ಧ್ವನಿವರ್ಧಕಗಳ ದುರ್ಬಳಕೆ ತಡೆಗಟ್ಟಲು ವಿಶೇಷ ಅಭಿಯಾನ

ಬೆಂಗಳೂರು:ಮಸೀದಿ, ದೇವಸ್ಥಾನ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳು ಹಾಗೂ ಪಬ್-ರೆಸ್ಟೋರೆಂಟ್ ಸೇರಿದಂತೆ ಧ್ವನಿವರ್ಧಕಗಳನ್ನು ಬಳಸುವ ಸ್ಥಳಗಳಲ್ಲಿ ಅದರ ದುರ್ಬಳಕೆಯನ್ನು ತಡೆಗಟ್ಟಲು ವಿಶೇಷ ಅಭಿಯಾನ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.


ರಾಜ್ಯದಲ್ಲಿ ಶಬ್ಧ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಬೆಂಗಳೂರು ನಗರದಲ್ಲಿ ಮಸೀದಿಗಳು ಧ್ವನಿವರ್ಧಕ ಬಳಸಿ ಶಬ್ಧ ಮಾಲಿನ್ಯ ಉಂಟು ಮಾಡುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಾದ-ಪ್ರತಿವಾದ ಆಲಿಸಿ ಈ ರೀತಿ ಆದೇಶಿಸಿದೆ.ರಾಜ್ಯದಲ್ಲಿನ ಮಸೀದಿ, ದೇವಸ್ಥಾನ, ಗುರುದ್ವಾರ, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳು ಹಾಗೂ ಪಬ್-ರೆಸ್ಟೋರೆಂಟ್‌ಗಳಲ್ಲಿ ಧ್ವನಿವರ್ಧಕ ಹಾಗೂ ಶಬ್ದ ಹೊರಸೂಸುವ ಇತರೆ ಉಪಕರಣಗಳ ದುರ್ಬಳಕೆ ತಡೆಯಲು ವಿಶೇಷ ಅಭಿಯಾನ ಕೈಗೊಳ್ಳಬೇಕು.ಪರವಾನಿಗೆಯಿಲ್ಲದೆ ಧ್ವನಿವರ್ಧಕ ಉಪಯೋಗಿಸುತ್ತಿರುವ ಅಥವಾ ನಿಗದಿತ ಡೆಸಿಬಲ್‌ನಲ್ಲಿ ಹೆಚ್ಚಿನ ಶಬ್ದ ಹೊರಸೂಸುತ್ತಿರುವ ಧ್ವನಿವರ್ಧಕಗಳನ್ನು ಪತ್ತೆ ಹಚ್ಚಬೇಕು. ಅದಕ್ಕಾಗಿ ಧಾರ್ಮಿಕ ಸ್ಥಳಗಳ ಸರ್ವೇ ನಡೆಸಬೇಕು.ಅನಧಿಕೃತವಾಗಿ ಧ್ವನಿವರ್ಧಕ ಉಪಯೋಗಿಸುತ್ತಿದ್ದರೆ ಸಂಬಂಧಪಟ್ಟವರಿಗೆ ನೋಟೀಸ್ ನೀಡಿ ತೆರವುಗೊಳಿಸಬೇಕು.ನಿಗದಿತ ಮಿತಿಯ ಡೆಸಿಬಲ್‌ನಲ್ಲಿಯೇ ಧ್ವನಿವರ್ಧಕಗಳು ಶಬ್ದ ಹೊರಸೂಸುವಂತೆ ಕ್ರಮ ಕೈಗೊಳ್ಳಬೇಕು.ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಮೂರು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಶಾಶ್ವತ ಪರವಾನಗಿ ಇಲ್ಲ ನ್ಯಾಯಪೀಠಕ್ಕೆ ಸರಕಾರ ಸ್ಪಷ್ಟನೆ: ವಿಚಾರಣೆ ವೇಳೆ ಸರ್ಕಾರಿ ವಕೀಲ ಎಚ್.ಆರ್. ಶೌರಿ ವಾದ ಮಂಡಿಸಿ, ಧ್ವನಿವರ್ಧಕಗಳ ಬಳಕೆಗೆ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ-೨೦೦೦ರ ಸೆಕ್ಷನ್ ೫ ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ-೧೯೬೩ ಇದರ ಸೆಕ್ಷನ್ ೩೭ರಡಿ ಪರವಾನಿಗೆ ನೀಡಲಾಗುತ್ತದೆ.ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಗೆ ಯಾವುದೇ ಶಾಶ್ವತ ಪರವಾನಿಗೆ ನೀಡುವುದಿಲ್ಲ.ಗರಿಷ್ಟ ಎಂದರೆ ಎರಡು ವರ್ಷದವರೆಗೆ ಪರವಾನಿಗೆ ನೀಡಲಾಗುತ್ತದೆ. ಆ ಅವಧಿ ಮುಗಿದ ಬಳಿಕ ನವೀಕರಣ ಮಾಡಬೇಕು. ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.ಅನುಮತಿ ಮತ್ತು ನವೀಕರಣಕ್ಕಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸಮಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ವಿವರಿಸಿದರು.

ವಿಶೇಷ ಸಂದರ್ಭದಲ್ಲಿ ರಾತ್ರಿ 10ರಿಂದ 12ಧ್ವನಿವರ್ಧಕ ಬಳಕೆಗೆ ಅವಕಾಶ

ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆಗೆ ಸಂಪೂರ್ಣ ನಿಷೇಧವಿದೆ. ಆದರೆ, ವಿಶೇಷ ಸಂದರ್ಭದಲ್ಲಿ ಅಂದರೆ ಸಾಂಸ್ಕೃತಿಕ, ಧಾರ್ಮಿಕ ಉತ್ಸವ, ಸಭೆ-ಸಮಾರಂಭ ಮತ್ತು ಹಬ್ಬ-ಹರಿದಿನಗಳಲ್ಲಿ ವರ್ಷದಲ್ಲಿ 15 ದಿನಗಳ ಮಟ್ಟಿಗೆ ಮಾತ್ರ ರಾತ್ರಿ 10ರಿಂದ ಮಧ್ಯರಾತ್ರಿ12ರವರೆಗೆ ಧ್ವನಿವರ್ಧಕ ಬಳಕೆಗೆ ವಿಶೇಷ ಅನುಮತಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸರಕಾರಕ್ಕೆ ಹೈಕೋರ್ಟ್ ಸೂಚನೆ
ಧಾರ್ಮಿಕ ಸ್ಥಳಗಳ ಸರ್ವೆ ನಡೆಸಿ ಅನಧಿಕೃತ ಧ್ವನಿವರ್ಧಕ ಬಳಕೆ ಪತ್ತೆ ಮಾಡಿ ನೊಟೀಸ್ ನೀಡಿ ತೆರವುಗೊಳಿಸಿ
ನಿಗದಿತ ಮಿತಿಯ ಡೆಸಿಬಲ್‌ನಲ್ಲಿಯೇ ಶಬ್ದ ಹೊರಸೂಸುವಂತೆ ಕ್ರಮ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.