ಆಜಾದೀ ಕಾ ಅಮೃತ್ ವರ್ಷ್, ಸ್ವಾತಂತ್ರ್ಯ ಯೋಧರ ಸಂಸ್ಮರಣೆ, ಸಂವಿಧಾನ-ಉಪನ್ಯಾಸ

0

  • ಶಿಕ್ಷಣವಂತ, ಪ್ರಾಜ್ಞ ಪ್ರಜೆಗಳಿಗೆ ಸಂವಿಧಾನದ ಪ್ರಾಥಮಿಕ ತಿಳುವಳಿಕೆ ಇರಬೇಕು-ಡಾ|ಪಿ.ಅನಂತಕೃಷ್ಣ ಭಟ್
  • ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಬೇಕು – ಪ್ರೊ.ವಿ.ಬಿ.ಅರ್ತಿಕಜೆ

ಪುತ್ತೂರು:ಸಂವಿಧಾನ ಅಂದರೆ ಏನು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.ಆದರೆ ನಮ್ಮ ಸಂವಿಧಾನವನ್ನು ಸರಿಯಾಗಿ ತಿಳಿದುಕೊಂಡರೆ ಇವತ್ತಿನ ರಾಜಕೀಯ, ಸಾಮಾಜಿಕ ಮತ್ತು ಆಡಳಿತಾತ್ಮಕವಾದ ಅನೇಕ ಗೊಂದಲಗಳು ನಿವಾರಣೆ ಆಗುತ್ತದೆ.ಸಂವಿಧಾನದ ಕುರಿತಾದ ಪ್ರಾಥಮಿಕ ತಿಳಿವಳಿಕೆ ಶಿಕ್ಷಣವಂತರಾದ ಮತ್ತು ಪ್ರಾಜ್ಞರಾದ ಪ್ರಜೆಗಳಿಗೆ ಇರಲೇಬೇಕು ಎಂದು ಮಂಗಳೂರಿನ ಕೆನರಾ ಕಾಲೇಜಿನ ನಿವೃತ್ತ ರಾಜ್ಯಶಾಸ ಪ್ರಾಧ್ಯಾಪಕರಾಗಿರುವ ಡಾ|ಪಿ.ಅನಂತಕೃಷ್ಣ ಭಟ್ ಅವರು ಹೇಳಿದರು.

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜೂ.17ರಂದು ಸಂಜೆ ನಡೆದ ಆಜಾದೀ ಕಾ ಅಮೃತ ವರ್ಷ್ ಎಂಬ ಕಾರ್ಯಕ್ರಮದಡಿಯಲ್ಲಿ ‘ಸ್ವಾತಂತ್ರ್ಯ ಯೋಧರ ಸಂಸ್ಮರಣೆ ಮತ್ತು ಸಂವಿಧಾನ ವ್ಯಾಖ್ಯಾನ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ವಿಶಾಲ ರಾಷ್ಟ್ರದ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರ-ಕರ್ತವ್ಯಗಳ ಪರಿಧಿಯನ್ನು,ಶಾಸಕಾಂಗ,ಕಾರ್ಯಾಂಗ ಮತ್ತು ನ್ಯಾಯಾಂಗದ ನಿಖರ ರೇಖಾ ವಿನ್ಯಾಸವನ್ನು ಪಡಿಮೂಡಿಸಿದ ಮೂಲಭೂತ ದಾಖಲೆಯಾಗಿರುವ ನಮ್ಮ ಸಂವಿಧಾನದ ರಚನೆಯಲ್ಲಿ ದ.ಕ.ಜಿಲ್ಲೆಯಿಂದ ಬೆನಗಲ್ ನರಸಿಂಹ ರಾವ್, ಯು.ಶ್ರೀನಿವಾಸ ಮಲ್ಯ, ಎಚ್.ವಿ.ಕಾಮತ್, ಬೆನಗಲ್ ಶಿವರಾವ್ ಹಾಗೂ ಜೆರೋಮ್ ಡಿ’ಸೋಜಾ ಅವರಿದ್ದರು.ಜಿಲ್ಲೆಯೊಂದರಿಂದ ತಜ್ಞರಾದ ಐದು ಮಂದಿ ಆ ಸಮಿತಿಯಲ್ಲಿ ಸದಸ್ಯರಾಗಿದ್ದುದು ಕೂಡ ಒಂದು ದಾಖಲೆ ಆಗಿದೆ ಎಂದರು.ಸ್ವಾತಂತ್ರ್ಯಕ್ಕಾಗಿ ಹಿರಿಯರು ಬಹಳ ಕಷ್ಟ ಪಟ್ಟಿದ್ದಾರೆ.ತ್ಯಾಗ ಬಲಿದಾನ, ರಕ್ತ ಬೆವರಿನಿಂದ ಸ್ವಾತಂತ್ರ್ಯ ಪಡೆದಿರುವುದು ಅಕ್ಷರಶಹ ಸತ್ಯ.ಅದೇ ರೀತಿ ನಾವು ಯಾಕೆ ಸ್ವಾತಂತ್ರ್ಯ ಕಳೆದುಕೊಂಡೆವು ಎಂಬುದನ್ನೂ ಪ್ರಶ್ನಿಸಬೇಕಾಗಿದೆ ಎಂದ ಅವರು, ನಮ್ಮ ಸಂವಿಧಾನ ವಿಶಾಲವಾದ ಕಾರಣ ನಮ್ಮ ದೇಶವನ್ನು ಯೂನಿಯನ್ ಆ- ಸ್ಟೇಟ್ ಎಂದು ಕರೆಯಲಾಗುತ್ತದೆ.ಈ ಪದ ಬೇರೆ ಎಲ್ಲೂ ಪ್ರಯೋಗವಾಗಿಲ್ಲ ಎಂದು ಹೇಳಿ, ಸಂವಿಧಾನ ಕುರಿತಾಗಿ ಹಲವು ವಿಚಾರ ಮಂಡಿಸಿದರು.

ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಬೇಕು:

ಹಿರಿಯ ಸಾಹಿತಿ ಪ್ರೊ|ವಿ.ಬಿ.ಅರ್ತಿಕಜೆ ಅವರು ಸಂವಿಧಾನ ರಚನಾ ಸಭೆಯ ಮಹನೀಯರಿಗೆ ಮತ್ತು ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಸಂವಿಧಾನ ಇದೆ ಎಂದು ಎಲ್ಲರಿಗೂ ಗೊತ್ತಿದೆ.ಆದರೆ ಅದರ ಒಳಗೆ, ಹೊರಗೆ ಏನಿದೆ, ಅದರ ಔಚಿತ್ಯವೇನು, ಇಡೀ ಪ್ರಪಂಚದ ಎಲ್ಲಾ ದೇಶಗಳನ್ನು ನೋಡಿದಾಗ ನಮ್ಮ ಭಾರತ ಸಂವಿಧಾನದ ಹಿರಿಮೆ ಗರಿಮೆ ವಿಶೇಷತೆ, ಲೋಪದೋಷಗಳನ್ನು ಸಮರ್ಥವಾಗಿ ಅರ್ಥ ಮಾಡಬೇಕು.ಇದಕ್ಕಾಗಿ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಬೇಕೆಂದರು.ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ|ಪಿ.ಕೆ.ಬಾಲಕೃಷ್ಣ ಉಪಸ್ಥಿತರಿದ್ದರು.ಪ್ರೊ|ಎ.ವಿ.ನಾರಾಯಣ ಸ್ವಾಗತಿಸಿ, ಡಾ| ಶ್ರೀಶಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಅರಂಭದಲ್ಲಿ ಮಾಜಿ ಸೈನಿಕರು ಪಥ ಸಂಚಲನದಲ್ಲಿ ಆಗಮಿಸಿ ರಾಷ್ಟ್ರಧ್ವಜವನ್ನು ವೇದಿಕೆಯಲ್ಲಿ ಇಟ್ಟು ಬಳಿಕ ಧ್ವಜ ವಂದನೆ ಮಾಡಿದರು. ದೀಕ್ಷಾ ಮತ್ತು ಸಮನ್ವಯಿ ಅವರು ದೇಶ ಭಕ್ತಿಗೀತೆ ಹಾಡಿದರು.

LEAVE A REPLY

Please enter your comment!
Please enter your name here