ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ದಿನೇಶ್ ರವರು ಮಾತನಾಡಿ, ಇಚ್ಛಾಶಕ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಮಾಣಿ ಗ್ರಾಮ ಪಂಚಾಯತ್ ನ ಆಡಳಿತ ವೈಖರಿಯೇ ಉತ್ತಮ ಉದಾಹರಣೆ. ಗ್ರಾಮ ಸಭೆಗಳಲ್ಲಿ ಸಿಗುವ ಮಾಹಿತಿಯನ್ನು ಗ್ರಾಮಸ್ಥರು ಪಡೆದುಕೊಂಡು, ಅವುಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವ ಜೊತೆಗೆ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳನ್ನೂ ಪಡೆದುಕೊಳ್ಳಬೇಕು ಎಂದು ಹೇಳಿದರು. ವಿವಿಧ ಇಲಾಖೆಗಳಿಂದ ಆಗಮಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಹಲವು ಮಾಹಿತಿಗಳನ್ನು ನೀಡಿದರು.

ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಗ್ರಾಮಸ್ಥರು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಮತ್ತು ಪಂಚಾಯತ್ ಆಡಳಿತದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಕಳೆದ ಅವಧಿಯ ವರದಿ ಮತ್ತು ಲೆಕ್ಕಪತ್ರವನ್ನು ಸಭೆಯಲ್ಲಿ ಮಂಡಿಸಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರಾದ ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್, ನಾರಾಯಣ ಶೆಟ್ಟಿ, ರಮಣಿ.ಡಿ.ಪೂಜಾರಿ, ಸೀತಾ, ಸುಜಾತ, ಮಿತ್ರಾಕ್ಷಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಸ್ವಾಗತಿಸಿ ವಂದಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.

LEAVE A REPLY

Please enter your comment!
Please enter your name here