ಆಲಂತಾಯ ಶಾಲೆಯಲ್ಲಿ ‘ಸ್ಮಾರ್ಟ್ ಕ್ಲಾಸ್’ ಉದ್ಘಾಟನೆ

0

  • ಸರಕಾರಿ ಶಾಲೆಗಳನ್ನು ಆಂಗ್ಲಮಾಧ್ಯಮ ಶಾಲೆಗಳಾಗಿ ರೂಪುಗೊಳಿಸಬೇಕು: ಸುಂದರ ಭಟ್

 

ನೆಲ್ಯಾಡಿ: ಕಡಬ ತಾಲೂಕಿನ ಆಲಂತಾಯ ಗ್ರಾಮದ ಆಲಂತಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್‌ನ ಕೊಯಿಲ ಶಾಖೆಯ ವತಿಯಿಂದ ಸಿ.ಎಸ್.ಆರ್ ಫಂಡ್‌ನಿಂದ ನೀಡಿದ್ದ ‘ಸ್ಮಾರ್ಟ್ ಕ್ಲಾಸ್’ ಉದ್ಘಾಟನೆ ಜೂ.17ರಂದು ನಡೆಯಿತು.


ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸುಂದರ ಭಟ್ ಕಾಂಚನ ಅವರು ಮಾತನಾಡಿ, ಈಗಿನ ಕಾಲದಲ್ಲಿ ಆಂಗ್ಲಮಾಧ್ಯಮ ಶಾಲೆಗಳ ಜೊತೆ ಸರಕಾರಿ ಶಾಲೆಗಳಿಗೆ ಪೈಪೋಟಿ ನೀಡಲು ಆಗುತ್ತಿಲ್ಲ. ಆದ್ದರಿಂದ ಎಲ್ಲಾ ಸರಕಾರಿ ಶಾಲೆಗಳನ್ನು ಆಂಗ್ಲಮಾಧ್ಯಮ ಶಾಲೆಗಳಾಗಿ ರೂಪುಗೊಳಿಸಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಇದಕ್ಕೆ ಊರವರು, ಪೋಷಕರು ಮುಂದಾಗಬೇಕೆಂದು ಹೇಳಿದರು. ಕಾಂಚನ ಫೌಂಡೇಶನ್ ಟ್ರಸ್ಟ್‌ನ ವತಿಯಿಂದ ಆಲಂತಾಯ ಶಾಲೆಯನ್ನು ಆರು ವರ್ಷ ದತ್ತು ತೆಗೆದುಕೊಂಡು ಸಹಕಾರ ನೀಡಿದ್ದೇವೆ. ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ‘ಸ್ಮಾರ್ಟ್ ಟಿವಿ’ ತರಗತಿಯಿಂದ ಮಕ್ಕಳಿಗೆ ಹೆಚ್ಚು ಅರ್ಥಆಗುತ್ತದೆ. ಬೇಗ ಮನವರಿಕೆಯೂ ಆಗುತ್ತದೆ. ಶಿಕ್ಷಕರ ಕೊರತೆಯೂ ನೀಗಿಸಿದಂತೆ ಆಗುತ್ತದೆ. ಆದರಿಂದ ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಂತೆ ಹೇಳಿದರು.


ದೀಪ ಪ್ರಜ್ವಲನೆ ಮಾಡಿದ ಸ್ಮಾರ್ಟ್ ಕ್ಲಾಸ್‌ನ ಪ್ರಾಯೋಜಕರಾಗಿರುವ ಕರ್ನಾಟಕ ಬ್ಯಾಂಕ್‌ನ ಕೊಯಿಲ ಶಾಖೆಯ ಶಾಖಾ ಪ್ರಬಂಧಕ ಪ್ರವೀಣ್‌ಕುಮಾರ್‌ರವರು ಮಾತನಾಡಿ, ಬ್ಯಾಂಕ್‌ನ ಸಿ.ಎಸ್.ಆರ್.ಫಂಡ್‌ನಿಂದ ಈ ಕೊಡುಗೆ ನೀಡಲಾಗಿದೆ. ಇದರಿಂದ ಬ್ಯಾಂಕ್‌ನ ಜೊತೆ ಜನರಿಗೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಬ್ಯಾಂಕ್‌ಗೂ ಹೆಸರು ಬರುತ್ತದೆ. ಇಲ್ಲಿನ ಗ್ರಾಮಸ್ಥರು ಕರ್ಣಾಟಕ ಬ್ಯಾಂಕ್‌ನಲ್ಲಿ ಖಾತೆ ತೆರೆದು ಬ್ಯಾಂಕ್‌ನಿಂದ ಸಿಗುವ ಸವಲತ್ತು ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು. ಮುಖ್ಯ ಅತಿಥಿಯಾಗಿದ್ದ ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ ಮಾತನಾಡಿ, ಕುಗ್ರಾಮವಾಗಿದ್ದ ಆಲಂತಾಯ ಗ್ರಾಮವನ್ನು ಸುಗ್ರಾಮಗೊಳಿಸುವ ನಿಟ್ಟಿನಲ್ಲಿ ಸಚಿವ ಎಸ್.ಅಂಗಾರರವರು ಇಲ್ಲಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ತಾ.ಪಂ.ಸದಸ್ಯೆಯಾಗಿದ್ದ ವೇಳೆ ಆಲಂತಾಯ ಶಾಲೆಗೆ ಅತೀ ಹೆಚ್ಚು ೧೦ ಲಕ್ಷ ರೂ.,ಅನುದಾನ ನೀಡಿರುತ್ತೇನೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ ಪಟೇರಿ ಮಾತನಾಡಿ, ಸ್ಮಾರ್ಟ್ ಕ್ಲಾಸ್‌ನ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾ.ಪಂ.ನಿಂದ ಸಿಗುವ ಸವಲತ್ತು ನೀಡುತ್ತೇವೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್ ಸಿ.ಬಿ. ಮಾತನಾಡಿ, 2024ರಲ್ಲಿ ಆಲಂತಾಯ ಶಾಲೆ ಶತಮಾನೋತ್ಸವ ಆಚರಿಸುತ್ತದೆ. ಇಲ್ಲಿಗೆ ಕಟ್ಟಡ ಸೇರಿದಂತೆ ಇತರೇ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಈಗ 103 ಮಕ್ಕಳಿದ್ದು ಖಾಯಂ ಶಿಕ್ಷಕರ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಸಹಕರಿಸಬೇಕೆಂದು ಹೇಳಿದರು.

ನಿವೃತ್ತ ಶಿಕ್ಷಕ ಸಂಜೀವ ಪೂಜಾರಿ ಬಟ್ಲಡ್ಕ, ಸಿಆರ್‌ಪಿ ಹೇಮಂತ್, ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ ಬಾಬು ಪೂಜಾರಿ, ಸಂದರ್ಭೋಚಿತವಾಗಿ ಮಾತನಾಡಿದರು. ಗ್ರಾ.ಪಂ.ಸದಸ್ಯರಾದ ಸವಿತಾ ಆಲಂತಾಯ, ಶಿವಪ್ರಸಾದ್, ಪದ್ಮನಾಭ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಮುಖ್ಯಶಿಕ್ಷಕಿ ಲವ್ಲಿ ಜೋಸೆಫ್ ಸ್ವಾಗತಿಸಿದರು. ಶಿಕ್ಷಕಿ ರಶ್ಮಿ ವಂದಿಸಿದರು. ಶಿಕ್ಷಕಿಯರಾದ ನವ್ಯಶ್ರೀ, ಪ್ರೇಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here